ಸೆಮಿಕಂಡಕ್ಟರ್ ಎಂಬ ಅರೆವಾಹಕನ ಚಮತ್ಕಾರ
Team Udayavani, Jul 30, 2023, 12:14 AM IST
ಇದು ತಂತ್ರಜ್ಞಾನದ ಯುಗ. ಪ್ರತೀ ರಾಷ್ಟ್ರವು ವೇಗದಲ್ಲಿ ಬೆಳೆಯುತ್ತಿರುವ ಅಡ್ವಾನ್ಸ್‌ಡ್ ಪ್ರೋಗ್ರಾಂ ವ್ಯವಸ್ಥೆಯಲ್ಲಿ ಹಾಗೂ ಹೊಸ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಲು ಬಯಸುತ್ತಿದೆ. ಹೀಗಾಗಿ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಮಹತ್ವದ ಹೆಜ್ಜೆ ಇರಿಸಿದೆ. ಭಾರತದೊಂದಿಗೆ ವಿಶ್ವದ ಹಲವು ದೇಶಗಳು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯವನ್ನು ನೀಡುತ್ತಿವೆ. ಏನಿದು ಸೆಮಿಕಂಡಕ್ಟರ್? ಏನು ಪ್ರಯೋಜನ? ಯಾಕೆ ಇದು ಮುಖ್ಯ ಎಂಬ ಮಾಹಿತಿ ಇಲ್ಲಿದೆ.
ತೈವಾನ್ ಅಗ್ರಪಂಕ್ತಿಯಲ್ಲಿ
ಚಿಪ್‌ಗ್ಳ ಉತ್ಪಾದನೆಯಲ್ಲಿ ಶೇ. 90ರಷ್ಟು ಪಾಲನ್ನು ತೈವಾನ್ ಹೊಂದಿದೆ. ಇಲ್ಲಿನ ತೈವಾನ್ ಸೆಮಿಕಂಡಕ್ಟರ್ ಮಾನಿಫ್ಯಾಕ್ಚರಿಂಗ್ ಕಂಪೆನಿ ವಿಶ್ವದ ಶೇ. 50ರಷ್ಟು ಉತ್ಪಾದನೆಯನ್ನು ಏಕೈಕವಾಗಿ ಮಾಡುತ್ತದೆ. ತೈವಾನ್‌ನ ಅನಂತರ ದಕ್ಷಿಣ ಕೊರಿಯ, ಜಪಾನ್, ಅಮೆರಿಕ ಹಾಗೂ ಚೀನ ರಾಷ್ಟ್ರಗಳು ಮೊದಲ ಐದು ಸ್ಥಾನಗಳಲ್ಲಿವೆ. ಪ್ರಸ್ತುತ ಶೇ.65ರಷ್ಟು ಚಿಪ್‌ಗ್ಳನ್ನು ತೈವಾನ್, ಶೇ. 5ರಷ್ಟು ಚೀನ ಉಳಿದ ದೇಶಗಳಿಗೆ ಪೂರೈ ಸುತ್ತದೆ.
ಏನಿದು ಸೆಮಿಕಂಡಕ್ಟರ್?
ಹೆಸರೇ ಹೇಳುವಂತೆ ಇದು ವಿದ್ಯುತ್ ಶಕ್ತಿಯನ್ನು ಮಿತವಾಗಿ ತನ್ನ ಮೂಲಕ ಪ್ರವಹಿಸಲು ಬಿಡುವ ವಾಹಕ. ಅಂದರೆ ಉತ್ತಮ ವಾಹಕವಾಗಿರುವ ತಾಮ್ರ ಮತ್ತು ಅಲ್ಯುಮಿನಿಯಂಗಿಂತ ಕಡಿಮೆ; ಅವಾಹಕವಾಗಿರುವ ಗಾಜಿಗಿಂತ ಹೆಚ್ಚು ಪ್ರಮಾಣದಲ್ಲಿ ತನ್ನ ಮೂಲಕ ವಿದ್ಯುತ್ ಶಕ್ತಿಯನ್ನು ಪ್ರವಹಿಸುತ್ತದೆ. ಮುಖ್ಯವಾಗಿ ವಿದ್ಯುತ್ ಶಕ್ತಿಯನ್ನು ಪರಿವರ್ತಿಸಬಲ್ಲ ಸಾಮರ್ಥ್ಯವವನ್ನು ಹೊಂದಿದೆ. ನಾವು ದಿನನಿತ್ಯ ಬಳಸುವ ಮೊಬೈಲ್, ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಅಪ್ಲಯನ್ಸ್‌ಗಳು, ಎಲ್‌ಇಡಿ ಲೈಟ್ಸ್ ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಈ ಸೆಮಿಕಂಡಕ್ಟರ್‌ಗಳು ಚಿಪ್‌ಗ್ಳ ರೂಪದಲ್ಲಿ ಇರುತ್ತವೆ. ಇದು ಎಲ್ಲ ಎಲೆಕ್ಟ್ರಾನಿಕ್ ಸಾಧನಗಳ ಅಂಗ. ಈ ಸೆಮಿಕಂಡಕ್ಟರ್ ಸಿಲಿಕಾನ್ ಅಂಶವನ್ನು ಹೊಂದಿರುತ್ತವೆ.
ಈ ಸೆಮಿಕಂಡಕ್ಟರ್‌ಗಳನ್ನು ಕಂಪ್ಯೂಟರ್‌ಗಳಲ್ಲಿ ಮೆಮೋರಿ ಚಿಪ್‌ಗ್ಳ ರೂಪದಲ್ಲಿ ಡಾಟಾಗಳನ್ನು ಸಂಗ್ರಹಿಸಿಡಲು ಹಾಗೂ ಮಾಹಿತಿಗಳನ್ನು ರವಾನಿಸಲು ಬಳಸಲಾಗುತ್ತದೆ. ಅದಲ್ಲದೆ ಮೈಕ್ರೋಪ್ರೊಸೆಸರ್, ಸ್ಟಾಂಡರ್ಡ್ ಚಿಪ್‌ಗ್ಳ ರೂಪದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಮೊಬೈಲ್ ಫೋನ್‌ಗಳ ಉತ್ಪಾದನೆ, ಸ್ಯಾಟಲೈಟ್ ವ್ಯವಸ್ಥೆ ಹಾಗೂ ಸಂವಹನ ಯಂತ್ರಗಳಲ್ಲಿ, ವೈರ್‌ಲೆಸ್ ಕಮ್ಯುನಿಕೇಶನ್ ವ್ಯವಸ್ಥೆಯಲ್ಲಿ, ಡಾಟಾ ವರ್ಗಾವಣೆ ಹಾರ್ಡ್‌ವೇರ್‌ಗಳಲ್ಲಿ ಅತೀ ಅಗತ್ಯವಾಗಿದೆ. ಜತೆಗೆ ಸೋಲಾರ್ ಸೆಲ್ಸ್, ರಿನಿವೆಬಲ್ ಎನರ್ಜಿಯಲ್ಲೂ ಇದರ ಉಪಯೋಗವಿದೆ. ಭವಿಷ್ಯತ ತಾಂತ್ರಿಕ ಜಗತ್ತಿನಲ್ಲಿ ಹಾಗೂ ವಿಶ್ವದ ಆರ್ಥಿಕತೆಗೆ ಪುಷ್ಟಿ ನೀಡಲು ಸೆಮಿಕಂಡಕ್ಟರ್‌ಗಳು ಕಾಲದ ತುರ್ತಾಗಿವೆ.
ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಶನ್ ಜೂನ್‌ನಲ್ಲಿ ಬಿಡುಗಡೆಗೊಳಿಸಿದ ಅಂಕಿಂಶದ
ಪ್ರಕಾರ ಈ ವರ್ಷ ಎಪ್ರಿಲ್‌ನಲ್ಲಿ ಜಾಗತಿಕವಾಗಿ 40 ಬಿಲಿಯನ್ ಡಾಲರ್ ಮಾರಾಟ ವನ್ನು ಸೆಮಿಕಂಡಕ್ಟರ್ ವಲಯವು ಕಂಡಿದೆ, ಮಾರ್ಚ್‌ಗಿಂತ ಶೇ.3ರಷ್ಟು ಮಾರಾಟದಲ್ಲಿ
ಏರಿಕೆಯನ್ನು ಕಂಡಿದೆ.
ಈ ವರ್ಷದ ಎಪ್ರಿಲ್‌ನಲ್ಲಿ ಯುರೋಪ್ ರಾಷ್ಟ್ರವು ಚಿಪ್‌ಗ್ಳ ಉತ್ಪಾದನೆಗೆ ಯೋಜನೆಯನ್ನು ರೂಪಿಸಿದೆ. ಈ ವಿಷಯದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 3.3 ಬಿಲಿಯನ್ ಯುರೋಗಳನ್ನು ವ್ಯಯಿಸಲು ನಿರ್ಧರಿಸಿದೆ. ಕಳೆದ ಆಗಸ್ಟ್‌ನಲ್ಲಿ ಅಮೆರಿಕ ಚಿಪ್ಸ್ ಆ್ಯಂಡ್ ಸೈನ್ಸ್ ನೀತಿಯ ಅಡಿಯಲ್ಲಿ ಮೈಕ್ರೋಚಿಪ್‌ಗ್ಳ ಉತ್ಪಾದನೆಗೆ ಯೋಜನೆಯನ್ನು ರೂಪಿಸಿದೆ. ಜಪಾನ್, ಇಟಲಿ, ಫ್ರಾನ್ಸ್ ರಾಷ್ಟ್ರಗಳು ಚಿಪ್‌ಗ್ಳ ಉತ್ಪಾದನೆಗೆ ಆರ್ಥಿಕವಾಗಿ ನೆರವನ್ನು ಘೋಷಿಸಿವೆ.
ಚೀನದ ಸಾರ್ವಭೌಮತ್ವದ ಆತಂಕ
ಸೆಮಿಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ತೈವಾನ್ ಹಾಗೂ ಚೀನ ಮುಂಚೂಣಿಯಲ್ಲಿದೆ. ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಇವೆರಡೂ ದೇಶಗಳು ಸೆಮಿಕಂಡಕ್ಟರ್ ಚಿಪ್‌ಗ್ಳನ್ನು ಪೂರೈಸುತ್ತವೆ. 2019ರಲ್ಲಿ ಬಂದ ಕೋವಿಡ್ – 19ನಿಂದ ಇದರ ಪೂರೈಕೆಯಲ್ಲಿ ಹಿನ್ನಡೆ ಕಂಡುಬಂದಿತ್ತು. ಭಾರತವು ಒಳಗೊಂಡಂತೆ ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳಿಗೆ ಇದು ಸವಾಲಾಗಿ ಪರಿಣಮಿಸಿತು. ಚಿಪ್‌ಗ್ಳ ಪೂರೈಕೆಯಿಲ್ಲದೆ ತಂತ್ರಜ್ಞಾನ ಆಧಾರಿತ ಕಂಪೆನಿಗಳು, ಲ್ಯಾಪ್‌ಟಾಪ್, ಮೊಬೈಲ್, ಟಿವಿ ಉತ್ಪಾದನ ಕಂಪೆನಿಗಳು, ಆಟೋಮೊಬೈಲ್ ಕ್ಷೇತ್ರವು ಭಾರೀ ಹೊಡೆತವನ್ನು ಎದುರಿಸಿದ್ದಲ್ಲದೆ ಆರ್ಥಿಕವಾಗಿಯೂ ದೇಶಗಳು ಬಳಲಿದ್ದವು. ಹೀಗಾಗಿ ಆಮದು ಅವಲಂಬನೆಯನ್ನು ಕಡಿಮೆಗೊಳಿಸಲು ದೇಶಗಳು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಆಸಕ್ತಿ ತೋರಿಸುತ್ತಿವೆ.
ಅದಲ್ಲದೆ ಜಗತ್ತಿನಲ್ಲಿ ಪ್ರತೀ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಬಯಸುವ ಚೀನವು ಇದನ್ನೇ ಅಸ್ತ್ರವಾಗಿ ಬಳಸಿ, ತೈವಾನ್‌ನ ಮೇಲೆ ಸಾರ್ವಭೌಮತ್ವವನ್ನು ಸಾಧಿಸಿಬಿಟ್ಟರೆ ಚಿಪ್‌ಗ್ಳ ಸರಬರಾಜು ಸ್ಥಗಿತವಾಗಬಹುದು ಎಂಬ ಆತಂಕವು ಕೈಗಾರಿಕ ಅಭಿವೃದ್ಧಿಯನ್ನು ಕಾಣುತ್ತಿರುವ ದೇಶಗಳನ್ನು ಕಾಡತೊಡಗಿದೆ. ಒಂದು ವೇಳೆ ಚೀನ ಚಿಪ್‌ಗ್ಳ ಸರಬರಾಜನ್ನು ಸ್ಥಗಿತಗೊಳಿಸಿದರೆ ಇದು ಮೊಬೈಲ್, ಗ್ಯಾಜೆಟ್ಸ್ ಹಾಗೂ ರಕ್ಷಣ ಮತ್ತು ಬಾಹ್ಯಾಕಾಶ ಉತ್ಪನ್ನಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಆರ್ಥಿಕವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಸೆಮಿಕಂಡಕ್ಟರ್ ಚಿಪ್‌ಗ್ಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ.
ಚಿಪ್‌ಗ್ಳ ಪೂರೈಕೆಯಲ್ಲಿ ಎದುರಾಗುವ ಈ ಬಿಕ್ಕಟ್ಟನ್ನು ನಿವಾರಿಸಲು ಕ್ವಾಡ್ ರಾಷ್ಟ್ರಗಳಾದ ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯ ಕೂಡ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಆರ್ಥಿಕತೆಗೆ ಶಕ್ತಿ ನೀಡುವ ಹಲವಾರು ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಭಾರತವೂ ತನ್ನದೇ ಆದ ಸೆಮಿಕಂಡಕ್ಟರ್ ಘಟಕವನ್ನು ಹೊಂದಲು ಮುಂದಾಗಿದೆ.
ಗುಜರಾತ್‌ನಲ್ಲಿ ಮೊದಲ ಘಟಕ
ಭಾರತದಲ್ಲಿ ಸೆಮಿಕಂಡಕ್ಟರ್ ಘಟಕದ ಸ್ಥಾಪನೆಗೆ ಶೇ. 50ರಷ್ಟು ಆರ್ಥಿಕ ನೆರವನ್ನು ಒದಗಿಸುವುದಾಗಿ ಪ್ರಧಾನಿ ಹೇಳಿದ್ದಾರೆ. ಜತೆಗೆ ಗುಜರಾತ್ ಗಾಂಧಿನಗರದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ತಲೆಯೆತ್ತಲಿದೆ. ಇದು ದೇಶದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿಯೂ ಸಹಕಾರಿಯಾಗಲಿದೆ. ವಿಶ್ವದ ಶೇ.20ರಷ್ಟು ಚಿಪ್ ವಿನ್ಯಾಸಗಾರರನ್ನು ಭಾರತವು ಹೊಂದಿದ್ದು, ಇದು ಹಲವು ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಜತೆಗೆ ಇದು ಭಾರತದ ಆರ್ಥಿಕತೆಗೂ ಒತ್ತು ನೀಡುವ ನಿರೀಕ್ಷೆಯಿದೆ.
ವಿಧಾತ್ರಿ ಭಟ್, ಉಪ್ಪುಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
Court; ನ್ಯಾಯಾಂಗದ ತೀರ್ಪಿನಲ್ಲಿ ಕನ್ನಡ ಯಾಕೆ ಅನಿವಾರ್ಯ? ಆಗಬೇಕಾದ್ದೇನು?
ನಗು ಮೊಗದ ನಲ್ಮೆಯ ಪ್ರತಿಭಾ ಸಂಪನ್ನ ಶಿಕ್ಷಕ ಕುದಿ ವಸಂತ ಶೆಟ್ಟಿ ಇನ್ನಿಲ್ಲ
Karnataka: ನನಸಾಗದ ಸ್ಮಾರಕದ ಕನಸು…ಮಾಜಿ ಸಿಎಂ ನಿಜಲಿಂಗಪ್ಪ ನಿವಾಸ ಮಾರಾಟಕ್ಕೆ ಸಿದ್ಧತೆ!
Golden Jubliee: ಕನ್ನಡದ ಕಂಪು ಅಂತರ್ಜಾಲದಲ್ಲೂ ಪಸರಿಸಬೇಕು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.