ಎನ್‌ಡಿಆರ್‌ಎಫ್ ಹಣಕ್ಕೆ ಕಾಯಬೇಕಿದೆ ರಾಜ್ಯ
Team Udayavani, Aug 13, 2019, 3:08 AM IST
ಬೆಂಗಳೂರು: ಶತಮಾನದ ಭೀಕರ ಪ್ರವಾಹಕ್ಕೆ ರಾಜ್ಯ ಸಂಪೂರ್ಣ ನಲುಗಿ ಹೋಗಿದ್ದು, 17 ಜಿಲ್ಲೆಗಳ ಬಹುತೇಕ ಜನರು ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ, ಎಲ್ಲ ಕಳೆದುಕೊಂಡು ಬೀದಿಗೆ ಬಂದಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪರಿಹಾರ ಮಾತ್ರ ಸಾಕಾಗುತ್ತಿಲ್ಲ.
ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ (ಕೇಂದ್ರ ವಿಪತ್ತು ನಿರ್ವಹಣಾ ಪರಿಹಾರ ನಿಧಿ) ಮತ್ತು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ) ನಿಯಮಗಳ ಪ್ರಕಾರ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆ ಹಾಗೂ ಮನೆ ಕಳೆದುಕೊಂಡವರು, ವಿಪತ್ತಿಗೆ ಸಿಲುಕಿ ಅಂಗಾಂಗ ಕಳೆದುಕೊಂಡವರು, ಜೀವ ಕಳೆದುಕೊಂಡ ಕುಟುಂಬದವರಿಗೆ ಪರಿಹಾರ ನೀಡುವ ಕುರಿತು ಕಂದಾಯ ಇಲಾಖೆ ನಿರ್ದಿಷ್ಟ ಮಾನದಂಡಗಳ ಸುತ್ತೋಲೆ ಹೊರಡಿಸಿದೆ.
15ನೇ ಹಣಕಾಸು ಆಯೋಗದ ನಿಯಮದ ಪ್ರಕಾರ ರಾಜ್ಯಕ್ಕೆ ಐದು ವರ್ಷಗಳಿಗೆ ಕೇಂದ್ರದಿಂದ ಎಸ್‌ಡಿಆರ್‌ಎಫ್ಗೆ 1520 ಕೋಟಿ ರೂ. ಮಾತ್ರ ದೊರೆಯಲಿದೆ. ಸತತ ಬರಗಾಲ ಹಾಗೂ ಕಳೆದ ವರ್ಷ ಕೊಡಗು ಪ್ರವಾಹದಿಂದ ನಲುಗಿರುವ ರಾಜ್ಯಕ್ಕೆ ಎನ್‌ಡಿಆರ್‌ಎಫ್ ನಿಂದಲೇ ಹೆಚ್ಚಿನ ಅನುದಾನ ದೊರೆಯಬೇಕಾಗುತ್ತದೆ. ಪ್ರವಾಹದಲ್ಲಿ ಸಿಲುಕಿ ನಿರಾಶ್ರಿತರಿಗೆ ಆಶ್ರಯ ನೀಡಲು, ಅಗತ್ಯ ಜೀವನೋಪಾಯ ವಸ್ತುಗಳನ್ನು ಒದಗಿಸಲು ಹಾಗೂ ಜಾನುವಾರುಗಳಿಗೂ ತಕ್ಷಣ ಸೂಕ್ತ ಪರಿಹಾರ ನೀಡಬೇಕಿರುವುದರಿಂದ ಕೇಂದ್ರದ ಎನ್‌ಡಿಆರ್‌ಎಫ್ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಕಾಯುವಂತಾಗಿದೆ.
ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪ್ರವಾಹದಲ್ಲಿ ಸಿಲುಕಿ ಜೀವ ಕಳೆದುಕೊಂಡವರಿಗೆ 4 ಲಕ್ಷ ಪರಿಹಾರ ನೀಡಲು ಸೂಚಿಸಲಾಗಿದೆ. (ಸಿಎಂ ಯಡಿಯೂರಪ್ಪ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ) ಪ್ರವಾಹ ದಿಂದ ಅಂಗವೈಕಲ್ಯ ಉಂಟಾದರೆ, ಶೇ 60 ಕ್ಕಿಂತ ಹೆಚ್ಚಾದರೆ 2 ಲಕ್ಷ ರೂ.ಪರಿಹಾರ, ಶೇ.40 ರಿಂದ 60 ರಷ್ಟು ಅಂಗವೈಕಲ್ಯ ಉಂಟಾದರೆ 59100 ರೂ.ಪರಿಹಾರ ನೀಡಲು ಸೂಚಿಸಲಾಗಿದೆ. ಈ ಬಗ್ಗೆ ಸರ್ಕಾರಿ ವೈದ್ಯರಿಂದ ದೃಢೀಕರಣ ಪತ್ರ ದೊರೆತರೆ ಮಾತ್ರ ಪರಿಹಾರ ನೀಡುವಂತೆ ಸೂಚಿಸಲಾಗಿದೆ.
ಪ್ರವಾಹಕ್ಕೆ ಸಿಲುಕಿರುವ ವ್ಯಕ್ತಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೆ, ಒಂದು ವಾರಕ್ಕಿಂತ ಹೆಚ್ಚು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ 12,700 ರೂ., ಒಂದು ವಾರಕ್ಕಿಂತ ಕಡಿಮೆ ಅವಧಿಗೆ ಚಿಕಿತ್ಸೆ ಪಡೆದರೆ 4,300 ರೂ.ಪರಿಹಾರ ನೀಡಲು ಸೂಚಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿ ಎರಡು ದಿನಕ್ಕಿಂತಲೂ ಹೆಚ್ಚು ಅವಧಿ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದ್ದರೆ, ಅಂತಹ ಕುಟುಂಬಕ್ಕೆ ಅಗತ್ಯ ಬಟ್ಟೆ ಖರೀದಿಗೆ 1800 ರೂ., ಮನೆ ಸಾಮಾನುಗಳನ್ನು ಕೊಳ್ಳಲು 2000 ರೂ.ಪರಿಹಾರ ರೂಪದಲ್ಲಿ ನೀಡಲು ಸುತ್ತೋಲೆ ಹೊರಡಿಸಲಾಗಿದೆ.
ಪ್ರತಿದಿನ 60 ರೂ: ಪ್ರವಾಹಕ್ಕೆ ಸಿಲುಕಿ ಯಾವುದೇ ಚಟುವಟಿಕೆ ಮಾಡಲು ಸಾಧ್ಯವಾಗದೇ ಅತಂತ್ರರಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ದಿನನಿತ್ಯದ ಆಹಾರ ಸೇವನೆಗೆ ಪ್ರತಿದಿನ 60 ರೂ. ಮಕ್ಕಳಿಗೆ 45 ರೂ. ನೀಡಬೇಕೆಂಬ ನಿಯಮವಿದೆ. ನೆರೆಯಿಂ ದಲೇ ಯಾವುದೇ ಕೆಲಸ ಕಾರ್ಯ ಮಾಡಲು ಸಾಧ್ಯವಾಗದೇ ಮನೆಯಲ್ಲಿಯೇ ಉಳಿದರೂ ಉದ್ಯೋಗವಿಲ್ಲದೇ ಇರುವ ಕಾರಣ ಪ್ರತಿದಿನ 60 ರೂ.ನಂತೆ ಕನಿಷ್ಠ 1 ತಿಂಗಳು ಪರಿಹಾರ ನೀಡಲು ಎಸ್‌ಡಿಆರ್‌ಎಫ್, ನ್‌ಡಿಆರ್‌ಎಫ್ ನಿಯಮವಿದೆ.
ಗೋಡೆ ಬಿದ್ದರೆ ಮಾತ್ರ ಪರಿಹಾರ: ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪ್ರವಾಹದಲ್ಲಿ ಸಿಲುಕಿರುವ ಮನೆಯ ಗೋಡೆ ಎಷ್ಟು ಪ್ರಮಾಣದಲ್ಲಿ ಬಿದ್ದಿರುತ್ತದೆ ಅಷ್ಟಕ್ಕೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಆದರೆ, ನಿರಂತರ ಮಳೆಯಿಂದ ಹಾಗೂ ವಾರಗಟ್ಟಲೇ ಮಳೆಯ ನೀರಿನಲ್ಲಿ ನಿಂತಿರುವ ಮನೆ ತೇವದಿಂದ ಸಂಪೂರ್ಣ ಬೀಳುವ ಹಂತಕ್ಕೆ ತಲುಪಿರುತ್ತದೆ. ಆದರೆ, ಸರ್ಕಾರ ಮಾತ್ರ ಗೋಡೆ ಬಿದ್ದಷ್ಟೇ ಲೆಕ್ಕ ಹಾಕಿ ಪರಿಹಾರ ನೀಡುವುದು ಮನೆ ಕಳೆದುಕೊಂಡರನ್ನು ಅಸಹಾಯಕರನ್ನಾಗಿ ಮಾಡಿದೆ.
ಬಿಲ್ ಪಾವತಿಯಾಗದ ಆಶ್ರಯ ಮನೆಗಳಿಗೆ ಪರಿಹಾರವಿಲ್ಲ: ಕಳೆದ ವರ್ಷ ರಾಜ್ಯ ಸರ್ಕಾರವೇ ನೀಡಿರುವ ಆಶ್ರಯ ಮನೆಗಳನ್ನು ಕಟ್ಟಿಕೊಂಡಿರುವ ಫಲಾನುಭವಿಗಳಿಗೆ ಸರ್ಕಾರ ಕೊನೆಯ ಕಂತಿನ ಹಣವನ್ನೇ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಭೀಕರ ಮಳೆಗೆ ಆಶ್ರಯ ಮನೆಗಳ ಗೋಡೆಗಳೂ ಬಿದ್ದಿರುವ ಪ್ರಕರಣಗಳು ವರದಿಯಾಗಿವೆ. ಆದರೆ, ಅಂತಹ ಮನೆಗಳಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದರಿಂದ ಗೋಡೆ ಕುಸಿದು ಮನೆ ಕಳೆದುಕೊಂಡವರು ಕಂಗಾಲಾಗುವಂತಾಗಿದೆ.
ಜಾನುವಾರುಗಳಿಗಿಲ್ಲ ಬೆಲೆ: ರಾಜ್ಯ ಸರ್ಕಾರ ಸುತ್ತೋಲೆ ಪ್ರಕಾರ ಮಾನವ ಜೀವ, ಮನೆ ಮತ್ತು ಅಗತ್ಯ ವಸ್ತುಗಳಿಗೆ ಮಾತ್ರ ಪರಿಹಾರ ನೀಡಲು ಸೂಚಿಸಲಾಗಿದ್ದು, ಗ್ರಾಮೀಣ ಜನರ ಬದುಕಿನೊಂದಿಗೆ ಬೆರೆತುಕೊಂಡಿರುವ ಜಾನುವಾರುಗಳ ಜೀವ ಹಾನಿಗೆ ಸರಿಯಾಗಿ ಪರಿಹಾರ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹಾಲು ಕೊಡುವ ಹಸು ಎಮ್ಮೆಗಳು ಹಾಗೂ ಎತ್ತುಗಳಿಗೆ 30 ಸಾವಿರ ಮತ್ತು ಕುರಿ, ಮೇಕೆ, ಹಂದಿಗಳಿಗೆ 3 ಸಾವಿರ ಪರಿಹಾರ ನೀಡಲು ಅವಕಾಶವಿದೆ. ಸರ್ಕಾರದ ದಾಖಲೆಗಳ ಪ್ರಕಾರ ಕಳೆದ 12 ದಿನಗಳಲ್ಲಿ 548 ಸಾಕು ಪ್ರಾಣಿಗಳು ಜೀವ ಕಳೆದುಕೊಂಡಿದ್ದು,
50,595 ಸಾಕು ಪ್ರಾಣಿಗಳನ್ನು ರಕ್ಷಿಸಲಾಗಿದೆ. ಆದರೆ, ಲಕ್ಷಾಂತರ ರೂ.ಬೆಲೆ ಬಾಳುವ ಎತ್ತು, ಹಸು, ಎಮ್ಮೆಗಳಿಗೆ ಸೂಕ್ತ ಪರಿಹಾರ ನೀಡದಿದ್ದರೆ, ಅವುಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಲಕ್ಷಾಂತರ ಜನರು ಬದುಕಿನ ಆಸರೆಯನ್ನೇ ಕಳೆದುಕೊಂಡಿರುವುದರಿಂದ ಸೂಕ್ತ ಪರಿಹಾರ ದೊರೆಯದಿದ್ದರೆ ಮತ್ತೆ ಬದುಕು ಕಟ್ಟಿಕೊಳ್ಳುವುದು ದುಸ್ತರವಾದಂತಾಗಿದೆ. ಜಾನುವಾರುಗಳಿಗೆ ಪ್ರತಿ ದಿನ ಆಹಾರ ಪೂರೈಸಲು ದೊಡ್ಡ ಪ್ರಾಣಿಗೆ ಪ್ರತಿ ದಿನ 70 ರೂ. ಸಣ್ಣ ಪ್ರಾಣಿಗೆ 35 ರೂ. ಪರಿಹಾರ ನೀಡಬೇಕೆಂಬ ನಿಯಮವಿದೆ.
ಯಾವುದೇ ನಿರ್ದಿಷ್ಟ ನಿಧಿಯಿಲ್ಲ: ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ನಿಧಿ ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿಯೇ ಇರುವುದರಿಂದ ಪ್ರವಾಹ ಮತ್ತು ಬರ ಪರಿಹಾರ ಕಾಮಗಾರಿಗೆ ಕಂದಾಯ ಇಲಾಖೆಯಿಂದಲೇ ಪರಿಹಾರ ನೀಡಲಾಗುತ್ತದೆ. ಆದರೆ, ಪ್ರಕೃತಿ ವಿಕೋಪದಿಂದ ಕನಿಷ್ಠ 3 ಲಕ್ಷದ ಮೇಲೆ ನಷ್ಟವಾದರೆ ಮಾತ್ರ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಧಿಯಿಂದ ಹಣ ಬಿಡುಗಡೆ ಮಾಡುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಎಂಬ ಆರೋಪವಿದೆ.
ಆದರೆ, ಗ್ರಾಮೀಣ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾದರೆ, ಅದನ್ನು ಸರಿಪಡಿಸಲು ಯಾವುದೇ ನಿರ್ದಿಷ್ಟ ನಿಧಿಯಿಲ್ಲ. ಅದನ್ನು ಗ್ರಾಮ ಪಂಚಾಯಿತಿಯೇ ನೋಡಿಕೊಳ್ಳಬೇಕು. ಆದರೆ, ಗ್ರಾಪಂಗಳಿಗೆ ಬರುವ ಅನುದಾನದಲ್ಲಿ ವಿದ್ಯುತ್ ಬಿಲ್, ಎಸ್ಸಿ ಎಸ್ಟಿ ಮೀಸಲು ಹಣ, ಆಡಳಿತ ವೆಚ್ಚ ಸೇರಿದಂತೆ ಶೇ.70 ರಷ್ಟು ಅನಗತ್ಯ ವೆಚ್ಚವೇ ಆಗುವುದರಿಂದ ಪಂಚಾಯಿತಿಗಳಿಗೆ ಅಭಿವೃದ್ಧಿಗೆ ವಿಶೇಷ ಅನುದಾನವೇ ಇರುವುದಿಲ್ಲ.
ಹೀಗಾಗಿ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಂಘರ್ಷದ ನಡುವೆ ಗ್ರಾಮೀಣ ಪ್ರದೇಶದಲ್ಲಿ ನಷ್ಟವಾಗುವ ಸಾರ್ವಜನಿಕ ಆಸ್ತಿಗಳನ್ನು ದುರಸ್ಥಿಗೊಳಿಸದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹ ಹಾಗೂ ಬರ ಪರಿಸ್ಥಿತಿ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವ್ಯಾಪ್ತಿಗೆ ವಹಿಸಬೇಕೆಂಬ ಬೇಡಿಕೆಯೂ ಇದೆ.
* ಶಂಕರ ಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.