MDMA ಡ್ರಗ್ಸ್ ಸಹಿತ ಮೂವರ ಬಂಧನ
Team Udayavani, Aug 13, 2023, 8:44 PM IST
ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಸೇರಿದಂತೆ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೂಡುಶೆಡ್ಡೆಯ ನಿವಾಸಿ ಮೊಹಮ್ಮದ್ ಇಮ್ರಾನ್ (36), ಉಡುಪಿ ಬಡಗಬೆಟ್ಟು ನೇತಾಜಿನಗರದ ಅಮ್ಜತ್ ಖಾನ್ (42) ಮತ್ತು ಮಂಜನಾಡಿಯ ಅಬ್ದುಲ್ ಬಶೀರ್ ಅಬ್ಟಾಸ್ (39) ಬಂಧಿತರು.
ಎಂಡಿಎಂಎ ಡ್ರಗ್ಸ್ ಅನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಬಂದು ಕಾರಿನಲ್ಲಿ ಬೋಂದೆಲ್ ಪಡುಶೆಡ್ಡೆ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 170 ಗ್ರಾಂ ತೂಕದ 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಎಂಡಿಎಂಎ ಫಿಲ್ಸ್-5, 1 ಮಾರುತಿ ರಿಟ್ಜ್ ಕಾರು, 6 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳ ಪೈಕಿ ಇಮ್ರಾನ್ ಆಲಿಯಾಸ್ ಮೂಡುಶೆಡ್ಡೆ ಇಮ್ರಾನ್ ವಿರುದ್ಧ 2016ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಮಂಜೂರು ಚರಣ್ ಎಂಬಾತನ ಕೊಲೆ ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣ, 2017 ನೇ ಇಸವಿಯಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, 2019ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣ, 2020ರಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಹಾನಿಗೊಳಿಸಿದ ಪ್ರಕರಣ, 2022 ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಯ 1 ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಸಾಗಾಟ ಮತ್ತು ಮಾರಾಟ ಪ್ರಕರಣ, ಉಡುಪಿ ಜಿಲ್ಲೆಯ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಸಾಗಾಟ ಮತ್ತು ಮಾರಾಟ ಪ್ರಕರಣ, 2023ರಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಸಾಗಾಟ ಮತ್ತು ಮಾರಾಟ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಈತ ಒಂದು ವಾರದ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಇನ್ನೋರ್ವ ಆರೋಪಿ ಅಬ್ದುಲ್ ಬಶೀರ್ ಅಬ್ಟಾಸ್ ವಿರುದ್ಧ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು.
ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ., ಪಿಎಸ್‌ಐ ನರೇಂದ್ರ, ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.