Rajanikanth: ಈ ಗೆಳೆಯನಿಗಾಗಿ “ಅವರೇ” ಕಾಯುತ್ತಿದ್ದರು!
ಎ.ಆರ್.ಮಣಿಕಾಂತ್ ವಿಶೇಷ ಲೇಖನ
Team Udayavani, Sep 17, 2023, 12:04 AM IST
ತೆರೆಯ ಮೇಲಷ್ಟೇ ಅಲ್ಲ,ನಿಜ ಜೀವನದಲ್ಲೂ “ಸೂಪರ್ ಸ್ಟಾರ್’ ರೀತಿಯಲ್ಲೇ ಇರುವವರು ರಜನಿಕಾಂತ್. ಬಾಲ್ಯದ ಗೆಳೆಯರ ಕುರಿತು ಅವರು ತೋರುವ ಪ್ರೀತಿ, ವಹಿಸುವ ಕಾಳಜಿಯ ಕುರಿತು ಕಥೆಗಳೇ ಇವೆ. ವೃತ್ತಿಯಿಂದ ಪ್ರೂಫ್ ರೀಡರ್ ಆಗಿದ್ದ ರಾಮಚಂದ್ರ ರಾವ್ ಎಂಬ ಬೆಂಗಳೂರಿನ ಗೆಳೆಯನ ಜತೆ ರಜನಿಕಾಂತ್ ಅವರು ಹೊಂದಿದ್ದ ಭಾವ ಬಾಂಧವ್ಯಕ್ಕೆ ಸಾಕ್ಷಿಯಾಗಿ ಈ ಬರಹ
ಅವರ ಹೆಸರು ರಾಮಚಂದ್ರ ರಾವ್. ಕನ್ನಡ ಪತ್ರಿಕೆಯೊಂದರಲ್ಲಿ ಅವರು ಪ್ರೂಫ್ ರೀಡರ್ ಆಗಿದ್ದರು. ಇದು 90ರ ದಶಕದ ಮಾತು. ಕಂಪ್ಯೂಟರ್‌ಗಳು ಆಗಷ್ಟೇ ಸುದ್ದಿಮನೆಗಳಿಗೆ ಪ್ರವೇಶ ಕೊಡು ತ್ತಿದ್ದವು. ಆಗೇನಿದ್ದರೂ ಸುದ್ದಿಗಳನ್ನು ಬರೆದು ಕೊಡ ಬೇಕಿತ್ತು. ಅವು ಟೈಪ್ ಆಗಿ ಪ್ರೂಫ್ ರೀಡರ್‌ಗಳ ಟೇಬಲ್ ತಲುಪುತ್ತಿದ್ದವು. ಮೂಲಬರಹದ ಕಾಪಿ ಯನ್ನು ಕೈಗೆತ್ತಿಕೊಂಡು ರಾಮಚಂದ್ರ ರಾಯರು ಓದುತ್ತಿದ್ದರೆ, ಕಂಚಿಗೆ ಕಂಚು ತಾಕಿದಂಥ ಸದ್ದಾಗುತ್ತಿತ್ತು. ಅವರ ದನಿಯ ಏರಿಳಿತದಲ್ಲಿಯೇ ಅಲ್ಪ ಪ್ರಾಣ, ಮಹಾಪ್ರಾಣ, ಪ್ರಶ್ನಾರ್ಥಕ ಚಿಹ್ನೆ ಇರಬೇಕಾದ ಸ್ಥಳ ಮುಂತಾದ ವಿವರ ಟೈಪ್ ಆದ ಕಾಪಿಯನ್ನು ತಿದ್ದುತ್ತಿದ್ದ ಮತ್ತೂಬ್ಬ ಪ್ರೂಫ್ ರೀಡರ್‌ಗೆ ಗೊತ್ತಾಗುತ್ತಿತ್ತು. ಉಪಸಂಪಾ ದಕರ ಬಂಡವಾಳ ಕೂಡ ಎರಡು ಕಾಪಿ ಓದುವಷ್ಟರಲ್ಲಿ ಆ ಕಾಲದ ಪ್ರೂಫ್ ರೀಡರ್‌ಗಳಿಗೆ ಗೊತ್ತಾಗಿಬಿಡುತ್ತಿತ್ತು.
ರಾಮಚಂದ್ರ ರಾವ್ ಅವರಿಗೆ ವಿಶೇಷ ಹಾಸ್ಯ ಪ್ರಜ್ಞೆಯಿತ್ತು. ಯಾವ್ಯಾವ ಪತ್ರಕರ್ತರು ಏನೇನು ತಪ್ಪು ಬರೆದಿದ್ದರು, ಯಾವ ಪತ್ರಿಕೆಯಲ್ಲಿ ಎಂತೆಂಥ ಪ್ರೂಫ್ ಮಿಸ್ಟೇಕ್‌ಗಳಾಗಿದ್ದವು ಎಂಬುದನ್ನು ನಾಲ್ಕು ಜನಕ್ಕೆ ಕೇಳಿಸುವ ದನಿಯಲ್ಲಿ ಹೇಳಿ ನಗುತ್ತಿದ್ದರು. ಯಾರಾದರೂ ಚೆನ್ನಾಗಿ ಸುದ್ದಿ ಬರೆದಿದ್ದರೆ, ಅವರನ್ನು ಕರೆದು ಮಾತಾಡಿಸಿ,”ನಿಮ್ಮ ಕಾಪಿ ಓದಿದೆ, ಚೆನ್ನಾಗಿ ಬರೆದಿದ್ದೀರಿ’ ಅನ್ನುತ್ತಿದ್ದರು. ಸಾಧಾರಣ ಅನ್ನಿಸುವಂಥ ಬರಹ ಸಿಕ್ಕರೆ, ಈ ಬರಹ ಸಪ್ಪೆ ಅನ್ನುತ್ತಿದ್ದರು.
ಅದು 1998ರ ಸಂಕ್ರಾಂತಿ ಹಬ್ಬದ ದಿನ. ನಾನು ವಾರ ಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿದ್ದೆ. ಸಂಚಿಕೆಯನ್ನು ಮುದ್ರಣಕ್ಕೆ ಕಳಿಸುವ ಗಡಿಬಿಡಿಯಲ್ಲಿ ನಾವಿ¨ªೆವು. ಅವತ್ತು ಮಧ್ಯಾಹ್ನ 1 ಗಂಟೆಗೆ ಬರಬೇಕಿದ್ದ ರಾಮಚಂದ್ರ ರಾವ್ 3. 45ರ ಹೊತ್ತಿಗೆ ಬಂದರು. ಮದುವೆ ದಿರಿಸಿನಲ್ಲಿ ಗಡಿಬಿಡಿಯಲ್ಲಿ ಎರಡು ಕಾಪಿ ಓದಿ, ಅದನ್ನು ಕರೆಕ್ಷನ್ ಹಾಕಿಸಲು ಕೊಟ್ಟರು. “ಸಾರ್, ಯಾಕೆ ಲೇಟು? ಏನ್ ವಿಶೇಷ?’ಎಂದು ಕೇಳಿದ್ದಕ್ಕೆ-
“ಚೆನ್ನೈಗೆ ಹೋಗಿದ್ದೆ. ನಮ್ ಸಿವಾಜಿ ಕರೆದಿದ್ದ. ಅಲ್ಲಿಂದ ಬರುವಾಗ ಫ್ಲೈಟ್ ಲೇಟ್ ಆಗಿ ತಡ ಆಗಿಬಿಡ್ತು’ ಅಂದಿದ್ದರು. ಕಡಿಮೆ ವೇತನವಿರುವ ನೌಕರ ವಿಮಾನದಲ್ಲಿ ಚೆನ್ನೈಗೆ ಹೋಗಿ ಬರುವುದನ್ನು ನಂಬಲು ಸಾಧ್ಯವೇ? ಈ ಮನುಷ್ಯ ಬಿಲ್ಡಪ್ ತಗೊಳ್ತಾ ಇದ್ದಾರೆ ಅನ್ನಿಸಿತು. ನಮ್ಮ ವಿಭಾಗದ ಮುಖ್ಯಸ್ಥರಾಗಿದ್ದ ಗಣೇಶ್ ಕಾಸರಗೋಡು ಅವರಿಗೆ ಇದನ್ನೇ ಹೇಳಿದೆ. “ಅದ್ಯಾರೋ ಸಿವಾಜಿ ಅನ್ನೋರು ಕರೆದ್ರು ಅಂತ ಚೆನ್ನೈಗೆ ಹೋಗಿ ವಿಮಾನದಲ್ಲಿ ವಾಪಸ್ ಬಂದೆ ಅಂತಾರಲ್ಲ… ಹೀಗೂ ರೈಲ್ ಬಿಡೋದಾ ಸಾರ್?’ ಅಂದೆ.
ಗಣೇಶ್ ತತ್‌ಕ್ಷಣ ಹೇಳಿದರು: “ಅವರು ಸತ್ಯ ಹೇಳಿದ್ದಾರೆ. ಸಿವಾಜಿ ಅಂದ್ರೆ ಯಾರು ಗೊತ್ತಾ? ರಜನಿಕಾಂತ್! ಈ ರಾಮಚಂದ್ರ ರಾವ್, ರಜನಿಯ ಕ್ಲೋಸ್ ಫ್ರೆಂಡ್. ಕ್ಲಾಸ್ ಮೇಟ್. ಸಂಕ್ರಾಂತಿ ಹಬ್ಬದಂದು ಅವರು ಚೆನ್ನೈಗೆ ಹೋಗಿ, ಅಲ್ಲಿ ರಜನಿ ಜತೆ ಊಟ ಮುಗಿಸಿ ಬರುವುದುಂಟು…’
ಅವರ ಮಾತುಗಳನ್ನು ಕೇಳಿದ ಅನಂತರ- ಇಡೀ ತಮಿಳರ ಆರಾಧ್ಯದೈವವಾಗಿರುವ ವ್ಯಕ್ತಿ, ಈ ಪ್ರೂಫ್ ರೀಡರ್‌ಗೆ ಕಾಯುತ್ತಾ ಕೂರುವುದಾ ಅನ್ನಿಸಿದ್ದು ಅದೆಷ್ಟು ಸಲವೋ…
ಅನಂತರದಲ್ಲಿ ಆಗೊಮ್ಮೆ ಈಗೊಮ್ಮೆ ರಜನಿ- ರಾಮಚಂದ್ರ ರಾವ್ ಅವರ ಸ್ನೇಹದ ಬಗ್ಗೆ ಪ್ರಸ್ತಾವ ವಾಗುತ್ತಿತ್ತು. ಹೀಗೇ ವರ್ಷ ಕಳೆಯಿತು. 1999ರ ಸಂಕ್ರಾಂತಿಯಂದು ಮತ್ತದೇ ಮದುಮಗನ ಗೆಟಪ್ಪಿ ನಲ್ಲಿ ಆಫೀಸಿಗೆ ಬಂದರು ರಾಮಚಂದ್ರ ರಾವ್. ಈ ಬಾರಿ ತಡವಾಗಿರಲಿಲ್ಲ. ಸಂಜೆಯ ಹೊತ್ತಿಗೆ ಗಣೇಶ್ ಕಾಸರಗೋಡು ಅವರ ಕೈಗೊಂದು ಪುಸ್ತಕ ಕೊಟ್ಟು, “ನೀವೊಮ್ಮೆ ನೋಡಿ ವಾಪಸ್ ಕೊಡಿ. ಆದರೆ ಬೇರೆ ಯಾರಿಗೂ ವಿಷಯ ತಿಳಿಸಬಾರದು” ಅಂದರು.
ಅದು ಕಲರ್ ಪುಟಗಳಿಂದ ಕೂಡಿದ್ದ ತಮಿಳು ವಿಶೇಷಾಂಕ. ಪುಟ ತೆರೆಯುತ್ತಾ ಹೋದ ಗಣೇಶ್ ಕಾಸರಗೋಡು ಬೆಕ್ಕಸ ಬೆರಗಾದರು. ಕಾರಣ ಇಡೀ ಪುಸ್ತಕ ರಜನಿಕಾಂತ್ ಮತ್ತು ರಾಮಚಂದ್ರರಾವ್ ಅವರ ಗೆಳೆತನವನ್ನು ಕುರಿತಂತೆ ಇತ್ತು. ರಾಮಚಂದ್ರ ರಾವ್ ಹಾಗೂ ಸೂಪರ್ ಸ್ಟಾರ್ ರಜನಿ ಸಂಭ್ರಮ ದಿಂದ ನಗುತ್ತಿರುವ ಫೋಟೋಗಳಿದ್ದವು. ಒಂದು ಚಿತ್ರದಲ್ಲಂತೂ ಹೀರೋಯಿನ್‌ನ ಎತ್ತಿಕೊಂಡಂತೆ ಈ ಗೆಳೆಯನನ್ನೇ ರಜನಿ ಎತ್ತಿಕೊಂಡಿದ್ದರು! ವಾಹ್… ಎಂಥಾ ಗೆಳೆತನ, ಇವರದು ಎಂಥಾ ಅದೃಷ್ಟ… ಎಂದು ಉದ್ಗರಿಸಿದ ಗಣೇಶ್, “ಅವರ ಫ್ರೆಂಡ್‌ಶಿಪ್ ಎಂಥಾದ್ದು ಅಂತ ಗೊತ್ತಾಯ್ತಾ?’ ಅಂದಿದ್ದರು.
ಉಹೂಂ, ಯಾವ ಸಂದರ್ಭದಲ್ಲೂ ರಾಮ ಚಂದ್ರ ರಾವ್ ಅವರು ತಮ್ಮ ಗೆಳೆತನದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲಿಲ್ಲ. ಅದೊಂದು ದಿನ ಹೇಳಿದ್ದರು: ನಮ್ ಸಿವಾಜಿ ಕಂಡಕ್ಟರ್ ಆಗಿದ್ದ ಸಂದರ್ಭ. ನಾನು, ಅವನು, ನಿರ್ದೇಶಕ ರವೀಂದ್ರ ನಾಥ್, ರಾಜ್ ಬಹದ್ದೂರ್…ಹೀಗೆ ಐದಾರು ಜನ ಮೆಜೆಸ್ಟಿಕ್‌ನ ಲಾಡ್ಜ್ ಒಂದರಲ್ಲಿ ಸೇರಿದ್ವಿ. ಮಾತಿನ ಮಧ್ಯೆ ಸಿವಾಜಿ ಹೇಳಿದ. “ನಾವು ಇಷ್ಟು ಜನರಲ್ಲಿ ಯಾರಾದ್ರೂ ಮುಂದೆ ತುಂಬಾ ಶ್ರೀಮಂತರಾದ್ರೆ, ಉಳಿದವರನ್ನು ಚೆನ್ನಾಗಿ ನೋಡಿಕೊಳ್ತೇವೆ ಅಂತ ಪ್ರಾಮಿಸ್ ಮಾಡಿ!”
ಆ ಮಾತಿಗೆ ನಾವು ಒಪ್ಪಲಿಲ್ಲ. ಅವತ್ತಿನ ಸಂದರ್ಭ ಹೇಗಿರುತ್ತದೋ ಏನೋ, ಈಗಲೇ ಹೇಗೆ ಮಾತು ಕೊಡಲು ಸಾಧ್ಯ? ಅಂದೆವು. ಆಗ ಸಿವಾಜಿ ಹೇಳಿದ: “ಅಕಸ್ಮಾತ್ ನನಗೇನಾದ್ರೂ ಜಾಸ್ತಿ ದುಡ್ಡು ಸಿಕ್ಕಿದ್ರೆ, ಚಕಚಕಚಕಾಂತ ಎಣಿಸಿ ನಿಮಗೆ ಹಂಚಿಬಿಡ್ತೇನೆ!” ಅವನ ಮಾತು ಕೇಳಿ ಎಲ್ಲರೂ ನಕ್ಕದ್ದೆವು. ಆ ಮಾತನ್ನು ಸಿವಾಜಿ ಮರೆಯಲಿಲ್ಲ. ಸೂಪರ್ ಸ್ಟಾರ್ ಆದ ಮೇಲೂ ನಮ್ಮ ಜತೆ ಗೆಳೆತನ ಉಳಿಸಿಕೊಂಡ. ನನ್ನ ನ್ನೂ ಸೇರಿದಂತೆ ಹಲವರಿಗೆ ಸಹಾಯ ಮಾಡಿದ. ಪ್ರೀತಿಯಿಂದ ನೋಡಿಕೊಂಡ.
ಮುಂದೊಮ್ಮೆ- “ಇನ್ನೂ ಎಷ್ಟು ದಿನ ಪ್ರೂಫ್ ರೀಡಿಂಗ್ ಕೆಲಸ ಮಾಡ್ತೀ ಯ? ಇಷ್ಟು ದಿನ ದುಡಿದಿದ್ದು ಸಾಕು. ಒಂದು ಫಾರ್ಮ್ ಹೌಸ್ ತೆಗೆದುಕೊಡ್ತೇನೆ. ಕುಟುಂಬದ ಜತೆ ನೆಮ್ಮದಿಯಾಗಿರು’ ಅಂದ. ಅದು ಅವನ ದೊಡ್ಡ ಗುಣ. ನಿನ್ನ ಫ್ರೆಂಡ್ ಶಿಪ್ ಮಾತ್ರ ಸಾಕು ಸಿವಾಜಿ ಅಂದೆ. ಎಷ್ಟೋ ಸಲ ಊಟ ಮಾಡದೆ ಕಾದು ಕುಳಿತು, ನನ್ನನ್ನು ಕಂಡಾಕ್ಷಣ ಊಟಕ್ಕೆ ಪಾರ್ಟ್ ನರ್ ಸಿಕ್ಕ” ಎಂದು ಸಂಭ್ರಮಿಸುತ್ತಿದ್ದ…ಎನ್ನುತ್ತಾ ಭಾವುಕರಾಗಿದ್ದರು ರಾಮಚಂದ್ರ ರಾವ್. (ಅಂದಹಾಗೆ ಇವರು 2021ರಲ್ಲಿ ತೀರಿಕೊಂಡರು.)
ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ “ಜೈಲರ್” ಸೂಪರ್ ಹಿಟ್ ಆಗಿದೆ. ಎಲ್ಲ ಪಾತ್ರ ಗಳಿಗೂ ಸಮಾನ ಪ್ರಾಮುಖ್ಯ ನೀಡಲಾಗಿದೆ. ಜತೆಗೆ ಅಭಿನಯಿಸುವ ನಟರನ್ನು, ಅವರ ಮನ ಸ್ಸನ್ನು, ಭಾವನೆಯನ್ನು ರಜನಿ ಹೇಗೆ ಅರ್ಥ ಮಾಡಿ ಕೊಳ್ಳುತ್ತಾರೆ ಎಂಬುದನ್ನು, ನಿರ್ದೇಶಕ ನೆಲ್ಸನ್ ಸಿನೆಮಾ ಬಿಡುಗಡೆಯ ಅನಂತರ ನಡೆದ ಕಾರ್ಯ ಕ್ರಮದಲ್ಲಿ ವಿವರಿಸಿದ್ದು ಹೀಗೆ:
ಜೈಲರ್ ಆಗಿದ್ದಾಗ ರಜನಿಯ ಖದರ್ ಹೇಗಿತ್ತು ಅನ್ನೋದನ್ನು ತೋರಿ ಸುವ ದೃಶ್ಯವೊಂದರಲ್ಲಿ ಒಬ್ಬ ಕೈದಿಗೆ ಸರಿಯಾಗಿ ಡೈಲಾಗ್ ಹೇಳಲು ಬಾರದ್ದರಿಂದ ಆ ಕೈದಿ ಹೇಳ್ಳೋ ಡೈಲಾಗ್‌ನ ಬೇರೊಬ್ಬ ನಟನಿಗೆ ಕೊಡಲಾಗಿತ್ತು. ಸುಮಾರು ರಿ-ಟೇಕ್‌ಗಳಾದ್ರೂ ಆತನಿಗೆ ಸರಿಯಾಗಿ ಆ ಡೈಲಾಗ್ ಹೇಳಲು ಆಗಲಿಲ್ಲ. ಹೀಗಾಗಿ ಮತ್ತೂಬ್ಬ ಕಲಾವಿದನ ಕೈಲಿ ಆ ಡೈಲಾಗ್ ಹೇಳಿಸಲಾಯಿತು. ಬ್ರೇಕ್‌ನಲ್ಲಿ ರಜನಿ-“ಡೈಲಾಗ್ ಹೇಳ್ಳೋಕ್ ಆಗಲಿಲ್ಲ ಅಂತ ಆತನನ್ನು ತೆಗೆದು ಬೇರೆಯವ್ರ ಕೈಲಿ ಮಾಡಿಸಿ ಬಿಟ್ರೀ. ರಜನಿ ಮೂವೀಲಿ ಆ್ಯಕ್ಟ್ ಮಾಡ್ತಿದೀನಿ ಅಂತ ಅವನು ಈಗಾಗ್ಲೆ ಎಲ್ಲರಿಗೂ ಹೇಳಿಕೊಂಡು ಬಂದಿರ್ತಾನೆ. ಈಗ ಎಷ್ಟು ನೊಂದು ಕೊಂಡಿದಾನೋ ಏನೋ.
ಹಾಗಾಗಿ ಒಂದ್ ಕೆಲ್ಸ ಮಾಡೋಣ, ಆ ಕಲಾವಿದನನ್ನ ನನ್ನ ಪಕ್ಕ ನಿಲ್ಲಿಸಿ ಕೊಂಡು ಆತನ ಹೆಗಲ ಮೇಲೆ ಕೈಹಾಕಿ ಡೈಲಾಗ್ ಹೇಳ್ತೀನಿ. ಆಗ ಆತನಿಗೂ ಸಮಾಧಾನವಾಗುತ್ತೆ ಅಂದು, ಹಾಗೆಯೇ ಮಾಡಿದರು! ನಾನು ಚೆನ್ನಾಗಿರಬೇಕು, ನನಗೆ ಹೆಸರು ಬರಬೇಕು, ನಾನು ಮಿಂಚಬೇಕು, ನಾನು ಗೆಲ್ಲಬೇಕು, ನಾನಷ್ಟೇ ಮೆರೆಯಬೇಕು ಎಂದಷ್ಟೇ ಯೋಚಿಸುವವರ ಮಧ್ಯೆ, ಜತೆಗಿರುವವರೆಲ್ಲ ಚೆನ್ನಾಗಿರಬೇಕು ಎಂದು ಯೋಚಿಸುವ, ಸೂಪರ್ ಸ್ಟಾರ್ ಆಗಿದ್ದರೂ ಸರಳವಾಗಿ ಬದುಕುವ ರಜನಿಕಾಂತ್‌ರ ಗುಣವನ್ನು ಕಂಡಾಗ ಇದನ್ನೆಲ್ಲಾ ಹೇಳಬೇಕಾಯಿತು…
ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.