ಉಡುಪಿಯ ನಿತ್ಯ ವೈಶಿಷ್ಟ್ಯ: ಕನಕನಿಗೆ ಕೃಷ್ಣಪ್ರಸಾದ, ಕೃಷ್ಣನಿಗೆ ಕನಕನ ನೈವೇದ್ಯ
Team Udayavani, Dec 3, 2020, 6:04 AM IST
ಡಿ. 3ರಂದು ಕನಕದಾಸರ ಜಯಂತಿ ಉತ್ಸವ ನಡೆಯುತ್ತಿದೆ. ಕನಕದಾಸರು ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿದವರು, ಅಧ್ಯಾತ್ಮವನ್ನು ಕೀರ್ತನೆ, ಉಗಾಭೋಗ, ಸುಳಾದಿ ಸಾಹಿತ್ಯದ ಮೂಲಕ ಜನಪ್ರಿಯಗೊಳಿಸಿದವರು. ಕನಕದಾಸರನ್ನು ನಿತ್ಯ ಸ್ಮರಿಸುವ ನಾಡು ಉಡುಪಿ. ಇಲ್ಲಿ ನೆಲೆಸಿದ ಕನಕದಾಸರಿಗೆ ನಿತ್ಯ ಕೃಷ್ಣನ ತೀರ್ಥ, ಪ್ರಸಾದವನ್ನು ಸಮರ್ಪಿಸಲಾಗುತ್ತದೆ. ಕೃಷ್ಣನಿಗೆ ಕನಕನ ಹೆಸರಿನಲ್ಲಿ ನಿತ್ಯ ನೈವೇದ್ಯ ಸಮರ್ಪಣೆ ನಡೆಯುತ್ತದೆ.
ಉಡುಪಿ ರಥಬೀದಿ ಕನಕದಾಸರು ಓಡಾಡಿ ಕೊಂಡಿದ್ದ ಪರಮಪವಿತ್ರ ತಾಣ. ರಥಬೀದಿ ಯಲ್ಲಿರುವ ಕನಕದಾಸರ ಗುಡಿಯ ಸ್ಥಳದಲ್ಲಿ ನಾಲ್ಕೈದು ಶತಮಾನಗಳ ಹಿಂದೆ ಕನಕದಾಸರು ಉಳಿದುಕೊಂಡಿದ್ದರು. ಅಲ್ಲಿ ಹೆಂಚಿನ ಮಾಡಿನ ಚಿಕ್ಕ ಕಟ್ಟಡವಿದ್ದು ವಿದ್ವಾಂಸರಾಗಿದ್ದ ಕಟ್ಟೆ ಶ್ರೀನಿವಾಸ ಆಚಾರ್ಯರು (ದಿ|ಡಾ| ವಿ.ಎಸ್. ಆಚಾರ್ಯರ ತಂದೆ) ಶಾಸ್ತ್ರ ಪಾಠಗಳನ್ನು ನಡೆಸುತ್ತಿದ್ದರು. ಇದಕ್ಕೆ “ಚಂದ್ರಿಕಾ ಪಾಠಶಾಲೆ’ ಎಂದು ಕರೆಯಲಾಗುತ್ತಿತ್ತು. 1965ರಲ್ಲಿ ಇದೇ ಸ್ಥಳದಲ್ಲಿ ಕನಕದಾಸರ ಭವ್ಯ ವಿಗ್ರಹದ ಪ್ರತಿಷ್ಠಾಪನೆ ನೆರವೇರಿತು. ಆ ದಿನದಿಂದ ಕನಕದಾಸರಿಂದ ಕೃಷ್ಣಮಠದಿಂದ ನಿತ್ಯ ಪೂಜೆ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕನಕ ದಾಸ ಜಯಂತಿಯು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿದೆ, ಕೃಷ್ಣಮಠದಲ್ಲಿಯೂ ನಡೆಯುತ್ತಿದೆ. ಶತಮಾನ ಗಳಿಂದ ಕೃಷ್ಣಮಠದಲ್ಲಿ ಕನಕದಾಸರ ಹೆಸರಿನಲ್ಲಿ ನಿತ್ಯ ನೈವೇದ್ಯ ನಡೆಯುತ್ತಿದೆ.
ಕನಕನಗುಡಿ
1963ರ ಡಿ. 28ರಿಂದ 30ರ ವರೆಗೆ ಪುರಂದರ ದಾಸ ಚತುರ್ಥ ಶತಮಾನೋತ್ಸವ ನಡೆದ ಬಳಿಕ 1965ರಲ್ಲಿ ಕನಕದಾಸರ ಚತುಃಶತಮಾನೋತ್ಸವದ ಸಡಗರ ನಡೆಯಿತು. ಉಡುಪಿ ಸಂಗೀತ ಸಭಾ ಸಂಸ್ಥೆಯು ಕರ್ನಾಟಕ ಸರಕಾರ, ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಸಹಕಾರದಿಂದ ಮೂರು ದಿನಗಳ ಕಾಲದ ಉತ್ಸವ ವನ್ನು ಆಯೋಜಿಸಿತ್ತು. ಕೆ.ಎಂ. ಮಾರ್ಗದಲ್ಲಿರುವ ವಿಜೆಯು ಕ್ಲಬ್ ಆವರಣ ದಲ್ಲಿ ದೊಡ್ಡ ಪೆಂಡಾಲು ಹಾಕಿ ದಿನವಿಡೀ ವಿದ್ವಾಂಸರ ಗೋಷ್ಠಿ, ಸಂಜೆ ಬಳಿಕ ಪ್ರಸಿದ್ಧರ ಸಂಗೀತ ಕಾರ್ಯಕ್ರಮಗಳು ನಡೆದಿದ್ದವು. ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ, ರಾಜ್ಯಪಾಲ ವಿ.ವಿ. ಗಿರಿ, ಉಪರಾಷ್ಟ್ರಪತಿ ಬಿ.ಡಿ. ಜತ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕಯ್ನಾರ ಕಿಂಞಣ್ಣ ರೈ, ಡಾ| ಬನ್ನಂಜೆ ಗೋವಿಂದಾಚಾರ್ಯ, ಸು.ರಂ.ಎಕ್ಕುಂಡಿ, ಪಿ. ಕಾಳಿಂಗ ರಾವ್ ಮೊದಲಾದ ದಿಗ್ಗಜರು ಪಾಲ್ಗೊಂಡಿದ್ದರು. ಮೊದಲ ದಿನ 24-04-1965 ರಂದು ಆಗಿನ ಶಾಸಕ ಮಲ್ಪೆ ಮಧ್ವರಾಜರು ದೇಣಿಗೆಯಾಗಿ ನೀಡಿದ್ದ ಕನಕದಾಸರ ಶಿಲಾ ಪ್ರತಿಮೆಯನ್ನು ಸಂಜೆ ಪಡುಪೇಟೆ ಮಾರ್ಗದಲ್ಲಿ ಮೆರವಣಿಗೆಯಲ್ಲಿ ತಂದು ಕನಕದಾಸರ ಗುಡಿಯಲ್ಲಿ ಪ್ರತಿಷ್ಠಾಪಿಸಿ ಗುಡಿಯನ್ನು ಅನಾವರಣಗೊಳಿಸಲಾಯಿತು. ಬಳಿಕ “ಪಡುಪೇಟೆ’ ಮಾರ್ಗ “ಕನಕದಾಸ ಬೀದಿ’ ಆಯಿತು ಎಂಬುದನ್ನು ಆಯೋಜಕರಾಗಿದ್ದ ಮಣಿಪಾಲ ಹೆರಿಟೇಜ್ ವಿಲೇಜ್ ರೂವಾರಿ ವಿಜಯನಾಥ ಶೆಣೈ ನೆನಪಿಸಿಕೊಳ್ಳುತ್ತಿದ್ದರು.
ಗಂಜಿ, ರೊಟ್ಟಿ ನೈವೇದ್ಯ
ಕೃಷ್ಣಮಠದ ಗರ್ಭಗುಡಿಯ ಹೊರಗೆ ವಾಯವ್ಯ ಮೂಲೆಯಲ್ಲಿ “ಅರಿಕೊಟ್ಟಿಗೆ’ ಎಂಬ ನೈವೇದ್ಯ ತಯಾರಿಸುವ ಸ್ಥಳ ಇದೆ. ಇಲ್ಲಿ ನೈವೇದ್ಯ ಬೇಯಿಸಿ ನೀರನ್ನು ಹೊರ ಬಿಡುತ್ತಾರೆ. ಕನಕ ದಾಸರು ಅಲ್ಲಿಂದ ತಿಳಿಯನ್ನು ಹಿಡಿದು ರೊಟ್ಟಿ ಮಾಡಿ ನೈವೇದ್ಯ ಮಾಡುತ್ತಿದ್ದರು. ಒಂದು ದಿನ ಮಧ್ಯಾಹ್ನ ಮಹಾಪೂಜೆಯ ನೈವೇದ್ಯಕ್ಕೆ ಅನ್ನ ತಂದಾಗ ಕನಕದಾಸರು ಈಗಾಗಲೇ ಗಂಜಿ ತಿಳಿಯನ್ನು ನೈವೇದ್ಯ ಮಾಡಿರುವುದರಿಂದ ಕೃಷ್ಣನಿಗೆ ಸಂದಾಯಿತು ಎನ್ನುವುದನ್ನು ಅರಿತ ವಾದಿರಾಜರು “ಬೇರೆ ನೈವೇದ್ಯವನ್ನು ತನ್ನಿ’ ಎಂದರು. ಘಟನೆಯ ಸ್ಮರಣೆಗಾಗಿ ವಾದಿರಾಜರು ಪ್ರತಿನಿತ್ಯ ರೊಟ್ಟಿ, ಅನ್ನ-ತಿಳಿಯನ್ನು ಕೃಷ್ಣನಿಗೆ ನಿವೇದಿಸುವ ಸಂಪ್ರದಾಯ ಆರಂಭಿಸಿ ಕನಕದಾಸರಿಗೆ ಶಾಶ್ವತ ಸ್ಥಾನ ಕಲ್ಪಿಸಿದರು. ಆಗ ಗೆರಟೆಯಲ್ಲಿ ಗಂಜಿ ಇರಿಸಿದರೆ ಈಗ ಬೆಳ್ಳಿಯ ಗೆರಟೆಯಲ್ಲಿ ಗಂಜಿ, ರೊಟ್ಟಿ ಇಟ್ಟು ನೈವೇದ್ಯ ಮಾಡುತ್ತಾರೆ.
ಕನಕ ಪ್ರತಿಷ್ಠೆ
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯ ಅವಧಿಯಲ್ಲಿ (2000-01) ಕನಕದಾಸರ ಪ್ರತಿಮೆಯನ್ನು ಕೃಷ್ಣಮಠದ ಬಡಗುಮಾಳಿಗೆಯ ಮಹಡಿಯಲ್ಲಿ ಪ್ರತಿಷ್ಠಾಪಿಸಿ ಸಭಾಂಗಣಕ್ಕೆ ಕನಕಮಂಟಪ ಎಂದು ನಾಮಕರಣ ಮಾಡಿದರು. ಆಗಿನ ರಾಷ್ಟ್ರಮಟ್ಟದ ಕನಕದಾಸ ಜಯಂತಿ ಉತ್ಸವದಲ್ಲಿ ಮುಖ್ಯಮಂತ್ರಿ ಯಾಗಿದ್ದ ಎಸ್.ಎಂ.ಕೃಷ್ಣ, ಎಲ್.ಕೆ. ಆಡ್ವಾಣಿ ಹಾಗೂ ಹಲವು ಗಣ್ಯರು ಪಾಲ್ಗೊಂಡಿದ್ದರು.
ಕನಕಗೋಪುರ
ಕನಕನಕಿಂಡಿ ಎದುರಿನ “ಕಟ್‌ಪಂಜರ’ ಅಂಕಣ ದಲ್ಲಿದ್ದ ಗೋಪುರವನ್ನು ಕೃಷ್ಣಾಪುರ ಮಠದ ಶ್ರೀ ವಿದ್ಯಾಪೂರ್ಣತೀರ್ಥರು ತಮ್ಮ ಪರ್ಯಾಯದ
ಅವಧಿಯಲ್ಲಿ (1910-11) ನಿರ್ಮಿಸಿದ್ದರು. ಗೋಪುರವನ್ನು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು ತಮ್ಮ ಪರ್ಯಾಯ ಅವಧಿ ಯಲ್ಲಿ ನಿರ್ಮಿಸಿ “ಕನಕಗೋಪುರ’ ಎಂದು ನಾಮ ಕರಣ ಮಾಡಿ 11-05-2005 ರಂದು ಉದ್ಘಾಟಿಸಿ ದ್ದರು. 15 ವರ್ಷಗಳ ಬಳಿಕ ಶಿಷ್ಯ ಶ್ರೀ ಈಶಪ್ರಿಯತೀರ್ಥರು ಪರ್ಯಾಯ ಪೂಜಾ ದೀಕ್ಷಿತರಾಗಿ ಕನಕದಾಸರ ಸ್ಮರಣೆ ಮಾಡುತ್ತಿದ್ದಾರೆ.
ವಾದಿರಾಜರು 120, ಕನಕದಾಸರು 100
ವಾದಿರಾಜಸ್ವಾಮಿಗಳೂ ಕನಕದಾಸರೂ ಸಮಕಾಲೀನರು. ವಾದಿರಾಜಸ್ವಾಮಿಗಳು ಅಷ್ಟ ಮಠಗಳಿಗೆ ರಥಬೀದಿ ಸುತ್ತಲೂ ಪ್ರತ್ಯೇಕ ಅಸ್ತಿತ್ವ ಕೊಟ್ಟದ್ದು ಮಾತ್ರವಲ್ಲದೆ ಇವುಗಳ ಮಧ್ಯ ಮತ್ತು ಶ್ರೀಕೃಷ್ಣ ಮಠದ ಗರ್ಭಗುಡಿಯ ನೇರವಾಗಿ ಕನಕದಾಸರಿಗೆ ವಾಸ ವ್ಯವಸ್ಥೆ ಮಾಡಿದರು. ಅವರಿಬ್ಬರಿಗಿದ್ದ ನಂಟನ್ನು ಇಬ್ಬರೂ ಬದುಕಿದ ವಯೋಮಾನ ದೃಢೀಕರಿಸುತ್ತದೆ. ವಾದಿರಾಜ ಸ್ವಾಮಿಗಳು 1481ರಿಂದ 1601ರ ವರೆಗೆ, ಕನಕದಾಸರು 1509ರಿಂದ 1609ರ ವರೆಗೆ ಜೀವಿಸಿದ್ದರು. ಒಬ್ಬರು 120 ವರ್ಷ, ಇನ್ನೊಬ್ಬರು 100 ವರ್ಷ ಬಾಳಿ ಬೆಳಗಿದ್ದರು.
ಈ ವರ್ಷದ ವಿಶೇಷ- ಆಡಳಿತ ಸಂಬಂಧ!
ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡಾದಲ್ಲಿ (ತಿಮ್ಮಪ್ಪ ನಾಯಕ) ಜನಿಸಿದರು. ಅವರ ಕೀರ್ತನೆಗಳೆಲ್ಲ ಹಾವೇರಿ ಜಿಲ್ಲೆಯಲ್ಲಿರುವ ಕಾಗಿನೆಲೆ ಆದಿಕೇಶವರಾಯ ನಿಗೆ ಸಮರ್ಪಣೆಗೊಳ್ಳುತ್ತದೆ. ಹುಟ್ಟೂರು ಬಾಡ ಇರುವ ಶಿಗ್ಗಾವಿ ಕ್ಷೇತ್ರವನ್ನು ಪ್ರತಿನಿಧಿಸುವ ಬಸವರಾಜ ಬೊಮ್ಮಾಯಿ ರಾಜ್ಯದ ಹಾಲಿ ಗೃಹ ಸಚಿವರು ಹಾಗೂ ಹಾವೇರಿ ಮತ್ತು ಉಡುಪಿ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರು. ಅವರು ಡಿ. 3ರಂದು ಉಡುಪಿ ಜಿಲ್ಲಾಡಳಿತ ಆಯೋಜಿಸಿರುವ ಕನಕ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕನಕದಾಸರೂ ತಿಮ್ಮಪ್ಪ ನಾಯಕರಾಗಿದ್ದಾಗ ಸೇನಾಡಳಿತವನ್ನು ನಡೆಸಿದ್ದರು ಎನ್ನುವುದನ್ನು ಸ್ಮರಿಸಬಹುದು.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
MUST WATCH
ಹೊಸ ಸೇರ್ಪಡೆ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.