ಯುಜಿಡಿ ಸಂಪರ್ಕ ಪಡೆದ ಗ್ರಾಹಕರಿಂದ ಬಳಕೆ ಶುಲ್ಕ ಸಂಗ್ರಹಕ್ಕೆ ನಿರ್ಣಯ
ಉಡುಪಿ ನಗರಸಭೆ ಸಾಮಾನ್ಯ ಸಭೆ
Team Udayavani, Sep 30, 2021, 5:50 AM IST
ಉಡುಪಿ: ನಗರದೊಳಗಿನ ಪ್ರತಿಯೊಂದು ಆಸ್ತಿಗೆ ಒಳಚರಂಡಿ ಸಂಪರ್ಕ ನೀಡಲು ಹಾಗೂ ನಿರ್ವಹಣೆ ಮಾಡಲು ನಗರಸಭೆಯಿಂದ ನಿರ್ಧರಿಸಲಾಗಿದೆ. ಅದರ ಭಾಗವಾಗಿ ಯುಜಿಡಿ ಸಂಪರ್ಕ ಹೊಂದಿರುವ ಗ್ರಾಹಕರಿಂದ ಬಳಕೆ ಶುಲ್ಕ ಸಂಗ್ರಹಿಸುವ ಬಗ್ಗೆ ಬುಧವಾರ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು.
ನಗರಸಭೆ ಪೌರಾಯುಕ್ತ ಡಾ| ಉದಯ ಶೆಟ್ಟಿ ಅವರು, ನಗರದಲ್ಲಿ ಹಂತ ಹಂತವಾಗಿ ಯುಜಿಡಿ ವಿಸ್ತರಣೆಯಾಗಲಿದೆ. ಅದರ ಭಾಗವಾಗಿ ಈಗಾಗಲೇ ಸಂಪರ್ಕ ಪಡೆದುಕೊಂಡ ಹಾಗೂ ಪಡೆದುಕೊಳ್ಳಲು ಅನುಮತಿಗೆ ಅರ್ಜಿ ಸಲ್ಲಿಸಿದವರಿಂದ ಮಾಸಿಕ ಯುಜಿಡಿ ಬಳಕೆ ಶುಲ್ಕವನ್ನು ಪಡೆಯಲಾಗುತ್ತದೆ. ಮಾಸಿಕ ಮನೆಗಳಿಂದ 15 ರೂ., ವಾಣಿಜ್ಯ ಮಳಿಗೆಯಿಂದ 60 ರೂ. ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾವಿಸಿದರು.
ಮುಖ್ಯಮಂತ್ರಿ ಭೇಟಿ
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ನಗರದೊಳಗಿನ ಯುಜಿಡಿ ಅಭಿವೃದ್ಧಿಗೆ ಸುಮಾರು 325 ಕೋ.ರೂ. ಡಿಪಿಆರ್ ಆಗಿದೆ. ಈಗಾಗಲೇ ಡಿಪಿಆರ್‌ಗೆ ಅನುಮೋದನೆಯೂ ದೊರಕಿದೆ. ಶೀಘ್ರದಲ್ಲಿ ನಗರಸಭೆ ಅಧ್ಯಕ್ಷರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಪರ್ಯಾಯಕ್ಕೆ ವಿಶೇಷ ಅನುದಾನ, ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆಗೆ ಸಂಬಂಧಿಸಿದ ನಿವೇಶನವನ್ನು ಉಚಿತವಾಗಿ ನೀಡುವಂತೆ ಹಾಗೂ ಸುಸಜ್ಜಿತ ಯುಜಿಡಿ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗುವುದು ಎಂದರು.
ಪೊಲೀಸ್ ರಕ್ಷಣೆ ಬಳಸಿ
ಹಲವು ದಶಕಗಳ ಹಿಂದೆಯೇ ನಗರಸಭೆಗೆ ಬರೆದುಕೊಟ್ಟ ರಸ್ತೆಯಲ್ಲಿ ಕೆಲವು ಸಾರ್ವಜನಿಕರು ಇದೀಗ ತೊಂದರೆ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಅಡಚಣೆಯಾಗುತ್ತಿದೆ ಎಂದು ಜಯಂತಿ ಕೆ. ಪೂಜಾರಿ, ಸುಂದರ್ ಜೆ. ಕಲ್ಮಾಡಿ ಸೇರಿದಂತೆ ಇತರ ಸದಸ್ಯರು ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ. ರಘುಪತಿ ಭಟ್ ಆವರು, ನಗರಸಭೆ ಅನುದಾನದಿಂದ ಅಂತಹ ರಸ್ತೆಗೆ ಲೈಟ್ ಅಥವಾ ಇತರ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ ಆ ರಸ್ತೆಗಳು ಸರಕಾರದ ಆಸ್ತಿಯಾಗುತ್ತದೆ. ಕಾಮಗಾರಿ ನಡೆಸುವ ಕಡೆಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಬಿಡುಗಡೆಯ ಮುನ್ನವೇ ‘ಕೋಟಿಗೊಬ್ಬ’ನಿಗೆ ಸಿನಿಮಾ ಚೋರರ ಬೆದರಿಕೆ
ನಿಯಮ ಜಾರಿಗೊಳಿಸಿ
ನಗರದಲ್ಲಿ 10 ಫ್ಲೆಕ್ಸ್‌ಗಳಿಗೆ ಅನುಮತಿ ಪಡೆದು 100 ಫ್ಲೆಕ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಕೆಲವೆಡೆಗಳಲ್ಲಿ ಅನುಮತಿ ಪಡೆಯದೆ ಫ್ಲೆಕ್ಸ್ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಕೆಲವೆಡೆ ಪರವಾನಿಗೆ ಅವಧಿ ಮುಗಿದ ಅನಂತರವೂ ಫ್ಲೆಕ್ಸ್ ಹಾಗೆಯೇ ಬಿಡಲಾಗುತ್ತಿದೆ. ಅಲ್ಲದೆ ನಗರದಲ್ಲಿರುವ ಅನಧಿಕೃತ ಹೋಲ್ಡಿಂಗ್‌ಗಳನ್ನು ಪತ್ತೆಹಚ್ಚಿ ಅವುಗಳಿಗೆ ದಂಡ ವಿಧಿಸುವುದರೊಂದಿಗೆ ಜಾಹೀರಾತು ಶುಲ್ಕ ಪಡೆದುಕೊಳ್ಳಬೇಕು. ನಗರದಲ್ಲಿ ಎಷ್ಟು ಹೋಲ್ಡಿಂಗ್‌ಗಳಿವೆ, ಅವುಗಳಲ್ಲಿ ಎಷ್ಟು ಅಧಿಕೃತ ಹಾಗೂ ಅನಧಿಕೃತ ಎಂದು ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಕೊಡವೂರು, ಶ್ರೀಕೃಷ್ಣರಾವ್ ಕೊಡಂಚ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ನಗರಸಭೆ ಕಂದಾಯ ಅಧಿಕಾರಿ ಪ್ರತಿಕ್ರಿಯಿಸಿ, ನಗರದಲ್ಲಿನ ಹೋಲ್ಡಿಂಗ್‌ಗಳಿಂದ ಜಾಹೀರಾತು ಶುಲ್ಕ ಹಾಗೂ ಆಸ್ತಿ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷ 11 ಲ.ರೂ. ಸಂಗ್ರಹಿಸಿದ್ದು, 2021-22ನೇ ಸಾಲಿನಲ್ಲಿ 3 ಲ.ರೂ. ಸಂಗ್ರಹಿಸಲಾಗಿದೆ ಎಂದರು.
ವಿನಾಯಿತಿಗೆ ಅವಕಾಶ
ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸುತ್ತಿರುವ ಸ್ವಸಹಾಯ ಸಂಸ್ಥೆಗಳು ಕೊರೊನಾ ಲಾಕ್‌ಡೌನ್ ಸಂದರ್ಭ ವಾಹನಗಳ ಬಾಡಿಗೆ ಶುಲ್ಕ 5,000 ರೂ. ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಅಧ್ಯಕ್ಷರು ಪ್ರಸ್ತಾವಿಸಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿಗೆ ಈಗಾಗಲೇ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿರುವ ಟೆಂಡರ್ ಅವಧಿ ಮುಕ್ತಾಯಗೊಳ್ಳುತ್ತಿರುವ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ. ರಘುಪತಿ ಭಟ್, ಮುಂಬಯಿ ಮೂಲದ ಖಾಸಗಿ ಸಂಸ್ಥೆಗೆ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಬಗ್ಗೆ ಸಾಧ್ಯತಾ ಅಧ್ಯಯನ ವರದಿ ನೀಡುವಂತೆ ತಿಳಿಸಲಾಗಿದೆ ಎಂದರು.
ನಗರಸಭೆಯೊಳಗೆ ಕೇಬಲ್ ಅಳವಡಿಕೆಗೆ ಅನುಮತಿ ಪಡೆಯದೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೇಳೆ ಕೆಲವೆಡೆ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದು ಹೋಗಿದೆ. ಜತೆಗೆ ರಸ್ತೆಗೆ ಅಳವಡಿಸಲಾದ ಇಂಟರ್‌ಲಾಕ್ ಅಗೆದು ಹಾಗೆಯೇ ಬಿಟ್ಟು ಹೋಗುತ್ತಿರುವ ಬಗ್ಗೆ ಸದಸ್ಯರು ದೂರಿದರು.
ನಗರಸಭೆ ಎಂಜಿನಿಯರ್ ದುರ್ಗಾಪ್ರಸಾದ್, ಅನುಮತಿ ನೀಡುವ ಸಂದರ್ಭ ಅವರಿಂದ ಒಂದಷ್ಟು ಮೊತ್ತವನ್ನು ಠೇವಣಿ ಇಡಲಾಗುತ್ತದೆ. ಅವರು ನಿಯಮ ಉಲ್ಲಂ ಸಿದರೆ ಅಥವಾ ನಗರಸಭೆ ಆಸ್ತಿಗೆ ಹಾನಿ ಮಾಡಿದರೆ, ದಂಡ ಸಮೇತ ಮೊತ್ತವನ್ನು ಕಡಿತಗೊಳಿಸಿ, ಉಳಿದ ಹಣವನ್ನು ಅವರಿಗೆ ನೀಡಲಾಗುತ್ತದೆ. ಅನುಮತಿ ಪಡೆಯದೆ ಕಾಮಗಾರಿ ನಡೆಸಲು ಅವಕಾಶವಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ನಗರಸಭೆಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.
ರಾ.ಹೆ.ಯಿಂದ ಆಗುತ್ತಿರುವ ಸಮಸ್ಯೆ, ಬೀದಿದೀಪದ ಸಮಸ್ಯೆ, ಯುಜಿಡಿ ಸಮಸ್ಯೆ, ಕುಡಿಯುವ ನೀರಿನಲ್ಲಿ ಉಪ್ಪು ನೀರು ಮಿಶ್ರಣವಾಗುತ್ತಿರುವುದು, ಆಹಾರ ಕಲಬೆರಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸದಸ್ಯರಾದ ಟಿ.ಜಿ. ಹೆಗ್ಡೆ, ಮಂಜುಳಾ ವಿ. ನಾಯಕ್, ಶ್ರೀಶ ಕೊಡವೂರು, ಗಿರೀಶ್ ಎಂ. ಅಂಚನ್, ವಿಜಯ ಕೆ., ವಿಜಯಲಕ್ಷ್ಮೀ, ನಾಮನಿರ್ದೇಶಿತ ಸದಸ್ಯ ದಿನೇಶ್ ಪೈ ಅವರು ಮಾತನಾಡಿದರು.
ಶಾಸಕ ರಘುಪತಿ ಭಟ್ ಸಾಂಕೇತಿಕವಾಗಿ ಮುಖ್ಯಮಂತ್ರಿ ಆರೋಗ್ಯ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ ಉಪಸ್ಥಿತರಿದ್ದರು.
ರಸ್ತೆಗಳು ಹೊಂಡ ಮುಕ್ತ
ನಗರದ ರಸ್ತೆಯಲ್ಲಿ ಹೊಂಡಗಳು ತುಂಬಿರುವ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಸ್ತಾವಿಸಿದ್ದು, ಇದಕ್ಕೆ ಶಾಸಕ ಕೆ. ರಘುಪತಿ ಭಟ್ ಪ್ರತಿಕ್ರಿಯಿಸಿ, ಪರ್ಯಾಯ ಸಮೀಪಿಸುತ್ತಿದೆ. ನವೆಂಬರ್‌ನಲ್ಲಿ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಪ್ರಾರಂಭವಾಗುತ್ತದೆ. ಪರ್ಯಾಯ ಅವಧಿಯಲ್ಲಿ ನಗರಸಭೆ ರಸ್ತೆಗಳು ಹೊಂಡ ಮುಕ್ತವಾಗಿರಬೇಕು ಎಂದರು.
ಖಾಲಿ ನಿವೇಶನ ಸ್ವಚ್ಛಗೊಳಿಸಿ
ನಗರದಲ್ಲಿ ನೂರಾರೂ ನಿವೇಶನಗಳು ನಿರ್ವಹಣೆಯಿಲ್ಲದೆ, ದೊಡ್ಡ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಸ್ಥಳೀಯ ಬಡ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಆಳೆತ್ತರ ಬೆಳೆದು ನಿಂತ ಪೊದೆಗಳಲ್ಲಿ ವಿಷ ಜಂತುಗಳು ಸೇರಿಕೊಂಡಿವೆ. ಹಾವುಗಳು ಜನನಿಬಿಡ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತಿದೆ. ಈ ಬಗ್ಗೆ ಗಮನಹರಿಸಿ, ನಗರದೊಳಗಿನ ಸಮಸ್ಯೆ ಪರಿಹರಿಸಿ ಎಂದು ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಶ್ರೀಕೃಷ್ಣರಾವ್ ಕೊಡಂಚ ವಿಷಯ ಮಂಡಿಸಿದರು.
ನಗರದೊಳಗಿನ ಖಾಲಿ ನಿವೇಶನದಲ್ಲಿ ಬೆಳೆದು ನಿಂತ ಮರ ಹಾಗೂ ಗಿಡಗಳ ತೆರವಿಗೆ ಕೆಲಸಗಾರರ ವೇತನ ಸೇರಿದಂತೆ ಇತರ ಕೆಲಸಗಳಿಗೆ ನಗರಸಭೆ ನಿಧಿ ಬಳಕೆ ಮಾಡಬೇಕಾಗುತ್ತದೆ. ಜನಪ್ರತಿನಿಧಿಗಳು 5 ವರ್ಷಗಳಿಂದ ಬಳಕೆಯಾಗದಿರುವ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಹಾಗೂ ಭಾರೀ ಗಾತ್ರದ ಮರಗಳು, ಪೊದೆಗಳಿರುವ ನಿವೇಶನಗಳ ಪಟ್ಟಿ ನೀಡಿದರೆ, ಅದನ್ನು ನಗರಸಭೆ ನಿಧಿ ಬಳಸಿಕೊಂಡು ಶೀಘ್ರದಲ್ಲಿ ತೆರವು ಗೊಳಿಸಲಾಗುತ್ತದೆ ಎಂದು ಎಇಇ ಮೋಹನ್‌ರಾಜ್ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.