ಕೋವಿಡ್-19 ವಿರುದ್ಧದ ಹೋರಾಟ ಜೀವ ಉಳಿಸುವ ಹೋರಾಟ
ಸಾರ್ವಜನಿಕರ ಸಹಕಾರ ದೊರೆತರೆ ಸಮರ ಗೆಲ್ಲಲು ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್
Team Udayavani, Apr 22, 2020, 6:04 PM IST
“ಉದಯವಾಣಿ’ ಮಂಗಳವಾರ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಏರ್ಪಡಿಸಿದ ಸಾರ್ವಜನಿಕರ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವಾರು ಮಂದಿ ನಾಗರಿಕರು ದೂರವಾಣಿ ಕರೆ ಮಾಡಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು. ಹಲವರು ಉಡುಪಿಯನ್ನು ಕೋವಿಡ್ ಮುಕ್ತವಾಗಿರಿಸಿದ್ದಕ್ಕೆ ಜಿಲ್ಲಾಧಿಕಾರಿಗಳು ಮತ್ತು ಅವರ ತಂಡಕ್ಕೆ, ಆರೋಗ್ಯ ಯೋಧರಿಗೆ ಅಭಿನಂದನೆಯನ್ನೂ ಸಲ್ಲಿಸಿದರು. ಹಲವು ಕರೆಗಳು ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುವುದಾಗಿ ಕುರಿತಾಗಿದ್ದರೆ, ಇನ್ನು ಕೆಲವು ಪರಿಸರ ಮಾಲಿನ್ಯ, ಜಾನುವಾರುಗಳಿಗೆ ಮೇವು, ಕಾರ್ಮಿಕರ ಸಂಕಷ್ಟ, ವಾಣಿಜ್ಯ ಮಳಿಗೆಗಳಲ್ಲಿನ ಬಾಡಿಗೆ ರಿಯಾಯಿತಿ ಇತ್ಯಾದಿ ಕುರಿತಂತೆ ಇತ್ತು. ಈ ಪೈಕಿ ಕೆಲವು ಮುಖ್ಯ ಕರೆಗಳ ವಿವರ ಮತ್ತು ಜಿಲ್ಲಾಧಿಕಾರಿಗಳ ಉತ್ತರವನ್ನು ಇಲ್ಲಿ ನೀಡಲಾಗಿದೆ.
ಇಂದು “ಉದಯವಾಣಿ’ಯಲ್ಲಿ ಲಾಕ್‌ಡೌನ್ ಆದ ಕಾರಣ ಪರಿಸರ ಮಾಲಿನ್ಯ ಶೇ.50ರಷ್ಟು ಕಡಿಮೆಯಾಗಿದೆ ಎಂಬ ಸುದ್ದಿ ಬಂದಿದೆ. ಆದರೆ ಸುಬ್ರಹ್ಮಣ್ಯನಗರ ಪರಿಸರದಲ್ಲಿ ಸಾರ್ವಜನಿಕವಾಗಿ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕು.
– ನವೀನಚಂದ್ರ, ಉಡುಪಿ.
: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟರೆ ಪರಿಸರಕ್ಕೆ ಅತಿ ಹೆಚ್ಚು ಮಾಲಿನ್ಯ ಉಂಟಾಗುತ್ತದೆ. ಇದರ ಬಗ್ಗೆ ಸೂಕ್ತ ಕ್ರಮ ಜರಗಿಸಲು ಪೌರಾಯುಕ್ತರಿಗೆ ನಿರ್ದೇಶನ ನೀಡುತ್ತೇನೆ.
ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಸಂಸ್ಥೆಯಿಂದ ಕೆಲಸಕ್ಕೆ ಹಾಜರಾಗಲು ಸೂಚನೆ ಬಂದಿದೆ. ಹೋಗಲು ಅವಕಾಶ ಕೊಡಬೇಕು.
– ರೋಹಿತ್‌ಕುಮಾರ್, ಕಾರ್ಕಳ
:ನಿಮ್ಮ ಸಂಸ್ಥೆಯು ಆವಶ್ಯಕ ಸೇವೆಯಡಿ ಬರುವುದಾದರೆ ಅದರ ಪತ್ರವನ್ನು ಕಾರ್ಕಳ ತಾಲೂಕು ಕಚೇರಿಗೆ ಅರ್ಜಿ ಯೊಂದಿಗೆ ಕೊಡಿ. ಪಾಸ್ ನೀಡಲಾಗುವುದು.
ನಾನು ತುಮಕೂರಿನಲ್ಲಿ ಕಾರ್ಖಾನೆಯೊಂದರ ಉದ್ಯೋಗಿ. ಉಡುಪಿಗೆ ಬಂದು ಇಲ್ಲಿಯೇ ಸಿಲುಕಿದ್ದೇನೆ. ನನಗೆೆ ಹೋಗಲು ಆಗುತ್ತಿಲ್ಲ.
– ಅಜಿತ್, ಉಡುಪಿ.
:ಈಗ ಅಂತರ್ಜಿಲ್ಲಾ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆವಶ್ಯಕ ಸೇವೆಯಡಿ ನಿಮ್ಮ ಕಂಪೆನಿ ಬಂದರೆ ಕಂಪೆನಿಯ ಕಾಲ್ ಲೆಟರ್ ತೋರಿಸಿ, ತಾಲೂಕು ಕಚೇರಿಗೆ ಪಾಸ್‌ಗೆ ಅರ್ಜಿ ಸಲ್ಲಿಸಿ.
ನಾನ್‌ಬ್ಯಾಂಕಿಂಗ್ ಹಣಕಾಸು ಸಂಸ್ಥೆ (ಎನ್‌ಬಿಎಫ್ಸಿಸ್) ಗಳನ್ನು ಆರಂಭಿಸಬಹುದೆ?
– ಗಣೇಶ, ಮಣಿಪಾಲ.
: ಸರಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ.
ಗೂಡಂಗಡಿ ವ್ಯಾಪಾರ ಯಾವಾಗ ಆರಂಭವಾಗಬಹುದು?
– ಗೋವಿಂದ ಶೆಟ್ಟಿ, ಉಡುಪಿ
ಮೇ 3ರ ವರೆಗೆ ಅವಕಾಶವಿಲ್ಲ. ಅನಂತರ ಗ್ರೀನ್ ಝೋನ್ ಇದ್ದ ಕಡೆ ಗೂಡಂಗಡಿ ತೆರೆಯಲು ಸರಕಾರ ಅವಕಾಶ ಕೊಡಬಹುದು.
ಒಂದೊಂದು ದಿನಸಿ/ತರಕಾರಿ ಅಂಗಡಿಗಳಲ್ಲಿ ಒಂದೊಂದು ರೀತಿಯಲ್ಲಿ ದರ ವಿಧಿಸುತ್ತಿದ್ದಾರೆ.
– ಅಕ್ಷತಾ, ಹಿರಿಯಡಕ
: ದರವನ್ನು ನಾವು ನಿಗದಿ ಮಾಡಲು ಆಗುವುದಿಲ್ಲ. ದರ ಹೆಚ್ಚಿಗೆ ಇದ್ದ ಪಕ್ಷದಲ್ಲಿ ಗ್ರಾಹಕರು ಇನ್ನೊಂದು ಅಂಗಡಿಯಲ್ಲಿ ಖರೀದಿಸಬಹುದು. ಹೆಚ್ಚು ದರ ಪಡೆದುಕೊಂಡ ನಿರ್ದಿಷ್ಟ ಪ್ರಕರಣವನ್ನು ತಿಳಿಸಿದರೆ ಕ್ರಮ ವಹಿಸುತ್ತೇವೆ.
ನಮ್ಮದು ಜ್ಯೂಸ್ ಸೆಂಟರ್ ವ್ಯಾಪಾರ. ಒಂದು ತಿಂಗಳಿಂದ ಬಂದ್ ಆಗಿದೆ. ಮಾಲಕರು ಬಾಡಿಗೆ ಕೇಳುತ್ತಿದ್ದಾರೆ. ಇದನ್ನು ಮಾಫಿ ಮಾಡಬಹುದೆ?
– ಸುಮನಾ, ಉಡುಪಿ.
: ಸದ್ಯ ಮನೆ ಬಾಡಿಗೆಯನ್ನು ಕೇಳಬಾರದು ಎಂದು ಸರಕಾರ ತಿಳಿಸಿದೆ. ವ್ಯಾಪಾರ ವಹಿವಾಟು ಕಟ್ಟಡದ ಬಾಡಿಗೆ ಕುರಿತು ಹೇಳಿಲ್ಲ. ಇದರ ಬಗ್ಗೆ ಸರಕಾರದ ಗಮನಕ್ಕೆ ತರುತ್ತೇವೆ.
ಅಂಗವಿಕಲರಿಗೆ ಸಿಗುವ ವೇತನ ಫೆಬ್ರವರಿಯಿಂದ ಬಂದಿಲ್ಲ. ಅಂಚೆ ಇಲಾಖೆಯಿಂದ ಇದು ಬರುತ್ತಿತ್ತು. ಕೇಂದ್ರ ಸರಕಾರದಿಂದ 1,000 ರೂ.ನಂತೆ ವಿತರಿಸಲು ಹಣ ಬಿಡುಗಡೆಯಾಗಿದೆ ಎಂದು ಕೇಳಿದ್ದೇನೆ.
– ಉಮೇಶ ಶೆಟ್ಟಿ, ಹನುಮಂತನಗರ, ಉಡುಪಿ
: ನಿಮ್ಮ ದೂರವಾಣಿ ಸಂಖ್ಯೆ ಕೊಡಿ. ತಹಶೀಲ್ದಾರರಿಗೆ ಪರಿಶೀಲನೆ ನಡೆಸಿ ನಿಮಗೆ ತಿಳಿಸಲು ಹೇಳುತ್ತೇನೆ. ಕೇಂದ್ರದ 1,000 ರೂ. ಕುರಿತು ಆದೇಶಗಳು ಬಂದಿಲ್ಲ.
ನಾನು ಮನೆ ಕಟ್ಟಲು ತೊಡಗಿದ್ದೇನೆ. ಮಳೆಗಾಲ ಆರಂಭ ವಾದರೆ ಸಮಸ್ಯೆಯಾಗುತ್ತದೆ.
– ಜ್ಯೋತಿ, ಚಿಟಾ³ಡಿ
: ರಾಜ್ಯ ಸರಕಾರ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ಕೊಟ್ಟಿಲ್ಲ. ನಾಳೆ ಹೊಸ ಆದೇಶ ಬರುತ್ತದೆ. ಅಲ್ಲಿವರೆಗೆ ಕಾಯಿರಿ.
ನಾನು ಉಡುಪಿ ಬ್ರಹ್ಮಗಿರಿಯವನು. ಗುರುವಾಯನಕೆರೆಗೆ ಬಂದು ಸಿಕ್ಕಿ ಹಾಕಿಕೊಂಡಿದ್ದೇನೆ. ಆರೋಗ್ಯದ ಸಮಸ್ಯೆ ಇದೆ. ನನಗೆ ಉಡುಪಿಗೆ ಬರಲು ಅವಕಾಶ ಕೊಡಬೇಕು.
– ಪಾಟೀಲ್, ವೀಣಾ
ಆರೋಗ್ಯದ ಕಾರಣಕ್ಕಾಗಿ ಮಾತ್ರ ಬರಲು ಅವಕಾಶವಿದೆ. ಮೇ 3ರ ವರೆಗೂ ಅಲ್ಲಿಯೇ ಇರಿ.
ನಾನು ಉಪ್ಪಿನಕಾಯಿ ಉತ್ಪಾದನೆ ಮಾಡುತ್ತಿದ್ದೇನೆ. ಈಗ ಮಾವಿನ ಮಿಡಿಯನ್ನು ಉತ್ತರ ಕನ್ನಡ ಜಿಲ್ಲೆಯಿಂದ ತರಿಸಿಕೊಳ್ಳಲು ತೊಂದರೆಯಾಗಿದೆ.
-ಪ್ರದೀಪ್, ಕೋಟ
ಕೃಷಿ ಸಂಬಂಧಿತ ಆಹಾರ ಸಾಮಗ್ರಿ ಸಾಗಾಟಕ್ಕೆ ಏನೂ ತೊಂದರೆ ಇಲ್ಲ. ನೀವು ಉತ್ತರ ಕನ್ನಡ ಜಿಲ್ಲೆಯಿಂದ ತರಿಸಿಕೊಳ್ಳ ಬಹುದು, ವ್ಯವಹಾರ ನಡೆಸಬಹುದು.
ಉದ್ಯಾವರದಲ್ಲಿ 350 ಬಡ ಕಾರ್ಮಿಕರ ಹೆಸರನ್ನು ಕೊಡಲಾಗಿದೆ. ಆದರೆ ಇದುವರೆಗೆ ಯಾವುದೇ ಕಿಟ್ ವಿತರಣೆಯಾಗಲಿಲ್ಲ. ನನ್ನ ಪತ್ನಿ ಗ್ರಾ.ಪಂ. ಅಧ್ಯಕ್ಷರು. ಜನರು ನಮ್ಮನ್ನು ಕೇಳುತ್ತಿದ್ದಾರೆ.
– ಶೇಖರ್, ಉದ್ಯಾವರ.
: ನಮ್ಮಲ್ಲಿ ಪಡಿತರ ಲಭ್ಯವಿದೆ. ಗ್ರಾ.ಪಂ. ಅನುದಾನದಿಂದ ಕೊಡುವುದಾದರೆ ಕೊಡಬಹುದು. ಜಿಲ್ಲಾಡಳಿತದಿಂದ ಕೊಡುವುದಾದರೆ ತಹಶೀಲ್ದಾರರಿಗೆ ತಿಳಿಸುತ್ತೇನೆ.
ಬ್ರಹ್ಮಾವರ ಬಿಇಒ ವ್ಯಾಪ್ತಿಯ ಸಗ್ರಿನೋಳೆ ಶಾಲೆಯಲ್ಲಿ ನನ್ನ ಪತ್ನಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದಾರೆ. ಆಗ ಸರಿಯಾಗಿ ದಾಖಲೆ ಪತ್ರ ಸಲ್ಲಿಸಿದರೂ ಇದುವರೆಗೆ ಪಿಂಚಣಿ, ಗ್ರ್ಯಾಚುಟಿ ಏನೂ ನೀಡಿಲ್ಲ, ನನ್ನ ಪತ್ನಿ ಖನ್ನತೆಗೊಳಗಾಗಿದ್ದಾರೆ, ಸಹಾಯ ಮಾಡಿ.
– ರವೀಂದ್ರ ಪೂಜಾರಿ, ಕಲ್ಯಾಣಪುರ ಸಂತೆಕಟ್ಟೆ.
: ಸರಕಾರ ಕೊಡುವುದೆಲ್ಲವನ್ನೂ ಕೊಡುತ್ತಿದೆ. ನಿಮ್ಮ ಸಮಸ್ಯೆ ಕುರಿತು ಡಿಡಿಪಿಐ, ಬಿಇಒ ಅವರಲ್ಲಿ ಹೇಳಿಸಿ ಮಾಡಿಸಿಕೊಡುತ್ತೇನೆ. ಖನ್ನತೆಗೆ ಒಳಗಾಗದಂತೆ ನಿಮ್ಮ ಪತ್ನಿಗೆ ಸಮಾಧಾನ ಮಾಡಿ.
ಕೆಲವು ಪಡಿತರ ಚೀಟಿಗಳು ಲ್ಯಾಪ್ಸ್ ಆಗಿ ಅವರಿಗೆ ಪಡಿತರ ಸಾಮಗ್ರಿ ಸಿಗುತ್ತಿಲ್ಲ.
– ಕೋಟಿ ಪೂಜಾರಿ, ಗ್ರಾ.ಪಂ. ಸದಸ್ಯರು, ವಡ್ಡರ್ಸೆ.
: ಎಲ್ಲ ಪಡಿತರ ಚೀಟಿಗಳಿಗೂ ರೇಷನ್ ವಿತರಣೆಯಾಗುತ್ತಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೂ ಮೇ ತಿಂಗಳಿಂದ ಪಡಿತರ ಸಾಮಗ್ರಿ ಸಿಗುತ್ತದೆ. ಅರ್ಜಿ ಸಲ್ಲಿಸದವರು ಅರ್ಜಿ ಸಲ್ಲಿಸಲಿ.
ನಮ್ಮ ಊರಿನಿಂದ ಪತ್ನಿ, ಮಕ್ಕಳು ತೀರ್ಥಹಳ್ಳಿಗೆ ಹೋಗಿ ಸಿಲುಕಿಕೊಂಡಿದ್ದಾರೆ. ಊರಿಗೆ ಬರೋಣವೆಂದರೆ ಅಲ್ಲಿನ ಅಧಿಕಾರಿಗಳು ಪಾಸ್ ಕೊಡುತ್ತೇವೆಂದು ಹೇಳುತ್ತಿದ್ದಾರಷ್ಟೆ.
– ಫಾರೂಕ್, ಸಚ್ಚೇರಿಪೇಟೆ.
ಶಿವಮೊಗ್ಗ ಜಿಲ್ಲಾಧಿಕಾರಿಯವರು ಪಾಸ್ ಕೊಟ್ಟರೆ ಸೂಕ್ತ ಕಾರಣಗಳಿದ್ದರೆ ಗಡಿಯಲ್ಲಿ ಒಳ ಪ್ರವೇಶಿಸಲು ಬಿಡುತ್ತೇವೆ.
ನಮ್ಮ ಕುಟುಂಬದವರು ಅಜೆಕಾರಿಗೆ ಹೋಗಿದ್ದು, ಎರ್ಮಾಳಿಗೆ ಬರಬೇಕಿದೆ. ಬೆಳ,¾ಣ್ಣಿನಲ್ಲಿ ಬರಲು ಬಿಡುತ್ತಿಲ್ಲ.
– ಶೇಖರ ಶೆಟ್ಟಿ, ಎರ್ಮಾಳು.
: ಜಿಲ್ಲೆಯೊಳಗೆ ಸಂಚರಿಸಲು ಸಮಸ್ಯೆ ಇಲ್ಲ. ಬೆಳಗ್ಗೆ 7ರಿಂದ 11 ಗಂಟೆಯೊಳಗೆ ಬರಬಹುದು. ಅನಂತರವಲ್ಲ.
ನಾನು ಬಟ್ಟೆ ಅಂಗಡಿ ನಡೆಸುತ್ತಿದ್ದು ಒಂದು ತಿಂಗಳಿಂದ ಅಂಗಡಿ ಬಂದ್ ಆಗಿದೆ. ಸದ್ಯ ಇದನ್ನು ತೆರೆಯಲು ಅವಕಾಶವಿದೆಯೆ?
– ಸುದೇಶ ಕಾಮತ್, ಪೆರ್ಡೂರು.
: ಬಟ್ಟೆ ಅಂಗಡಿ ತುರ್ತು ಅಗತ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರಕಾರದ ಆದೇಶ ಬಂದಿಲ್ಲ. ಸರಕಾರದ ಆದೇಶ ಬಂದರೆ ತೆರೆಯಲು ಅನುಮತಿ ಕೊಡುತ್ತೇವೆ.
ನಿರ್ಮಾಣ ಕಾಮಗಾರಿಗಾಗಿ ನೆಲದಡಿ ಡ್ರಿಲ್ಲಿಂಗ್ ಮಾಡಬಹುದೇ?
– ಪ್ರಫುಲ್ಲಚಂದ್ರ, ಉಡುಪಿ.
: ರಾಜ್ಯ ಸರಕಾರ ನಿರ್ಮಾಣ ಕಾಮಗಾರಿಗೆ ಅವಕಾಶ ಕೊಟ್ಟಿಲ್ಲ. ಕಾಮಗಾರಿ ನಡೆಸುವಲ್ಲಿಯೇ ಕಾರ್ಮಿಕರಿದ್ದು ಕೆಲಸ ಮಾಡುವು ದಾದರೆ ಮಾಡಬಹುದು. ಅವರು ಸಂಚರಿಸಲು ಅವಕಾಶವಿಲ್ಲ.
ನಮ್ಮಲ್ಲಿ ವಾಹನ ಸಂಚಾರ ನಿಂತಿಲ್ಲ, ಮಾಸ್ಕ್ಗಳನ್ನೂ ಧರಿಸುತ್ತಿಲ್ಲ.
– ನಾಗರಾಜ ಉಪಾಧ್ಯಾಯ, ಮಲ್ಪೆ
: ಮೊನ್ನೆಯಷ್ಟೆ ನಾನು, ಎಸ್‌ಪಿಯವರು ಮಲ್ಪೆಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಅನಗತ್ಯ ಓಡಾಟ, ಆಟೋರಿಕ್ಷಾಗಳ ಸಂಚಾರ, ಮಾಸ್ಕ್ ಧರಿಸದೆ ಇರುವುದರ ಕುರಿತು ಪೊಲೀಸರಿಗೆ ತಿಳಿಸುತ್ತೇನೆ.
ನಮ್ಮ ಮನೆಯಲ್ಲಿ ಮೇ 24ರಂದು ಧರ್ಮಸ್ಥಳದಲ್ಲಿ ಮದುವೆ ನಿಶ್ಚಯವಾಗಿದೆ. ಮುಂದೇನಾಗಬಹುದು?
-ಶಿವಾನಂದ, ಕುಂದಾಪುರ.
ಮೇ 24ರ ಹೊತ್ತಿಗೆ ಏನಾಗಬಹುದು ಎಂದು ಈಗಲೇ ಹೇಳುವಂತಿಲ್ಲ. ಸರಕಾರದ ನಿರ್ಧಾರಕ್ಕೆ ಕಾಯಿರಿ.
ಜೆಸಿಬಿ ಮೂಲಕ ಕೆಲಸ ಮಾಡಬಹುದೆ?
– ಸದಾಶಿವ ದೇವಾಡಿಗ, ಬ್ರಹ್ಮಾವರ, -ಉದಯಕುಮಾರ್ ಕಾರ್ಕಳ.
: ಕೃಷಿ, ತೋಟದ ಉದ್ದೇಶಕ್ಕೆ ಮಾತ್ರ ಬಳಸಬಹುದು. ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ.
ಎರಡು ಮಕ್ಕಳು ನರ್ಸಿಂಗ್ ಕಾಲೇಜಿಗೆ ಮಂಗಳೂರಿನಲ್ಲಿ ಹೋಗುತ್ತಿದ್ದು ಅಲ್ಲಿ ಹಾಸ್ಟೆಲ್‌ನಲ್ಲಿ ಬಂದಿಯಾಗಿದ್ದಾರೆ. ಇವರನ್ನು ಕರೆ ತರಬೇಕು.
– ಜಯಂತಿ, ಅಜೆಕಾರು
: ಮಂಗಳೂರು ರೆಡ್ ಝೋನ್ ಆಗಿದೆ. ಅಲ್ಲಿಂದ ಕರೆ ತರುವುದು ಕಷ್ಟ. ನರ್ಸಿಂಗ್ ಕಲಿಯುತ್ತಿರುವವರು ಕೋವಿಡ್ ವಿರುದ್ಧ ಹೋರಾಟ ನಡೆಸುವವರು. ಅವರನ್ನೇ ಮನೆಗೆ ಕರೆ ತಂದರೆ ಹೇಗೆ? ಅವರು ವಿದ್ಯಾರ್ಥಿಗಳಾಗಿದ್ದರೂ ಅಗತ್ಯ ಸಂದರ್ಭದಲ್ಲಿ ಸರಕಾರ ಬಳಸುತ್ತದೆ. ಸ್ವಲ್ಪ ದಿನಗಳಲ್ಲಿ ಪರಿಸ್ಥಿತಿ ತಹಬಂದಿಗೆ ಬರುತ್ತದೆ. ಅಲ್ಲಿಯವರೆಗೆ ನಿಶ್ಚಿಂತೆಯಿಂದ ಇರಿ.
ಸರಕಾರಿ ಕೆಲಸ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಆಗಾಗ ಆದ ಬೆಳವಣಿಗೆಗಳನ್ನು ತಿಳಿಸುತ್ತೀರಾ?
– ಮನೋಹರ ಶೆಟ್ಟಿ ಹಿರಿಯಡಕ
: ಕೊರೊನಾ ಸಂಬಂಧಿಸಿದ ಮಾಹಿತಿಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಿದ್ದೇವೆ. ಡಿಎಚ್‌ಒ ವೆಬ್‌ಸೈಟ್‌ನಲ್ಲಿಯೂ ಸಿಗುತ್ತದೆ. ಸರಕಾರಿ ಇಲಾಖೆ ಕಚೇರಿಗಳು ತೆರೆದರೂ ಸದ್ಯ ಸಾರ್ವಜನಿಕರಿಗೆ ಪ್ರವೇಶವಿಲ್ಲ. ತುರ್ತು ಕೆಲಸಗಳನ್ನು ಮಾತ್ರ ಮಾಡುತ್ತಿದ್ದೇವೆ.
ನಾನು ನಾಲ್ಕು ದನಗಳನ್ನು ಸಾಕಿದ್ದೇನೆ. ಈಗ ತೀರ್ಥಹಳ್ಳಿಯಿಂದ ಒಣ ಹುಲ್ಲು ಬರುತ್ತಿಲ್ಲ.
– ಶಶಿಧರ ಶೆಟ್ಟಿ ಕೊಡ್ಲಾಡಿ, ಕುಂದಾಪುರ
ಒಣ ಹುಲ್ಲು ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ನೀವು ಯಾರಿಂದ ತರಿಸಿಕೊಳ್ಳುತ್ತಿದ್ದೀರೋ ಅವರಿಗೆ ಹೇಳಿ ತರಿಸಿಕೊಳ್ಳಿ.
ನನ್ನ ತಮ್ಮನ ಮದುವೆ ಎ. 29ರಂದು ನಿಗದಿಯಾಗಿದೆ. ಏನು ಮಾಡಬಹುದು? ಅನುಮತಿ ಕೊಡುತ್ತೀರಾ?
-ದೇವೇಂದ್ರ, ಹೆಬ್ರಿ ಕಳತ್ತೂರು.
ಐದು ಜನರಿಗಿಂತ ಹೆಚ್ಚು ಮಂದಿ ಸೇರಿದರೆ ಕಾನೂನು ಉಲ್ಲಂಘನೆ ಯಾಗುತ್ತದೆ. ಮೊನ್ನೆಯಷ್ಟೇ ಉಡುಪಿಯಲ್ಲಿ ಅನುಮತಿ ಉಲ್ಲಂ ಸಿ ಮದುವೆಯಲ್ಲಿ 11 ಜನ ಸೇರಿದ್ದಕ್ಕೆ ಪ್ರಕರಣ ದಾಖಲಾಗಿದೆ. ಮದುವೆಗೆ ಅನುಮತಿ ಬೇಕಿಲ್ಲ, ಆದರೆ ಐದಕ್ಕಿಂತ ಹೆಚ್ಚು ಜನ ಸೇರಿದರೆ ಕ್ರಮ ಅನಿವಾರ್ಯ. ಮದುವೆ ಎಂದರೆ ಸಂಭ್ರಮವಲ್ಲವೆ? ಮುಂದೂಡುವುದು ಸೂಕ್ತ.
ಧಾರ್ಮಿಕ ದತ್ತಿ ದೇವಸ್ಥಾನಗಳು ಆಯೋಜಿಸಿದ ಸಾಮೂಹಿಕ ವಿವಾಹ ಮುಂದೆ ನಡೆಯುತ್ತದೆಯೋ? ಮಾತೃಪೂರ್ಣ, ಮಾತೃವಂದನ, ಭಾಗ್ಯಲಕ್ಷ್ಮೀಯಂತಹ ಯೋಜನೆಗಳು ನಡೆಯುತ್ತಿಲ್ಲ.
– ರಾಘವೇಂದ್ರ, ಕುಂದಾಪುರ.
: ಸಾಮೂಹಿಕ ವಿವಾಹದ ದಿನಾಂಕವನ್ನು ಸರಕಾರ ಮುಂದೂಡಿದೆ. ಹೊಸ ದಿನಾಂಕ ತಿಳಿಸಲಾಗುತ್ತದೆ. ಮಾತೃಪೂರ್ಣ, ಮಾತೃವಂದನ, ಭಾಗ್ಯಲಕ್ಷ್ಮೀಬಾಂಡ್‌ನಂತಹ ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ವಿಳಂಬವಾದರೂ ಇವುಗಳಿಗೆ ವಿನಾಯಿತಿ ಇರುತ್ತದೆ.
ಕೋವಿಡ್ ವಿರುದ್ಧ ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಪ್ರಾಣಾಯಾಮ ಸಹಕಾರಿ. ನಾನು ಆಶಾ ಕಾರ್ಯ ಕರ್ತೆಯರು, ಪೊಲೀಸ್ ಸಿಬಂದಿಗೆ ತರಬೇತಿ ಕೊಡಬಲ್ಲೆ.
– ಪ್ರಕಾಶ ನಾಯಕ್, ಉಡುಪಿ.
: ಇದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ.
ಬೆಳಗ್ಗೆಯ ಅವಧಿಯಲ್ಲಿ ಅಂಗಡಿಗಳನ್ನು ತೆರೆಯುವ ಕಾರಣ ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಇದರ ಬದಲು ಮನೆಮನೆಗೆ ಅಗತ್ಯದ ಸಾಮಗ್ರಿಗಳನ್ನು ಕೊಡಬಹುದು.
– ವಿಶ್ವನಾಥ ಪೇತ್ರಿ
: ಎಲ್ಲಿ ಪಾಸಿಟಿವ್ ವರದಿ ಬಂದಿದೆಯೋ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಅಲ್ಲಿ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಇಡೀ ಜಿಲ್ಲೆಗೆ ಈ ತರಹ ಮಾಡಲು ಸಾಧ್ಯವಾಗದು. ನಾವು ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.
ನಾವು ಲಾಕ್‌ಡೌನ್ ಆಗುವ ಮೊದಲು ಹೊರಜಿಲ್ಲೆ ಗಳಿಂದ ಊರಿಗೆ ಬಂದಿದ್ದೆವು. ಈಗ ಒಂದು ತಿಂಗಳಿಂದ ಬಂದಿಗಳಾಗಿದ್ದೇವೆ. ನಮ್ಮ ಹಿರಿಯರಿಗೆ ಆರೋಗ್ಯ ಸರಿ ಇಲ್ಲ. ತುರ್ತಾಗಿ ಹೋಗಬೇಕಾಗಿದೆ.
– ಅಕ್ಷತಾ, ಹಾಲಾಡಿ ಕುಂದಾಪುರ, ಸುದರ್ಶನ ಅಲೆವೂರು, ಮಂಜುನಾಥ ಅಂಪಾರು, ಗೀತಾಲಕ್ಷ್ಮೀ ಉದ್ಯಾವರ, ರಮೇಶ ಬ್ರಹ್ಮಾವರ, ಸೌಮ್ಯಾ ಹೊಸಂಗಡಿ.
ನಮ್ಮ ಮನೆಯಲ್ಲಿ ಪುಟ್ಟ ಮಗುವನ್ನು ನೋಡಿಕೊಳ್ಳಲು ಅತ್ತೆಯನ್ನು ಸತಾರದಿಂದ ಕರೆಸಿಕೊಳ್ಳಲು ಸಹಾಯ ಮಾಡಿ.
– ಚಂದ್ರಹಾಸ ಶೆಟ್ಟಿ, ಮುಂಡ್ಕೂರು, ಗುರುಪ್ರಸಾದ್ ಅಲೆವೂರು.
ಸಾಗರದಿಂದ ಇಬ್ಬರು ಮಕ್ಕಳು ಬಂದಿದ್ದಾರೆ. ಅವರು ವಾಪಸು ಹೋಗಬೇಕೆಂದು ಹಠ ಮಾಡುತ್ತಿದ್ದಾರೆ.
– ನಿರ್ಮಲಾ ಮೆಂಡೋನ್ಸಾ, ಸಂತೆಕಟ್ಟೆ
ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗುವಂತಿಲ್ಲ. ಕೇವಲ ಹುಷಾರಿಲ್ಲದೆ ಇದ್ದರೆ ಮಾತ್ರ ಮಣಿಪಾಲದ ಆಸ್ಪತ್ರೆಗೆ ಬರಲು ಅವಕಾಶ ಕೊಡುತ್ತಿದ್ದೇವೆ. ಒಂದು ವೇಳೆ ನಾನು ಅನುಮತಿ ಕೊಟ್ಟರೂ ಬೇರೆ ಜಿಲ್ಲೆಗಳ ಗಡಿಗಳಲ್ಲಿ ಪ್ರವೇಶಿಸಲು ಅವಕಾಶ ಇರದು. ಆದ್ದರಿಂದ ಮೇ 3ರ ವರೆಗೆ ನೀವು ಎಲ್ಲಿದ್ದೀರೋ ಅಲ್ಲೇ ಇರಿ. ಅನಂತರ ಎಲ್ಲವೂ ಸರಿಯಾಗಬಹುದು. ಚಿಕ್ಕಮಗಳೂರಿನಂತಹ ಹಸಿರು ಜಿಲ್ಲೆಗಳಿಗೆ (ಗ್ರೀನ್ ಝೋನ್) ಅವಕಾಶ ಸಿಗಬಹುದು. ನಮ್ಮ ಜಿಲ್ಲೆಯೂ ಹಸಿರು ಜಿಲ್ಲೆಯಾಗುವ ಸಾಧ್ಯತೆ ಇದೆ.
ಮೇ 3ರ ವರೆಗೂ ಸುಮ್ಮನಿದ್ದು ಬಿಡಿ
ನನ್ನ ಮನೆ ಬಾರಕೂರು ನಡೂರಿನಲ್ಲಿದೆ. ನನ್ನ ಶ್ರೀಮತಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇಲ್ಲಿಂದ ಅಕ್ಕಿ, ತೆಂಗಿನ ಕಾಯಿ ಕೊಟ್ಟು ಬರಲು ಅವಕಾಶವಿದೆಯೇ ಎಂದು ಒಬ್ಬರು ಕೇಳಿದರು. ಮತ್ತೂಬ್ಬರು ಊರಿಗೆ ಬರುವಾಗ ನಾಯಿ, ಬೆಕ್ಕುಗಳಿಗೆ ಪಕ್ಕದ ಮನೆಯವರಿಗೆ ಆಹಾರ ನೀಡಲು ತಿಳಿಸಿದ್ದೆವು. ಈಗ ಬಹಳ ದಿನಗಳಾಗಿವೆ, ಅವರು ಒಪ್ಪುತ್ತಿಲ್ಲ, ನಮಗೆ ಹೋಗಲು ಅವಕಾಶ ಕೊಡಿ. ಇದಕ್ಕೆ ಒಂದೇ ಸಾಲಿನ ಉತ್ತರವೆಂದರೆ, ಮೇ 3 ರವರೆಗೂ ಏನೂ ಮಾಡುವಂತಿಲ್ಲ ಎಂಬುದಾಗಿತ್ತು. ಹಾಗೆಯೇ ಉಡುಪಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಪಾರ್ಸೆಲ್ ನೀಡುತ್ತಿಲ್ಲ ಎಂಬ ದೂರಿಗೆ, ಅಲ್ಲಿ ಬಡವರಿಗೆ ಆಹಾರ ವಿತರಿಸಲಾಗುತ್ತಿದೆ. ಒಂದು ವೇಳೆ ಎಲ್ಲರಿಗೂ ಪಾರ್ಸೆಲ್ ಕೊಟ್ಟರೆ ಬಡವ ರಿಗೆ ಕೊರತೆಯಾಗಬಹುದು ಎಂಬ ಕಾರಣ ವಿರಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.