ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ 14,034 ವಿದ್ಯಾರ್ಥಿಗಳು
ಜೂ. 25ರಿಂದ ಪ್ರಾರಂಭ
Team Udayavani, Jun 16, 2020, 6:08 AM IST
ಉಡುಪಿ: ರಾಜ್ಯಾದ್ಯಂತ ಜೂ. 25ರಿಂದ ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 14,034 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು 507 ವಿದ್ಯಾರ್ಥಿಗಳು ಮತ್ತು ಪರೀಕ್ಷಾ
ಕೇಂದ್ರ ಬದಲಾಯಿಸಿಕೊಂಡು 82 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸುವ ಕುರಿತು ಜರಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ- ಇಂಗ್ಲಿಷ್ ಮಾಧ್ಯಮ
51 ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಹೆಚ್ಚುವರಿಯಾಗಿ 12 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ 4,014 ಬಾಲಕರು ಮತ್ತು 3,295 ಬಾಲಕಿಯರು, ಇಂಗ್ಲಿಷ್ ಮಾಧ್ಯಮದಲ್ಲಿ 3,321 ಬಾಲಕರು ಮತ್ತು 3,404 ಬಾಲಕಿಯರು ಸೇರಿದಂತೆ ಒಟ್ಟು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ಮಾಸ್ಕ್, ಸ್ವಯಂಸೇವಕರು, ಸಿಬಂದಿ
ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್ ವಿತರಿಸಲು ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿ ಯಿಂದ 15,000 ಮತ್ತು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ 13,460 ಹಾಗೂ ಭಾರತ್ ವಿಕಾಸ್ ಟ್ರಸ್ಟ್ ವತಿಯಿಂದ 8,000 ಮಾಸ್ಕ್ ಗಳು ಪೂರೈಕೆಯಾಗಿವೆ. ಪ್ರತೀ ಕೇಂದ್ರಕ್ಕೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಲು 4 ಮಂದಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯ ಇಬ್ಬರು ಸಿಬಂದಿ ಕಾರ್ಯನಿರ್ವಹಿಸ ಲಿದ್ದು ಸೂಕ್ತ ಪೊಲೀಸ್ ಭದ್ರತೆ ಒದಗಿಸ ಲಾಗುವುದು ಎಂದರು.
ಎಲ್ಲರ ಹಾಜರಿಗೆ ಗಮನ
ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗುವುದರಿಂದ ವಂಚಿತನಾಗದಂತೆ ಸೂಕ್ತ ಸಾರಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಪ್ರತಿ ಯೊಬ್ಬ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಬರಲು ಯಾವ ಸಾರಿಗೆ ಬಳಸುತ್ತಾರೆ ಎಂಬ ಬಗ್ಗೆ 2 ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ಹಾಗೂ ಅಗತ್ಯವಿರುವೆಡೆಗಳಲ್ಲಿ ಖಾಸಗಿ ಶಾಲೆಗಳ ಬಸ್‌ಗಳನ್ನು ಪಡೆಯುವಂತೆ ತಿಳಿಸಿದರು. ಖಾಸಗಿ ಬಸ್‌ಗಳು ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿ ಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಓಡಾಟ ನಡೆಸಬೇಕು; ಅಗತ್ಯವಿರುವೆಡೆಗಳಲ್ಲಿ ಹೆಚ್ಚುವರಿ ಬಸ್ ಓಡಿಸುವಂತೆ ತಿಳಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ಖಾಸಗಿ ಬಸ್ ಸಂಘಟನೆಗಳ ಪ್ರಮುಖರು ತಿಳಿಸಿದರು. ಕಂಟೈನ್ಮೆಂಟ್/ಸೀಲ್ ಡೌನ್ ಪ್ರದೇಶದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದರು. ಈ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಮನೆಯಿಂದ ಹೊರಬರಲು ಅಗತ್ಯ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಿದರು.
ಜಿ.ಪಂ. ಸಿಇಒ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಡಿಡಿಪಿಐ ಶೇಷಶಯನ ಕಾರಿಂಜ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಶಿಕ್ಷಣ ಇಲಾಖೆಗಳ ಬಿಇಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ , ಖಾಸಗಿ ಬಸ್ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಎಸೆಸೆಲ್ಸಿ ಪರೀಕ್ಷೆಗೆ ಸಹಾಯವಾಣಿ
ಎಸೆಸೆಲ್ಸಿ ಪರೀಕ್ಷೆ ಜೂ.25 ರಿಂದ ನಡೆಯಲಿದ್ದು, ಮಕ್ಕಳು, ಪೋಷಕರು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.ಸರಕಾರಿ ರಜಾದಿನ ಹೊರತುಪಡಿಸಿ ಪ್ರತಿದಿನ ಕಚೇರಿ ಸಮಯದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಈ ಸಹಾಯವಾಣಿಯ ಮೂಲಕ ನೋಡಲ್ ಅಧಿಕಾರಿ/ಕಚೇರಿಯನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳುವಂತೆ ಡಿಡಿಪಿಐ ಪ್ರಕಟನೆ ತಿಳಿಸಿದೆ.
ಸಹಾಯವಾಣಿ ಸಂಖ್ಯೆಗಳು
ಉಪನಿರ್ದೇಶಕರ ಕಚೇರಿ, ಉಡುಪಿ ದೂ. ಸಂ. 0820-2574878; ಮೊ. 9980215480, ಉಡುಪಿ ತಾಲೂಕು: 0820-2521570; ಮೊ. : 98806 87316; ಬ್ರಹ್ಮಾವರ: 0820-2560800; ಮೊ.: 9980933513, ಕಾರ್ಕಳ 08258- 298571; ಮೊ.: 9480661334, ಕುಂದಾಪುರ: 08254-230618; ಮೊ.: 8277616435, ಬೈಂದೂರು : 08254-252066; ಮೊ.: 9449269539.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.