ಪೌರತ್ವಕ್ಕೆ ಪರ-ವಿರೋಧ ಹೋರಾಟ
Team Udayavani, Jan 5, 2020, 3:09 AM IST
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರತಿಯಾಗಿ, ರಾಜ್ಯದ ಕೆಲವೆಡೆ ಕಾಯಿದೆ ಪರ ಪ್ರತಿಭಟನೆ ಆರಂಭವಾಗಿದೆ. ರಾಮನಗರದಲ್ಲಿ ಪ್ರತಿಭಟನೆ ಶಾಂತಿಯುತವಾಗಿದ್ದರೆ, ಕೋಲಾರದಲ್ಲಿ ಸಿಎಎ ಪರ ರ್ಯಾಲಿನಿರತರ ವಿರುದ್ಧ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಜತೆಗೆ, ರಾಜ್ಯದ ಕೆಲವೆಡೆ ಸಿಎಎ ವಿರೋಧಿ ಪ್ರತಿಭಟನೆಗಳು ಶನಿವಾರವೂ ನಡೆದವು.
ಈ ಮಧ್ಯೆ, “ಬಹುಸಂಖ್ಯಾತರಾಗಿರುವ ಹಿಂದೂಗಳು ಸಿಎಎ ವಿರೋಧಿಸುತ್ತಿರುವ ಅಲ್ಪಸಂಖ್ಯಾತರ ಮೇಲೆ ಖಡ್ಗ ಝಳಪಿಸಿದರೆ ಅವರೆಲ್ಲರೂ ನಿರ್ನಾಮವಾಗುತ್ತಾರೆ’ ಎಂಬ ಶಾಸಕ ಸೋಮಶೇಖರ ರೆಡ್ಡಿಯವರ ಪ್ರಚೋದನಕಾರಿ ಹೇಳಿಕೆ ವಿರುದ್ಧ ಬಳ್ಳಾರಿಯಲ್ಲಿ ಎಫ್ಐಆರ್, ರಾಯಚೂರು ಹಾಗೂ ಬೆಂಗಳೂರಿನಲ್ಲಿ ಮತ್ತೆರಡು ದೂರುಗಳು ದಾಖಲಾಗಿವೆ. ಹೇಳಿಕೆ ವಿರೋಧಿಸಿ, ಬಳ್ಳಾರಿ, ಗದಗ ಸೇರಿ ಹಲವೆಡೆ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಗಳು ನಡೆದಿವೆ. ಇವೆಲ್ಲದರ ನಡುವೆ ಸಿಎಎ ಪರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬಿಜೆಪಿ ನಾಯಕರು ಮುಂದುವರಿಸಿದ್ದಾರೆ. ಪೌರತ್ವದ ಹೆಸರಲ್ಲಿ ರಾಜ್ಯದಲ್ಲಿ ಶನಿವಾರ ನಡೆದ ಘಟನಾವಳಿಗಳ ಸಂಕ್ಷಿಪ್ತ ಚಿತ್ರಣವಿದು.
ಕೋಲಾರ: ಪೌರತ್ವ ಕಾಯಿದೆ ಭಾರತೀಯ ಹಿತರಕ್ಷಣಾ ವೇದಿಕೆಯಡಿ ವಿವಿಧ ಸಂಘಟನೆಗಳು ನಗರದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ರ್ಯಾಲಿ, ನಿಗದಿತ ಮಾರ್ಗ ಬಿಟ್ಟು ಬೇರೆ ಕಡೆ ಹೋಗುವುದನ್ನು ಪೊಲೀಸರು ತಡೆದ ಕಾರಣ, ಮಾತಿನ ಚಕಮಕಿ ನಡೆದು, ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ನಗರದಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಅಶೋಕ್ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಬೃಹತ್ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೊದಲು ಪೊಲೀಸ್ ಇಲಾಖೆಯಡಿ ನಿಗ ದಿಯಾದಂತೆ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಆಸ್ಪತ್ರೆ ವೃತ್ತದ ಮೂಲಕ ಎಂ.ಜಿ.ರಸ್ತೆ ಪ್ರವೇಶಿಸಬೇಕಾಗಿತ್ತು. ಆದರೆ, ಆಸ್ಪತ್ರೆ ವೃತ್ತಕ್ಕೆ ರ್ಯಾಲಿ ಬರುತ್ತಿದ್ದಂತೆ ಏಕಾಏಕಿ ಕ್ಲಾಕ್ ಟವರ್ ಮೂಲಕವೇ ರ್ಯಾಲಿ ಸಾಗಬೇಕು ಎಂದು ನಿರ್ಧರಿಸಿ ಡೂಂಲೈಟ್ ವೃತ್ತದೆಡೆಗೆ ಮಾರ್ಗ ಬದಲಿಸಿದಾಗ, ಪೊಲೀಸರು ಬ್ಯಾರಿಕೇಡ್‌ಗಳನ್ನು ಇಟ್ಟು ತಡೆದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರ ನಡುವೆ ಮಾತಿನ ಚಕಮಕಿ ನಡೆಯಿತು. ಜನ ಬ್ಯಾರಿ ಕೇಡ್‌ಗಳನ್ನು ತಳ್ಳಿ ಕ್ಲಾಕ್ ಟವರ್‌ನತ್ತ ಹೋಗಲು ಮುಂದಾ ದರು. ಸ್ಥಳದಲ್ಲಿದ್ದ ಎಸ್ಪಿ ಕಾರ್ತಿಕ್ ರೆಡ್ಡಿ ಮೆರವಣಿಗೆ ತಡೆ ಯಲು ಲಾಠಿಚಾರ್ಜ್‌ಗೆ ಆದೇಶಿಸಿದ್ದರಿಂದ, ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಿಂದ ಹಲವಾರು ಕಾರ್ಯಕರ್ತರು ಗಾಯ ಗೊಂಡರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಮೆರವಣಿಗೆ ಕಾರರು ಕೈಯಲ್ಲಿ ಹಿಡಿದಿದ್ದ ರಾಷ್ಟ್ರಧ್ವಜಗಳನ್ನು ಹಾಗೂ ತಾವು ಧರಿಸಿದ್ದ ಚಪ್ಪಲಿಗಳನ್ನು ಬಿಟ್ಟು ಓಡತೊಡಗಿದರು. ಲಾಠಿ ಪ್ರಹಾರ ಮಾಡುತ್ತಿದ್ದ ಪೊಲೀಸರೇ ರಾಷ್ಟ್ರಧ್ವಜ ಗಳನ್ನು ಎತ್ತಿಕೊಂಡು ಪ್ರತ್ಯೇಕವಾಗಿ ಸಂಗ್ರಹಿಸಿ ಸುರಕ್ಷಿತವಾಗಿಟ್ಟರು.
ಸ್ಥಳಕ್ಕೆ ಬಂದ ಸಂಸದ ಎಸ್.ಮುನಿಸ್ವಾಮಿ, ಡಿ.ಸಿ. ಮಂಜುನಾಥ್ ಅವರು, ಎಸ್ಪಿ ಕಾರ್ತಿಕ್ ರೆಡ್ಡಿಯೊಂದಿಗೆ ಮಾತನಾಡಿ, ನಿಗದಿತ ಮಾರ್ಗ ದಲ್ಲಿಯೇ ಮೆರವಣಿಗೆ ಕೊಂಡೊಯ್ಯಲು ಸಮ್ಮತಿ ವ್ಯಕ್ತಪಡಿಸಿದರು. ಇದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಕೋಪಕ್ಕೆ ಕಾರಣವಾಯಿತು. ಲಾಠಿಚಾರ್ಜ್ ವಿರೋಧಿಸಿ ಕಾರ್ಯ ಕರ್ತರು ಈ ವೇಳೆ ಧರಣಿಗೆ ಮುಂದಾದರು. ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಲಾಠಿ ಚಾರ್ಜ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಯಿತು. ಬಳಿಕ, ನಿಗ ದಿತ ಮಾರ್ಗದಲ್ಲೇ ರ್ಯಾಲಿ ಮುಂದುವರಿಯಿತು.
ಗಡಿಯಾರಗೋಪುರ ವೃತ್ತದಲ್ಲೂ ಬಿಗುವಿನ ವಾತಾವರಣ: ಬಳಿಕ, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಯುವಕರು ಗಡಿಯಾರಗೋಪುರ ವೃತ್ತದತ್ತ ನುಗ್ಗಲು ಯತ್ನಿಸುತ್ತಿದ್ದಾರೆಂಬ ವದಂತಿ ಹರಡಿದ್ದರಿಂದ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಗಡಿಯಾರ ಗೋಪುರ ವೃತ್ತದಲ್ಲೂ ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಕ್ಷಣಾರ್ಧದಲ್ಲಿ ವೃತ್ತದ ಸುತ್ತಮುತ್ತಲ ಅಂಗಡಿಗಳನ್ನು ಮುಚ್ಚಲಾಯಿತು. ಆಕ್ರೋಶ ಭರಿತ ಗುಂಪು ಹಿಂದೂಪರ ಸಂಘಟನೆಗಳ ದಾಳಿ ಎದುರಿಸಲು ಸಜ್ಜಾಗುವ ಘೋಷಣೆ ಕೂಗಿತು. ಇದರಿಂದ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಯಿತು. ಫೋಟೋ ತೆಗೆಯಲು ಹೋಗಿದ್ದ ಪತ್ರಿಕಾ ಛಾಯಾಗ್ರಾಹಕರ ಕ್ಯಾಮರಾ ಕಸಿದುಕೊಂಡ ಘಟನೆಯೂ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದರು.
ಶಾಸಕ ರೆಡ್ಡಿ ವಿರುದ್ಧ ಪ್ರತಿಭಟನೆ
ಬಳ್ಳಾರಿ: ಪೌರತ್ವ ಕಾಯ್ದೆ ತಿದ್ದುಪಡಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಮತ್ತು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಶಾಸಕ ಜಿ.ಸೋಮಶೇಖರ ರೆಡ್ಡಿಯವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಬಳಿಯ ಶಾದಿಮಹಲ್‌ನಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾಂಗ್ರೆಸ್ ಮುಖಂಡರು, ಅಲ್ಪಂಸಂಖ್ಯಾತರು, ಯುವಕರು ಎಚ್‌ಆರ್‌ಜಿ ವೃತ್ತದಲ್ಲಿ ಜಮಾಯಿಸಿ, ಕೆಲಕಾಲ ರಸ್ತೆ ಬಂದ್ ಮಾಡಿದರು. ಬಳಿಕ, ನಗರದ ಗಡಿಗಿ ಚನ್ನಪ್ಪ ವೃತ್ತಕ್ಕೆ ಆಗಮಿಸಿ ಶಾಸಕ ಸೋಮಶೇಖರ ರೆಡ್ಡಿಯವರ ಪ್ರತಿಕೃತಿ ದಹಿಸಿದರು.
“ನಾವು ಇಲ್ಲೇ ಹುಟ್ಟಿ ಬೆಳೆದಿದ್ದೇವೆ. ಆಂಧ್ರದಿಂದ ಬಂದಿರುವ ನೀವು ಬಳ್ಳಾರಿ ಬಿಟ್ಟು ಹೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೆಡ್ಡಿ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ, ಬಂ ಧಿಸಬೇಕು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ, ಕೆಲ ಪ್ರತಿಭಟನಾನಿರತರು ಸೋಮಶೇಖರ ರೆಡ್ಡಿಯವರ ಮನೆಗೆ ತೆರಳಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಒಂದಿಬ್ಬರು ಲಾಠಿ ಏಟನ್ನೂ ತಿಂದರು.
ಹೊಸಪೇಟೆ, ಗದಗಿನಲ್ಲೂ ಪ್ರತಿಭಟನೆ: ಸೋಮಶೇಖರ ರೆಡ್ಡಿ ಹೇಳಿಕೆ ಖಂಡಿಸಿ ಗದಗಿನಲ್ಲಿ ಶನಿವಾರ ಅಂಜುಮನ್ ಎ-ಇಸ್ಲಾಂ ಸಂಸ್ಥೆಯಿಂದ ಪ್ರತಿಭಟನೆ ನಡೆಸಿ, ಸೋಮಶೇಖರ ರೆಡ್ಡಿ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಮುಸ್ಲಿಂ ಸಮಾಜದವರು, ರೆಡ್ಡಿ ವಿರುದ್ಧ ಧಿಕ್ಕಾರ ಕೂಗಿದರು. ಹೊಸಪೇಟೆಯಲ್ಲಿ ಸಿಪಿ ಎಂಐ ತಾಲೂಕು ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ರೆಡ್ಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರದ ಉಪವಿಭಾಗಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರಲ್ಲಿ ಪ್ರತಿಭಟನೆ ಇಂದು: ಕೋಮು ಪ್ರಚೋದನಕಾರಿ ಹೇಳಿಕೆ ನೀಡಿರುವ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ರಾಯಚೂರು ನಗರದ ಸದರ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜ.5ರಂದು ರಾಯಚೂರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಟಿಯುಸಿಐ ಸಂಘಟನೆ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ತಿಳಿಸಿದ್ದಾರೆ.
ಪೌರತ್ವ ಕಾಯ್ದೆ ಪ್ರಚಾರಕ್ಕೆ ಮೋದಿ ಆಗಮನ: ಖರ್ಗೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಅನುಕೂಲ ಮಾಡಲು ಭೇಟಿ ನೀಡದೇ ಪೌರತ್ವ ಕಾಯ್ದೆ ಬಗ್ಗೆ ಪ್ರಚಾರಕ್ಕೆ ಆಗಮಿಸಿದ್ದರು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.ಸುದ್ದಿಗಾರ ರೊಂದಿಗೆ ಮಾತನಾಡಿ, ಪ್ರಧಾನಿಯವರು ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದಾಗ ಬರಲಿಲ್ಲ. ನೆರೆ ಬಂದಾಗ ಜನರು ಬೀದಿಗೆ ಬಿದ್ದಿದ್ದರು. ಆಗ ಮೋದಿಗೆ ಕರ್ನಾಟಕ ನೆನಪಾಗಲಿಲ್ಲ.
ಈಗ, ಅವರು ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವುದರಿಂದ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ಭೇಟಿ ನೀಡಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ಸಿದ್ಧಗಂಗಾ ಮಠ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡಿದೆ. ಮಠದ ಕಾರ್ಯವನ್ನು ಎಲ್ಲರೂ ಶ್ಲಾ ಸುತ್ತಾರೆ. ಆದರೆ, ಪ್ರಧಾನಿ ಮಠಕ್ಕೆ ಭೇಟಿ ನೀಡಿ ರಾಜಕೀಯ ಭಾಷಣ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಪ್ರಧಾನಿ ವಿಪಕ್ಷಗಳ ವಿರುದ್ಧ ಮಾತನಾಡಲು ಆ ವೇದಿಕೆ ಬಳಸಿಕೊಳ್ಳಬಾರದಿತ್ತು ಎಂದು ಹೇಳಿದರು.
ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಭಾಗಿ: ನಗರ ಶಾಸಕ ಜಿ.ಸೋಮಶೇಖರರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ಶನಿವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಆಪ್ತ ಅಲಿಖಾನ್ ಸಹ ಕಾಣಿಸಿಕೊಂಡರು. ಆದರೆ ಅಲಿಖಾನ್ ಅವರು, ಸೋಮಶೇಖರ ರೆಡ್ಡಿ ವಿರುದ್ಧ ಯಾವುದೇ ಘೋಷಣೆ ಕೂಗಿಲ್ಲ. ಪ್ರತಿಭಟನಾಕಾರರ ನಡುವೆ ಕೈಕಟ್ಟಿ ನಿಂತಿದ್ದರು. ಪೊಲೀಸ್ ಅಧಿ ಕಾರಿಯೊಬ್ಬರು ಪ್ರತಿಭಟನೆ ಮುಗಿಸಿ, ಶಾಂತಿಯುತವಾಗಿ ವಾಪಸ್ ಹೋಗಿ ಎಂದಾಕ್ಷಣ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಗೊಂದಲ ಉಂಟಾದರೂ ತಕ್ಷಣ ಪರಿಸ್ಥಿತಿ ತಿಳಿಯಾಯಿತು. ಆದರೂ, ಅಲಿಖಾನ್ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟಾಗಿ ನಿಂತಿದ್ದರು.
ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ನಿಗ ದಿತ ಮಾರ್ಗ ಬದಲಿಸಿದವರ ಮೇಲೆ ಲಘು ಲಾಠಿ ಚಾರ್ಜ್ ಮಾಡಲಾಗಿದೆಯೇ ಹೊರತು, ಪೊಲೀಸರಿಗೆ ಯಾವುದೇ ದುರುದ್ದೇಶವಿರಲಿಲ್ಲ.
-ಶರತ್‌ಚಂದ್ರ, ಕೇಂದ್ರ ವಲಯ ಐಜಿಪಿ
ಯಾವುದೋ ದೇಶಗಳಿಂದ ಬಂದು ಇಲ್ಲೇ ಜಾಂಡಾ ಹಾಕಲು ಭಾರತವೇನು ಧರ್ಮಛತ್ರವಲ್ಲ. ಹೊರದೇಶಗಳಲ್ಲಿ ವೀಸಾ ಮುಗಿದ ಒಂದು ಗಂಟೆಯೂ ಅಲ್ಲಿರಲು ಅವಕಾಶ ನೀಡುವುದಿಲ್ಲ. ಆದರೆ, ಭಾರತದಲ್ಲಿ ವೀಸಾ ಮುಗಿದು ಹಲವಾರು ವರ್ಷಗಳೇ ಕಳೆದರೂ ಕೇಳುವವರೇ ಇಲ್ಲದಂತಾಗಿತ್ತು. ಹಾಗಾಗಿ, ಪೌರತ್ವ ಕಾಯ್ದೆಗೆ ತಿದ್ದುಪಡಿ ಅನಿವಾರ್ಯವಾಗಿತ್ತು.
-ಆರ್.ಅಶೋಕ್, ಕಂದಾಯ ಸಚಿವ (ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದು)
ಪಾಕ್, ಬಾಂಗ್ಲಾ, ಅಪಘಾನಿಸ್ತಾನಗಳಲ್ಲಿ ಆಕ್ರಮಣ, ಹಿಂಸೆಗೆ ತುತ್ತಾಗಿ ನಿರಾಶ್ರಿತರಾಗಿ ಬರುವವರಿಗೆ ಈ ದೇಶದ ಪೌರತ್ವ ನೀಡಬೇಕು ಎಂದು ಗಾಂಧಿಧೀಜಿಯವರೂ ಹೇಳಿದ್ದಾರೆ. ಸಂವಿಧಾನದಲ್ಲಿ ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದಾರೆ. ಇಟಲಿಯಿಂದ ಬಂದ ಸೋನಿಯಾಗೆ ಪೌರತ್ವವನ್ನು ಈ ದೇಶದ ಕಾನೂನು ನೀಡಿದೆ. ಇನ್ನು, ಹೊರಗಿನಿಂದ ಜೀವ ಉಳಿಸಿಕೊಳ್ಳಲು ಬಂದ ಅಲ್ಪ ಸಂಖ್ಯಾತರಿಗೆ ಪೌರತ್ವ ಬೇಡ ಎನ್ನೋದು ಯಾವ ನ್ಯಾಯ?
-ನಳಿನ್‌ಕುಮಾರ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ (ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.