Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ
Team Udayavani, Oct 24, 2024, 6:46 PM IST
ಉಡುಪಿ: ರಾಮ, ಕೃಷ್ಣ, ವೇದವ್ಯಾಸರಾದಿಯಾಗಿ ಭಗವಂತನ ಬಹುತೇಕ ಎಲ್ಲ ಅವತಾರಗಳು ಉತ್ತರ ಭಾರತದಲ್ಲಿ ನಡೆದರೆ, ಶಂಕರ, ರಾಮಾನುಜ, ಮಧ್ವ ಈ ಆಚಾರ್ಯತ್ರಯರು ದಕ್ಷಿಣದಲ್ಲಿ ಅವತರಿಸಿದರು. ಹೀಗಾಗಿ ಉತ್ತರ ಭಗವಂತನ ಸ್ಥಾನವಾದರೆ, ದಕ್ಷಿಣ ಭಕ್ತರ ಸ್ಥಾನ. ಇದುವರೆಗೆ ಬಹುತೇಕ ಪ್ರಾಚ್ಯವಿದ್ಯಾ ಸಮ್ಮೇಳನವು ಉತ್ತರದಲ್ಲಿ ನಡೆಯುತ್ತಿದ್ದರೆ ಈಗ ದಕ್ಷಿಣೋತ್ತರದ ಸಂಗಮ ಸಮಾವೇಶವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ (ಬಿವಿಪಿ), ಪರ್ಯಾಯ ಶ್ರೀಪುತ್ತಿಗೆ ಮಠ, ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. ಸಹಯೋಗದೊಂದಿಗೆ ಗುರುವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆರಂಭಗೊಂಡ ಮೂರು ದಿನಗಳ ಅಖೀಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ (ಜ್ಞಾನದ ಹಬ್ಬ- ಎಐಒಸಿ) ಉದ್ಘಾಟನ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು ದಿಲ್ಲಿ ಆಡಳಿತದ ರಾಜಧಾನಿಯಾದರೆ, ಹರಿದ್ವಾರ, ಉಜ್ಜಯಿನಿ, ಕಾಶಿ, ಉಡುಪಿ ಸಾಂಸ್ಕೃತಿಕ ರಾಜಧಾನಿಗಳೆಂದರು.
ಭಾರತದ ಪ್ರಾಚೀನ ವಿದ್ಯೆ ಸನಾತನ ಧರ್ಮದ ರಕ್ಷಣೆ ಜರೂರಾಗಿ ನಡೆಯಬೇಕಾಗಿದೆ. ಸಂಸ್ಕೃತಿಯ ರಕ್ಷಣೆ ನಡೆಯಬೇಕಾದರೆ ಸಂಸ್ಕೃತದ ರಕ್ಷಣೆಯಾಗಬೇಕಾಗಿದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಅಧ್ಯಾತ್ಮ ವಿದ್ಯೆಯೇ ನಿಜವಾದ ವಿದ್ಯೆಯಾಗಿದೆ. ಪ್ರಾಚೀನ ವಿದ್ಯೆ ರಕ್ಷಣೆಯಾಗಬೇಕಾದರೆ ಪಾತ್ರದ ಸ್ಥಾನದಲ್ಲಿರುವ ಸಂಸ್ಕೃತದ ರಕ್ಷಣೆಯಾಗಬೇಕು. ಎಲ್ಲೆಲ್ಲಿಯೂ ಏಕರೂಪದಲ್ಲಿರುವುದು ಸಂಸ್ಕೃತದ ವೈಶಿಷ್ಟéವಾಗಿದೆ ಎಂದು ಶ್ರೀಪಾದರು ನುಡಿದರು.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀವಿದ್ಯೆàಶತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಹರಿದ್ವಾರ ಪತಂಜಲಿ ಯೋಗಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣ ಅವರು ಮಾತನಾಡಿ, ಸಂಸ್ಕೃತದೊಂದಿಗೆ ಸಂಸ್ಕೃತಿ ಉಳಿಯಬೇಕಾಗಿದೆ. ಇವೆರಡನ್ನೂ ಜೋಡಿಸಿಕೊಳ್ಳಬೇಕು. ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳುವ ಮೂಲಕ ಸಾವಿರಾರು ವರ್ಷಗಳ ಶ್ರುತಿ ಪರಂಪರೆಯನ್ನು ರಕ್ಷಿಸಬೇಕಾಗಿದೆ. ಬ್ರಿಟಿಷರು ಹುಟ್ಟು ಹಾಕಿದ ಆರ್ಯದ್ರಾವಿಡ ವಿಭಜನೆಯನ್ನು ಈಜಿಪ್ಟ್, ಮೆಸೆಪೊಟೋಮಿಯ, ಹರಪ್ಪ- ಮೊಹೆಂಜೊದಾರೋ ಸಂಸ್ಕೃತಿ ಅಲ್ಲಗಳೆಯುತ್ತಿದೆ.
ಮೊಹೆಂಜೊದಾರೋದಲ್ಲಿರುವ ಪ್ರಾಚೀನ ನಿವೇಶನಗಳ ಅಧ್ಯಯನವನ್ನು ಪತಂಜಲಿ ಯೋಗ ಪೀಠ ನಡೆಸಲಿದೆ ಎಂದರು.
ಅಧ್ಯಕ್ಷತೆಯನ್ನು ಎಐಒಸಿ ಅಧ್ಯಕ್ಷರಾದ ಪುಣೆಯ ವಿ.ವಿ. ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕಿ ಪ್ರೊ|ಸರೋಜಾ ಭಾಟೆ ವಹಿಸಿದ್ದರು. ಭಾರತೀಯ ಭಾಷಾ ಸಮಿತಿ ಅಧ್ಯಕ್ಷ ಚಮೂ ಕೃಷ್ಣ ಶಾಸ್ತ್ರಿ, ಕರ್ನಾಟಕ ಸಂಸ್ಕೃತ ವಿ.ವಿ. ಕುಲಪತಿ ಪ್ರೊ| ಅಹಲ್ಯಾ, ಬಿವಿಪಿ ಅಧ್ಯಕ್ಷ ಪ್ರೊ| ಕೊರಡ ಸುಬ್ರಹ್ಮಣ್ಯಂ, ಸ್ಥಳೀಯ ಕಾರ್ಯದರ್ಶಿ ಪ್ರೊ| ಶಿವಾನಿ ವಿ., ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಂಗಳೂರು ಶ್ರೀನಿವಾಸ ವಿ.ವಿ. ಕುಲಾಧಿಪತಿ ಡಾ| ರಾಘವೇಂದ್ರ ರಾವ್, ಮಣಿಪಾಲ ಮಾಹೆ ಸಹಕುಲಪತಿ ಡಾ| ನಾರಾಯಣ ಸಭಾಹಿತ್ ಮೊದಲಾದವರು ಉಪಸ್ಥಿತರಿದ್ದರು.
ದಿಲ್ಲಿ ಸಂಸ್ಕೃತ ವಿ.ವಿ. ಹೊರತಂದ ಹತ್ತು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಬಿವಿಪಿ ಟ್ರಸ್ಟ್ ಅಧ್ಯಕ್ಷ ಪ್ರೊ| ವೀರನಾರಾಯಣ ಪಾಂಡುರಂಗಿ ಸ್ವಾಗತಿಸಿ, ದಿಲ್ಲಿ ಸಂಸ್ಕೃತ ವಿ.ವಿ. ಕುಲಪತಿ ಡಾ| ಶ್ರೀನಿವಾಸ ವರಖೇಡಿ ಪ್ರಸ್ತಾವಿಸಿದರು. ಎಐಒಸಿ ಕಾರ್ಯದರ್ಶಿ ಪ್ರೊ| ಕವಿತಾ ಹೊಳೆ ವಂದಿಸಿದರು. ಕರ್ನಾಟಕ ಸಂಸ್ಕೃತ ವಿ.ವಿ.ಯ ಡಾ| ಶ್ರುತಿ, ಚೈತನ್ಯ ಲಕ್ಕುಂಡಿ ಕಾರ್ಯಕ್ರಮ ನಿರ್ವಹಿಸಿದರು.
ಆಕ್ಸ್‌ಫರ್ಡ್, ಹಾರ್ವರ್ಡ್ ಬದಲು ಗುರುಕುಲ
ಮುಂದಿನ ದಿನಗಳಲ್ಲಿ ಆಕ್ಸ್‌ಫರ್ಡ್, ಹಾರ್ವರ್ಡ್ ವಿದ್ಯಾಲಯದ ಬದಲು ಭಾರತದ ಗುರುಕುಲಗಳಲ್ಲಿ ಪಡೆದ ಶಿಕ್ಷಣ ಮಹತ್ವದ ಸ್ಥಾನ ಪಡೆಯು ವಂತಾ ಗಬೇಕು. ಅದಕ್ಕಾಗಿ ವಿರಾಟ್ ಪರಿಕಲ್ಪನೆ ಬೇಕು. ಒಂದು ಬಾರಿ ಸಂಸ್ಕೃತದ ಪ್ರಯೋಜನ ತಿಳಿಸಿದರೆ ಜನರು ಸಹಜವಾಗಿ ಸ್ವಾಗತಿಸುವರು. ಭವಿಷ್ಯದ ದಿನಗಳು ಸನಾತನ ಧರ್ಮ, ಸಂಸ್ಕೃತದ ದಿನಗಳಾಗಲಿವೆ ಎಂದು ಬಾಬಾರಾಮ್ ದೇವ್ ವಿಶ್ವಾಸ ವ್ಯಕ್ತಪಡಿಸಿದರು. ಸಮ್ಮೇ ಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಮೂಲ, ಋಷಿ ಮೂಲದಿಂದ ಬಂದ ಧರ್ಮ, ಸಂಸ್ಕೃತಿಯನ್ನು ರಕ್ಷಿಸಬೇಕಿದೆ. ಭಾರ ತೀಯ ಸಂಸ್ಕೃತಿ ಕುರಿತು ಕೀಳರಿಮೆ ಅಗತ್ಯವಿಲ್ಲ. ಮುಂದೆ ವಿದೇಶಗಳಿಂದಲೂ ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳುವ ವಿಶ್ವ ಸಮ್ಮೇಳನವನ್ನು ಆಯೋ ಜಿಸಲು ಪತಂಜಲಿ ಸಂಸ್ಥೆ ಸಹಕರಿಸಲಿದೆ ಎಂದರು.
ಮಥುರಾ, ಕಾಶಿಯಂತೆ ಉಡುಪಿಯೂ ಪ್ರಸಿದ್ಧ ತೀರ್ಥ ಕ್ಷೇತ್ರ. ಮಧ್ವಾಚಾರ್ಯ ರಿಂದಾಗಿ ಒಂದು ಸಿದ್ಧಾಂತದ ಉಗಮ ಸ್ಥಾನ ವಾಗಿದೆ. ನಮ್ಮ ಶಿಕ್ಷಣವು ನಾಲ್ಕು ಬಗೆಯ ಪುರುಷಾರ್ಥಗಳನ್ನು ಸಾಧಿಸ ಬೇಕು. ಪತಂಜಲಿ ಸಂಸ್ಥೆ 5 ಲಕ್ಷ ಕೋ.ರೂ.ಗಳ ಪುರುಷಾರ್ಥ ಚತುಷ್ಟಯವನ್ನು ಧರ್ಮ, ದೇಶಕ್ಕಾಗಿ ಸಮರ್ಪಿಸಲಿದೆ ಎಂದರು.
ಐವರು ವಿದ್ವಾಂಸರಿಗೆ ಗೌರವ
ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ|ಶ್ರೀನಿವಾಸ ಅಡಿಗ, ನಿವೃತ್ತ ಪ್ರಾಂಶುಪಾಲ ಡಾ|ಎನ್.ಲಕ್ಷ್ಮೀ ನಾರಾಯಣ ಭಟ್, ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಮಂದಿರದ ಡಾ|ಎ.ವಿ.ನಾಗಸಂಪಿಗೆ, ಶತಾವಧಾನಿ ಉಡುಪಿ ರಾಮನಾಥಾಚಾರ್ಯ, ಕೇರಳದ ಪ್ರೊ|ಪಿ.ಸಿ.ಮುರಳಿಮಾಧವನ್ ಅವರಿಗೆ ಬಿವಿಪಿ ಯು ಮಹಾಮಹೋಪಾಧ್ಯಾಯ ಬಿರುದನ್ನಿತ್ತು ಗೌರವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಪಶುಪಾಲನ ಇಲಾಖೆಯಲ್ಲಿ ಶೇ.80 ಹುದ್ದೆಗಳು ಖಾಲಿ
Gadag: ಕೇವಲ 10 ಸಾವಿರ ರೂಪಾಯಿ ಬಡ್ಡಿ ಹಣ ವಾಪಸ್ ಕೊಡದಿದ್ದಕ್ಕೆ ಮನೆಯಿಂದ ಹೊರಹಾಕಿ ಕಿರುಕುಳ
Gadaga: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪೋಕ್ಸೋ ಕಾಯ್ದೆಯಡಿ ಇಬ್ಬರು ಆರೋಪಿಗಳ ಬಂಧನ
Kaup: ಧಾರ್ಮಿಕತೆಯೊಂದಿಗೆ ಟೂರಿಸಂಗೂ ಒತ್ತು
ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ… ಸಾಧು-ಸಂತರ ಮೂಲಕ ಈಶ್ವರಪ್ಪ ಶಕ್ತಿ ಪ್ರದರ್ಶನ