ಮಂಗಳೂರು ವಿಶ್ವವಿದ್ಯಾನಿಲಯ; ಇಂದಿನಿಂದ ಪದವಿ, ಸ್ನಾತಕೋತ್ತರ ಪರೀಕ್ಷೆ
Team Udayavani, Sep 16, 2020, 6:28 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಸೆ. 16ರಿಂದ ನಡೆಯಲಿವೆ. ಪದವಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 25ರ ವರೆಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 25ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ವಿ.ವಿ. ವ್ಯಾಪ್ತಿಯ 205 ಕೇಂದ್ರಗಳಲ್ಲಿ ಸುಮಾರು 48 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಹಿಂಬಾಕಿ ಇರುವ ವಿದ್ಯಾರ್ಥಿಗಳನ್ನೂ ಈ ಬಾರಿ ಒಟ್ಟಿಗೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಆತಂಕದ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಈ ಬಾರಿ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕಿತರು ಪರೀಕ್ಷೆ ಬರೆಯುವವರಿದ್ದರೆ ಅವರಿಗೆಂದು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ವ್ಯವಸ್ಥೆ
ಸಂಚಾರ ಸಮಸ್ಯೆ, ಕೊರೊನಾ ಪಾಸಿಟಿವ್ ಸೇರಿದಂತೆ ಸಕಾರಣದಿಂದ ಪರೀಕ್ಷೆಗೆ ಬರಲು ಅನಾನುಕೂಲವಾದರೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ವಿಶೇಷ ನೆಲೆಯಲ್ಲಿ ಪರೀಕ್ಷೆ ಬರೆಯಲು ಮಂಗಳೂರು ವಿ.ವಿ. ಅವಕಾಶ ಕಲ್ಪಿಸಿದೆ. ಅಂತಹ ವಿದ್ಯಾರ್ಥಿಗಳಿಗೆ ನವೆಂಬರ್ ಮೊದಲ ವಾರದಲ್ಲಿ ವಿಶೇಷ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಶುಲ್ಕ ರಹಿತವಾಗಿ ಪರೀಕ್ಷೆ ಬರೆಯಬಹುದು. ಆಯಾ ಕಾಲೇಜಿನ ಪ್ರಾಂಶುಪಾಲರು ಗೈರು ಹಾಜರಾತಿ ಆಗಿರುವ ವಿದ್ಯಾರ್ಥಿಗಳ ಪಟ್ಟಿ ವಿ.ವಿ.ಗೆ ಕಳುಹಿಸಿಕೊಡಬೇಕಿದೆ.
ಹೊರ ರಾಜ್ಯ ವಿ.ವಿ.ಗಳಲ್ಲಿ ಪರೀಕ್ಷೆ
ಕೋವಿಡ್ ಆತಂಕದಿಂದಾಗಿ ಹೊರ ರಾಜ್ಯಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಲ್ಲಿಗೆ ಆಗಮಿಸಲು ಅನನುಕೂಲವಾದ ಹಿನ್ನೆಲೆಯಲ್ಲಿ ಅವರ ರಾಜ್ಯಗಳಲ್ಲೇ ಅಲ್ಲಿನ ವಿವಿಗಳೊಂದಿಗೆ ಒಡಂಬಡಿಕೆ ಮಾಡಿ ಏಕಕಾಲದಲ್ಲೇ ಪರೀಕ್ಷೆ ನಡೆಯಲಿದೆ. ಅದರಂತೆ ಭೂತಾನ್‌ನ ಮೂವರಿಗೆ, ಮಣಿಪುರದ 26 ಮಂದಿ, ಜಮ್ಮು ಕಾಶ್ಮೀರದ ಇಬ್ಬರು, ಲಕ್ಷದ್ವೀಪದ 6 ಮಂದಿ ಅವರವರ ರಾಜ್ಯದಲ್ಲೇ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವಿ.ವಿ.ಯ ಪರೀಕ್ಷಾಂಗ ಕುಲಸಚಿವ ಪ್ರೊ| ಪಿ.ಎಲ್. ಧರ್ಮ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.