ರಾಜ್ಯದಲ್ಲಿಂದು ಕೋವಿಡ್ ಏರಿಕೆ: 1826 ಪ್ರಕರಣ ಪತ್ತೆ; 33 ಸಾವು
Team Udayavani, Aug 11, 2021, 8:39 PM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೊಸ ಪ್ರಕರಣಗಳು ಸತತ ಎರಡನೇ ದಿನ ಏರಿಕೆಯಾಗಿದ್ದು, ಐದು ಜಿಲ್ಲೆಗಳಲ್ಲಿ 100ರ ಗಡಿದಾಟಿವೆ.
ಮಂಗಳವಾರ 1826 ಮಂದಿಗೆ ಸೋಂಕು ತಗುಲಿದ್ದು, 33 ಸೋಂಕಿತರು ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ 1618 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 41 ಸಾವಿರ(1.67 ಲಕ್ಷಕ್ಕೆ) ಹೆಚ್ಚಳವಾಗಿವೆ. ಹೊಸ ಪ್ರಕರಣಗಳು 488 ಮತ್ತು ಸೋಂಕಿತರ ಸಾವು 2 ಏರಿಕೆಯಾಗಿದೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ 1.1, ಮರಣ ದರ ಶೇ.1.8ರಷ್ಟಿದೆ.
ಸತತ ಮೂರನೇ ದಿನ ಇಳಿಕೆಯಾಗಿದ್ದ ಹೊಸ ಪ್ರಕರಣಗಳು ಮಂಗಳವಾರ ಮತ್ತೆ ಏರಿಕೆಯಾಗಿದ್ದವು. ಈಗ ಸತತ 2ನೇ ದಿನ ಹೆಚ್ಚು ಕಡಿಮೆ 500 ಪ್ರಕರಣಗಳು ಹೆಚ್ಚಳವಾಗಿವೆ. ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಜಿಲ್ಲೆಗಳಲ್ಲಿ ಮಾತ್ರ 100ಕ್ಕಿಂತ ಹೆಚ್ಚಿದ್ದ ಹೊಸ ಪ್ರಕರಣಗಳು ಈಗ ಐದು ಜಿಲ್ಲೆಗಳಲ್ಲಿ ಹೆಚ್ಚಳವಾಗಿವೆ. ಆದರೆ, ಪಾಸಿಟಿವಿಟಿ ದರವೂ ಶೇ.1ರ ಆಸುಪಾಸಿನಲ್ಲಿದೆ. ಇನ್ನು ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಸೋಂಕು ಪರೀಕ್ಷೆಗಳು 41 ಸಾವಿರ ಹೆಚ್ಚಳವಾಗಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಗಡಿಜಿಲ್ಲೆಗಳಲ್ಲಿ ಹೆಚ್ಚು : ಬುಧವಾರ ಅತಿ ಹೆಚ್ಚು ದಕ್ಷಿಣ ಕನ್ನಡ 422, ಬೆಂಗಳೂರು ನಗರದಲ್ಲಿ 377, ಹಾಸನ 175, ಉಡುಪಿ 130, ಮೈಸೂರು 118, ಉತ್ತರ ಕನ್ನಡ 79, ಕೊಡಗು 71, ಚಿಕ್ಕಮಗಳೂರು 65 ಮಂದಿಗೆ ಸೋಂಕು ತಗುಲಿದೆ. ಉಳಿದ ಜಿಲ್ಲೆಗಳಲ್ಲಿ 50 ಕ್ಕಿಂತ ಕಡಿಮೆ ಇವೆ. 9 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟಿದೆ. ಬೀದರ್ ಹಾಗೂ ಗದಗದಲ್ಲಿ ಶೂನ್ಯವಿದೆ. 17 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಾವಾಗಿಲ್ಲ. 13 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ವರದಿಯಾಗಿದ್ದು, ಹೆಚ್ಚು ದಕ್ಷಿಣ ಕನ್ನಡ ಮತ್ತು ಬೆಂಗಳೂರಿನಲ್ಲಿ ತಲಾ ಐದು ಸೋಂಕಿತರು ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.