ತುಪ್ಪರಿಹಳ್ಳದ ಪ್ರವಾಹ ನೀರು ಬಳಕೆ : ಸರಕಾರದ ಮಹತ್ವದ ಹೆಜ್ಜೆ
Team Udayavani, Feb 23, 2022, 7:06 PM IST
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ರೈತರು ಹಾಗೂ ಹಲವು ಗ್ರಾಮಗಳವರಿಗೆ ತುಪ್ಪರಿಹಳ್ಳ ಪ್ರವಾಹ ರೂಪದಲ್ಲಿ ಕಾಡತೊಡಗಿದೆ. ಹಳ್ಳದ ಪ್ರವಾಹ ಕಟ್ಟಿ ಹಾಕಲು, ಕೃಷಿ ಹಾಗೂ ಕುಡಿಯುವ ನೀರು ಬಳಕೆಗೆ ಪೂರಕವಾಗಿ ಹಳ್ಳ ವ್ಯಾಪ್ತಿಯ ಸಮೀಕ್ಷೆ, ಪ್ರವಾಹ ನಿಯಂತ್ರಣ-ನಿರ್ವಹಣೆ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ.
ಬೆಣ್ಣಿಹಳ್ಳದ ಪ್ರಮುಖ ಉಪ ಹಳ್ಳವಾಗಿರುವ ತುಪ್ಪರಿ ಹಳ್ಳ ಕೃಷಿ-ಕುಡಿಯುವ ನೀರಿನ ಉದ್ದೇಶದಿಂದ ತನ್ನದೇ ಮಹತ್ವ ಹೊಂದಿದೆ. ಜತೆಗೆ ಪ್ರವಾಹ ಸಂಕಷ್ಟ ತಂದೊಡ್ಡಲು, ಬೆಣ್ಣಿಹಳ್ಳದ ಪ್ರವಾಹ ಹೆಚ್ಚಲು ತನ್ನದೇ ಕೊಡುಗೆ ನೀಡತೊಡಗಿದೆ. ಬೆಣ್ಣಿಹಳ್ಳ, ವಿಜಯಪುರ ಜಿಲ್ಲೆಯ ದೋಣಿ ನದಿ ಪ್ರವಾಹ ನಿರ್ವಹಣೆ ನಿಟ್ಟಿನಲ್ಲಿ ಸರಕಾರ ಮಟ್ಟದಲ್ಲಿನ ಯತ್ನ ಇದೀಗ ತುಪ್ಪರಿ ಹಳ್ಳದ ಪ್ರವಾಹ ನಿಯಂತ್ರಣ-ನಿರ್ವಹಣೆ ಸಾಕಾರ ರೂಪ ಪಡೆದುಕೊಳ್ಳತೊಡಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ತುಪ್ಪರಿಹಳ್ಳದ ಪ್ರವಾಹ ಪ್ರಮಾಣ ಹೆಚ್ಚತೊಡಗಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮಳೆ ಪ್ರಮಾಣ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಹಳ್ಳದ ಒತ್ತುವರಿ, ಹೂಳು ತೆಗೆಯದಿರುವುದು, ನೀರಿನ ಸರಾಗ ಹರಿವಿಗೆ ಅಡ್ಡಿ ಆಗುತ್ತಿರುವುದು ಸೇರಿದಂತೆ ವಿವಿಧ ಅಂಶಗಳು ಪ್ರವಾಹ ಸ್ಥಿತಿ ಬಿಗಡಾಯಿಸುವಂತೆ ಮಾಡತೊಡಗಿವೆ. ತುಪ್ಪರಿಹಳ್ಳ ಪ್ರವಾಹದಿಂದ ನೂರಾರು ಎಕರೆ ಕೃಷಿ ಭೂಮಿ, ಹತ್ತಾರು ಹಳ್ಳಿಗಳು ಸಮಸ್ಯೆಗೀಡಾಗುತ್ತಿವೆ. ಪ್ರವಾಹಕ್ಕೆ ಸಿಲುಕಿ ಜನ-ಜಾನುವಾರು ಬಲಿಯಾಗಿದ್ದು ಇದೆ. ತುಪ್ಪರಿ-ಬೆಣ್ಣಿ ಹಳ್ಳಗಳ ಪ್ರವಾಹ ತಡೆಗೆ ಅಗತ್ಯ ಕ್ರಮದ ಬೇಡಿಕೆ ಹಾಗೂ ಒತ್ತಾಯ ಅನೇಕ ವರ್ಷಗಳಿಂದ ಇದೆ.
ಬೆಣ್ಣಿಹಳ್ಳ-ದೋಣಿ ನದಿ ಪ್ರವಾಹ ತಡೆ ನಿಟ್ಟಿನಲ್ಲಿ ಸರಕಾರ ಈ ಹಿಂದೆ ಹಿರಿಯ ಇಂಜನಿಯರ್ ಪರಮಶಿವಯ್ಯ ಅವರ ನೇತೃತ್ವದ ಸಮಿತಿ ರಚಿಸಿತ್ತು. ಸಮಿತಿ ಬೆಣ್ಣಿಹಳ್ಳ ಅದರ ಉಪ ಹಳ್ಳಗಳಾದ ತುಪ್ಪರಿಹಳ್ಳದ ಜತೆಗೆ ವಿಜಯಪುರ ಜಿಲ್ಲೆಯಲ್ಲಿನ ದೋಣಿ ನದಿ ಕುರಿತಾಗಿ ಅಧ್ಯಯನ ನಡೆಸಿ ಸರಕಾರಕ್ಕೆ 2012ರಲ್ಲಿ ಎರಡು ವರದಿಗಳನ್ನು ಸಲ್ಲಿಸಿತ್ತು. ನಂತರ ಅದರ ಮೇಲೆ ಹೆಚ್ಚಿನ ಬೆಳಕು ಚೆಲ್ಲುವ, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಕಾರ್ಯಗಳಾಗಿರಲಿಲ್ಲ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ತುಪ್ಪರಿಹಳ್ಳದ ಪ್ರವಾಹ ತಡೆ ಪರಿಹಾರ ಯೋಜನೆ ಚಾಲನೆ ಪಡೆದುಕೊಂಡಿದೆ.
49 ಉಪ ನಾಲಾ ಹೊಂದಿರುವ ತುಪ್ಪರಿಹಳ್ಳ:
ಬೆಣ್ಣಿಹಳ್ಳದ ಪ್ರವಾಹ ಹೆಚ್ಚಳಕ್ಕೆ ಪ್ರಮುಖ ಪಾಲು ನೀಡುವ ತುಪ್ಪರಿ ಹಳ್ಳ ಬೆಳಗಾವಿ ಜಿಲ್ಲೆಯ ಅವರಾದಿ ಗ್ರಾಮದ ಬಳಿ ಜನಿಸುತ್ತಿದ್ದು, ಅಲ್ಲಿಂದ ಸುಮಾರು 95 ಕಿ.ಮೀ. ಉದ್ದ ಹರಿಯುತ್ತಿದ್ದು, ಧಾರವಾಡ ಜಿಲ್ಲೆಯ ನವಲಗುಂದ ಬಳಿ ಬೆಣ್ಣಿಹಳ್ಳ ಸೇರುತ್ತದೆ. ಹಳ್ಳ ಸುಮಾರು 1,288.60 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ತುಪ್ಪರಿ ಹಳ್ಳದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ವಾರ್ಷಿಕ ಸರಾಸರಿ 694.4 ಮಿ.ಮೀ.ನಷ್ಟು ಮಳೆ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಜೂನ್ ನಿಂದ ನವೆಂಬರ್ ಒಳಗಾಗಿಯೇ ಸರಾಸರಿ 572.3 ಮಿ.ಮೀ.ಮಳೆ ಬೀಳುತ್ತದೆ. ತುಪ್ಪರಿ ಹಳ್ಳಕ್ಕೆ ಚಿಕ್ಕ ಹಳ್ಳ, ಕಲ್ಲಹಳ್ಳ, ಬನ್ನಿಹಳ್ಳ, ಹುಣಸಿಕಟ್ಟೆಹಳ್ಳ, ಗದ್ಯಾಹಳ್ಳ ಪ್ರಮುಖ ಐದು ನಾಲಾಗಳಲ್ಲದೆ ಸುಮಾರು 49 ಕಿರು ನಾಲಾಗಳು ಸೇರುತ್ತವೆ. ತುಪ್ಪರಿಹಳ್ಳ ವ್ಯಾಪ್ತಿಯಲ್ಲಿ ಕಳೆದ 23-25 ವರ್ಷಗಳ ಅವಧಿಯಲ್ಲಿ ಬಿದ್ದ ಸರಾಸರಿ ಮಳೆ, ಉಂಟಾದ ಪ್ರವಾಹ ಅಧ್ಯಯನ ಹಿನ್ನೆಲೆಯಲ್ಲಿ ಸುಮಾರು 1.89 ಟಿಎಂಸಿ ಅಡಿಯಷ್ಟು ನೀರು ದೊರೆಯಬಹುದೆಂದು ಅಂದಾಜಿಸಲಾಗಿದೆ.
ಮಳೆಗಾಲ ವೇಳೆ ತುಪ್ಪರಿಹಳ್ಳದ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬಿದ್ದರೆ ಸಾಕು ಹಳ್ಳ ಪಾತ್ರದ ಕೃಷಿ ಭೂಮಿ ಜಲಾಗೃತವಾಗುತ್ತದೆ. ಅನೇಕ ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತವೆ. ಗ್ರಾಮದೊಳಗೆ ನೀರು ನುಗ್ಗುತ್ತದೆ. ಕೆಲವೇ ದಿನಗಳವರೆಗೆ ತನ್ನ ರುದ್ರನರ್ತನ ತೋರುವ ತುಪ್ಪರಿಹಳ್ಳ ನಂತರ ಶಾಂತವಾಗಿ ಬಿಡುತ್ತದೆ. ತುಪ್ಪರಿ ಹಳ್ಳದ ತಟದಲ್ಲಿ ಬರುವ ಗರಗ, ಕಬ್ಬೇನೂರ, ಉಪ್ಪಿನಬೆಟಗೇರಿ, ಹಂಗರಕಿ, ಇನಾಮಹೊಂಗಲ, ಹಾರೋಬೆಳವಡಿ, ಶಿರೂರು, ಗುಮಗೋಳ, ಮೊರಬ, ಶಿರೊಳ, ಹಳೇಕುಸುಗಲ್ಲ, ಅಳಗವಾಡಿ ಇನ್ನಿತರೆ ಗ್ರಾಮಗಳು ತುಪ್ಪರಿಹಳ್ಳದ ಪ್ರವಾಹ ಸಂಕಷ್ಟ ಅನುಭವಿಸಬೇಕಾಗಿದೆ. ಎರಡು ವರ್ಷಗಳ ಹಿಂದೆ ಪ್ರವಾಹ ಸಂದರ್ಭದಲ್ಲಿ ಪರಿಹಾರ ಕಾರ್ಯಕ್ಕೆಂದು ತೆರಳಿದ್ದ ಧಾರವಾಡದ ಉಪವಿಭಾಗಾಧಿಕಾರಿ,
ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ದಳದವರು, ರೈತರು ಸೇರಿದಂತೆ ಕೆಲವರು ಸಂಜೆ ವೇಳೆಗೆ ಇದೇ ತುಪ್ಪರಿಹಳ್ಳದ ಪ್ರವಾಹದಲ್ಲಿ ಸಿಲುಕಿ ಆತಂಕದ ಸ್ಥಿತಿ ಸೃಷ್ಟಿಯಾಗಿತ್ತು. ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಕರೆತರಲಾಗಿತ್ತು.
ಪರಮಶಿವಯ್ಯ ಅವರ ವರದಿ ಹಾಗೂ ಕೇಂದ್ರದ ಸೂಚನೆ ಮೇರೆಗೆ ಬೆಣ್ಣಿಹಳ್ಳ ಹಾಗೂ ದೋಣಿ ನದಿಯನ್ನು ಬೃಹತ್ ನೀರಾವರಿ ಯೋಜನೆ ವ್ಯಾಪ್ತಿಗೆ ತರುವ ಕೆಲಸ ಆಗಿದ್ದು, ಬೆಣ್ಣಿಹಳ್ಳದ ಪ್ರಮುಖ ಉಪ ಹಳ್ಳ ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆ ಯೋಜನೆ ಮಹತ್ವದ ಘಟ್ಟ ತಲುಪಿದೆ. ಧಾರವಾಡ ಜಿಲ್ಲೆಯ ಶಾಸಕರು, ಸಂಸದರು ತೋರಿದ ಇಚ್ಛಾಶಕ್ತಿ, ಸರಕಾರದ ಸ್ಪಂದನೆ ಫಲವಾಗಿ ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣ ಜತೆಗೆ ಹಂಚಿಕೆಯಾದ ನೀರಿನ ಬಳಕೆಗೆ ಮಹತ್ವದ ಹೆಜ್ಜೆ ಇರಿಸಲಾಗಿದೆ. ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ
ನಿರ್ವಹಣೆ ಜತೆಗೆ ದೊರೆಯುವ ನೀರನ್ನು ಕೃಷಿ-ಕುಡಿಯುವ ನೀರಿನ ಬಳಕೆಗೆ ಸರಕಾರ ಅಂದಾಜು 312 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ಮಂಜೂರಾತಿಯೂ ದೊರೆತಿದೆ. ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದ್ದು, ಪ್ರವಾಹ ತಡೆ ನಿಟ್ಟಿನಲ್ಲಿ ಕಾಮಗಾರಿ ಆರಂಭ ಹಾಗೂ ದೊರೆಯುವ ನೀರಿನ ಬಳಕೆಯ ಆಶಾಭಾವನೆ ಗೋಚರಿಸತೊಡಗಿದೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.