ಇಂದು ವಾಲ್ಮೀಕಿ ಜಯಂತಿ- ಮೇರು ಗ್ರಂಥ ರಾಮಾಯಣ ರಚಿಸಿದ ಆದಿಕವಿ ವಾಲ್ಮೀಕಿ
Team Udayavani, Oct 27, 2023, 11:48 PM IST
ಶ್ರೀ ವಾಲ್ಮೀಕಿ, ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳ ಪವಿತ್ರ ಬೃಹತ್ ಗ್ರಂಥ ರಾಮಾಯಣವನ್ನು ರಚಿಸಿದ ಮಹರ್ಷಿ. ಆದಿಕವಿ. ಯೋಗವಸಿಷ್ಠವನ್ನೂ ರಚಿಸಿದವನು. ವಾಲ್ಮೀಕಿಯ ಜೀವಿತ ಸಮಯದ ಬಗ್ಗೆ ಅನೇಕ ವಾದಗಳಿವೆ. ವಾಲ್ಮೀಕಿ ರಾಮಾಯಣ ರಚನೆಯ ಸಮಯ ಕ್ರಿ. ಪೂ. 500 ರಿಂದ ಕ್ರಿ. ಪೂ. 100. ಪ್ರಭು ಶ್ರೀರಾಮನ ಸಮಕಾಲೀನ ಎಂದು ವಾದವಿದೆ. ಸೀತೆ ವಾಲ್ಮೀಕಿ ಆಶ್ರಮದಲ್ಲಿದ್ದಳು. ಲವಕುಶರ ಜನ್ಮವೂ ಅಲ್ಲಿ ಆಗಿತ್ತು. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ಕಾಲಮಾನ ಸಾವಿರಾರು ವರ್ಷ ಹಿಂದಕ್ಕೆ ಚಲಿಸುತ್ತದೆ.
ವಾಲ್ಮೀಕಿ ಮುನಿ ಪ್ರಚೇತಸನ ಪುತ್ರನಾಗಿ ಜನಿಸಿದನು. ಹೆಸರು ರತ್ನಾಕರ. ಬಾಲಕನಾಗಿದ್ಧಾಗಲೇ ಕಾಡಿನಲ್ಲಿ ಸಂಚರಿಸಿ ಒಂದು ದಿನ ಕಾಣದಾದ. ಬೇಟೆಗಾರನೊಬ್ಬನ ಕಣ್ಣಿಗೆ ಬಿದ್ದು ಅವನ ಆರೈಕೆಯಲ್ಲಿ ಬೆಳೆದ. ಕ್ರಮೇಣ ತನ್ನ ಹೆತ್ತವರನ್ನು ಮರೆತ. ಬೇಟೆಗಾರ ತಂದೆಯ ಮಾರ್ಗದರ್ಶನದಲ್ಲಿ ರತ್ನಾಕರನು ಉತ್ತಮ ಬೇಟೆಗಾರನಾದ. ಪ್ರಾಯಸ್ಥನಾದ ಮೇಲೆ ಬೇಟೆಗಾರ ಕುಲದ ಕನ್ಯೆಯೊಬ್ಬಳನ್ನು ಮದುವೆಯೂ ಆದ. ತನ್ನ ಕುಟುಂಬ ದೊಡ್ಡದಾದಾಗ ಉದರ ಪೋಷಣೆಗೆ ಡಕಾಯತಿ ವೃತ್ತಿಯನ್ನು ಆರಿಸಿದ. ನಗರ ಕಾಂಡ, ಸ್ಕಂದಪುರಾಣದ ಉಲ್ಲೇಖದಂತೆ, ಬ್ರಾಹ್ಮಣ ಕುಲದಲ್ಲಿ ಜನಿಸಿದ ಲೋಹಜಂಘ, ಗ್ರಾಮದಲ್ಲಿ 12 ವರ್ಷ ಕ್ಷಾಮ ಉಂಟಾದಾಗ ಕಡು ಬಡತನದಿಂದಾಗಿ ಜನರನ್ನು ದರೋಡೆ ಮಾಡುತ್ತಿದ್ದ. ಒಮ್ಮೆ ಸಪ್ತರ್ಷಿಗಳನ್ನು ಲೂಟಿಮಾಡಲು ಮುಂದಾದಾಗ ಪುಲಸ್ತ್ಯ ಋಷಿಯು ಲೋಹಜಂಘನಿಗೆ ಮಂತ್ರೋಪದೇಶವನ್ನಿತ್ತನಂತೆ. ಮಂತ್ರಾಧೀಕ್ಷನಾದ ಆತನು ಮೈಮರೆತು ವರ್ಷಗಳ ಕಾಲ ಅದೇ ಸ್ಥಿತಿಯಲ್ಲಿದ್ದಾಗ ವಲ್ಮೀಕ ಆವರಿಸಿದ ಪರಿಣಾಮ ವಾಲ್ಮೀಕಿಯಾದ. ಇನ್ನೊಂದು ಕಥೆ, ಭೃಗು ಗೋತ್ರಕ್ಕೆ ಸೇರಿದ ಸುಮಾಲಿ ಮತ್ತು ಪ್ರಚೇತಸ ಎಂಬ ಬ್ರಾಹ್ಮಣ ದಂಪತಿಯಲ್ಲಿ ಹುಟ್ಟಿದ. ಹೆಸರು ಅಗ್ನಿಶರ್ಮ. ನಾರದರಿಂದ ಮಾರಾ ಅಂದರೆ ಮರಣ, ಎಂದು ಉಪದೇಶಿಸಲ್ಪಟ್ಟು, ಮಾರಾ, ರಾಮಾ ಎಂದಾಯಿತು.
ನಾರದರ ಭೇಟಿ ಮತ್ತು ಮನಃಪರಿವರ್ತನೆ
ಒಮ್ಮೆ ಮಹರ್ಷಿ ನಾರದರು ಕಾಡಿನಲ್ಲಿ ಸಂಚರಿಸುತ್ತಿರುವಾಗ, ರತ್ನಾಕರನ ದಾಳಿಗೆ ತುತ್ತಾದರು. ದೇವತಾಸ್ತುತಿಯನ್ನು ಹಾಡುತ್ತಾ ವೀಣೆ ನುಡಿಸುತ್ತಿದ್ದ ನಾರದರನ್ನು ಕಂಡು ರತ್ನಾಕರ ಮನಃ ಪರಿವರ್ತನೆಗೊಳಗಾದ. “ಯಾವ ಕುಟುಂಬದ ನಿರ್ವಹಣೆಗಾಗಿ ನೀನು ಇತರರನ್ನು ದರೋಡೆ ಮಾಡುವಿಯೋ ಆ ಪಾಪದ ಫಲವನ್ನು ನೀನೂ ಉಣ್ಣುತ್ತಿ’ ಎಂದು ನಾರದರು ಹಿತವಚನವಿತ್ತರು. ತನ್ನ ಮನೆಯಿಂದಲೂ ತಿರಸ್ಕೃತಗೊಂಡ ರತ್ನಾಕರ ಮರಳಿ ನಾರದರ ಬಳಿ ಬಂದಾಗ ಶ್ರೀರಾಮ ಜಪವನ್ನು ಉಪದೇಶಿಸಿದರಂತೆ. ಅದರಂತೆ ರಾಮಧ್ಯಾನಕ್ಕೆ ಕುಳಿತ ರತ್ನಾಕರನಿಗೆ ವರ್ಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ. ಅವರ ಸುತ್ತ ವಲ್ಮೀಕ ಬೆಳೆಯಿತು.
ನಾರದರು ಬಂದಾಗ ವಲ್ಮೀಕದಲ್ಲಿ ಅವಿತುಹೋಗಿದ್ದ ರತ್ನಾಕರನ ಭಕ್ತಿಗೆ ಮೆಚ್ಚಿ “ಬ್ರಹ್ಮರ್ಷಿ’ ಎಂದು ಗೌರವಿಸಿ ವಾಲ್ಮೀಕಿಯೆಂದು ಮರು ನಾಮಕರಣಗೊಳಿಸಿದರು. ಗಂಗಾ ತೀರದಲ್ಲಿ ತನ್ನ ಆಶ್ರಮವನ್ನು ಸ್ಥಾಪಿಸಿದನು. ನಾರದರು ಒಮ್ಮೆ ಆಶ್ರಮಕ್ಕೆ ಬಂದು ವಾಲ್ಮೀಕಿಗೆ ಪ್ರಭುಶ್ರೀರಾಮನ ಚರಿತ್ರೆಯನ್ನು ವಿವರಿಸಿದರು. ಬಳಿಕ ಬ್ರಹ್ಮನ ಅಣತಿಯಂತೆ ರಾಮಾಯಣವನ್ನು ರಚಿಸಿದರು. ಪ್ರಸಿದ್ಧ ಇತಿಹಾಸಗಾರ ಡಾ| ಪಿ.ವಿ. ಕಾಣೆಯವರು ಹೇಳುವಂತೆ ವಾಲ್ಮೀಕಿಯು ಕ್ರಿ.ಪೂ. 250ರಲ್ಲಿ ಜನಿಸಿದರು. ತ್ರೇತಾಯುಗ ಎಂದು ಆಸ್ತಿಕರ ಅಭಿಮತ. ನೇಪಾಲ, ಬಿಹಾರದ ಗಂಗಾ ತೀರದಲ್ಲಿ ಅವರು ಜನಿಸಿದರು ಎಂದು ಇನ್ನು ಕೆಲವರ ಅಭಿಪ್ರಾಯ.
ಆದಿಕವಿಯ ಉಪದೇಶಗಳು
ಯಾವಾಗಲೂ ಸತ್ಯಸಂದನಾಗಿರು. ಸತ್ಯಕ್ಕೆ ಜಯವಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಶ್ರೀರಾಮನ ಸಂಸಾರವನ್ನು ನೋಡು. ಪರಿಸ್ಥಿತಿ ಪ್ರತಿಕೂಲವಿದ್ದರೂ ಅವರ ಹೃದಯ ಒಂದಾಗಿತ್ತು, ಆದ್ದರಿಂದ ಕಷ್ಟಗಳಿಂದ ಮೇಲೆದ್ದು ಬಂದರು. ನಿಮ್ಮ ಕರ್ತವ್ಯಗಳಿಗೆ ವಿಧೇಯರಾಗಿರಿ. ಸದ್ಗುಣದಿಂದ ನಡೆಯಿರಿ. ಇತರರಿಗೆ ಗೌರವ ಮತ್ತು ಕರುಣೆ ತೋರಿ. ಪ್ರತಿಯೊಂದು ಜೀವಿಯನ್ನು ಸಮನಾಗಿ ನೋಡಿ. ಋಣಾತ್ಮಕ ವ್ಯಕ್ತಿಗಳಿಂದ ದೂರ ಇರಿ. ಶಾಂತಿ ಸೌಹಾರ್ದತೆಗೆ ಕ್ಷಮೆಯೇ ಪ್ರಧಾನ. ಎಲ್ಲ ಹೊಳೆಯುವ ವಸ್ತುಗಳೂ ಚಿನ್ನವಲ್ಲ. ಕಾಲನಿಗಿಂತ ಮಿಗಿಲಾದ, ಶಕ್ತಿಶಾಲಿಯಾದ ದೇವರಿಲ್ಲ. ಒಳಿತು ಕೆಡುಕನ್ನು ಮನುಷ್ಯ ಮಾಡಿದರೆ, ಅದು ಒಂದು ದಿನ ಅವನ ಬಳಿ ಬರುತ್ತದೆ. ಅದು ಶಾಸ್ತಿ ಮಾಡುತ್ತದೆ. ಅತಿಯಾಗಿ ಯಾವುದನ್ನು ಮಾಡಿದರೂ ಅದು ದುಃಖಕ್ಕೆ ಕಾರಣವಾಗುತ್ತದೆ…ಇವೆಲ್ಲವೂ ವಾಲ್ಮೀಕಿ ಈ ನಾಡಿಗೆ ನೀಡಿದ ಉಪದೇಶಗಳು.
ದೇಶದಲ್ಲಿ ಎರಡು ಅತ್ಯಂತ ಪ್ರಮುಖ ವಾಲ್ಮೀಕಿ ಮಹರ್ಷಿಯ ದೇವಾಲಯಗಳಿವೆ. ಪಂಜಾಬ್‌ನ ಅಮೃತಸರದಲ್ಲಿರುವ ಭಗವಾನ್ ವಾಲ್ಮೀಕಿ ತೀರ್ಥ ಸ್ಥಳ ಮತ್ತು ತಮಿಳುನಾಡಿನ ತಿರುವಣ್ಮಿಯೂರು ನಲ್ಲಿರುವ ಮಹರ್ಷಿ ವಾಲ್ಮೀಕಿ ದೇವಾಲಯ.
ಜಲಂಚಾರು ರಘುಪತಿ ತಂತ್ರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.