Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ
ಎರಡು ಸಲ ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದ ಕ್ಷೇತ್ರ
Team Udayavani, Mar 19, 2024, 7:30 AM IST
ಉಡುಪಿ: ಕರಾವಳಿ ಹಾಗೂ ಮಲೆನಾಡಿನ ಸಮ್ಮಿಶ್ರಣ ಕ್ಷೇತ್ರವಾದ ಉಡುಪಿ-ಚಿಕ್ಕಮಗಳೂರು ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ, ವೈವಿಧ್ಯ ಭಾಷೆಗಳ ಸಂಗಮ. ಈ ಕ್ಷೇತ್ರ ರಚನೆಯಾದಂದಿನಿಂದಲೂ ಇದು ಬಿಜೆಪಿಯ ಭದ್ರಕೋಟೆ.
ಕ್ಷೇತ್ರದ ಇತ್ತೀಚಿನ ಇತಿಹಾಸ ನೋಡಿದರೆ, ಕ್ಷೇತ್ರ ಪುನರ್ ವಿಂಗಡನೆಯ ಬಳಿಕ 2009ರಿಂದ 2019ರ ವರೆಗೆ ಇದು ಮೂರು ಸಾರ್ವತ್ರಿಕ ಚುನಾವಣೆ ಹಾಗೂ 1 ಉಪ ಚುನಾವಣೆಯನ್ನು ಕಂಡಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ.
ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರವು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಿಲ್ಲವ, ಬಂಟ, ಮೊಗವೀರ, ಒಕ್ಕಲಿಗ ಹಾಗೂ ಅಲ್ಪಸಂಖ್ಯಾಕರ ಮತಗಳು ನಿರ್ಣಾಯಕವೆ.
2019ರಲ್ಲಿ ಉಡುಪಿ ಜಿಲ್ಲೆಯ ನಾಲ್ಕು ಸ್ಥಾನ ಬಿಜೆಪಿಯ ವಶದಲ್ಲಿತ್ತು. ಈಗಲೂ ಅಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಆದರೆ ಚಿಕ್ಕಮಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಪರಿಸ್ಥಿತಿ ಬದಲಾಗಿದೆ. 2019ರಲ್ಲಿ ಚಿಕ್ಕಮಗಳೂರು, ತರೀಕೆರೆ ಹಾಗೂ ಮೂಡಿಗೆರೆ ಬಿಜೆಪಿ ತೆಕ್ಕೆಯಲ್ಲಿತ್ತು ಹಾಗೂ ಶೃಂಗೇರಿ ಮಾತ್ರ ಕಾಂಗ್ರೆಸ್ ವಶದಲ್ಲಿತ್ತು. ಈಗ ನಾಲ್ಕೂ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿದೆ.
2009ರಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಆಯಿತು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬಂದವು. 2009ರಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ವಿರುದ್ಧ 27,018 ಮತಗಳ ಅಂತರದಲ್ಲಿ ಗೆದ್ದರು. ಬಳಿಕ ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾದರು.
ಹೀಗಾಗಿ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಬಿಜೆಪಿಯ ವಿ. ಸುನಿಲ್ ಕುಮಾರ್ ಅವರ ವಿರುದ್ಧ ಗೆಲುವು ಸಾಧಿಸಿದರು. 2014ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಯವರು ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಹಾಗೂ 2019ರಲ್ಲಿ ಶೋಭಾ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧ ಗೆದ್ದಿದ್ದರು.
ವಿಶೇಷವೆಂದರೆ, ಉಡುಪಿ-ಚಿಕ್ಕಮಗಳೂರು ಒಂದೇ ಕ್ಷೇತ್ರವಿದ್ದಾಗಲೂ ಹಾಗೂ ಹಿಂದೆ ಪ್ರತ್ಯೇಕವಿದ್ದಾಗಲೂ ಮಹಿಳೆಯರಿಗೆ ಹೆಚ್ಚು ಮಣೆ ಹಾಕಿದೆ. 2014, 19ರಲ್ಲಿ ಶೋಭಾ ಕರಂದ್ಲಾಜೆ ಗೆದ್ದಿದ್ದಾರೆ. ಉಡುಪಿ ಪ್ರತ್ಯೇಕ ಕ್ಷೇತ್ರವಿದ್ದಾಗ 2004ರಲ್ಲಿ ಮನೋರಮಾ ಮಧ್ವರಾಜ್ ಬಿಜೆಪಿಯಿಂದ ಗೆದ್ದಿದ್ದರು. ಅವರು ಉಡುಪಿಯಿಂದ ಸಂಸತ್ತಿಗೆ ಆಯ್ಕೆಯಾದ ಮೊದಲ ಮತ್ತು ಏಕೈಕ ಮಹಿಳಾ ಜನಪ್ರತಿನಿಧಿ. ಅದರಂತೆಯೇ ಚಿಕ್ಕಮಗಳೂರು ಕ್ಷೇತ್ರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಡಿ.ಕೆ.ತಾರಾದೇವಿ ಅವರನ್ನು ಗೆಲ್ಲಿಸಿತ್ತು.
ಉಡುಪಿ ಪ್ರತ್ಯೇಕವಾಗಿದ್ದಾಗ 1971ರಲ್ಲಿ ಆರ್.ರಂಗನಾಥ ಶೆಣೈ, 1977ರಲ್ಲಿ ಟಿ.ಎ.ಪೈ, 1980ರಿಂದ 1996ರ ವರೆಗೆ ಐದು ಅವಧಿಗೆ ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1998ರಲ್ಲಿ ಐ.ಎಂ. ಜಯರಾಮ ಶೆಟ್ಟಿ ಬಿಜೆಪಿಯಿಂದ ಗೆದ್ದಿದ್ದು, 1999ರಲ್ಲಿ ವಿನಯಕುಮಾರ್ ಸೊರಕೆ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಮರಳಿ ತಂದುಕೊಟ್ಟರು. 2004ರಲ್ಲಿ ಮನೋರಮಾ ಮಧ್ವರಾಜ್ ಬಿಜೆಪಿಯಿಂದ ಸಂಸದರಾದರು.
1952ರಲ್ಲಿ ಕಾಫಿನಾಡು ಚಿಕ್ಕಮಗಳೂರು- ಹಾಸನ ಲೋಕಸಭಾ ಕ್ಷೇತ್ರವಾಗಿ ಮೊದಲ ಚುನಾವಣ ಭಾಗ್ಯ ಕಂಡಿತ್ತು. ಅನಂತರದಲ್ಲಿ 1967ರಲ್ಲಿ ಚಿಕ್ಕಮಗಳೂರು ಸ್ವತಂತ್ರ ಲೋಕಸಭಾ ಕ್ಷೇತ್ರವಾಯಿತು. 1952ರಿಂದ 1962ರ ವರೆಗೆ ಕಾಂಗ್ರೆಸ್‌ನ ಸಿದ್ದನಂಜಪ್ಪ, 1967ರಲ್ಲಿ ಪಿಎಸ್‌ಪಿಯ ಎಂ.ಹುಚ್ಚೇಗೌಡ, 1971ರಲ್ಲಿ ಎನ್‌ಸಿಜೆಯ ಡಿ.ಬಿ. ಚಂದ್ರೇಗೌಡ ಗೆದ್ದು, 1977ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಗೆದ್ದಿದ್ದರು. 1978ರಲ್ಲಿ ಇಂದಿರಾ ಗಾಂಧಿ, 1980 ಮತ್ತು 1989ರಲ್ಲಿ ಡಿ.ಎಂ. ಪುಟ್ಟೇಗೌಡ ಗೆದ್ದಿದ್ದರು. 1984 ಮತ್ತು 1991ರಲ್ಲಿ ಡಿ.ಕೆ. ತಾರಾದೇವಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1996ರಲ್ಲಿ ಜನತಾದಳದಿಂದ ಬಿ.ಎಲ್. ಶಂಕರ್, 1998ರಿಂದ 2004ರ ವರೆಗೆ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಸಂಸದರಾಗಿದ್ದರು.
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.