Terrorism: ಉಗ್ರ ಸಂಹಾರ ವಿಷಯದಲ್ಲಿ ರಾಜಕೀಯ ಬೇಡ
Team Udayavani, Sep 16, 2023, 12:28 AM IST
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಲಷ್ಕರ್ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಮೂವರು ಅಧಿಕಾರಿಗಳು ಮತ್ತು ಓರ್ವ ಯೋಧ ಹುತಾತ್ಮರಾಗಿರುವುದು ದೇಶವಾಸಿಗಳಿಗೆ ತೀರಾ ನೋವಿನ ಸಂಗತಿ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಉಗ್ರ ಕೃತ್ಯಗಳು ಬಹುತೇಕ ಕಡಿಮೆಯಾಗಿದ್ದವು. ಆದರೆ ಏಕಾಏಕಿ ಲಷ್ಕರ್ ಉಗ್ರರು ಜಮ್ಮು-ಕಾಶ್ಮೀರದ ಪರ್ವತ ಪ್ರದೇ ಶಗಳಲ್ಲಿ ಅಡಗುದಾಣಗಳನ್ನು ನಿರ್ಮಿಸಿ ಭದ್ರತಾ ಪಡೆಗಳ ಮೇಲೆ ಕಳೆದ 3 ದಿನಗಳಿಂದ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಭಾರತೀಯ ಯೋಧರು ಉಗ್ರರ ವಿರುದ್ಧ ಕೈಗೆತ್ತಿಕೊಂಡಿರುವ ಕಾರ್ಯಾಚರಣೆ 3ನೇ ದಿನವಾದ ಶುಕ್ರವಾರವೂ ಮುಂದುವರಿದಿದೆ. ಯೋಧರು ಈಗಾಗಲೇ ಉಗ್ರರನ್ನು ಸುತ್ತುವರಿದಿದ್ದು ದೇಶದ ಗಡಿಯೊಳಕ್ಕೆ ನುಸುಳಿರುವ ಎಲ್ಲ ಉಗ್ರರನ್ನು ಸದೆಬಡಿಯುವ ಪಣತೊಟ್ಟು ಕಾರ್ಯಾಚರಣೆಯನ್ನು ತೀವ್ರ ಗೊಳಿಸಿದ್ದಾರೆ.
ಜಮ್ಮು-ಕಾಶ್ಮೀರದ 371ನೇ ವಿಧಿ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ವಿಚಾ ರಣೆ ನಡೆ ಸು ತ್ತಿದ್ದು, ಈ ವೇಳೆ ಕೇಂದ್ರ ಸರಕಾರ ಅಲ್ಲಿನ ಸ್ಥಿತಿ ಬಗ್ಗೆ ಅಫಿ ದವಿತ್ ಸಲ್ಲಿ ಸಿತ್ತು. ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಕಾನೂನು-ಸುವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದ್ದು, ಕಣಿವೆ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಉಗ್ರಗಾಮಿ ಚಟುವಟಿಕೆಗಳಿಗೆ ಬಹುತೇಕ ಕಡಿವಾಣ ಬಿದ್ದಿದೆ ಎಂದು ಅಂಕಿಅಂಶಗಳ ಸಹಿತ ವಿವರಿಸಿತ್ತು. ಸದ್ಯ ತಾತ್ಕಾಲಿಕವಾಗಿ ಕೇಂದ್ರಾಡಳಿತದ ಸ್ಥಾನಮಾನ ನೀಡಲಾಗಿದ್ದು ಕಣಿವೆ ರಾಜ್ಯದ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಣೆಯಾದ ಬಳಿಕ ರಾಜ್ಯ ಸ್ಥಾನಮಾನ ನೀಡುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿತ್ತು. ಅಷ್ಟು ಮಾತ್ರವಲ್ಲದೆ ಜಮ್ಮು-ಕಾಶ್ಮೀರದ ಜನರು ಹಲವು ವರ್ಷಗಳ ಬಳಿಕ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಮುಕ್ತವಾಗಿ ಆಚರಿಸಿದ್ದರು. ಇತ್ತೀಚೆಗೆ ನಡೆದ ಪಾಕ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಭಾರತ ಜಯಿಸಿದ್ದಾಗ ಜನರು ಮಧ್ಯರಾತ್ರಿ ಬೀದಿಗೆ ಬಂದು ವಿಜಯೋತ್ಸವ ಆಚರಿಸಿದ್ದರು. ಇವೆಲ್ಲದರಿಂದ ಪಾಕಿಸ್ಥಾನ ಮತ್ತು ಉಗ್ರರು ಕಂಗೆಟ್ಟು ಮತ್ತೆ ತಮ್ಮ ಹಳೆ ಚಾಳಿ ಶುರುವಿಟ್ಟುಕೊಂಡಂತೆ ಕಾಣುತ್ತಿದೆ.
ಹಿಂದಿನಿಂದಲೂ ಜಮ್ಮು-ಕಾಶ್ಮೀರ ವಿಷಯವನ್ನು ಪದೇ ಪದೆ ಕೆದಕುತ್ತಲೇ ಬಂದಿರುವ ಪಾಕಿಸ್ಥಾನ ಮತ್ತೆ ಕಣಿವೆ ರಾಜ್ಯದಲ್ಲಿನ ಶಾಂತಿ ಯನ್ನು ಕದಡುವ ದುಸ್ಸಾಹಸಕ್ಕೆ ಕೈಹಾಕಿರುವುದು ಸ್ಪಷ್ಟವಾಗುತ್ತದೆ. ಇದೇ ವೇಳೆ ಪಾಕ್ ಉಗ್ರರಿಗೆ ಆಶ್ರಯ, ಹಣಕಾಸಿನ ನೆರವು ಸಹಿತ ಉಗ್ರಗಾಮಿ ಚಟುವಟಿಕೆಗಳಿಗೆ ಯಾವುದೇ ತೆರನಾದ ಸಹಕಾರ ನೀಡುವುದನ್ನು ನಿಲ್ಲಿಸದಿದ್ದಲ್ಲಿ ಅದರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಭಾರತ ಸರಕಾರ ಸಾರಿದೆ.
ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿರುವ ಪಾಕಿಸ್ಥಾನ ಆಂತರಿಕ ಕಲಹ, ರಾಜಕೀಯ ಕಚ್ಚಾಟಗಳಿಂದ ಸಂಪೂರ್ಣ ಜರ್ಜ ರಿತವಾಗಿದ್ದರೂ ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುವ ಕಾರ್ಯ ಮಾಡುತ್ತಿರುವುದು ತೀರಾ ನಾಚಿಕೆಗೇಡಿನ ವಿಷಯವಾಗಿದೆ. ಜಮ್ಮು- ಕಾಶ್ಮೀರದ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವ ಪಾಕ್ ಪ್ರೇರಿತ ಉಗ್ರರನ್ನು ಸದೆಬಡಿಯುವ ಜತೆಯಲ್ಲಿ ಪಾಕಿಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿಸಬೇ ಕು. ಈ ವಿಷಯದಲ್ಲಿ ದೇಶದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಸರಕಾರದ ಬೆನ್ನಿಗೆ ನಿಂತು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.