Karnataka: “ಲೋಕಸಭಾ ಚುನಾವಣೆ ಬಳಿಕ ಸರಕಾರ ಇರುವುದಿಲ್ಲ”: ಆರ್. ಅಶೋಕ್
Team Udayavani, Aug 29, 2023, 11:21 PM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಿನ ಲೋಕಸಭಾ ಚುನಾವಣೆ ನಂತರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಸರಕಾರಕ್ಕೆ ಶಾಸಕರ ಕೊರತೆ ಇತ್ತು. ಆಗ ಕೆಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆದರೆ ಈ ಸರಕಾರಕ್ಕೆ ಅಗತ್ಯ ಬೆಂಬಲವಿದ್ದರೂ, ಇತರ ಪಕ್ಷಗಳ ಶಾಸಕರನ್ನು ಅನಗತ್ಯವಾಗಿ ಸೆಳೆಯಲು ಮುಂದಾಗಿದೆ. ಲೋಕಸಭೆ ಚುನಾವಣೆ ಬಳಿಕ ಈ ಸರಕಾರ ಇರುವುದಿಲ್ಲ ಎಂಬುದು ಖಾತರಿ ಆಗಿರುವುದರಿಂದಲೇ ಆಪರೇಷನ್ ಹಸ್ತ ಮಾಡುತ್ತಿದ್ಧಾರೆ ಎಂದು ಟೀಕಿಸಿದರು. ಎಸ್.ಟಿ. ಸೋಮಶೇಖರ್ ಸೇರಿದಂತೆ ಪಕ್ಷ ತೊರೆಯುತ್ತಾರೆಂದು ಹೇಳಲಾಗುತ್ತಿರುವ ಕೆಲವು ಶಾಸಕರೊಂದಿಗೆ ತಾವು ಮಾತನಾಡಿದ್ದು ಯಾರೂ ನಮ್ಮ ಪಕ್ಷ ಬಿಡುವುದಿಲ್ಲ. ಎಲ್ಲರೂ ಪಕ್ಷದ ಹಂಗಿನಲ್ಲಿದ್ಧಾರೆ. ಪಕ್ಷದಲ್ಲಿ ಉಳಿಯಲು ಪಕ್ಷ ನಿಷ್ಠೆ ಇರಬೇಕಾಗುತ್ತದೆ. ಈಗ ಇರುವವರಿಗೆಲ್ಲ ಪಕ್ಷ ನಿಷ್ಠೆ ಇದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ನೂರು ಕರಾಳ ದಿನಗಳನ್ನು ಪೂರೈಸಿದೆ. ಒಂದೇ ಒಂದು ಅಭಿವೃದ್ಧಿ ಕೆಲಸವೂ ಆಗಿಲ್ಲ. ರಸ್ತೆ ಅಭಿವೃದ್ಧಿ ಆಗಿಲ್ಲ. ಕಸ ವಿಲೇವಾರಿಯೂ ಆಗುತ್ತಿಲ್ಲ. ಕುಡಿಯುವ ನೀರಿನ ಯೋಜನೆಗಳು ಆಗುತ್ತಿಲ್ಲ. ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸುತ್ತಿಲ್ಲ. ಕಳೆದ ನೂರು ದಿನ ಅಭಿವೃದ್ಧಿ ಶೂನ್ಯದಿನ. ಇದೇ ಹೊಸ ಸರಕಾರದ ಸಾಧನೆ ಎಂದು ಅಶೋಕ್ ಲೇವಡಿ ಮಾಡಿದರು.
ಲೋಡ್ ಶೆಡ್ಡಿಂಗ್
ಪ್ರತೀದಿನ ಉಚಿತ (ಗ್ಯಾರಂಟಿ)ಗಳ ಬಗ್ಗೆಯೇ ಮಾತನಾಡುತ್ತಿದ್ಧಾರೆ. ಎಲ್ಲ ಕಡೆ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೂ ವಿದ್ಯುತ್ ಪೂರೈಸಲು ಆಗುತ್ತಿಲ್ಲ. ಉಚಿತ ಕೊಡುವುದರಲ್ಲಿ ಕಡಿಮೆ ಮಾಡಬೇಕೆಂದು ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ದೂರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.