ಇಂದು ವಿಶ್ವ ಯೋಗ ದಿನ: ಗರ್ಭಿಣಿ ಮಹಿಳೆಗೆ ಯೋಗ
Team Udayavani, Jun 21, 2020, 5:30 AM IST
ತನಗೆಂದೇ ವಿನ್ಯಸಿಸಲ್ಪಟ್ಟ ಯೋಗಾಸನಗಳನ್ನು ಕಲಿತು ಅಭ್ಯಾಸ ಮಾಡುವುದರಿಂದ ಗರ್ಭಿಣಿ ಮಹಿಳೆಗೆ ಅನೇಕ ಪ್ರಯೋಜನಗಳಿವೆ.
ಸಮಾಧಿ ಸ್ಥಿತಿ ಎಂಬರ್ಥದ “ಯುಜ’ ಮತ್ತು ವಿಶ್ವಪ್ರಜ್ಞೆಯ ಜತೆಗೆ ಒಗ್ಗೂಡುವುದು ಎಂಬರ್ಥವುಳ್ಳ ಯುಜಿರ್ ಎಂಬ ಎರಡು ಸಂಸ್ಕೃತ ಪದಗಳಿಂದ ವುತ್ಪತ್ತಿಯಾದದ್ದು ಯೋಗ ಎಂಬ ಪದ. ಯೋಗವು ಒಂದು ವಿಧವಾದ ವ್ಯಾಯಾಮ. ದೇಹವು ಹೆಚ್ಚು ಸದೃಢ ಮತ್ತು ನಮನೀಯವಾಗುವಂತೆ, ಉಸಿರಾಟ ಉತ್ತಮಗೊಳ್ಳುವಂತೆ ಮತ್ತು ಮನಸ್ಸು ವಿಶ್ರಾಮಗೊಳ್ಳುವಂತೆ ನಮ್ಮ ದೇಹವನ್ನು ವಿವಿಧ ಆಸನಗಳಲ್ಲಿ ಸ್ಥಿರಗೊಳಿಸುವುದೇ ಯೋಗ.
ಗರ್ಭಧಾರಣೆಯ ಅವಧಿಯಲ್ಲಿ ಯೋಗದ ಪ್ರಾಮುಖ್ಯ
ಗರ್ಭ ಧರಿಸಿದ ಅವಧಿಯಲ್ಲಿ ಪ್ರತೀ ಮಹಿಳೆಯು ವಿಶಿಷ್ಟ ದೈಹಿಕ ಬದಲಾವಣೆಗಳನ್ನು ಅನುಭವಿಸುತ್ತಾಳೆ, ಒತ್ತಡವನ್ನು ಅನುಭವಿಸುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ದೈಹಿಕ ಮತ್ತು ಮಾನಸಿಕ ಅಗತ್ಯಗಳು ಕೂಡ ವಿಶೇಷವಾಗಿರುತ್ತವೆ. ಗರ್ಭಧಾರಣೆ ಮತ್ತು ಪ್ರಸೂತಿಯ ಸಂದರ್ಭದ ಉದ್ದಕ್ಕೂ ಆಕೆಯಲ್ಲಿ ಉದ್ಭವಿಸುವ ವಿವಿಧ ದೈಹಿಕ, ಭಾವನಾತ್ಮಕ ಮತ್ತು ನೋವಿನ ಸ್ಥಿತಿಗತಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕಾದ ಅಗತ್ಯವಿರುತ್ತದೆ.
ಗರ್ಭ ಧರಿಸಿದ ಅವಧಿಯಲ್ಲಿ ಮಹಿಳೆಯು ಅನುಭವಿಸುವ ತಾಯ್ತನದ ಒತ್ತಡ, ಆತಂಕ ಮತ್ತು ಉದ್ವಿಗ್ನಗಳಿಗೂ ಭ್ರೂಣ ಮತ್ತು ಅದರ ಬೆಳವಣಿಗೆಯ ಮೇಲೆ ಉಂಟಾಗಬಲ್ಲ ದುಷ್ಪರಿಣಾಮಗಳಿಗೂ ನಿಕಟ ನಂಟಿದೆ.
ಮಹಿಳೆಯು ಸಾಮಾನ್ಯ ವ್ಯಾಯಾಮ ಭಂಗಿಗಳಲ್ಲಿ ಕುಳಿತಾಗ ಆಕೆಯ ದೇಹಕ್ಕೆ ಸಮತೋಲಿತ ಅಭ್ಯಾಸ ಸಿಗುವುದಿಲ್ಲ. ಆದರೆ ಪ್ರಸವಪೂರ್ವ ಯೋಗ ತರಗತಿಗಳು ಆಕೆಗೆ ಸಂಧಿಗಳ ಚಲನೆಯ ವ್ಯಾಯಾಮಗಳು, ಕುಳಿತಿರುವ ಭಂಗಿಯ ಆಸನಗಳು, ನಿಲ್ಲುವ ಭಂಗಿಯ ಆಸನಗಳು, ಸೊಂಟಕ್ಕೆ ವ್ಯಾಯಾಮ, ಉಸಿರಾಟ ಮತ್ತು ವಿಶ್ರಾಮಕ ವ್ಯಾಯಾಮಗಳನ್ನು ಒದಗಿಸುತ್ತವೆ.
ಗರ್ಭಿಣಿಗೆ ಸೂಕ್ತವಲ್ಲದ ಸಾಮಾನ್ಯ ಯೋಗ ಭಂಗಿಗಳಲ್ಲಿ ನೇರವಾಗಿ ಹೊಟ್ಟೆಯ ಭಾಗವನ್ನು ಸಂಕುಚಿಸುವ ಮುಂದಕ್ಕೆ ಬಾಗಿ ನಡೆಸುವ ಮತ್ತು ದೇಹವನ್ನು ತಿರುಚುವ ಯೋಗಾಸನಗಳು ಒಳಗೊಂಡಿವೆ. ಆದರೆ ಈ ಆಸನಗಳಲ್ಲೂ ಗರ್ಭಿಣಿಗೆ ಸೂಕ್ತವಾಗುವಂತೆ ಪ್ರಸವಪೂರ್ವ ಮಾರ್ಪಾಡುಗಳಿವೆ, ಇದರಿಂದ ಆಕೆಗೆ ಸಮತೋಲಿತ ವ್ಯಾಯಾಮ ಸಿಗುತ್ತದೆ.
ಪ್ರಸವಾನಂತರದ ಯೋಗ
ಪ್ರಸವಾನಂತರ, ಬಾಣಂತಿತನದ ಅವಧಿಯಲ್ಲಿಯೂ ಯೋಗಾಸನಗಳನ್ನು ಮಾಡುವುದು ಸುರಕ್ಷಿತವೇ?
ಪ್ರಸವಾನಂತರದ ಯೋಗಾಸನಗಳು ಪೆಡಸುಗೊಂಡಿರುವ ಸ್ನಾಯುಗಳನ್ನು ಸಡಿಲಿಸಲು, ಉದ್ವಿಗ್ನವನ್ನು ಇಳಿಸಿಕೊಳ್ಳಲು, ನಮ್ಮ ನರಗಳು ವಿಶ್ರಾಂತಿ ಪಡೆಯಲು ಹಾಗೂ ಪೆಲ್ವಿಕ್ ಭಾಗದ ಮತ್ತು ಹೊಟ್ಟೆಯ ಸ್ನಾಯುಗಳು ಪುನರುಜ್ಜೀವನಗೊಳ್ಳಲು ನೆರವಾಗುತ್ತವೆ.
ಬಾಣಂತಿ ಅವಧಿಗೆ ವಿಶೇಷವಾಗಿರುವ ಯೋಗ ಭಂಗಿಗಳು ತಾಯಿಗೆ ತನ್ನ ಸಾಮರ್ಥ್ಯವನ್ನು, ಮೂಲ ದೇಹಾಕಾರ ಮತ್ತು ದೇಹಪ್ರಕೃತಿಯನ್ನು ಹಾಗೂ ಒಟ್ಟಾರೆ ದೇಹದಾಡ್ಯìವನ್ನು ಮರಳಿ ಗಳಿಸಿಕೊಳ್ಳಲು ಸಹಕರಿಸುತ್ತವೆ.
ಪ್ರಸವಾನಂತರದ ಯೋಗ ತರಗತಿಗಳು ಹೊಸ ತಾಯಿ ತನಗಾಗಿ ಸ್ವಲ್ಪ ಸಮಯವನ್ನು ಪಡೆಯಲು ಸಹಾಯ ಮಾಡುತ್ತದೆ. ಹೆರಿಗೆಯ ಬಳಿಕ ದೇಹದಲ್ಲಿ ಕಾಣಿಸಿಕೊಳ್ಳುವ ಬಿಗುವು, ಒತ್ತಡ, ನೋವುಗಳನ್ನು ಇಳಿಸುತ್ತದೆ. ದೇಹದ ಬಲವೃದ್ಧಿ, ತಾಳಿಕೊಳ್ಳುವ ಸಾಮರ್ಥ್ಯಗಳನ್ನೂ ವೃದ್ಧಿಸುತ್ತದೆ. ವಿಶ್ರಾಂತಿ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಹೆರಿಗೆಯ ಬಳಿಕ ಹೊಟ್ಟೆಯ ಆಳದಲ್ಲಿರುವ ಸ್ನಾಯುಗಳು ಬಲವೃದ್ಧಿ ಹೊಂದಿ “ದೇಹ ಮುಚ್ಚಿಕೊಳ್ಳಲು’ ಕೂಡ ಇವು ನೆರವಾಗುತ್ತವೆ. ಹೆಚ್ಚು ಆಯಾಸ ಉಂಟು ಮಾಡುವ ಯಾವುದೇ ವ್ಯಾಯಾಮ ಇಲ್ಲದೆಯೇ ಬಾಣಂತಿ ಕಾಲದ ಯೋಗಾಸನಗಳ ಮೂಲಕ ಇದನ್ನು ಸಾಧಿಸಬಹುದು. ಅಲ್ಲದೆ, ಭುಜ, ಕೊರಳು ಮತ್ತು ಬೆನ್ನಿನ ಮೇಲ್ಭಾಗದಲ್ಲಿ ಪೆಡಸುತನವನ್ನು ಪರಿಹರಿಸುತ್ತದೆ. ಪೆಲ್ವಿಕ್ ಪ್ರದೇಶದ ಸ್ನಾಯುಗಳ ಬಲವರ್ಧನೆಗೂ ನೆರವಾಗುತ್ತದೆ. ದೇಹವು ಮೂಲಸಾಮರ್ಥ್ಯವನ್ನು ಗಳಿಸಿಕೊಳ್ಳುವುದಕ್ಕಾಗಿ ಹೊಟ್ಟೆಯ ಭಾಗದ ಮತ್ತು ಬೆನ್ನಿನ ಸ್ನಾಯುಗಳ ಬಲವರ್ಧನೆಯಾಗುತ್ತದೆ.
ಉಸಿರಾಟವನ್ನು ವಿಸ್ತರಿಸುತ್ತದೆ ಮತ್ತು ಮನಸ್ಸನ್ನು ತಣಿಸುತ್ತದೆ. ದೇಹವು ನಮನೀಯತೆಯನ್ನು ಉಳಿಸಿಕೊಳ್ಳುವಂತೆ ಮಾಡುತ್ತದೆ. ದೇಹವು ಪುನರುಜ್ಜಿವನಗೊಳ್ಳುತ್ತಿರುವ ಅನುಭವವನ್ನು ಉಂಟು ಮಾಡುತ್ತದೆ. ಪ್ರತಿ ದಿನವೂ ದೇಹ ತನಗೆ ತಾನು ಚೈತನ್ಯವನ್ನು ಗಳಿಸಿಕೊಳ್ಳುವುದಕ್ಕೆ ಅಗತ್ಯವಾದ ಸಮಯ ಮತ್ತು ಸನ್ನಿವೇಶವನ್ನು ಒದಗಿಸುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ಪ್ರಸವಪೂರ್ವ ಯೋಗಾಭ್ಯಾಸದ ಪ್ರಯೋಜನಗಳು
ಪ್ರಸವಪೂರ್ವ ಯೋಗಾಭ್ಯಾಸವು ಗರ್ಭ ಧರಿಸಿದ ಅವಧಿಯಲ್ಲಿ ಮಹಿಳೆಯು ಅನುಸರಿಸಲು ಯೋಗ್ಯವಾದ ಆರೋಗ್ಯಪೂರ್ಣ ಅಭ್ಯಾಸವಾಗಿದೆ. ಪ್ರಸವಪೂರ್ವ ಯೋಗಾಭ್ಯಾಸವು ಮಹಿಳೆಯ ಬದುಕಿನಲ್ಲಿ ಅತ್ಯಂತ ಮಹತ್ವದ್ದಾಗಿರುವ ಆ ಒಂಬತ್ತು ತಿಂಗಳುಗಳ ಅವಧಿಯಲ್ಲಿ ಅತ್ಯುತ್ತಮ ಆರೋಗ್ಯವನ್ನು ಹೊಂದಿ, ಚೆನ್ನಾಗಿರುವಂತೆ ಮಾಡುವ ಯಾವ ನಿರ್ದಿಷ್ಟ ಪ್ರಯೋಜನಗಳನ್ನು ಉಂಟು ಮಾಡುತ್ತದೆ?
ಮೊತ್ತಮೊದಲನೆಯದಾಗಿ, ಗರ್ಭಧಾರಣೆಯ ಅವಧಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಸವಾಲಿನ ಕೆಲಸ. ಈ ಸಮಯದಲ್ಲಿ ತಾಯಿ ಮತ್ತು ಶಿಶು – ಇಬ್ಬರೂ ಉತ್ಕೃಷ್ಟ ಆರೋಗ್ಯ ಸ್ಥಿತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಗರ್ಭಿಣಿಯು ಸೂಕ್ತವಾದ ವ್ಯಾಯಾಮಗಳನ್ನು ಮಾಡುವುದು ಅತ್ಯಗತ್ಯವಾಗಿದೆ. ಯೋಗಾಭ್ಯಾಸವು ಆಸನಗಳೆಂದು ಕರೆಯಲ್ಪಡುವ ದೇಹಭಂಗಿಗಳು, ಪ್ರಾಣಾಯಾಮ ಎಂಬ ಉಸಿರಾಟ ತಂತ್ರಗಳು ಹಾಗೂ ಧ್ಯಾನ ಮತ್ತು ವಿಶ್ರಾಂತಿಯನ್ನು ಒಳಗೊಂಡಿದೆ. ಈ ಎಲ್ಲ ಆಯಾಮಗಳೊಂದಿಗೆ ಯೋಗವು ದೇಹವನ್ನು ಸದೃಢಗೊಳಿಸುತ್ತದೆ, ದೇಹದಲ್ಲಿ ಶಕ್ತಿಯ ಹರಿವನ್ನು ಸರಿಪಡಿಸುತ್ತದೆ. ಅಲ್ಲದೆ ದೇಹ ಮತ್ತು ಮನಸ್ಸುಗಳು ಏಕರೇಖಾತ್ಮಕವಾಗುವ ಮೂಲಕ ಆಕೆಯ ದೇಹವು ಸರಿಯಾದ ಚಲನೆ ಮತ್ತು ಚಟುವಟಿಕೆಗಳನ್ನು ನಡೆಸುವಂತೆ ಮಾರ್ಗದರ್ಶನ ಮಾಡಲು ನೆರವಾಗುತ್ತದೆ.
ಗರ್ಭಿಣಿಯಾಗಿರುವ ಅವಧಿಯಲ್ಲಿ ವಿವಿಧ ಅಂಶಗಳಿಂದ ಉಂಟಾಗುವ ಆತಂಕ ಮತ್ತು ಒತ್ತಡಗಳು ಗರ್ಭಿಣಿಗೆ ಮತ್ತು ಆಕೆಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಯನ್ನು ಉಂಟು ಮಾಡುವ ಅಪಾಯವಿದೆ. ಯೋಗವು ಒಳ್ಳೆಯ ನಿದ್ದೆಯನ್ನು ಉದ್ದೀಪಿಸುವ ಮೂಲಕ ಒತ್ತಡ ಮತ್ತು ಆತಂಕಗಳನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರಸವಪೂರ್ವ ಯೋಗವು ಮಗುವನ್ನು ಸುಸೂತ್ರವಾಗಿ ಹೆರುವುದಕ್ಕೆ ಅಗತ್ಯವಾದ ಸಾಮರ್ಥ್ಯ, ನಮನೀಯತೆ ಮತ್ತು ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ. ಕೆಳಬೆನ್ನಿನ ನೋವು, ಹೊಟ್ಟೆ ತೊಳೆಸುವಿಕೆ, ಕಾರ್ಪಲ್ ಟನೆಲ್ ಸಿಂಡ್ರೋಮ್ ಲಕ್ಷಣಗಳು, ತಲೆನೋವು ಮತ್ತು ಉಸಿರುಗಟ್ಟಿದ ಅನುಭವಗಳನ್ನು ಕಡಿಮೆ ಮಾಡುತ್ತದೆ. ಇತರ ಗರ್ಭಿಣಿ ಮಹಿಳೆಯರ ಭೇಟಿ, ಗೆಳೆತನವನ್ನೂ ಪ್ರಸವಪೂರ್ವ ಯೋಗ ಸಾಧ್ಯವಾಗಿಸುತ್ತದೆ.
ಶಿಶುವಿಗೆ ಅಗತ್ಯ ಅವಕಾಶವನ್ನು ಸೃಷ್ಟಿಸುವ, ಗರ್ಭ ಮತ್ತು ಪೆಲ್ವಿಕ್ ಪ್ರದೇಶಕ್ಕೆ ಸಮರ್ಪಕ ರಕ್ತ ಸರಬರಾಜು ಆಗುವಂತೆ ಮಾಡುವ ಹಾಗೂ ಗರ್ಭಧಾರಣೆಯಿಂದ ಉಂಟಾಗಬಲ್ಲ ಸಮಸ್ಯೆಗಳನ್ನು ಕಡಿಮೆ ಮಾಡಬಲ್ಲ ಯೋಗಾಸನಗಳತ್ತ ಪ್ರಸವಪೂರ್ವ ಯೋಗ ತರಗತಿಗಳು ಗಮನ ಕೇಂದ್ರೀಕರಿಸುತ್ತವೆ. ಅದು ಉಸಿರಾಟದ ಬಗ್ಗೆ ಅರಿವನ್ನು ಹೆಚ್ಚಿಸುತ್ತದೆ, ಸುಖ ಪ್ರಸೂತಿ ಮತ್ತು ಪ್ರಸವಕ್ಕೆ ಅತ್ಯುತ್ತಮವಾಗಿದೆ. ಈ ತರಗತಿಗಳಲ್ಲಿ ನಡೆಸುವ ಪ್ರಾಣಾಯಾಮ ಅಭ್ಯಾಸಗಳಿಂದ ಗರ್ಭಧಾರಣೆಯ ವಿವಿಧ ಹಂತಗಳಲ್ಲಿ ಉಂಟಾಗಬಲ್ಲ ತೊಂದರೆಗಳು ಕಡಿಮೆಯಾಗುತ್ತವೆ.
ಗರ್ಭ ಧರಿಸಿದ ಅವಧಿಯಲ್ಲಿ ಪ್ರಾಣಾಯಾಮ
ಪ್ರಾಣಾಯಾಮದಿಂದ ಮನಸ್ಸು ಮತ್ತು ದೇಹದಲ್ಲಿ ಶಿಸ್ತು, ಚೈತನ್ಯ ಉಂಟಾಗುತ್ತವೆ. ಆಲೋಚನೆಗಳು ಕಡಿಮೆಯಾಗಿ ಮನಸ್ಸಿಗೆ ಏಕಾಗ್ರತೆ ಲಭಿಸುತ್ತದೆ. ದೇಹ ಮತ್ತು ಮನಸ್ಸುಗಳು ಪ್ರಾಣಾಯಾಮದ ಮೂಲಕ ತಣಿಯುತ್ತವೆ. ಒತ್ತಡ ಮತ್ತು ಉದ್ವಿಗ್ನಗಳನ್ನು ಕಡಿಮೆ ಮಾಡುತ್ತದೆ.
ಪ್ರಸವಪೂರ್ವ ಯೋಗ ತರಗತಿಗಳನ್ನು ಆಯ್ಕೆ ಮಾಡಿಕೊಂಡು, ಯೋಗಾಸನಗಳನ್ನು ಕಲಿತು, ಅಭ್ಯಸಿಸುವುದರಿಂದ ಅನೇಕ ಪ್ರಯೋಜನಗಳಿವೆ. ಗರ್ಭಿಣಿ ಮಹಿಳೆಗೆಂದೇ ವಿನ್ಯಾಸ ಮಾಡಲಾದ ತರಗತಿಗಳಲ್ಲಿ ಅಭ್ಯಸಿಸುವುದು ಅತ್ಯಂತ ಸುರಕ್ಷಿತ. ಪ್ರಮಾಣೀಕೃತ ಪ್ರಸವಪೂರ್ವ ಯೋಗ ಗುರುಗಳು ಗರ್ಭಿಣಿ ಮಹಿಳೆಯ ದೇಹಕ್ಕೆ ಯಾವ ಆಸನಗಳು ಪ್ರಯೋಜನಕಾರಿ ಎಂಬ ಮಾಹಿತಿಯನ್ನು ಹೊಂದಿರುವುದರಿಂದ ಅವರ ಬಳಿಯೇ ಅಭ್ಯಾಸ ಮಾಡುವುದು ಅತ್ಯಂತ ಮುಖ್ಯ.
ಮೈತ್ರಿ ಮಹಾವೀರ್
ಸರ್ಟಿಫೈಡ್ ಇನ್ ಪ್ರಿನೇಟಲ್ ಆ್ಯಂಡ್ ಪೋಸ್ಟ್ ನೇಟಲ್ ಯೋಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.