ಇದು 153 ಪುಟಗಳ ವಿವಾಹ ಆಮಂತ್ರಣ ಪತ್ರಿಕೆ!
Team Udayavani, May 27, 2019, 6:00 AM IST
ಚಿತ್ರದುರ್ಗ: ಇಲ್ಲೊಬ್ಬರು ಬರೋಬ್ಬರಿ 153 ಪುಟಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಇದು ಅಂತಿಂಥಾ ವಿವಾಹ ಕರೆಯೋಲೆ ಅಲ್ಲ. ಮದುವೆಗೆ ಬನ್ನಿ ಎಂಬುದರ ಜತೆಗೆ ಭಾರತೀಯ ಆಡಳಿತಾತ್ಮಕ ಸೇವೆ, ಕರ್ನಾಟಕ ಆಡಳಿತಾತ್ಮಕ ಸೇವೆ ಸೇರಿ 52 ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ ಉದ್ಯೋಗ ಮಾರ್ಗದರ್ಶಿ ಈ ಕರೆಯೋಲೆಯಲ್ಲಿದೆ.
ತಮ್ಮ ಪುತ್ರನ ವಿವಾಹದ ನೆಪದಲ್ಲಿ ಸಮಾಜಕ್ಕೇನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಹಿರಿಯ ವಕೀಲ ಬಿ.ಎನ್.ತಿಪ್ಪೇಸ್ವಾಮಿ ಮತ್ತು ಪತ್ನಿ ಟಿ. ಸುರೇಖಾ 153 ಪುಟಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಈ ದಂಪತಿಯ ಮೊದಲ ಪುತ್ರ ಟಿ.ಸಂಜಯ್ ಅವರ ವಿವಾಹ ಜೂನ್ 8 ಮತ್ತು 9 ರಂದು ಮೈಸೂರಿನ ಆರ್. ಶಿವರಂಜನಿ ಜತೆ ನಡೆಯಲಿದೆ. ವರ ಸಂಜಯ್ ಹಾಗೂ ಅವರ ಸ್ನೇಹಿತ ಮಹೇಶ್ ಶ್ರಮದಿಂದ ಇಂತಹ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ.
ಅಂಥದ್ದೇನಿದೆ ಆಮಂತ್ರಣ ಪತ್ರಿಕೆಯಲ್ಲಿ?: ಗಜಗಾತ್ರದ ವಿವಾಹ ಆಮಂತ್ರಣ ಪತ್ರಿಕೆಯ ಮುಖಪುಟ, ಹಿಂಬದಿ ಪುಟಗಳಲ್ಲಿ ಮದುವೆಯ ಕರೆಯೋಲೆ ಇದ್ದರೆ, ಕೊನೆಯ ಪುಟದಲ್ಲಿ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಫೋಟೋ ಹಾಗೂ ‘ಮಾಡಿದಷ್ಟು ನೀಡು ಭಿಕ್ಷೆ’ ಎನ್ನುವ ಘೋಷವಾಕ್ಯ ಇದೆ. ಇದರ ಹಿಂಬದಿ ಪುಟದಲ್ಲಿ ಕನ್ನಡದಲ್ಲಿ ವಿವಾಹ ನಡೆಯುವ ಸ್ಥಳ ಹಾಗೂ ಆಹ್ವಾನದ ವಿಷಯಗಳಿವೆ.
ಮುಖಪುಟದ ನಂತರದ ಎರಡು ಪುಟಗಳಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮೀಜಿ, ಹಿರೇಹೊಸಳ್ಳಿ ವೇಮಹೇಮ ಸದ್ಗುರು ಪೀಠದ ವೇಮನಾನಂದ ಸ್ವಾಮೀಜಿ, ಚಿತ್ರದುರ್ಗ ವನಶ್ರೀ ಸಂಸ್ಥಾನ ಮಠದ ಬಸವಕುಮಾರ ಸ್ವಾಮೀಜಿಯವರಿಂದ ‘ಪರಿಣಯಕ್ಕೊಂದು ಪದಗಳ ತೋರಣ’ ಎನ್ನುವ ಸಂದೇಶ ಹಾಕಲಾಗಿದೆ.
ಇದರ ಮುಂದಿನ ಪುಟಗಳಲ್ಲೇ ಇದೆ ವಿಶೇಷ. ಸುಮಾರು 145 ಪುಟಗಳಲ್ಲಿ ಭಾರತೀಯ ಆಡಳಿತಾತ್ಮಕ ಸೇವೆ, ಕರ್ನಾಟಕ ಆಡಳಿತಾತ್ಮಕ ಸೇವೆ ಸೇರಿದಂತೆ 52 ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ ಉದ್ಯೋಗ ಮಾರ್ಗದರ್ಶಿ ನೀಡಲಾಗಿದೆ. ಪ್ರತಿ ಪುಟದಲ್ಲಿ ಒಂದೊಂದು ಇಲಾಖೆಯ ವೆಬ್‌ಸೈಟ್‌ನೊಂದಿಗೆ ಉದ್ಯೋಗದ ಸಮಗ್ರ ಮಾಹಿತಿ ಒದಗಿಸಲಾಗಿದೆ. ಬಹುಕಾಲ ಬಾಳಿಕೆ ಬರುವಂತ ಗ್ಲೇಜ್ಡ್ ಪೇಪರ್ ಬಳಸಿ ಮುದ್ರಣ ಮಾಡಲಾಗಿದೆ. ಹಾಗಾಗಿ ಇದು ಪ್ರತಿಯೊಬ್ಬರೂ ಸಂಗ್ರಹಿಸಿಟ್ಟುಕೊಳ್ಳುವಂತಹ ಉದ್ಯೋಗ ಮಾಹಿತಿ ಪುಸ್ತಕ. ಸುಮಾರು ಎರಡು ಸಾವಿರ ವಿವಾಹ ಆಮಂತ್ರಣ ಪತ್ರಿಕೆ ಮುದ್ರಿಸಿ ಹಂಚಿಕೆ ಮಾಡುತ್ತಿದ್ದಾರೆ. ಇದಕ್ಕಾಗಿ 70 ಸಾವಿರ ರೂ.ಖರ್ಚು ಮಾಡಲಾಗಿದೆ. ನಿರುದ್ಯೋಗಿಗಳು ತಮಗೊಂದು ಇಂತಹ ಆಮಂತ್ರಣ ಪತ್ರಿಕೆ ಬೇಕೆಂದು ಬೇಡಿಕೆ ಇಡುತ್ತಿರುವುದು ವಿಶೇಷ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಯಾವ ಯಾವ ಇಲಾಖೆಗಳಿವೆ, ಖಾಲಿ ಹುದ್ದೆಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳು, ಪರೀಕ್ಷೆಗಳನ್ನು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕೆಂಬ ಸಂಪೂರ್ಣ ಮಾಹಿತಿ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.