ರಸ್ತೆ ವಿಸ್ತರಣೆ ನಿಯಮ ಬದಲಿಸಲು ಅಂಗಾರ ಸೂಚನೆ
ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಲಹೆ
Team Udayavani, Apr 5, 2022, 6:25 AM IST
Advice to keep the public from getting into trouble
ಉಡುಪಿ: ಜಿಲ್ಲೆಯ ಗ್ರಾಮೀಣ ರಸ್ತೆ, ಜಿಲ್ಲಾ ರಸ್ತೆ, ಮೀನುಗಾರಿಕೆ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಿ, ಮೇಲ್ದರ್ಜೆಗೆ ಏರಿಸುವ ಅಥವಾ ವಿಸ್ತರಿಸುವ ಸಂಬಂಧ ರೂಪಿಸಿರುವ ನಿಯಮಗಳಿಂದ (ಹೆಚ್ಚೆಚ್ಚು ಸೆಟ್‌ಬ್ಯಾಕ್ ಬಿಡಬೇಕು ಎನ್ನುವುದು) ರಸ್ತೆ ಪಕ್ಕದಲ್ಲಿ ಜನ ಸಾಮಾನ್ಯರು ವಿವಿಧ ಚಟುವಟಿಕೆ ಕೈಗೊಳ್ಳಲು ಸಮಸ್ಯೆಯಾಗುತ್ತಿದೆ. ಈ ನಿಯಮ ಬದಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಸಹಿತವಾಗಿ ರಸ್ತೆ ಕಾಮಗಾರಿ ನಡೆಸುವ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸೂಚಿಸಿದರು.
ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲ ಶಾಸಕರಿಂದ ಅವರ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿಗಳಿಂದ ತೊಂದರೆಗೆ ಒಳಗಾಗುವ ಯೋಜನೆಗಳ ಪಟ್ಟಿ ಯನ್ನು ಪಡೆದು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳಿಗೆ ಬದಲಾವಣೆ ತರುವ ಕುರಿತು ಸರಕಾರಕ್ಕೆ ಪತ್ರ ಬರೆಯುವಂತೆ ನಿರ್ದೇಶಿಸಿದರು. ಪತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮತಿ ದೊರಕಿಸಲಾಗುವುದು ಎಂದರು.
ಅಧಿಕಾರಿಗಳ ವಿರುದ್ಧ ಅಸಮಾಧಾನ
ರಸ್ತೆ ನಿರ್ಮಿಸುವಾಗ ಅವೈಜ್ಞಾನಿಕ ವಾಗಿ ಅಥವಾ ಕಾನೂನನ್ನು ಸರಿ ಯಾಗಿ ಅರ್ಥೈಸಿಕೊಳ್ಳದೆ ಯೋಜನೆ ಗಳನ್ನು ಅನುಷ್ಠಾನ ಮಾಡುವ ಅಧಿಕಾರಿಗಳಿಂದ ನಗರಸಭೆ, ಗ್ರಾ.ಪಂ., ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಅನುಮತಿ ದೊರೆಯದೆ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೇಶಾದ್ಯಂತ ಅಂಗನವಾಡಿ ಅಭಿವೃದ್ಧಿಗೆ ಕ್ರಮ: ಸಚಿವೆ ಸ್ಮತಿ ಇರಾನಿ
ಶೀಘ್ರ ಪರಿಹಾರ ಕಲ್ಪಿಸಿ
ಶಾಸಕರಾದ ಕೆ. ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಜಿಲ್ಲೆಯ ಅನೇಕ ಭಾಗದಲ್ಲಿ ಬಸ್‌ಗಳು ಸಂಚರಿಸದ ರಸ್ತೆಗಳಲ್ಲಿಯೂ ಮೇಲ್ದರ್ಜೆ ಅಥವಾ ವಿಸ್ತರಣೆಯ ನಿಯಮವನ್ನು ಅನುಷ್ಠಾನ ಮಾಡಿ, ಹೆಚ್ಚೆಚ್ಚು ಸೆಟ್‌ಬ್ಯಾಕ್ ಬಿಡುವಂತೆ ಹೇಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸಮಸ್ಯೆಗೆ ಶೀಘ್ರ ಪರಿಹಾರ ನೀಡಬೇಕು ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ, ಡಿಎಫ್ಒ ಆಶೀಶ್ ರೆಡ್ಡಿ, ಜಿ.ಪಂ. ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ವೀಣಾ ಸ್ವಾಗತಿಸಿ, ವಂದಿಸಿದರು.
ನಿರ್ಮಾಣ ವಾಹನಗಳಿಗೆ ಅಡಚಣೆ ಮಾಡದಿರಿ
ಸರಕಾರದ ನಿರ್ಮಾಣ ಕಾಮಗಾರಿ ಸಂಬಂಧ ಸಂಚರಿಸುತ್ತಿರುವ ವಾಹನಗಳಿಗೆ ಪೊಲೀಸ್, ಸಾರಿಗೆ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಅಡಚಣೆ ಮಾಡಬಾರದು. ಇಂತಹ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲು ಸಹಕರಿಸಬೇಕು. ಜಿಲ್ಲೆಯ ಖನಿಜ ಪ್ರತಿಷ್ಠಾನ ನಿಧಿಯ ಮೊತ್ತವನ್ನು ಗಣಿಗಾರಿಕೆ ನಡೆಯುತ್ತಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವಂತೆ ಸಚಿವ ಅಂಗಾರ ನಿರ್ದೇಶಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.