ಉದನೆ ಸೇತುವೆ ಬಹುತೇಕ ಪೂರ್ಣ; ರಸ್ತೆಯದ್ದೇ ಗೋಳು
Team Udayavani, May 1, 2021, 2:22 AM IST
ಸುಬ್ರಹ್ಮಣ್ಯ: ಕಡಬ ತಾಲೂಕಿನ ಪುತ್ತಿಗೆ ಗ್ರಾಮದ ಉದನೆ ಎಂಬಲ್ಲಿ ಗುಂಡ್ಯ ಹೊಳೆಗೆ ಜನರ ಬಹುಕಾಲದ ಬೇಡಿಕೆಯಂತೆ ಸೇತುವೆ ನಿರ್ಮಾಗೊಳ್ಳುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರಿಂದಾಗಿ ಶಿರಾಡಿ, ಗುಂಡ್ಯ, ಉದನೆ, ಶಿಬಾಜೆ, ಸಿರಿಬಾಗಿಲು ಭಾಗದ ಜನರು ತಾಲೂಕು ಕೇಂದ್ರ ಕಡಬ ಪಟ್ಟಣವನ್ನು ಅತೀ ಸುಲಭವಾಗಿ ಸಂಪರ್ಕಿಸಬಹುದು.
ಸೇತುವೆಯ ಮೇಲ್ಭಾಗಕ್ಕೆ ಕಾಂಕ್ರೀಟ್ ಹಾಕಲಾಗಿದ್ದು, ತಡೆ ಬೇಲಿ ಪೂರ್ಣ ಗೊಂಡಿದೆ. ಇನ್ನು ಎರಡು ಭಾಗದ ರಸ್ತೆ ಕಾಮಗಾರಿ ನಡೆದಲ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ ಉದನೆ ಯಿಂದ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಉದನೆ- ಕಲ್ಲುಗುಡ್ಡೆ ಮತ್ತು ಉದನೆಕೊಣಾಜೆ ರಸ್ತೆ ಮಾತ್ರ ತೀರಾ ಶೋಚನೀಯ ಸ್ಥಿತಿಯಲ್ಲಿದೆ.
ರಸ್ತೆ ದುರಸ್ತಿಗೊಂಡಿಲ್ಲ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಪೇಟೆಯಿಂದ ಕಡಬವನ್ನು ಹತ್ತಿರದಿಂದ ಸಂಪರ್ಕಿಸಲು ಉದನೆ ಸೇತುವೆ ನಿರ್ಮಿಸಲಾಗುತ್ತಿದೆ. ಈ ಭಾಗದಿಂದ ಕಡಬವನ್ನು ಸಂಪರ್ಕಿಸಲು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಥವಾ ಕಡ್ಯ ಕೊಣಾಜೆ ಗ್ರಾಮದ ಮೂಲಕ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕಿದೆ. ಕಲ್ಲುಗುಡ್ಡೆ ಮೂಲಕ ರಸ್ತೆ ಸಂಪರ್ಕವಿದೆ.ಆದರೆ ಡಾಮರು ಕಿತ್ತು ಹೋಗಿ ರಸ್ತೆ ದುಸ್ತರಗೊಂಡಿದೆ. ನೂಜಿಬಾಳ್ತಿಲ ಗ್ರಾಮದ ಹಲವೆಡೆ ಇಂದಿಗೂ ರಸ್ತೆಗೆ ಡಾಮರು, ಕಾಂಕ್ರೀಟ್ ನಿರ್ಮಾಣವಾಗದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಕಡ್ಯ ಕೊಣಾಜೆ ಪೇಟೆಯನ್ನು ಸಂಪರ್ಕಿಸಲು ಪುತ್ತಿಗೆ ಗ್ರಾಮದ ಮೂಲಕ ರಸ್ತೆಯಿದ್ದು, ಅದೂ ಸಮಪರ್ಕವಾಗಿಲ್ಲ. ಮಣ್ಣಿನ ರಸ್ತೆಯಾಗಿರುವ ಇಲ್ಲಿ ಕೆಲವೆಡೆ ಕಾಂಕ್ರೀಟ್ ಹಾಕಲಾಗಿದೆ. ಎರಡೂ ಕಡೆಗಳಲ್ಲಿಯೂ ರಸ್ತೆ ಅಭಿವೃದ್ಧಿ ಅತೀ ಅಗತ್ಯವಾಗಿದೆ. ಪುತ್ತಿಗೆ ಭಾಗದವರಿಗೆ ಕಡ್ಯ ಕೊಣಾಜೆ ಸಂಪರ್ಕಿಸಲು ಪುತ್ತಿಗೆ ರಸ್ತೆ ಅತೀ ಅವಶ್ಯಕ.
ಬೆಂಗಳೂರು ಸಂಪರ್ಕಕ್ಕೆ ಹತ್ತಿರ ದಾರಿ
ಉದನೆಯಲ್ಲಿ ಸೇತುವೆ ಹಲವಾರು ಪ್ರಯೋಜನಗಳಿಗೆ ದಾರಿಯಾಗಲಿವೆ.
ಕಳಾರ-ಕನ್ವಾರೆ-ಕಲ್ಲುಗುಡ್ಡೆ- ಉದನೆ- ಶಿಬಾಜೆ ರಸ್ತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದು, ಈ ರಸ್ತೆ ಅಭಿವೃದ್ಧಿಗೆ ಅನುದಾನವೂ ಮಂಜೂರಾಗಿದೆ. ಶೀಘ್ರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಉದನೆ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
-ಪಿ.ಪಿ.ವರ್ಗೀಸ್, ಜಿಲ್ಲಾ ಪಂಚಾಯತ್ ಸದಸ್ಯರು, ಕಡಬ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.