ಚಳಿ ಮುಗಿಯುವವರೆಗೆ ಎಚ್ಚರ ಅಗತ್ಯ: ತಜ್ಞ ವೈದ್ಯರ ಸಲಹೆ
ಕೋವಿಡ್ ಪರೀಕ್ಷೆ ಸಾಮಾಜಿಕ ಜವಾಬ್ದಾರಿ ; ಉದಯವಾಣಿ ಫೋನ್‌ಇನ್ ಕಾರ್ಯಕ್ರಮ
Team Udayavani, Jan 23, 2022, 6:10 AM IST
ಮಣಿಪಾಲ: ಡಾ| ನಾಗರತ್ನಾ, ಡಾ| ಪ್ರಶಾಂತ ಭಟ್, ಡಾ| ಸನ್ಮಾನ್ ಶೆಟ್ಟಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಮಣಿಪಾಲ: ಚಳಿ ಮುಗಿಯುವವರೆಗೆ ಅಂದರೆ ಫೆಬ್ರವರಿ ಕೊನೆಯವರೆಗೂ ಶೀತ, ಜ್ವರ, ಕೆಮ್ಮಿನ ಸಮಸ್ಯೆ ಇರುತ್ತದೆ. ಇದು ಪ್ರತೀ ವರ್ಷ ಇರುವಂಥದ್ದು. ಆದರೆ ಈಗ ಕೊರೊನಾ ಬಾಧೆ ಇರುವುದರಿಂದ ಈ ಎಚ್ಚರಿಕೆ ಜತೆಗೆ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡು ಪಾಸಿಟಿವ್ ಇದ್ದರೆ ಇತರರಿಂದ ದೂರವಿರಬೇಕು (ಐಸೊಲೇಶನ್). ಇದೇಕೆಂದರೆ ಈ ವೈರಾಣು ಬೇರೆಯವರಿಗೆ ಹರಡಬಾರದೆಂಬುದಕ್ಕಾಗಿ ಮಾತ್ರ. ನೆಗೆಟಿವ್ ಇದ್ದರೆ ಸಂಪೂರ್ಣ ವಿಶ್ರಾಂತಿಯೊಂದಿಗೆ ಸಾಮಾನ್ಯ ಔಷಧ ಸೇವಿಸಿದರೆ ಸಾಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಈಗ ಜ್ವರ, ಶೀತ, ಕೆಮ್ಮಿನ ಸಮಸ್ಯೆ ಜನರನ್ನು ಹೆಚ್ಚಾಗಿ ಕಾಡುತ್ತಿ ರುವುದರಿಂದ “ಉದಯವಾಣಿ’ ವತಿಯಿಂದ ಶನಿವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಕೊರೊನಾ ನೋಡಲ್ ಅಧಿಕಾರಿ ಡಾ| ಪ್ರಶಾಂತ ಭಟ್, ಕುತ್ಪಾಡಿ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ನಾಗರತ್ನಾ ಜರ್ತಾರ್ಘರ್, ಕುಂಭಾಶಿ ಮತ್ತು ಸಿದ್ದಾಪುರದ ಕುಟುಂಬ ವೈದ್ಯ ಡಾ| ಎನ್.ಸನ್ಮಾನ್ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಕೃಷ್ಣಾನಂದ ಶೆಟ್ಟಿ ಐಕಳ, ಚಂದ್ರಾವತಿ ಆಚಾರ್ಯ ಉಚ್ಚಿಲ, ಆರತಿ ಹೈದರಾಬಾದ್, ನಾರಾಯಣ ನಾಯಕ್, ನೇರಳಕಟ್ಟೆ, ಸಾಧನಾ ಕುಂದಾಪುರ, ಜನಾರ್ದನ ಗಂಗೊಳ್ಳಿ, ಸುಬ್ರಹ್ಮಣ್ಯ ಶೆಟ್ಟಿ ಕುಂದಾಪುರ, ಫ್ರಾಂಕ್ಲಿನ್ ಫೆರ್ನಾಂಡಿಸ್ ಮಂಗಳೂರು
ಪ್ರ: ಕೋವಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ವರದಿ ನೀಡುತ್ತಾರೆ ಎಂಬ ಭಯದಿಂದ ಜನರು ಸರಕಾರಿ ಆಸ್ಪತ್ರೆಗೆ ಹೋಗುತ್ತಿಲ್ಲ. ಶೀತ, ಜ್ವರ, ಕೆಮ್ಮು ಒಮಿಕ್ರಾನ್ ಲಕ್ಷಣವೇ? ಇದಕ್ಕೆ ಕಷಾಯ ಮಾಡಿ ಕುಡಿಯಬಹುದೇ?
ಉ: ಯಾವುದೇ ವೈರಸ್ ಬಾಧಿಸಿದಾಗ ಜ್ವರ ಅದರ ಲಕ್ಷಣವಾಗಿರುತ್ತದೆ. ಈಗ ಕೊರೊನಾ ಮತ್ತು ಅದರ ರೂಪಾಂತರ ವೈರಸ್ ಇರುವುದರಿಂದ ಶೀತ, ಕೆಮ್ಮು, ಜ್ವರ ಇದ್ದಾಗ ಕೊರೊನಾ ಪರೀಕ್ಷೆ ಮಾಡಿಸಬೇಕು. ಉದ್ದೇಶಪೂರ್ವಕವಾಗಿ ಯಾರ ವರದಿಯನ್ನು ಪಾಸಿಟಿವ್ ಮಾಡುವುದಿಲ್ಲ. ನೆಗೆಟಿವ್ ಬಂದರೆ, ಮನೆಯಲ್ಲಿ ಇದಕ್ಕೆ ಮದ್ದು ಮಾಡಿಕೊಳ್ಳಬಹುದು. ಪಾಸಿಟಿವ್ ಬಂದವರು ಐಸೊಲೇಶನ್‌ಗೆ ಒಳಗಾಗಿ ಬೇರೆ ಯವರಿಗೆ ಹರ ಡುವು ದನ್ನು ತಪ್ಪಿಸಬೇಕು. ಶೇ. 1ರಿಂದ ಶೇ. 2ರಷ್ಟು ಜನರಿಗೆ ಇದು ಮಾರ ಣಾಂತಿಕವಾಗಿ ಕಾಡುವ ಸಾಧ್ಯತೆ ಇರುವುದರಿಂದ ಕಾಳಜಿ ತೆಗೆದುಕೊಳ್ಳಲೇ ಬೇಕಾಗುತ್ತದೆ. ಸಾಮಾನ್ಯ ಜ್ವರ ಮೂರ್‍ನಾಲ್ಕು ದಿನಗಳ ವರೆಗೂ ಇರುತ್ತದೆ. ಉಪ ಶಮನ ಆಗುವ ತನಕವೂ ವಿಶ್ರಾಂತಿ ಪಡೆಯಬೇಕು. ಕೊರೊನಾ ಹೌದೋ ಅಥವಾ ಅಲ್ಲವೋ ಎಂದು ತಿಳಿಯಲು ಜ್ವರ ಬಂದ ತತ್‌ಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೂರ್‍ನಾಲ್ಕು ದಿನ ಕಾಯುವುದು ಸರಿಯಲ್ಲ. ಇದರಿಂದ ಬೇರೆಯವರಿಗೆ ಹರಡುತ್ತದೆ.ಕರಿ ಮೆಣಸು, ಶುಂಠಿ ಇತ್ಯಾದಿ ಕಷಾಯ ಮಾಡಿ ಕುಡಿಯುವಾಗಲೂ ಎಚ್ಚರ ಇರ ಬೇಕು. ಗಂಟಲಲ್ಲಿ ತುರಿಕೆ, ಶೀತ, ಕೆಮ್ಮು, ಜ್ವರ ಇತ್ಯಾದಿ ಲಕ್ಷಣ ಇರುವಾಗ ವೈದ್ಯರ ಸಲಹೆ ಪಡೆದೇ ಔಷಧ ತೆಗೆದುಕೊಳ್ಳಬೇಕು. ಅತಿ ಯಾಗಿ ಕಷಾಯ ಕುಡಿದರೆ ಉಷ್ಣ ಹೆಚ್ಚಾಗಿ ಬೇರೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಹಮೀದ್, ವಿಟ್ಲ
ಪ್ರ: ಜ್ವರ ಇದ್ದಾಗ ಹಿರಿಯ ನಾಗರಿಕರು ಲಸಿಕೆ ಪಡೆಯಬಹುದೇ?
ಉ: ಜ್ವರ ಇದ್ದಾಗ ಲಸಿಕೆ ಪಡೆಯುವುದು ಬೇಡ. ಜ್ವರ ಪರೀಕ್ಷೆ ಮಾಡಿಸಿಕೊಂಡು, ಕಡಿಮೆಯಾದ ಅನಂತರ ಲಸಿಕೆ ಪಡೆಯಬೇಕು. ಸರಕಾರದ ಸೂಚನೆಯಂತೆ ಅರ್ಹರು ಮೂರನೇ ಡೋಸ್ ಕೂಡ ಪಡೆಯಬಹುದು. ಡೆಂಗ್ಯೂ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಇರುವುದರಿಂದ ಪರೀಕ್ಷೆ ಮಾಡಿ, ಅನಂತರವೇ ಲಸಿಕೆ ಪಡೆಯಬೇಕು.
ಕೆ.ಜಾನ್ ಪಿಂಟೋ, ಮಂಗಳೂರು
ಪ್ರ: ತಲೆನೋವು, ಜ್ವರ, ಶೀತ ಕೆಮ್ಮು, ಸುಸ್ತು ಐದಾರು ದಿನಗಳಿಂದ ಇದೆ. ಸ್ಥಳೀಯ ವೈದ್ಯರಿಂದಲೂ ಚಿಕಿತ್ಸೆ ಪಡೆದಿದ್ದೇನೆ. ಮುಂದೇನು ಮಾಡಬೇಕು?
ಉ: ಕೊರೊನಾ ಆರ್‌ಟಿಪಿಸಿಆರ್ ಟೆಸ್ಟ್, ಅನಂತರ ರಕ್ತ ಪರೀಕ್ಷೆ ಮಾಡಿಸಬೇಕು. ಹೆಚ್ಚು ವಿಶ್ರಾಂತಿ ಮತ್ತು ದ್ರವರೂಪದ ಬಿಸಿ ಯಾಗಿರುವ ಆಹಾರ ಸೇವಿಸಿದರೆ ಉತ್ತಮ.
ವಿನೋದ್ ಬಳ್ಳಾರಿ
ಪ್ರ: ಸಾಮಾನ್ಯ ಜ್ವರವೂ ಕೊರೊನಾ ಆಗಲಿದೆಯೇ?
ಉ: ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ, ಅದರಲ್ಲೂ ಜ್ವರ ಇದ್ದಾಗ ಕೊರೊನಾ ಇರುವ ಸಾಧ್ಯತೆ ಹೆಚ್ಚಿದೆ. ಈಗ ಕೊರೊನಾ ಎಲ್ಲ ಕಡೆ ಇರುವುದರಿಂದ ಅದರ ಪ್ರಸರಣ ತಡೆ ಯಲು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಪಾಸಿಟಿವ್ ಬಂದವರು ಐಸೊಲೇಶನ್ ಆಗಬೇಕು.
ರಾಘವೇಂದ್ರ ಕುಂದಾಪುರ
ಪ್ರ: ಹಣೆ, ಕಣ್ಣುಗಳಲ್ಲಿ ಆಗಾಗ್ಗೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಇದು ಕೊರೊನಾ ಲಕ್ಷಣವೇ?
ಉ: ದೀರ್ಘಕಾಲದಿಂದ ನಿಮಗೆ ಈ ಸಮಸ್ಯೆ ಇರುವುದರಿಂದ ಕೊರೊನಾ ಎಂಬ ಭಯ ಬೇಡ. ಇಎನ್‌ಟಿ ತಜ್ಞರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಬಹುದು.
ನಾಗರಾಜ, ಬೈಂದೂರು
ಪ್ರ: ಶೀತ, ಕೆಮ್ಮು, ಜ್ವರ ಎಲ್ಲವೂ ಇದೆ. ಕೊರೊನಾ ನೆಗೆಟಿವ್ ಬಂದರೆ ಏನು ಮಾಡಬೇಕು?
ಉ: ವೈರಲ್ ಜ್ವರ ಇರಬಹುದು. ವೈದ್ಯರನ್ನು ಸಂಪರ್ಕಿಸಿ ಔಷಧ ಪಡೆಯುವುದು ಉತ್ತಮ. ಪ್ಯಾರಾಸಿ ಟಮಾಲ್/ಡೋಲೋ ಮಾತ್ರೆ ಅನಾವಶ್ಯಕವಾಗಿ ತೆಗೆದುಕೊಳ್ಳುವುದು ಬೇಡ.
ರಮೇಶ್ ಕುಳಾಯಿ
ಪ್ರ: ಜ್ವರ, ಕೆಮ್ಮು, ಶೀತ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ಉ: ಇದು ದುಂಬಿಗಳು ಪರಾಗಸ್ವರ್ಶ ಮಾಡುವ ಕಾಲ. ಚಳಿ ಇರುವುದರಿಂದ ಜ್ವರ, ಶೀತ, ಕೆಮ್ಮು ಹೆಚ್ಚಿದೆ. ಹೀಗಾಗಿ ಮನೆಯಿಂದ ಮಾಸ್ಕ್ ಧರಿಸಿ ಹೊರಗೆ ಹೋಗಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಪ್ರಕಾಶ್ ಪಡಿಯಾರ್, ಮರವಂತೆ
ಪ್ರ: ದೀರ್ಘಕಾಲದಿಂದ ಜ್ವರ ಬಾಧಿಸುತ್ತಿದ್ದು ಇದು ಕೊರೊನಾವೇ?
ಉ: ಕೊರೊನಾ 7ರಿಂದ 14 ದಿನ ಇರುತ್ತದೆ. ದೀರ್ಘಕಾಲದಿಂದ ಇರುವುದರಿಂದ ಇದು ಕೊರೊನಾ ಆಗಿರುವ ಸಾಧ್ಯತೆ ಕಡಿಮೆ ಇದೆ. ಬೇರೆ ಯಾವುದೋ ಜ್ವರ ಆಗಿರಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
ಕೀರ್ತನ್, ಜಕ್ರಿಬೆಟ್ಟು
ಪ್ರ: ಬೆಳಗ್ಗೆ ಏಳುವಾಗ ಕಫ, ಶೀತವಿರುವುದಕ್ಕೆ ಕಾರಣವೇನು?
ಉ: ಇದು ಧೂಳಿನಿಂದ ಆಗುವ ಸಾಧ್ಯತೆ ಹೆಚ್ಚಿದೆ. ಬಿಸಿನೀರು ಸೇವನೆ, ಹಬೆ ತೆಗೆದು ಕೊಳ್ಳುವುದು ಇತ್ಯಾದಿಯಿಂದ ಸರಿ ಪಡಿಸಿಕೊಳ್ಳಬಹುದು.
ಶ್ರೀನಿವಾಸ ಉಡುಪಿ
ಪ್ರ: ಕೊರೊನಾ ಬಳಿಕ ಕಾಣಿಸಿಕೊಂಡಿರುವ ಇತರ ಸಮಸ್ಯೆಗಳಿಗೆ ಪರಿಹಾರವೇನು?
ಉ: ಯಾವುದೇ ಜ್ವರ ದೀರ್ಘಾವಧಿ ಇರುವುದು ತುಂಬ ಕಡಿಮೆ. ಅದರಲ್ಲೂ ಕೊರೊನಾ ಬಾಧಿಸಿ ಕಡಿಮೆಯಾದ ಅನಂತರ ಆರೇಳು ತಿಂಗಳುಗಳವರೆಗೂ ಬೇರೆ ರೀತಿಯಲ್ಲಿ ಸಮಸ್ಯೆ ಆಗಬಹುದು. ಆದರೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅದರಿಂದ ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. ನೀವು ಈಗ ತೆಗೆದುಕೊಳ್ಳುತ್ತಿರುವ ಔಷಧವನ್ನೇ ವೈದ್ಯರ ಸಲಹೆಯಂತೆ ಮುಂದುವರಿಸಿ.
ತಜ್ಞರು ನೀಡಿದ ಪ್ರಮುಖ ಸಲಹೆಗಳು
– ಜ್ವರದ ಸಂದರ್ಭವಾಗಲೀ ಇತರ ಕಾಲದಲ್ಲಿಯಾಗಲೀ ತಲೆ, ಮೈಗೆ ಎಣ್ಣೆ ಹಚ್ಚಿ ಕನಿಷ್ಠ 15 ನಿಮಿಷ ಬಿಟ್ಟು ಸ್ನಾನ ಮಾಡುವುದು ಉತ್ತಮ. ಹೊರಗಿನ ಸೋಂಕು ತಡೆಯುವ ದೇಹದ ಪ್ರಧಾನ ಅಂಗ ಚರ್ಮ. ಜ್ವರದ ಸಂದರ್ಭ ಅದಕ್ಕಾಗಿಯೇ ತಯಾರಿಸಿದ ತೈಲಗಳಿವೆ. ಸಾಸಿವೆ- ತೆಂಗಿನೆಣ್ಣೆಗೆ ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಬಿಸಿ ಮಾಡಿ ಹಚ್ಚಿ ಕೊಳ್ಳಬಹುದು.
– ಯಾವುದೇ ಕಷಾಯವನ್ನೂ ಅತಿಯಾಗಿ ಸೇವಿಸಿದರೆ ಉಷ್ಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವೈದ್ಯರ ಸಲಹೆಯಂತೆ ಪಡೆಯಬೇಕು.
– ಜ್ವರ ಬಂದ ದಿನವೇ ಕೊರೊನಾ ಪರೀಕ್ಷೆ ಮಾಡಿಕೊಳ್ಳಬೇಕು. ಮೂರ್‍ನಾಲ್ಕು ದಿನ ಬಿಟ್ಟು ಮಾಡಿಸಿಕೊಂಡರೆ ಅಷ್ಟರೊಳಗೆ ಬೇರೆಯವರಿಗೆ ಹರಡಿಯಾಗಿರುತ್ತದೆ.
– ಜ್ವರ ಬಂದಾಗ ಹಣೆಗೆ ತಾಜಾ ನೀರನ್ನು ಇಳಿಯುವಂತೆ ಬಟ್ಟೆ ಯಲ್ಲಿ ಅದ್ದಿ ಹಣೆಗೆ ಇಡಬೇಕು. ಇದರಿಂದ ಜ್ವರ ಮಿದುಳಿಗೆ ಹೋಗುವುದು ತಪ್ಪುತ್ತದೆ. ತಲೆ ಭಾಗ ಬಿಟ್ಟು ಉಳಿದ ಭಾಗದಲ್ಲಿ ಜ್ವರ ಬಂದರೆ ಅದೂ ಒಂದು ಉತ್ತಮ ಲಕ್ಷಣ. ಅಂದರೆ ಹೊರಗಿನ ವೈರಸ್‌ನ್ನು ಒಳಗಿನ ರೋಗನಿರೋಧಕ ಶಕ್ತಿ ತಡೆಯುವ ಪ್ರಕ್ರಿಯೆ. ಜೀರ್ಣಾಂಗ ವ್ಯವಸ್ಥೆ ಅಗತ್ಯ ವಾದ ಕಾರಣ ಅದಕ್ಕೆ ವಿಶ್ರಾಂತಿ, ಉಪ ವಾಸ, ಲಘುವಾದ ಆಹಾರ ಸೇವನೆ ಮುಖ್ಯ. ಘನ ಆಹಾರದಿಂದ ಸಮಸ್ಯೆ ಉಲ್ಬಣವಾಗುತ್ತದೆ. ಉಪ ವಾಸದಿಂದ ಈಗಾಗಲೇ ಇರುವ ದೋಷ ಹೊರಗೆ ಹೋಗಿ ಹಸಿವು ಉಂಟಾಗುತ್ತದೆ. ಹಸಿವು ಆರೋಗ್ಯದ ಲಕ್ಷಣ.
– ಪ್ಯಾರಾಸಿಟಮಾಲ್ ಮತ್ತು ಡೋಲೋ ಒಂದೇ. ಇದನ್ನು ನಿತ್ಯ ಸ್ವೀಕರಿಸುವುದು ಉತ್ತಮವಲ್ಲ.
– ನಮ್ಮ ಮತ್ತು ಇತರರ ರಕ್ಷಣೆಗಾಗಿ ಮಾಸ್ಕ್ ಧರಿಸಿ ವ್ಯವಹರಿಸುವುದು ಅತೀ ಅಗತ್ಯ. ಇದು ಎಲ್ಲ ಬಗೆಯ ಸಾಂಕ್ರಾಮಿಕ ರೋಗಗಳ ತಡೆಗೂ ಪ್ರಾಥಮಿಕ ಜಾಗರೂಕತೆ.
– ಅರಿಸಿನ ಹಾಕಿದ, ನೀಲಗಿರಿ ಎಣ್ಣೆ ಹಾಕಿದ ಬಿಸಿ ನೀರಿನ ಹಬೆ ಸೇವಿಸಿದರೆ ಕಫ ನಿವಾರಣೆಗೆ ಸಹಕಾರಿ. ಬಿಸಿ ನೀರಿಗೂ ನೀಲಗಿರಿ ಎಣ್ಣೆಯನ್ನು ಸ್ವಲ್ಪ ಹಾಕಿ ಸ್ನಾನ ಮಾಡುವುದು ಉತ್ತಮ.
– ಮೊಬೈಲ್‌ನಲ್ಲಿ ಮಾತನಾಡುವುದು, ಟಿವಿ ನೋಡುವುದೂ ಕೆಲಸ ಮಾಡಿ ದಂತೆಯೇ. ವಿಶ್ರಾಂತಿ ಅಂದರೆ ಶೇ.100 ವಿಶ್ರಾಂತಿ ಆಗಿರಬೇಕು. ಯಾವುದೇ ಶಬ್ದ ಕೇಳದೆ ಕಣ್ಣು ಮುಚ್ಚಿ ಕೊಂಡು ವಿಶ್ರಾಂತಿ ಪಡೆಯುವುದು ಮುಖ್ಯ.
– ಚಕ್ಕೆ, ಕಾಳುಮೆಣಸು, ಪುದಿನ, ಅರಿಸಿನದ ಸೇವನೆ ಉತ್ತಮ. ತುಳಸಿ, ಸಾಂಬಾರಬಳ್ಳಿ ಕಷಾಯ ಸೇವನೆ ಉತ್ತಮ. ನೆಲ್ಲಿ ಕಾಯಿಯನ್ನು ಚಟ್ನಿ, ತಂಬುಳಿ, ಚ್ಯವನ ಪ್ರಾಶ ಇತ್ಯಾದಿ ಮೂಲಕ ಸೇವಿಸಿದರೆ ಗುಣಮುಖರಾಗಲು ಸಹಕಾರಿ. ತುಂಬೆರಸ, ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.