Udupi: ಗಾಂಧೀಜಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಡಾ| ಕೆ.ವಿದ್ಯಾಕುಮಾರಿ
Team Udayavani, Oct 2, 2024, 11:40 PM IST
ಉಡುಪಿ: ಮಹಾತ್ಮಾ ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸಾ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಗಾಂಧಿ ಜಯಂತಿ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿ. ಪಂ. ವಾರ್ತಾ ಇಲಾಖೆ, ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಹಿತ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಜರಗಿದ ಜಿಲ್ಲಾ ಮಟ್ಟದ 155ನೇ ಗಾಂಧಿ ಜಯಂತಿ ಕಾರ್ಯಕ್ರಮ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಚರಕದ ರಾಟೆಗೆ ನೂಲು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬಹಿರಂಗ ಸ್ವತ್ಛತೆಯ ಜತೆಗೆ ಅಂತರಂಗದ ಸ್ವತ್ಛತೆ ಹೊಂದಿರಬೇಕು. ಗಾಂಧೀಜಿಯವರ ಆತ್ಮಚರಿತ್ರೆಯನ್ನು ಓದಿದಾಗ ಅವರು ವಿಶ್ವ ನಾಯಕನಾಗಿ ಬೆಳೆಯುವ ಹಂತ ಮತ್ತು ಒಬ್ಬ ಸಾಮಾನ್ಯ ವ್ಯಕ್ತಿ ಮಹಾತ್ಮರಾಗಿರುವುದನ್ನು ಕಾಣಬಹುದು ಎಂದರು.
ಭಾರತ್ ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಹಾತ್ಮಾ ಗಾಂಧೀಜಿ ತಮ್ಮ ಜೀವನದಲ್ಲಿ ಸ್ವತ್ಛತೆಗೆ ಹೆಚ್ಚು ಮಹತ್ವ ನೀಡಿದ್ದರು. ಸ್ವತ್ಛತಾ ಕಾರ್ಯಗಳು ಅವರ ದಿನಾಚರಣೆಗೆ ಮಾತ್ರ ಸೀಮಿತವಾಗಿರಬಾರದು. ಗಾಂಧೀಜಿಯವರ ಶಿಸ್ತು, ಸಂಯಮ, ಸೇವಾ ಪರಿಕಲ್ಪನೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಅರುಣ್ ಕೆ. ಕಾರ್ಯಕ್ರಮ ಉದ್ಘಾಟಿಸಿ, ಮಹಾತ್ಮ ಗಾಂಧೀಜಿಯವರ ಚಿಂತನೆಯನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡು, ಯಶಸ್ವಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಪ್ರಸಾದ್ ರಾವ್ ಎಂ. ಉಪನ್ಯಾಸ ನೀಡಿದರು.
ವಾರ್ತಾ ಇಲಾಖೆ ವತಿಯಿಂದ ಗಾಂಧೀ ಜಯಂತಿ ಅಂಗವಾಗಿ ಪ್ರೌಢ ಶಾಲಾ ವಿಭಾಗ, ಪದವಿ ಪೂರ್ವ ವಿಭಾಗ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಸಾಕ್ಷಿ ಕುಲಾಲ್ (ಪ್ರ), ಮೈತ್ರಿ (ದ್ವಿ) ಹಾಗೂ ಶಿವಾನಿ (ತೃ) ಬಹುಮಾನ ಪಡೆದರು. ಪದವಿ ಪೂರ್ವ ವಿಭಾಗದಲ್ಲಿ ರಕ್ಷಿತಾ ಭಟ್ (ಪ್ರ) ,ಪನ್ನಿಧಿ ಡಿ. ಶೆಟ್ಟಿ (ದ್ವಿ), ದಿವ್ಯಾ (ತೃ) ಮತ್ತು ಪದವಿ – ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಭೀಮಾಂಬಿಕಾ (ಪ್ರ), ಅಮಿಷಾ (ದ್ವಿ), ಅಶ್ವಿನಿ ಡಿ.ಎಸ್. (ತೃ)ಇವರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ಗಾಂಧೀಜಿಯ ಸವಿನೆನಪುಗಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಎಡಿಸಿ ಮಮತಾ ದೇವಿ ಜಿ.ಎಸ್., ಎಎಸ್‌ಪಿ ಎಸ್. ಟಿ. ಸಿದ್ದಲಿಂಗಪ್ಪ, ಲಯನ್ಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್, ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಕೃಷ್ಣಯ್ಯ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಇಒ ರಾಜೇಶ್ ಶೇರಿಗಾರ್, ಲಯನ್ಸ್ ಕ್ಲಬ್ ಉಡುಪಿ ಚೇತನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು. ಪೌರಾಯುಕ್ತ ರಾಯಪ್ಪ ಸ್ವಾಗತಿಸಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ವಂದಿಸಿ, ದಯಾನಂದ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.