Hamas V/s Isreal: 100 ವರ್ಷಗಳ ಸಂಘರ್ಷಕ್ಕೆ ಯುದ್ಧದ ತಿರುವು


Team Udayavani, Oct 8, 2023, 11:50 PM IST

isreal bomb

ಮತ್ತೂಂದು ಯುದ್ಧ ಆರಂಭವಾಗಿದೆ. ಇಸ್ರೇಲ್‌ -ಪ್ಯಾಲೆಸ್ತೀನ್‌ ನಡುವಿನ ಸುಮಾರು 100 ವರ್ಷಗಳಿಗೂ ಹಿಂದಿನ ದ್ವೇಷವು ಈಗ ಯುದ್ಧದಂತಹ ಭಯಾನಕ ತಿರುವನ್ನು ಪಡೆದುಕೊಂಡಿದೆ. ಶನಿವಾರ ಪ್ಯಾಲೆಸ್ತೀನ್‌ನ ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ಅನಿರೀಕ್ಷಿತ ದಾಳಿ ಆರಂಭಿಸಿದ್ದಾರೆ. ಭೂಮಿ, ಆಗಸ, ಸಮುದ್ರದ ಮೂಲಕ ಹಠಾತ್‌ ಆಕ್ರಮಣ ಮಾಡಿದ್ದಾರೆ. ಸಾವಿರಾರು ರಾಕೆಟ್‌ಗಳು ಇಸ್ರೇಲ್‌ನತ್ತ ತೂರಿಬಂದಿವೆ. ಗಡಿ ದಾಟಿ ಬಂದ ಬಂಡುಕೋರರು ಮನಬಂದಂತೆ ಇಸ್ರೇಲಿಯನ್ನರ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಮಹಿಳೆಯರು, ಮಕ್ಕಳು, ಯೋಧರು ಸೇರಿ ಸಿಕ್ಕಸಿಕ್ಕವರನ್ನು ಅಪಹರಿಸಿ, ಒತ್ತೆಯಲ್ಲಿಟ್ಟು­ಕೊಂಡಿ­ದ್ದಾರೆ.

ಇದರ ಬೆನ್ನಲ್ಲೇ ಬಲಿಷ್ಠ ರಾಷ್ಟ್ರವಾದ ಇಸ್ರೇಲ್‌ ಕೂಡ ಯುದ್ಧ ಘೋಷಿಸಿದೆ. ಗಾಜಾ ಪಟ್ಟಿಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ಆರಂಭಿಸಿದೆ. ಇತ್ತ ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರ ರಕ್ತದಾಹಕ್ಕೆ ಅಮಾಯಕರು ಬಲಿಯಾದಂತೆಯೇ, ಅತ್ತ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ನ ಕ್ಷಿಪಣಿಗಳ ಮಳೆಗೆ ನೂರಾರು ಮುಗ್ಧ ನಾಗರಿಕರು ಪ್ರಾಣ ಕಳೆದು­ಕೊಂಡಿದ್ದಾರೆ. ಯುದ್ಧ ಅಂದರೆ ಹಾಗೆಯೇ- ಯಾರದ್ದೋ ರಕ್ತದಾಹಕ್ಕೆ ಮತ್ಯಾರೋ ಬಲಿಯಾಗು­ವುದು. ಯಾರದ್ದೋ ದ್ವೇಷದ ಬೆಂಕಿಗೆ ಮತ್ಯಾರೋ ಸುಟ್ಟು ಹೋಗುವುದು.

ಈಗಾಗಲೇ ರಷ್ಯಾ-ಉಕ್ರೇನ್‌ ಯುದ್ಧದಿಂದ ಇಡೀ ಜಾಗತಿಕ ಆರ್ಥಿಕತೆಯೇ ಅಲ್ಲೋಲಕಲ್ಲೋಲವಾಗಿದೆ. ಈ ಆಘಾತದಿಂದ ಇನ್ನೂ ಜಗತ್ತು ಮೇಲೆದ್ದಿಲ್ಲ. ಅಷ್ಟರಲ್ಲೇ ಮತ್ತೂಂದು ಘೋರ ಕದನಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಇಸ್ರೇಲ್‌-ಪ್ಯಾಲೆಸ್ತೀನ್‌ ನಡುವಿನ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಮೊದಲ ವಿಶ್ವ ಯುದ್ಧದಲ್ಲಿ ಒಟ್ಟೋಮನ್‌ ಸಾಮ್ರಾಜ್ಯವನ್ನು ಸೋಲಿಸಿದ ಬಳಿಕ ಪ್ಯಾಲೆಸ್ತೀನ್‌ ಅನ್ನು ಬ್ರಿಟನ್‌ ವಶಕ್ಕೆ ಪಡೆದುಕೊಂಡಿತು. ಆಗ ಪ್ಯಾಲೆಸ್ತೀನ್‌ನಲ್ಲಿ ಇದ್ದಿದ್ದು ಯಹೂದಿ ಅಲ್ಪಸಂಖ್ಯಾಕರು ಮತ್ತು ಅರಬ್‌ ಬಹುಸಂಖ್ಯಾಕರು. ಇಸ್ರೇಲ್‌ ಎಂಬ ದೇಶವೇ ಆಗ ಇರಲಿಲ್ಲ. ಪ್ಯಾಲೆಸ್ತೀನ್‌ ಅನ್ನು ಯಹೂದಿಯನ್ನರಿಗೆ ರಾಷ್ಟ್ರೀಯ ನೆಲೆಯಾಗಿ ಸ್ಥಾಪಿಸಲು ಬ್ರಿಟನ್‌ ಮುಂದಾದಾಗ ಅಲ್ಲಿನ ಮೂಲ ನಿವಾಸಿಗಳೆಂದು ಹೇಳಲಾಗುವ ಅರಬ್ಬರು ಸಿಡಿದೆದ್ದರು. ಹೀಗೆ ಪ್ಯಾಲೆಸ್ತೀನಿಯರು ಮತ್ತು ಯಹೂದಿಗಳ ನಡುವೆ ವೈಮನಸ್ಸು ಆರಂಭವಾಯಿತು. ಇನ್ನೊಂದೆಡೆ, ಇದು ನಮ್ಮ ಪೂರ್ವಜರ ನಾಡು ಎಂದು ಯಹೂದಿಗಳು ನಂಬಿದ್ದರು. 1920-1940ರ ಅವಧಿಯಲ್ಲಿ ಯುರೋಪ್‌ನಲ್ಲಿ ಯಹೂದಿಗಳ ವಿರುದ್ಧ ಭಾರೀ ದೌರ್ಜನ್ಯಗಳು ನಡೆದಾಗ ಅಲ್ಲಿದ್ದ ಯಹೂದಿಗಳು ಭಾರೀ ಸಂಖ್ಯೆಯಲ್ಲಿ ಪ್ಯಾಲೆಸ್ತೀನ್‌ ಕಡೆ ವಲಸೆ ಬರಲಾರಂಭಿಸಿದರು. ಪರಿಣಾಮ, ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. 1947ರಲ್ಲಿ ವಿಶ್ವಸಂಸ್ಥೆಯು ಯಹೂದಿಗಳು ಮತ್ತು ಅರಬ್ಬರಿಗೆ ಪ್ರತ್ಯೇಕ ದೇಶ ರಚಿಸಲು ಮುಂದಾಯಿತು. ಇದನ್ನು ಅರಬ್ಬರು ವಿರೋಧಿಸಿದರು. ಕೊನೆಗೆ 1948ರಲ್ಲಿ ಯಹೂದಿಗಳು ತಾವಿದ್ದ ಭೂಪ್ರದೇಶವನ್ನು ಇಸ್ರೇಲ್‌ ದೇಶ ಎಂದು ಘೋಷಿಸಿದರು. ಅರಬ್ಬರಿಗೆ ಸಹಿಸಿಕೊಳ್ಳಲಾಗಲಿಲ್ಲ. ಹೀಗಾಗಿ ಎರಡೂ ಕಡೆ ಭಾರೀ ಯುದ್ಧ ನಡೆದು, ಅದು ಮುಗಿಯುವ ಹೊತ್ತಿಗೆ ಪ್ಯಾಲೆಸ್ತೀನ್‌ನ ಬಹುಭಾಗವು ಇಸ್ರೇಲ್‌ ಪಾಲಾಯಿತು. ಹೀಗೆ ಯಹೂದಿಗಳು ಮತ್ತು ಪ್ಯಾಲೆಸ್ತೀನಿಯರ ನಡುವೆ ಶುರುವಾದ ದ್ವೇಷದ ಬೆಂಕಿ ಈಗಲೂ ಎರಡೂ ಕಡೆಯ ಜನರನ್ನು ಸುಡುತ್ತಲೇ ಇದೆ.

2008ರಿಂದ 2023ರ ವರೆಗೆ ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷದಲ್ಲಿ ಸುಮಾರು 7 ಸಾವಿರ ಜನ ಮಡಿದಿದ್ದಾರೆ. ಈ ಪೈಕಿ ಅತೀ ಹೆಚ್ಚು ಸಾವು ನೋವು ಕಂಡಿದ್ದು ಪ್ಯಾಲೆಸ್ತೀನ್‌. ಅಲ್ಲಿ 6,407 ಮಂದಿ ಮೃತಪಟ್ಟರೆ, ಇಸ್ರೇಲ್‌ 308 ಮಂದಿಯನ್ನು ಕಳೆದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ ಮೇಲೆ ನಡೆದ ಭೀಕರ ಮತ್ತು ಅನಿರೀಕ್ಷಿತ ದಾಳಿಯೆಂದರೆ ಶನಿವಾರ ಹಮಾಸ್‌ ಉಗ್ರರು ನಡೆಸಿದ ಆಕ್ರಮಣ. “ಗಾಜಾದಲ್ಲಿ ಪ್ಯಾಲೆಸ್ತೀನ್‌ ಜನರ ಮೇಲೆ, ಅಲ್‌ -ಅಖಾದಂಥ ನಮ್ಮ ಪವಿತ್ರ ಧಾರ್ಮಿಕ ಕೇಂದ್ರ ಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂತಾರಾಷ್ಟ್ರೀಯ ಸಮುದಾಯ ಕೊನೆ ಹಾಡಲಿ ಎಂಬ ನಿಟ್ಟಿನಲ್ಲಿ ಎಲ್ಲರ ಗಮನ ಸೆಳೆಯಲೆಂದೇ ಈ ಆಕ್ರಮಣ ನಡೆಸುತ್ತಿದ್ದೇವೆ’ ಎಂದು ಹಮಾಸ್‌ ಉಗ್ರರು ಹೇಳಿಕೊಂಡಿದ್ದಾರೆ. ಇನ್ನು, ನಮ್ಮ ನೆಲಕ್ಕೆ ನುಗ್ಗಿ ಉಗ್ರರು ನಮ್ಮ ಜನರನ್ನು ಕೊಲ್ಲುತ್ತಿದ್ದರೆ ಸುಮ್ಮನಿರಲು ಹೇಗೆ ಸಾಧ್ಯ ಎನ್ನುತ್ತಾ ಪ್ರತಿದಾಳಿ ಆರಂಭಿಸಿದೆ ಇಸ್ರೇಲ್‌. ಒಟ್ಟಿನಲ್ಲಿ ಶನಿವಾರದಿಂದೀಚೆಗೆ ಎರಡೂ ಕಡೆ ಮಾರಣಹೋಮ ನಡೆಯುತ್ತಿವೆ.

ಐರೋಪ್ಯ ಒಕ್ಕೂಟ, ಅಮೆರಿಕ, ಯುಕೆ, ಜರ್ಮನಿ, ಗ್ರೀಸ್‌, ಫ್ರಾನ್ಸ್‌ನಂಥ ವಿಶ್ವದ ಬಲಿಷ್ಠ ರಾಷ್ಟ್ರಗಳೆಲ್ಲ ಇಸ್ರೇಲ್‌ ಮೇಲಿನ ಹಮಾಸ್‌ ದಾಳಿಯನ್ನು ಖಂಡಿಸಿವೆ. ಇಸ್ರೇಲ್‌ಗೆ ಅಗತ್ಯ ನೆರವನ್ನೂ ಘೋಷಿಸಿವೆ. ಇನ್ನೊಂದೆಡೆ, ಜೋರ್ಡಾನ್‌, ಇರಾನ್‌, ಕುವೈಟ್‌, ಕತಾರ್‌ನಂಥ ಕೆಲವು ದೇಶಗಳು ಈ ಕಾಳಗಕ್ಕೆ ಮೂಲ ಕಾರಣವೇ ಇಸ್ರೇಲ್‌ ಎಂದು ದೂಷಿಸುವ ಮೂಲಕ ಪರೋಕ್ಷವಾಗಿ ಹಮಾಸ್‌ಗೆ ಬೆಂಬಲ ನೀಡಿವೆ. ಅರಬ್‌ ಲೀಗ್‌, ಬ್ರೆಜಿಲ್‌, ಚೀನ, ಈಜಿಪ್ಟ್ ಹಿಂಸಾಚಾರ ಕೊನೆಗೊಳಿಸಿ ಶಾಂತಿ ಸ್ಥಾಪನೆಗೆ ಕರೆ ನೀಡಿವೆ.

ಗಾಜಾದಲ್ಲಿ ಇಸ್ರೇಲ್‌ ನಡೆಸಿರುವ ಕ್ರೌರ್ಯ, ಅಲ್‌-ಅಖಾ ಮಸೀದಿಗೆ ಸಂಬಂಧಿಸಿದ ವಿವಾದ, ಪ್ಯಾಲೆಸ್ತೀನಿಯರಲ್ಲಿ ಮನೆ­ಮಾಡಿ­ರುವ ಆಕ್ರೋಶ, ಇಷ್ಟು ವರ್ಷಗಳಾದರೂ ಬಗೆಹರಿಯದ ಸಮಸ್ಯೆ, ಅಸ್ತಿತ್ವಕ್ಕಾಗಿ ಹಾಗೂ ಅಧಿಕಾರಕ್ಕಾಗಿ ಹಮಾಸ್‌ ಉಗ್ರರು ನಡೆಸುತ್ತಿರುವ ಪ್ರಯತ್ನಗಳಷ್ಟೇ ಈಗ “ಯುದ್ಧವಾಗಿ ಸ್ಫೋಟ’­ಗೊಳ್ಳಲು ಕಾರಣ ಎಂದರೆ ತಪ್ಪಾಗುತ್ತದೆ. ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ಯುದ್ಧದ ಹಿಂದೆ ಪಶ್ಚಿಮ ಏಷ್ಯಾ ರಾಜಕೀಯವೂ ಮಹತ್ವದ ಪಾತ್ರ ವಹಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಪ್ರಯತ್ನದ ಫ‌ಲವೆಂಬಂತೆ, ಇಸ್ರೇಲ್‌ ಮತ್ತು ಸೌದಿ ಅರೇಬಿಯಾ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ಸ್ನೇಹ ಬೆಳೆಯುತ್ತಿದೆ. ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ನಡೆದಿರುವ ಐತಿಹಾಸಿಕ ಪ್ರಕ್ರಿಯೆ ಸಹಜವೆಂಬಂತೆ ಹಮಾಸ್‌ಗೆ ರುಚಿಸುತ್ತಿಲ್ಲ. ಸೌದಿಯಂಥ ಇಸ್ಲಾಮಿಕ್‌ ರಾಷ್ಟ್ರಗಳು ತಮ್ಮ ಪರವಿರಬೇಕು ಎಂದು ಪ್ಯಾಲೆಸ್ತೀನಿ­ಯರು ಬಯಸುತ್ತಿ­ದ್ದಾರೆ. ಆದರೆ ತಮ್ಮ ಇಚ್ಛೆಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿರುವುದು ಪ್ಯಾಲೆಸ್ತೀನಿಯರ ಗಾಯಕ್ಕೆ ಬರೆ ಎಳೆದಂತಾಗಿದೆ.

“ಇಸ್ರೇಲ್‌ ಕೆಣಕಿ ಗೆದ್ದವರಿಲ್ಲ’ ಎಂಬುದು ಗೊತ್ತಿದ್ದರೂ ಅಂಥ ಬಲಿಷ್ಠ ರಾಷ್ಟ್ರದ ಮೇಲೆ ಏಕಾಏಕಿ ಹಮಾಸ್‌ ದಾಳಿ ನಡೆಸಿರುವುದರ ಹಿಂದೆ ಇರಾನ್‌ನ ಕೈವಾಡವಿರುವ ಸಾಧ್ಯತೆ ಹೆಚ್ಚಿದೆ. ಪ್ಯಾಲೆಸ್ತೀನ್‌ನ ಬಂಡುಕೋರರ ಪೈಕಿ ಹಮಾಸ್‌ ಅಷ್ಟೇನೂ ಬಲಿಷ್ಠವಾಗಿಯೂ ಇದ್ದಿರಲಿಲ್ಲ. ಆದರೂ ಶನಿವಾರದ ದಾಳಿಯು ಇಸ್ರೇಲ್‌ನ ಇತಿಹಾಸದಲ್ಲೇ ಅತೀದೊಡ್ಡ ಗುಪ್ತಚರ ವೈಫ‌ಲ್ಯ ಎಂದೇ ಹೇಳಬಹುದು. ಇವೆಲ್ಲದರ ನಡುವೆಯೂ ಸೌದಿ ಅರೇಬಿಯಾ ಮಾತ್ರ ಯಾರ ಕಡೆಯೂ ವಾಲದೇ, ಶಾಂತಿ ಮಂತ್ರ ಪಠಿಸುವ ಮೂಲಕ ಜಾಣ್ಮೆ ಪ್ರದರ್ಶಿಸಿರುವುದು ಗಮನಿಸಬೇಕಾದ ಸಂಗತಿ.
ಇನ್ನು, ಭಾರತದ ವಿಚಾರಕ್ಕೆ ಬಂದರೆ ಹಿಂದಿನಿಂದಲೂ ಯಾವುದೇ ಎರಡು ದೇಶಗಳ ನಡುವೆ ಯುದ್ಧ ನಡೆದಾಗ ಭಾರತವು ಯಾರ ಪರವೂ ವಹಿಸದೇ, ಅಲಿಪ್ತ ನೀತಿ ಅನುಸರಿಸಿಕೊಂಡು ಬಂದಿದೆ.

ರಷ್ಯಾ-ಉಕ್ರೇನ್‌ ಯುದ್ಧದಲ್ಲೂ ಪಾಶ್ಚಾತ್ಯ ರಾಷ್ಟ್ರಗಳ ತೀವ್ರ ಒತ್ತಡವಿದ್ದರೂ ಭಾರತ ತನ್ನ ನಿಷ್ಪಕ್ಷ ನಿಲುವಿನಲ್ಲಿ ರಾಜಿ ಮಾಡಿಕೊಂಡಿಲ್ಲ. ಆದರೆ ಈಗ ಇಸ್ರೇಲ್‌ ಮೇಲಿನ ಹಮಾಸ್‌ ದಾಳಿಯನ್ನು ಭಾರತ ಖಂಡಿಸಿರುವುದು ಮಾತ್ರವಲ್ಲ, ತಾವು ಇಸ್ರೇಲ್‌ ಬೆಂಬಲಕ್ಕಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಿದೆ. ಇದಕ್ಕೆ ಕಾರಣ, ಇಸ್ರೇಲ್‌ ಮೇಲೆ ಯುದ್ಧ ಸಾರಿರುವುದು ಹಮಾಸ್‌ ಎಂಬ ಉಗ್ರ ಸಂಘಟನೆ. ಭಯೋತ್ಪಾದನೆಯು ಇಡೀ ಜಗತ್ತಿಗೆ ಅಂಟಿರುವ ಶಾಪ. ಭಾರತ ಕೂಡ ಭಯೋತ್ಪಾದನೆಯ ಕರಾಳ ಮುಖವನ್ನು ನೋಡಿರುವ ಕಾರಣ, ಉಗ್ರವಾದದ ವಿರುದ್ಧ ಧ್ವನಿ ಎತ್ತಬೇಕಾಗಿರುವುದು ಇಂದಿನ ಅಗತ್ಯವೂ ಹೌದು. ಆ ನಿಟ್ಟಿನಲ್ಲಿ ಭಾರತದ ನಿಲುವನ್ನು ಒಪ್ಪಿಕೊಳ್ಳಬಹುದು. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್‌ ಜತೆಗಿನ ಭಾರತದ ನಂಟು ಬಲಗೊಳ್ಳುತ್ತಿದೆ. ರಾಜತಾಂತ್ರಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಆಳಗೊಳಿಸುವ ನಿಟ್ಟಿನಲ್ಲಿ ಭಾರತ, ಇಸ್ರೇಲ್‌, ಯುಎಇ ಮತ್ತು ಅಮೆರಿಕ ಸೇರಿ ಐ2ಯು2 ಎಂಬ ಸಮೂಹವೊಂದನ್ನು ರಚಿಸಿಕೊಂಡಿವೆ. ಇತ್ತೀಚೆಗೆ ಮುಕ್ತಾಯವಾದ ಜಿ20 ಶೃಂಗದ ವೇಳೆ ಭಾರತ- ಮಧ್ಯಪ್ರಾಚ್ಯ- ಯುರೋಪ್‌ ಆರ್ಥಿಕ ಕಾರಿಡಾರ್‌ಗೂ ಹಸುರು ನಿಶಾನೆ ದೊರೆತಿದೆ.

ಅದೇನೇ ಇದ್ದರೂ ರಾಜತಾಂತ್ರಿಕ ಸಂಬಂಧಗಳು, ಅಂತಾರಾಷ್ಟ್ರೀಯ ವಹಿವಾಟುಗಳು, ವಾಣಿಜ್ಯ-ವ್ಯಾಪಾರ ಬಾಂಧವ್ಯಗಳಾಚೆಗೆ ದೃಷ್ಟಿ ಹಾಯಿಸಿದರೆ, ಯುದ್ಧ ಮನುಕುಲದ ವೈರಿ. “ನಾವು ಯುದ್ಧವನ್ನು ಕೊನೆಗಾಣಿಸಬೇಕು, ಇಲ್ಲವೆಂದಾದಲ್ಲಿ ಯುದ್ಧವೇ ನಮ್ಮನ್ನು ಕೊನೆಗಾಣಿಸುತ್ತದೆ’ ಎಂಬ ಜಾನ್‌. ಎಫ್. ಕೆನಡಿ ಅವರ ಮಾತಿನಂತೆ, ಯುದ್ಧದ ಮೂಲಕ ಜಗತ್ತಿನ ಯಾವುದೇ ಸಮಸ್ಯೆಗೆ ಇದುವರೆಗೆ ಪರಿಹಾರ ದೊರಕಿಲ್ಲ. ಎಷ್ಟೇ ಬಲಿಷ್ಠ ದೇಶವಾದರೂ ಸಮರಕ್ಕೆ ಹೊರಟರೆ ಆ ದೇಶದ ಸಂಪತ್ತು ಕರಗಿ ಹೋಗುತ್ತದೆಯೇ ಹೊರತು ಗೆದ್ದು ಬೀಗುವುದಕ್ಕೆ ಏನೂ ಉಳಿದಿರುವುದಿಲ್ಲ. ಇಲ್ಲಿಯೂ ಅಷ್ಟೇ ಇಸ್ರೇಲ್‌ ಆಗಲೀ, ಹಮಾಸ್‌ ಆಗಲಿ, ಯುದ್ಧದಿಂದ ಏನೂ ಸಾಧಿಸುವುದಿಲ್ಲ. ಪರಸ್ಪರರ ವಿರುದ್ಧ ಯುದ್ಧ ಮಾಡಲು ಮುಂದಾಗುವುದೇ ಪರಮ ಮೂರ್ಖತನ. ಅನವಶ್ಯಕ ಒಬ್ಬರನ್ನೊಬ್ಬರು ಕೆಣಕುವ ಮೂಲಕ ದೇಶದ ಅಮಾಯಕ ಪ್ರಜೆಗಳ ಜೀವವನ್ನು ಅಪಾಯಕ್ಕೆ ತಳ್ಳುವುದಕ್ಕಿಂತ ಜಾಗತಿಕ ದುರಂತ ಇನ್ನೊಂದಿಲ್ಲ.

 ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.