Tomato: ದರ ಇಳಿಕೆ – ಇಳುವರಿ ಹೆಚ್ಚಳ, ರಾಜ್ಯದಲ್ಲಿ ಸರಾಸರಿ 40-50 ರೂ.ಗೆ ಕುಸಿದ ಬೆಲೆ
Team Udayavani, Aug 14, 2023, 5:51 AM IST
ದಾವಣಗೆರೆ: ದಾಖಲೆಯ ದರ (ದ್ವಿಶತಕದ ಸಮೀಪ ಕೆಜಿಗೆ 150-180 ರೂ.)ಕ್ಕೆ ತಲುಪಿ ಕೈಗೆಟುಕದ ಹುಳಿ ದ್ರಾಕ್ಷಿಯಂತಾಗಿದ್ದ ಬಡವರ ಸೇಬು, ಕೆಂಪು ಸುಂದರಿ ಖ್ಯಾತಿಯ ಟೊಮಾಟೊ ಈಗ ಮತ್ತೆ ಬೆಲೆ ಇಳಿಸಿ ಬಡವರ ಕೈಗೆ ನಿಲುಕುವಂತಾಗಿದೆ.
ಶನಿವಾರ ಬಾಗೇಪಲ್ಲಿ ಮಾರುಕಟ್ಟೆಯಲ್ಲಿ ಟೊಮೇಟೊ ಕ್ವಿಂಟಾಲ್‌ಗೆ ಕನಿಷ್ಠ 300 ರೂ., ಗರಿಷ್ಠ 750 ರೂ. ಹಾಗೂ ಮಾದರಿ ದರ 500 ರೂ.ಗೆ ಕುಸಿದಿದೆ. ದರ ಕುಸಿತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆಯಾದರೂ ಗ್ರಾಹಕರಿಗೆ ಖುಷಿ ಕೊಡುತ್ತಿದೆ.
10 ದಿನಗಳ ಹಿಂದಿನವರೆಗೂ ಶತಕ ದಾಟಿಯೇ ಇದ್ದ ಟೊಮೇಟೊ ದರ ನಾಲ್ಕೈದು ದಿನಗಳಿಂದ ಕೆಜಿಗೆ 90 ರೂ., 70 ರೂ., 60 ರೂ. ಹೀಗೆ ಕಡಿಮೆಯಾಗುತ್ತ ಬಂದಿದ್ದು, ಶನಿವಾರದ ಭಾರೀ ಕುಸಿತ ಕಂಡಿದೆ. ಬಾಗೇಪಲ್ಲಿ ಮಾರುಕಟ್ಟೆಗೆ ಶನಿವಾರ 560 ಕ್ವಿಂಟಾಲ್ ಟೊಮೇಟೊ ಆವಕವಾಗಿದ್ದು, ಇಲ್ಲಿಯ ದರ ರಾಜ್ಯದಲ್ಲಿಯೇ ಅತಿ ಕನಿಷ್ಠ ಎನಿಸಿದೆ.
ಉಳಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಾಗಿರುವ ಕೋಲಾರಕ್ಕೆ ಶನಿವಾರ 12,750 ಕ್ವಿಂಟಾಲ್ ಟೊಮೇಟೊ ಆವಕವಾಗಿದ್ದು ಇಲ್ಲಿ ಕನಿಷ್ಠ 2000 ರೂ., ಗರಿಷ್ಠ 6,000 ರೂ. ಹಾಗೂ ಮಾದರಿ ದರ 3,470 ರೂ. ದಾಖಲಾಗಿದೆ. ಚಿಂತಾಮಣಿ ಮಾರುಕಟ್ಟೆಗೆ 2,420 ಕ್ವಿಂಟಾಲ್ ಟೊಮೇಟೊ ಆವಕವಾಗಿದ್ದು, ಕನಿಷ್ಠ ದರ 1,330, ಗರಿಷ್ಠ , 4, 660, ಮಾದರಿ ದರ 3,000 ರೂ. ಆಗಿತ್ತು. ಚಾಮರಾಜನಗರ ಹಾಗೂ ಹೊಸಪೇಟೆ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್‌ಗೆ ಸರಾಸರಿ 5000 ರೂ. ದರದಲ್ಲಿ ಮಾರಾಟವಾಗಿದೆ.
ರಾಜ್ಯದ ಬೆಳಗಾವಿ, ಬೆಂಗಳೂರು, ಕೊಪ್ಪ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್‌ಗೆ ಸರಾಸರಿ 6,000-7,000 ರೂ. ಇದ್ದರೆ, ಉಳಿದ ಕೆಲವು ಜಿಲ್ಲೆಗಳಲ್ಲಿ ಸರಾಸರಿ 3,500-4,500 ರೂ., ಇನ್ನು ಕೆಲವು ಜಿಲ್ಲೆಗಳಲ್ಲಿ 2,500-3,000 ರೂ.ಗಳ ದರ ತಲುಪಿದ್ದು, ರಾಜ್ಯದಲ್ಲಿ ಟೊಮೇಟೊ ದರ ಸರಾಸರಿ 4,000-5,000 ರೂ.ಗೆ ಇಳಿದಿದೆ.
ಕೃಷಿಕರಲ್ಲಿ ಆತಂಕ
ದರ ಗಗನಕ್ಕೇರಿದಾಗ ಇದ್ದ ಟೊಮೇಟೊ ಮಾರಿ ಲಕ್ಷಾಧಿಪತಿ, ಕೋಟ್ಯಧಿಪತಿಗಳಾದವರು ಕೆಲವರು. ಅದೇ ದರದ ಆಸೆಗೆ ಬಿದ್ದು ಅನೇಕರು ಟೊಮೇಟೊ ಬೆಳೆಸಿದರು. ಈಗ ದರ ಕುಸಿಯುತ್ತಿದ್ದಂತೆ ರೈತರಲ್ಲಿ ಆತಂಕ ಮೂಡಿದೆ.
ಗ್ರಾಹಕರಿಗಿಲ್ಲ ಇಳಿಕೆ ಲಾಭ
ಮಾರುಕಟ್ಟೆಗಳಲ್ಲಿ ದರ ಗಣನೀಯವಾಗಿ ಇಳಿಕೆ ಕಂಡಿದ್ದರೂ ಅದರ ಸಂಪೂರ್ಣ ಲಾಭ ಗ್ರಾಹಕರಿಗೆ ಇನ್ನೂ ತಲುಪಿಲ್ಲ. ದಾವಣಗೆರೆ, ಶಿವಮೊಗ್ಗ , ಚಿಕ್ಕಮಗಳೂರು, ಬೆಳಗಾವಿ, ಬೆಂಗಳೂರು ಸಹಿತ ರಾಜ್ಯದ ಮಹಾನಗರಗಳು, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಟೊಮೇಟೊ ದರ ಸರಾಸರಿ 50-80 ರೂ.ವರೆಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ದರ ಇಳಿಕೆ ಲಾಭ ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳ ಪಾಲಾಗುತ್ತಿದೆ.
ದರ ಕುಸಿದಿದ್ದು ಯಾಕೆ?
ಮಳೆ ಕಡಿಮೆಯಾಗಿ ಬಿಸಿಲು ಬೀಳುತ್ತಿರುವುದರಿಂದ ಸ್ಥಳೀಯವಾಗಿ ಬೆಳೆದ ಟೊಮೇಟೊ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಇನ್ನು ಉತ್ತರ ಭಾರತದ ರಾಜ್ಯಗಳಿಗೆ ಹಿಮಾಚಲ ಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಬರುತ್ತಿರುವುದರಿಂದ ರಾಜ್ಯದಿಂದ ಉತ್ತರ ಭಾರತಕ್ಕೆ ಹೋಗುವ ಟೊಮೇಟೊ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಇಳುವರಿ ಬರುತ್ತಿರುವುದರಿಂದ ದರ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.