ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್
ನಾಗನಗೌಡ ಮೊದಲಿನಿಂದಲೂ ಶ್ಯಾಣ್ಯಾ ಹುಡುಗ.ಅವರ ಅವ್ವ ಕಷ್ಟಪಟ್ಟು ಓದಿಸ್ಯಾಳ.
Team Udayavani, Jan 22, 2022, 6:26 PM IST
ಗಜೇಂದ್ರಗಡ/ರೋಣ: ಸಾಧಕನಿಗೆ ಛಲ ಒಂದಿದ್ದರೆ ಸಾಕು ಸಾಧನೆಯ ಶಿಖರ ಏರಬಹುದು. ಸಾಧನೆಗೆ ಬಡತನ ಅಡ್ಡಿಯಾಗದು ಎಂಬುವುದನ್ನು ತಾಲೂಕಿನ ಮುಶಿಗೇರಿ ಗ್ರಾಮದ ನಾಗನಗೌಡ ಗೌಡರ ತೋರಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ವಿಜ್ಞಾನ ಪ್ರಯೋಗಾಲಗಳ ವೈಜ್ಞಾನಿಕ ಅಧಿಕಾರಿ ನೇಮಕಾತಿಗೆ ಸಂಬಂಧಿಸಿ ಟಾಕ್ಸಿಕಾಲಜಿ ವೈಜ್ಞಾನಿಕ ಅ ಧಿಕಾರಿ ಸ್ಥಾನಕ್ಕೆ ನಡೆದ ವಿಷಯಶಾಸ್ತ್ರ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ ಕಳೆದ ಡಿ.4ರಂದು ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗದಲ್ಲಿ 84 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಮೈಲಿಗಲ್ಲು ದಾಖಲಿಸಿದ್ದಾರೆ. ಸೈಂಟಿಫಿಕ್ ಆಫೀಸರ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಾಗನಗೌಡ ಗೌಡರ ಈ ಹುದ್ದೆಗೆ ಆಯ್ಕೆಯಾಗುವ ಮೂಲಕ ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ನಾಗನಗೌಡ ಅವರದ್ದು ತೀರಾ ಕಡು ಬಡತನದ ಕುಟುಂಬ. ಆವರು ಮುಶಿಗೇರಿ ಗ್ರಾಮದ ಅಪ್ಪಟ ಹಳ್ಳಿ ಪ್ರತಿಭೆ. ಅವರು ಇಂತಹ ಗುರುತರ ಹುದ್ದೆಗೆ ಆಯ್ಕೆಯಾಗಿದ್ದಕ್ಕೆ ಗ್ರಾಮಕ್ಕೆ ಗ್ರಾಮವೇ ಸಂತಸಪಡುತ್ತಿದೆ.
ಬಡ ಕೃಷಿ ಕುಟುಂಬ: ನಾಗನಗೌಡ ಅವರದ್ದು ಕೃಷಿ ಮೇಲೆ ಅವಲಂಬಿತ ಕುಟುಂಬ. ಅವರ ತಂದೆ ಹಾಗೂ ತಾಯಿಗೆ ಅಕ್ಷರದ ಜ್ಞಾನವೇ ಇಲ್ಲ. ತಂದೆ ಹನುಮಗೌಡ ಅವರು ನಾಗನಗೌಡ 6ನೇ ವಯಸ್ಸಿನಲ್ಲಿದ್ದಾಗಲೇ ತೀರಿಕೊಂಡರು. ನಂತರ ಅವರ ತಾಯಿ ನೀಲವ್ವಗೆ ದಿಕ್ಕೆ ತೊಚದಾಗಿತ್ತು. ಏಕೆಂದರೆ ಕುಟುಂಬ ನಿಭಾಯಿಸೋದು ಹೇಗೆ ಎನ್ನುವ ಚಿಂತೆಯಲ್ಲಿದ್ದರು. ಅದರಲ್ಲೂ 5 ಜನ ಮಕ್ಕಳನ್ನು ಸಾಕುವ ಜವಾಬ್ದಾರಿ ಆ ತಾಯಿಯ ಮೇಲಿತ್ತು. ಆದರೆ, ಎದೆಗುಂದದ ನೀಲವ್ವ ಅವರು ಕೂಲಿ ನಾಲಿ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನಿಭಾಯಿಸುತ್ತಾ ಬಂದಿದ್ದಾರೆ. ಕಡುಬಡತನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟದ ಕೆಲಸ. ಆದರೆ, ಅದನ್ನು ಅವರ ತಾಯಿ ಸಮರ್ಥವಾಗಿ ನಿಭಾಯಿಸಿ ಇವತ್ತು ನಾಗನಗೌಡ ರಾಜ್ಯಕ್ಕೆ 2ನೇ ಸ್ಥಾನ ಪಡೆಯಲು ಪ್ರೇರಣೆಯಾಗಿದ್ದಾರೆ.
ಸರ್ಕಾರಿ ಶಾಲೆ ವಿದ್ಯಾರ್ಥಿ: 1ರಿಂದ 10 ನೇ ತರಗತಿಯನ್ನು ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಪಡೆದ ನಾಗನಗೌಡರು ನಂತರ, ಗದುಗಿನ ಕೆವಿಎಆರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾದಲ್ಲಿ ಉತ್ತೀರ್ಣರಾದರು. ನಂತರ ಜೆಟಿ ಕಾಲೇಜಿನಲ್ಲಿ ಬಿಎಸ್‌ಸ್ಸಿ ( ಪಿಸಿಎಂ) ಪದವಿ ಪಡೆದರು. ಮುಂದೆ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ದಾಂಡೇಲಿಯ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಮುಗಿಸಿದ್ದಾರೆ. ನೀಟ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿ ಫೆಲೋಶಿಪ್ ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಡಾ|ರವೀಂದ್ರ ಚೌಗಲೆ ಮಾರ್ಗದರ್ಶನದಲ್ಲಿ ನಾಲ್ಕು ವರ್ಷಗಳಿಂದ ಪಿಎಚ್‌ಡಿ ಮಾಡುತ್ತಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ನಾಗನಗೌಡ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅದರಲ್ಲೂ ಸಂಶೋಧನೆಯಲ್ಲಿ ತೊಡಗಿಕೊಂಡ ಅವರು ಟಾಕ್ಸಿಕಾಲಜಿ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್ ಪಡೆಯುವ ಮೂಲಕ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಹುದ್ದೆಗಳನ್ನು ಪಡೆದು ನಾಡಿನ ಕೀರ್ತಿಯನ್ನು ಹೆಚ್ಚಿಸಲಿ ಎನ್ನುವುದು ಗ್ರಾಮಸ್ಥರು ಹಾರೈಕೆಯಾಗಿದೆ.
ಇಡೀ ಊರಿಗೇ ಖುಷಿ ಆಗೈತಿ
ನಾಗನಗೌಡ ಮೊದಲಿನಿಂದಲೂ ಶ್ಯಾಣ್ಯಾ ಹುಡುಗ.ಅವರ ಅವ್ವ ಕಷ್ಟಪಟ್ಟು ಓದಿಸ್ಯಾಳ. ಸಣ್ಣ ಹುಡುಗ ಇದ್ದಾಗ ಅವರ ಅಪ್ಪ ತೀರಿಕೊಂಡರು. ಅವರ ಅವ್ವ ಕೂಲಿ ಮಾಡಿ ಓದಿಸಿ ಮಗ ನೌಕರಿ ಪಡೆಯುವ ಹಾಗ ಮಾಡಿದಳು. ನಮ್ಮ ಹುಡುಗ ಚಲೋ ಹುದ್ದೆ ಪಡೆದದ್ದು ನನಗಷ್ಟ ಅಲ್ಲ ಇಡೀ ಊರಿಗೇ ಖುಷಿ ಆಗೈತಿ ನೋಡ್ರೀ ಎನ್ನುತ್ತಾರೆ ಮುಶಿಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಶಂಕ್ರಪ್ಪ ನಾಯ್ಕರ.
ನನ್ನ ತಾಯಿ ಬಹಳ ಕಷ್ಟ ಪಟ್ಟು ನನಗ ಓದಿಸಿದ್ದಕ್ಕ ಇವತ್ತು ಈ ಹುದ್ದೆಗೆ ಆಯ್ಕೆಯಾಗಿದ್ದೇನೆ. ಇಲ್ಲ ಅಂದರ ನಾನೂ ಬೇರೆಯವರ ಹೊಲದಲ್ಲಿ ದುಡಿಬೇಕಾಗಿತ್ತು. ಅವರ ಶ್ರಮ ನನಗ ಸ್ಫೂರ್ತಿ. ಅದರ ಜತೆಗೆ ಕಾಲಕಾಲಕ್ಕೆ ನನಗೆ ಸೂಕ್ತ ಮಾರ್ಗದರ್ಶನ ಮಾಡಿದ ಕ್ಯಾಪ್ಟನ್ ಮಹೇಶ ಕುಮಾರ ಮಾಲಗಿತ್ತಿ( ಕೆಎಎಸ್), ಮತ್ತು ಸ್ನೇಹಿತ ಪಿಎ ಅರವಿಂದ ಅಂಗಡಿ, ಸೈನಿಕರಾದ ಹನುಮಂತಪ್ಪ ತೇವರನ್ನವರ, ನನ್ನ ಕುಟುಂಬ ವರ್ಗ ಮತ್ತು ನನ್ನ ಊರಿನ ಎಲ್ಲ ಜನರು ಈ ಹುದ್ದೆಗೆ ಆಯ್ಕೆಯಾಗಲು ಸಹಕರಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.
ನಾಗನಗೌಡ ಗೌಡರ
ನನ್ನ ಊರಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾಗನಗೌಡ ಗೌಡರ ಟಾಕ್ಸಿಕಾಲಜಿ ವಿಭಾಗದಲ್ಲಿ ಟಾಕ್ಸಿಕಾಲಜಿ ಸೈಂಟಿಫಿಕ್ ಆಫೀಸರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ಆಯ್ಕೆಯಾದದ್ದು ಬಹಳ ಸಂತೋಷವಾಗಿದೆ. ಸಂಶೋಧನೆಯಲ್ಲಿ ತೊಡಗಿಕೊಂಡಿರುವ ನಾಗನಗೌಡ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಮುಶಿಗೇರಿ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ಅವರ ಆಯ್ಕೆ ಯುವಕರಿಗೆ ಸ್ಫೂರ್ತಿಯಾಗಲಿದೆ.
ಕ್ಯಾಪ್ಟನ್ ಮಹೇಶ ಕುಮಾರ ಮಾಲಗಿತ್ತಿ,
(ಕೆಎಎಸ್), ಸಹಾಯಕ ಆಯುಕ
ನನ್ನು ಮಗನಿಗೆ ಸರ್ಕಾರಿ ನೌಕರಿ ಸಿಕ್ಕಿದ್ದು ಬಹಳ ಸಂತೋಷ ಆಗೇತ್ರಿ. ನಾನು ಅವರ ಇವರ ಹೊಲದಾಗ ಕೂಲಿ ನಾಲಿ ಮಾಡಿ ಸಾಲಿ ಕಲಿಸೀನಿ. ಇವತ್ತು ನನ್ನ ಜೀವನ ಸಾರ್ಥಕ ಆಗೇತಿ ನೋಡ್ರಿ. ನನ್ನ ಮಗ ತನ್ನಂಥ ಬಡಬಗ್ಗರ ಮಕ್ಕಳಿಗೆ ಸಹಾಯ ಮಾಡಲಿ. ಅವನ ಕೀರ್ತಿ ಇನ್ನೂ ಹೆಚ್ಚು ಹೆಚ್ಚು ಬೆಳಗಲಿ.
ನೀಲವ್ವ ಗೌಡರ, ನಾಗನಗೌಡ ಅವರ ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.