ಬಾಲ್ಯವಿವಾಹ ತಡೆಯುವಲ್ಲಿ ಗ್ರಾ.ಪಂ ಪಾತ್ರ ಮುಖ್ಯ : ಚೈಲ್ಡ್‌ಲೈನ್ 1098 ಸದುಪಯೋಗಕ್ಕೆ ಕರೆ
Team Udayavani, Feb 19, 2022, 4:02 PM IST
ಬಳ್ಳಾರಿ: ಬಾಲ್ಯವಿವಾಹಗಳು ತಡೆಯುವಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಪಂಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಚೈಲ್ಡ್‌ಲೈನ್ 1098 ಸಂಯೋಜಕ ಆನಂದ್ ಹೇಳಿದರು.
ಜಿಲ್ಲೆಯ ಸಂಡೂರು ತಾಲೂಕಿನ ರಾಜಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿಯ ಚೈಲ್ಡ್‌ಲೈನ್ 1098 ಸಹಯೋಗ ಸಂಸ್ಥೆ-ಬಿಡಿಡಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಡ್- ಚೈಲ್ಡ್‌ಲೈನ್ ನೋಡಲ್ ಸಂಸ್ಥೆ, ಬಾಲಕಾರ್ಮಿಕ ಯೋಜನೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯಿತಿ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮಕ್ಕಳ ಸಮಸ್ಯೆಗಳನ್ನು ಚರ್ಚಿಸಲು ಶಾಲಾ ಮಕ್ಕಳಿಗೆ ಶುಕ್ರವಾರ ಏರ್ಪಡಿಸಿದ್ದ “ತೆರೆದ ಮನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
18 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ದೂರವಾಣಿ ಸಂಖ್ಯೆ 1098 ಅನ್ನು ಸ್ಥಾಪಿಸಲಾಗಿದ್ದು, ನಮ್ಮ ದೇಶದಲ್ಲಿ ಒಟ್ಟು 602 ಜಿಲ್ಲೆಗಳಲ್ಲಿ ಮತ್ತು 144 ರೈಲು ನಿಲ್ದಾಣಗಳಲ್ಲಿ ಚೈಲ್ಡ್‌ಲೈನ್ ಯೋಜನೆ ಕಾರ್ಯನಿರ್ವಹಿಸುತ್ತಿವೆ. ನಿಮ್ಮ ಗ್ರಾಮದಲ್ಲಿ ತೊಂದರೆ ಹಾಗೂ ಸಂಕಷ್ಟದಲ್ಲಿ ಇರುವ ಮಕ್ಕಳು ಕಂಡು ಬಂದಲ್ಲಿ 1098ಕ್ಕೆ ಕರೆ ಮಾಡಿ ತಿಳಿಸಬಹುದು. ಇಂಥ ಮಕ್ಕಳಿಗೆ
ವಿದ್ಯಾಭ್ಯಾಸ ಮುಂದುವರಿಕೆ, ವೈದ್ಯಕೀಯ ಸೌಲಭ್ಯ, ಆಶ್ರಯ ಮತ್ತು ರಕ್ಷಣೆಯಂತಹ ಸೇವೆಗಳನ್ನು ಚೈಲ್ಡ್‌ಲೈನ್ ಕೇಂದ್ರದಿಂದ ಒದಗಿಸಲಾಗುವುದು ಎಂದ ಅವರು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಮಕ್ಕಳ ಸಹಾಯವಾಣಿಯ ಕಿರುಪರಿಚಯವನ್ನು ಸಹ ಇದೇ ಸಂದರ್ಭದಲ್ಲಿ ಮಾಡಿಕೊಟ್ಟರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚೈಲ್ಡ್‌ಲೈನ್ ಬಿಡಿಡಿಎಸ್ ಸಂಸ್ಥೆಯ ನಿರ್ದೇಶಕ ಫಾದರ್ ಯಾಗಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲಕಾರ್ಮಿಕ ಮಕ್ಕಳು ಮತ್ತು ಬಾಲ್ಯವಿವಾಹದ ಕುರಿತು ಯಾರಿಗಾದರೂ ಮಾಹಿತಿ ಬಂದಲ್ಲಿ ಸಂಖ್ಯೆ 1098ಗೆ ಕರೆ ಮಾಡಿ ತಿಳಿಸುವಂತೆ ಕೋರಿದರು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ
ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು, ಮಕ್ಕಳ ಹಕ್ಕುಗಳ ಕುರಿತು, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯು ನೀಡುವ ಸೇವೆಗಳ ಕುರಿತು ತಿಳಿಸಿದರು.
ಇದನ್ನೂ ಓದಿ : ಅರಣ್ಯ ಭೂಮಿ ಹಕ್ಕು 30 ವರ್ಷದ ಹೋರಾಟದ ಸ್ಮರಣ ಸಂಚಿಕೆ ;ಅಭಿನಂದನಾರ್ಹ
ನಂತರ ಚೈಲ್ಡ್‌ಲೈನ್ 1098 ಸಿಬ್ಬಂದಿಗಳು ಮಕ್ಕಳೊಂದಿಗೆ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ಸಮಸ್ಯೆಗಳಾದ ಕುಡಿಯುವ ನೀರಿನ ಕೊರತೆ, ಶೌಚಾಲಯ ಕೊರತೆ, ಶಿಕ್ಷಕರ ಕೊರತೆ, ವೈದ್ಯಕೀಯ ತಪಾಸಣೆ, ಶಾಲಾ ಸಮವಸ್ತ್ರ ಇನ್ನೂ ಕೊಟ್ಟಿರುವುದಿಲ್ಲ. ಶುಚಿ ಪ್ಯಾಡ್, ಬಾಲ್ಯವಿವಾಹ, ಕಾಲೇಜ್ ವ್ಯವಸ್ಥೆ, ಶಾಲೆಯಲ್ಲಿ ಸಾರ್ವಜನಿಕರು ಗಲೀಜು ಮಾಡುತ್ತಿರುವುದು. ಗ್ರಾಮದಲ್ಲಿ ಆಸ್ಪತ್ರೆ ಇದ್ದು, ಕಟ್ಟಡದಲ್ಲಿ ವೈದ್ಯಾಧಿ ಕಾರಿಗಳು ಇಲ್ಲದೇ ಇರುವುದು ತಿಳಿಸಿಕೊಟ್ಟರು. ಗ್ರಾಮದಲ್ಲಿ ಸರ್ಕಾರಿ ಹಾಸ್ಟೆಲ್ ವ್ಯವಸ್ಥೆ ಇರಬೇಕೆಂದು ಕೋರಿದರು. ಮುಖ್ಯವಾಗಿ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದಿರುವುದು ತಿಳಿಸಿಕೊಟ್ಟರು ಮತ್ತು ಗ್ರಾಮಕ್ಕೆ ಸುತ್ತಮುತ್ತಲಿನ ಸುಮಾರು 7 ಗ್ರಾಮಗಳಿಂದ ಮಕ್ಕಳ ಓದಲು ಶಾಲೆಗೆ ಬರುತ್ತಾರೆ. ಆದರೆ ಈ ಮಕ್ಕಳು
ಮುಂದಿನ ವಿದ್ಯಾಭ್ಯಾಸಕ್ಕೆ ಕಾಲೇಜು ಇರುವುದಿಲ್ಲ. ಆದ್ದರಿಂದ ರಾಜಾಪುರ ಗ್ರಾಮದಲ್ಲಿ ಕಾಲೇಜು ಸ್ಥಾಪಿಸಲು ಕೋರಿದರು. ‘ಬಾಲ್ಯವಿವಾಹ’ ಸಂಬಂಧ ದೂರು ಕೊಟ್ಟಾಗ ಯಾವುದೇ ಅಧಿಕಾರಿಗಳು ಬರುವುದಿಲ್ಲ ಹೊರತಾಗಿ ಕೇವಲ ಸ್ಥಳೀಯ ಅಂಗನವಾಡಿ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಚೈಲ್ಡ್‌ಲೈನ್ ಸಿಬ್ಬಂದಿ ಮತ್ತು ಪೋಲೀಸ್ ಮಾತ್ರ ಬರುತ್ತಾರೆ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಡೂರಿನ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ರವಿದಾಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿಕ ಅಧಿಕಾರಿಯಾದ ಚೆನ್ನಬಸಪ್ಪ ಪಾಟೀಲ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಸಂಯೋಜಕರಾದ ಈಶ್ವರ್, ರಾಜಾಪುರ ಗ್ರಾಮದ ವೈದ್ಯಾಧಿಕಾರಿಗಳಾದ ಡಾ| ಹರೀಶ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷರು, ಪಂಚಾಯಿತಿ
ಸದಸ್ಯರು ಸೇರಿದಂತೆ ಗ್ರಾಮದ ಅಂಗನವಾಡಿ ಮೇಲ್ವಿಚಾರಕರು ಮತ್ತು ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಮತ್ತು ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.