ಮಂಗಳೂರು: ಸಿಡಿಲಾಘಾತ ತಡೆಗೆ 200 ಕಡೆ “ಮಿಂಚು ಪ್ರತಿಬಂಧಕ’!
Team Udayavani, Apr 30, 2022, 7:45 AM IST
ಮಂಗಳೂರು: ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಪೂರ್ವ ಮುಂಗಾರು ಪ್ರಭಾವದಿಂದ ಸಿಡಿಲಾಘಾತದ ಘಟನೆಗಳು ಹೆಚ್ಚಾಗುತ್ತಿದ್ದು, ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷೆಗೆ ಮಹತ್ವದ ಯೋಜನೆ ರೂಪಿಸುತ್ತಿದೆ.
ಕೇಂದ್ರ ಗೃಹ ಇಲಾಖೆಯು ಎನ್‌ಸಿಆರ್‌ಎಂಪಿ (ನ್ಯಾಶನಲ್ ಸೈಕ್ಲೋನ್ ರಿಸ್ಕ್ ಮಿಟಿಗೇಷನ್ ಪ್ರಾಜೆಕ್ಟ್) ಯೋಜನೆ ಯಡಿ ಎಲ್ಲ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ “ಮಿಂಚು ಪ್ರತಿಬಂಧಕ'(ಲೈಟ್ನಿಂಗ್ ಅರೆಸ್ಟರ್) ಅಳವಡಿಸಲು ಮುಂದಾಗಿದೆ. ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 200 ಮಿಂಚು ಪ್ರತಿಬಂಧಕಗಳನ್ನು ಅಳವಡಿಸುವ ನಿರೀಕ್ಷೆ ಇದೆ.
ಕರಾವಳಿ ತೀರದಿಂದ ಭೂಪ್ರದೇಶದ 10 ಕಿ.ಮೀ. ವ್ಯಾಪ್ತಿಯ ಬಸ್ ನಿಲ್ದಾಣ, ಶಾಲೆ, ಪಂಚಾಯತ್, ಆರೋಗ್ಯ ಕೇಂದ್ರ ಮೊದಲಾದ ಸರಕಾರಿ ಕಟ್ಟಡಗಳಲ್ಲಿ ಮಿಂಚು ಪ್ರತಿಬಂಧಕಗಳನ್ನು ಅಳವಡಿಸಲು, ಅಗತ್ಯ ಇರುವಲ್ಲಿ ಮಿಂಚು ಪ್ರತಿರೋಧಕ ಸಹಿತವಾದ ಬಸ್ ಶೆಲ್ಟರ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 11 ಕೋ.ರೂ. ವೆಚ್ಚದಲ್ಲಿ 150 ಮಿಂಚು ಪ್ರತಿಬಂಧಕ ಸಹಿತವಾದ ಬಸ್ ಶೆಲ್ಟರ್ ಹಾಗೂ 50 ಪ್ರತ್ಯೇಕ ವಾದ ಮಿಂಚು ಪ್ರತಿಬಂಧಕಗಳನ್ನು ಅಳವಡಿಸಲು ಸುರತ್ಕಲ್‌ನ ಎನ್‌ಐಟಿಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಿದೆ.
ಹಳೆಯ ಪ್ರಸ್ತಾವನೆ ನನೆಗುದಿಗೆ?
ದ.ಕ.ದಲ್ಲಿ ಮಿಂಚು ಪ್ರತಿಬಂಧಕಗಳನ್ನು ಅಳವಡಿಸಲು 2014ರಲ್ಲಿ 11 ಪ್ರದೇಶಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ಕರಾವಳಿ ತೀರದಿಂದ ದೂರ ಇರುವ ಪ್ರದೇಶಗಳು ಕೂಡ ಸೇರಿದ್ದವು. ಆದರೆ ಈಗಿನ ಎನ್‌ಸಿಆರ್‌ಎಂಪಿ ಯೋಜನೆಯಲ್ಲಿ ಈ ಪ್ರಸ್ತಾವನೆಯ ಉಲ್ಲೇಖವಿಲ್ಲ.
ಗ್ರಾಮೀಣಕ್ಕೂ ಅಗತ್ಯ
ನಗರ ಭಾಗಗಳ ಬಹುತೇಕ ಕಟ್ಟಡಗಳಲ್ಲಿ ಮಿಂಚು ಪ್ರತಿಬಂಧಕ ಅಳವಡಿಸಲಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಸಿಡಿಲಿನಿಂದ ರಕ್ಷಣೆಗೆ ವ್ಯವಸ್ಥೆ ಗಳಿಲ್ಲ. ಹಾಗಾಗಿ ಗ್ರಾಮೀಣ ಭಾಗಗಳಲ್ಲಿಯೂ ಮಿಂಚು ಪ್ರತಿಬಂಧಕ ಅಳವಡಿಸುವ ಯೋಜನೆ ಅನುಷ್ಠಾನ ಗೊಳಿಸುವ ಅಗತ್ಯವಿದೆ.
ರಕ್ಷಿಸಿಕೊಳ್ಳಲು ಸಿದ್ಧರಾಗಿ
ಮಿಂಚು ಭೂಮಿ ಸೇರುವ ದಾರಿಯಲ್ಲಿ ತನಗೆ ಸಿಗುವ ವಸ್ತುಗಳನ್ನು ಸುಡುತ್ತದೆ. ಆದರೆ ಆತಂಕ ಪಡಬೇಕಾಗಿಲ್ಲ. ಮುಂಜಾಗರೂಕತೆ, ಎಚ್ಚರ ಬೇಕು. ಮನೆಗೆ, ವಿದ್ಯುತ್ ಉಪಕರಣಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಲೈಟ್ನಿಂಗ್ ಕಂಡಕ್ಟರ್ ಅಥವಾ ಲೈಟ್ನಿಂಗ್ ಅರೆಸ್ಟರ್‌ಗಳನ್ನು ಅಳವಡಿಸಿಕೊಳ್ಳಬಹುದು. ಈಗಾಗಲೇ ಅಳವಡಿಸಿಕೊಂಡಿದ್ದರೆ ಸುಸ್ಥಿತಿಯಲ್ಲಿದೆಯೇ ಎಂದು ಪರಿಶೀಲಿಸ ಬೇಕು.
70 ಮೀಟರ್ ವ್ಯಾಪ್ತಿಗೆ ಸುರಕ್ಷೆ
ಅಳವಡಿಸುವ ಮಿಂಚು ಪ್ರತಿಬಂಧಕಗಳು 60ರಿಂದ 70 ಮೀಟರ್ ವ್ಯಾಪ್ತಿಗೆ ಸಿಡಿಲಿನಿಂದ ರಕ್ಷಣೆ ಒದಗಿಸಲಿವೆ. ಮುಂದಿನ ಹಂತದಲ್ಲಿ ಹೆಚ್ಚು ಸಾಮರ್ಥ್ಯದ (120-140 ಮೀ.ಗೂ ಅಧಿಕ ವ್ಯಾಪ್ತಿ) ಮಿಂಚು ಪ್ರತಿಬಂಧಕ ಅಳವಡಿಸುವ ಸಾಧ್ಯತೆ ಇದೆ. ಅಲ್ಲದೆ ತೀರ ಪ್ರದೇಶದ 10 ಕಿ.ಮೀ.ಗಿಂತಲೂ ಹೆಚ್ಚು ದೂರವಿರುವ ಪ್ರದೇಶ (ಗ್ರಾಮೀಣ, ಗುಡ್ಡಗಾಡು ಇತ್ಯಾದಿ)ಗಳಲ್ಲಿಯೂ ಮಿಂಚು ಪ್ರತಿಬಂಧಕ ಅಳವಡಿಸಲು ಉದ್ದೇಶಿಸಲಾಗಿದೆ.
ಕರಾವಳಿಯಲ್ಲಿ ಎಲ್ಲಿ ಹೆಚ್ಚು ಸಿಡಿಲಾಘಾತ ಉಂಟಾಗುತ್ತಿದೆ ಎಂಬ ಬಗ್ಗೆ ತಜ್ಞರು 2 ತಿಂಗಳು ಸಮೀಕ್ಷೆ ನಡೆಸಿದ್ದು ಸರಕಾರಕ್ಕೆ ಡಿಪಿಆರ್ ಕಳುಹಿಸಲಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ಆರ್ಥಿಕ ಮಂಜೂರಾತಿ ದೊರೆಯುವ ನಿರೀಕ್ಷೆ ಇದ್ದು ಸೆಪ್ಟಂಬರ್ ವೇಳೆಗೆ ಟೆಂಡರ್ ಪ್ರಕ್ರಿಯೆ ನಿರೀಕ್ಷಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಮಿಂಚು ಪ್ರತಿಬಂಧಕ ಅಳವಡಿಸುವ ಚಿಂತನೆ ಇದ್ದು ಪೂರಕವಾಗಿ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಲಾಗುವುದು.
– ರಾಜ್‌ಕುಮಾರ್ ಪೂಜಾರಿ,
ಪ್ರಾಜೆಕ್ಟ್ ಮ್ಯಾನೇಜರ್, ಎನ್‌ಸಿಆರ್‌ಎಂಪಿ
ಇತ್ತೀಚಿನ ವರ್ಷಗಳಲ್ಲಿ ಪೂರ್ವ ಮಾನ್ಸೂನ್ ಹೆಚ್ಚಾಗುತ್ತಿದೆ. ಇದಕ್ಕೆ ಹವಾಮಾನ ವೈಪರೀತ್ಯವೂ ಕಾರಣ. ಮಳೆ ಬಾರದಿದ್ದರೂ ಸಿಡಿಲು ಉಂಟಾಗುತ್ತಿದೆ. ಮಳೆಗಾಲದ ಆರಂಭದ ದಿನಗಳಲ್ಲಿ ಭೂಮಿಯ ಕೆಲವು ಕಡೆ ಮಾತ್ರ ತೇವಾಂಶ ಇರುವುದರಿಂದ ಸಿಡಿಲು ಬಡಿಯುವ ಸಾಧ್ಯತೆಗಳು ಹೆಚ್ಚು. ಲೈಟ್ನಿಂಗ್ ಅರೆಸ್ಟರ್ ಅಥವಾ ಲೈಟ್ನಿಂಗ್ ಕಂಡಕ್ಟರ್ ಅಳವಡಿಸಿದರೆ ಸುರಕ್ಷಿತ.
– ಡಾ| ಕೆ.ವಿ. ರಾವ್, ಭೌತಶಾಸ್ತ್ರಜ್ಞರು,
ಪಿಲಿಕುಳ ಪ್ರಾದೇಶಿಕ ವಿಜ್ಞಾನ
ಕೇಂದ್ರದ ನಿರ್ದೇಶಕರು
ಸಿಡಿಲಿನಿಂದ ರಕ್ಷಣೆ: ಜಿಲ್ಲಾ ವಿಪತ್ತು
ನಿರ್ವಹಣಾ ಪ್ರಾಧಿಕಾರದ ಸಲಹೆ
-ಸಿಡಿಲು ಸಂದರ್ಭ ಹೊರಾಂಗಣದಲ್ಲಿದ್ದರೆ ಕೂಡಲೇ ಸುರಕ್ಷಿತ ಕಟ್ಟಡ ಸೇರಿಕೊಳ್ಳಿ
-ಎತ್ತರದಲ್ಲಿ ಸಿಡಿಲಿನ ಪ್ರಭಾವ ಅಧಿಕ; ತಗ್ಗು ಪ್ರದೇಶಕ್ಕೆ ಬನ್ನಿ
– ಈ ಸಂದರ್ಭದಲ್ಲಿ ಕೆರೆ/ನದಿಗಳಲ್ಲಿ ಈಜಾಡಬೇಡಿ
-ಕೊಡೆ/ಛತ್ರಿ ಬಳಸಬೇಡಿ
-ಗಾಳಿಪಟ ಹಾರಿಸಬೇಡಿ
-ಎತ್ತರದ ಮರ, ತಂತಿ ಕಂಬ ಇತ್ಯಾದಿಗಳ ಕೆಳಗೆ ನಿಲ್ಲಬೇಡಿ
-ವಾಹನ ಚಲಾಯಿಸುತ್ತಿದ್ದಲ್ಲಿ ಮರ, ವಿದ್ಯುತ್ ಕಂಬಗಳಿಂದ ದೂರ ನಿಲ್ಲಿಸಿ ಒಳಗಡೆಯೇ ಇರಿ
-ಬಸ್‌ನಲ್ಲಿದ್ದರೆ ಕಿಟಕಿಗಳ ಗಾಜನ್ನು ಮುಚ್ಚಿ ಒಳಗಡೆ ಇರಿ
-ಟ್ರ್ಯಾಕ್ಟರ್, ಸ್ಕೂಟರ್, ಬೈಸಿಕಲ್‌ಗಳಿಂದ ದೂರವಿರಿ
-ಕಾಡಿನಲ್ಲಿದ್ದರೆ ವಿರಳ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಿರಿ
-ಜನರ ಗುಂಪಿನಲ್ಲಿದ್ದರೆ ಅಂತರ ಕಾಪಾಡಿ
-ಕಿವಿ ಮುಚ್ಚಿಕೊಂಡು ತಲೆಬಾಗಿಸಿ ಮೊಣಕಾಲುಗಳ ನಡುವೆ ಮುಖ ಹಾಕಿ ಕುಳಿತುಕೊಳ್ಳಿ
ತೆಂಗಿನ ಮರಗಳೇಕೆ ಅಪಾಯಕಾರಿ?
ಭೂಮಿಗೆ ಬೇಗ ತಲುಪುವ ದಾರಿಯನ್ನು ಮಿಂಚು ಹುಡುಕುತ್ತದೆ. ಆ ದಾರಿಯಲ್ಲಿ ಮರ ಸಿಕ್ಕಿದರೆ ಅದರ ಮೂಲಕ ಬರುತ್ತದೆ. ತೆಂಗಿನ ಮರದ ಗರಿಗಳು ಪಾಯಿಂಟೆಡ್ ಎಂಡ್ಸ್. ಗರಿಗಳು ಭೂಮಿಯಿಂದ ನೆಗೆಟಿವ್ ಚಾರ್ಜಸ್‌ನ್ನು ಪಡೆದಿರುತ್ತವೆ. ಮೋಡಗಳಿಂದ ಪಾಸಿಟಿವ್ ಚಾರ್ಜಸ್‌ಅನ್ನು ಕೂಡ ಆಕರ್ಷಿಸಿತ್ತವೆ. ಹಾಗಾಗಿ ತೆಂಗಿನ ಮರಕ್ಕೆ ಬೇಗನೆ ಸಿಡಿಲು ಬಡಿಯುತ್ತದೆ. ಹಾಗಾಗಿ ತೆಂಗಿನ ಮರಗಳನ್ನು ಮನೆಯ ತೀರಾ ಹತ್ತಿರ ಬೆಳೆಸಬಾರದು ಎನ್ನುತ್ತಾರೆ ಭೌತಶಾಸ್ತ್ರಜ್ಞ ಡಾ| ಕೆ.ವಿ. ರಾವ್ ಅವರು.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.