ಡೀಸಿ ಜತೆ ಸಂಘರ್ಷ ನಡೆಸುವ ಅಗತ್ಯವಿಲ್ಲ: ಎಚ್.ಡಿ.ರೇವಣ್ಣ
Team Udayavani, May 10, 2019, 6:15 AM IST
ಬೆಂಗಳೂರು: ‘ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಡಿಶುಂ ಡಿಶುಂ ಎಂಬುದೆಲ್ಲಾ ಸುಳ್ಳು. ನಾನು ಯಾರೊಂದಿಗೂ ಸಂಘರ್ಷ ಮಾಡಬೇಕಾದ ಅಗತ್ಯವಿಲ್ಲ’ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ಜಿಲ್ಲಾಧಿಕಾರಿಗಳೊಂದಿಗೆ ವೈಯಕ್ತಿಕವಾದ ಯಾವ ವಿಚಾರವನ್ನೂ ಮಾತನಾಡಿಲ್ಲ. ಜಿಲ್ಲೆಗೆ ಬರ ಪರಿಹಾರಕ್ಕೆ ಬಿಡುಗಡೆಯಾಗಿರುವ ಹಣ ಕುರಿತಂತೆ ಪ್ರಶ್ನಿಸಿದ್ದೇನೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆಯೇ ಹೊರತು ಜಿಲ್ಲಾಧಿಕಾರಿಗಳೊಂದಿಗೆ ಜಟಾಪಟಿ ನಡೆಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.
ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಕಾರ್ಯಗಳು ಸಮರ್ಪಕವಾಗಿರಬೇಕು. ಬಿತ್ತನೆ ಆಲೂಗಡ್ಡೆಗೆ ಸಮಸ್ಯೆ ಉಂಟಾಗಬಾರದು. ಈ ಹಿಂದೆ ಇದೇ ಕಾರಣಕ್ಕೆ ಗೋಲಿಬಾರ್ ನಡೆದಿತ್ತು ಎಂಬ ವಿಚಾರ ಪ್ರಸ್ತಾಪಿಸಿದ್ದೇನೆ. ಆಡಳಿತಾತ್ಮಕ ವಿಚಾರಗಳಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಾಲಿ ಜಿಲ್ಲಾಧಿಕಾರಿಗಳನ್ನು ಚುನಾವಣಾ ಆಯೋಗದವರು ನೇಮಿಸಿದ್ದಾರೆ. ದೇವೇಗೌಡರು ಹಾಗೂ ಮಕ್ಕಳು ಚುನಾವಣೆಯಲ್ಲಿ ಹಣ ಹಂಚುತ್ತಿದ್ದಾರೆ ಎಂಬುದಾಗಿ ಜಿಲ್ಲಾಧಿಕಾರಿಗಳನ್ನು ಹಾಕಿದರು. ತರಕಾರಿ ಮಾರುವವರು, ಪೂಜಾರಿಗಳನ್ನು ಬಿಡದೆ ಐಟಿ ದಾಳಿ ನಡೆಸಿದರೂ ಸಿಕ್ಕಿದ್ದೇನು ಎಂದು ಪ್ರಶ್ನಿಸಿದರು. ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರೆ ನನ್ನ ಗೌರವವನ್ನು ನಾನೇ ಹಾಳು ಮಾಡಿಕೊಂಡಂತೆ. ಅಂತಹ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.