ಹುಬ್ಬಳ್ಳಿಯಲ್ಲಿ ಏಷ್ಯಾದ ಅತಿ ದೊಡ್ಡ ಭಗವದ್ಗೀತಾ ಜ್ಞಾನಲೋಕ ಅನಾವರಣ
15 ವರ್ಷಗಳ ಹಲವರ ಸಾರ್ಥಕ ಶ್ರಮ
Team Udayavani, May 20, 2022, 12:05 PM IST
ಹುಬ್ಬಳ್ಳಿ: “ಆ ಲೋಕಕ್ಕೆ ಕಾಲಿಟ್ಟರೆ ಸಾಕು ಬದುಕಿನ ದರ್ಶನವಾಗುತ್ತದೆ. ಏನೇನೋ ವಿಚಾರಕ್ಕೆ ಸಿಲುಕಿ ಗೊಂದಲಕ್ಕೆ ಸಿಲುಕುವುದು, ಧರ್ಮ, ಜಾತಿಗಳ ತಾಕಲಾಟ, ಐಭೋಗ ಜೀವನಕ್ಕೆ ಸಿಲುಕಿ ನೆಮ್ಮದಿ-ಶಾಂತಿ ಕಳೆದುಕೊಂಡು ಪರದಾಡುವ ಸ್ಥಿತಿ ಹಾಗೂ ಭ್ರಮಾಲೋಕದ ಪಯಣದ ಚಿತ್ರಣವಿದೆ. ಶಾಂತಿಯುತ ಬದುಕಿಗೆ ಭಗವದ್ಗೀತೆ, ವಚನಗಳು ಸೇರಿದಂತೆ ಸರ್ವಧರ್ಮಗಳ ಸಾರವನ್ನು ಉಣಬಡಿಸುತ್ತದೆ. ಏನನ್ನು ಮಾಡಬೇಕು, ಏನನ್ನು ಮಾಡಬಾರದು. ಸತ್ಯಯುಗದಲ್ಲಿ ಸ್ವರ್ಣಿಮ ಭಾರತದ ಪರಿಕಲ್ಪನೆ ಏನಾಗಿರಲಿದೆ ಎಂಬ ಮನಮುಟ್ಟುವ, ಹೊಸ ಹಾಗೂ ಸತ್ ಚಿಂತನೆಗಚ್ಚುವ ಮಾಹಿತಿ ಹೃದಯಕ್ಕೆ ತಟ್ಟುತ್ತದೆ, ಮೆದುಳಿನೊಳಗೆ ಚಿಂತನೆಯ ಕಿಡಿಯೊತ್ತಿಸುತ್ತದೆ…’
-ಇದು, ಭಗವದ್ಗೀತೆಯ ಸಾರದ ಆಧಾರದಲ್ಲೇ ವಿಶ್ವವನ್ನು ವ್ಯಾಖ್ಯಾನಿಸುವ, ನಿರಾಕಾರ, ಪರಂಧಾಮ ಪರಮಾತ್ಮನ ಧ್ಯಾನದೊಳಗೆ ಕರೆದೊಯ್ಯುವ, ಬದುಕಿನ ಸಾಕ್ಷಾತ್ಕಾರದ ಚಿತ್ರಣ ಕಣ್ಣ ಮುಂದೆ ನಿಲ್ಲಿಸುವ ಏಷ್ಯಾದ ಅತಿದೊಡ್ಡ ಭಗವದ್ಗೀತಾ ಜ್ಞಾನಲೋಕವೆಂಬ ಕಟ್ಟಡ. ಹೊರಗಡೆ ನೋಡುವುದಕ್ಕೆ ಅರಮನೆಗೆ ಸವಾಲೊಡ್ಡುವ ಭವ್ಯ ಕಟ್ಟಡ, ಒಳಗೆ ಕಾಲಿಟ್ಟರೆ ಬದುಕಿನ ಶಾಂತಿಗೆ ಬೇಕಾದ ಮಾರ್ಗದರ್ಶನ, ಚಿತ್ರಣ ಕಾಣ ಸಿಗುತ್ತದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿಯ ಗಾಮನಗಟ್ಟಿ ಪ್ರದೇಶ ವ್ಯಾಪ್ತಿಯಲ್ಲಿ ಭಗವದ್ಗೀತಾ ಜ್ಞಾನಲೋಕ ಎಂಬ ಅದ್ಭುತ ಲೋಕದ ಚಿತ್ರಣವಿದು.
ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ವಚನಗಳು, ಪುರಾಣಗಳು, ಸನಾತನ ಧರ್ಮ, ಧರ್ಮಗ್ರಂಥಗಳ ಸಾರದೊಂದಿಗೆ ಮನುಷ್ಯನ ಬದುಕನ್ನು ಸಮೀಕರಿಸಲಾಗಿದೆ. ನಮ್ಮ ಜೀವನದ ಮಾರ್ಗ ಏನಾಗಿದೆ, ಏನಾಗಬೇಕಾಗಿದೆ. ಭ್ರಮಾಲೋಕಕ್ಕೆ ಸಿಲುಕಿ ಬದುಕಿನ ಅಮೂಲ್ಯವಾದ ನೆಮ್ಮದಿ, ಶಾಂತಿಯನ್ನು ಕಳೆದುಕೊಂಡು ಯಾವ ಸ್ಥಿತಿಗೆ ತಲುಪಿದ್ದೇವೆ. ಅದರಿಂದ ಹೊರ ಬರುವ ಪರಿಹಾರೋಪಾಯಗಳೇನು ಎಂಬುದನ್ನು ಇಡೀ ಕಟ್ಟಡದಲ್ಲಿ ಎಳೆ, ಎಳೆಯಾಗಿ ಬಿಡಿಸಿಡಲಾಗಿದೆ. ಜತೆಗೆ ವಿಜ್ಞಾನ, ತಂತ್ರಜ್ಞಾನ ದುರ್ಬಳಕೆಯಿಂದ ಆಗುವ ಅಪಾಯಗಳನ್ನು ತಿಳಿಸಲಾಗುತ್ತಿದೆ.
ಮೂರು ಭಾಗಗಳಲ್ಲಿ ಸಾಕ್ಷಾತ್ಕಾರ ತಾಣ: ಭಗವದ್ಗೀತಾ ಜ್ಞಾನಲೋಕ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಜ್ಞಾನಲೋಕ, ಧ್ಯಾನಲೋಕ, ದೇವಲೋಕ ಎಂದು ಹೆಸರಿಸಲಾಗಿದೆ. ಜ್ಞಾನಲೋಕದಲ್ಲಿ ಆತ್ಮ ಸಾಕ್ಷಾತ್ಕರಣದ ಮಾಹಿತಿ ಇದ್ದರೆ, ಧ್ಯಾನಲೋಕದಲ್ಲಿ ಪರಮಾತ್ಮ, ಯೋಗದ ಚಿತ್ರಣ ಹೊಂದಿದೆ. ದೇವಲೋಕ ವಿಭಾಗ ಕಲಿಯುಗ ಅಂತ್ಯದ ನಂತರ ಬರಲಿರುವ ಸತ್ಯಯುಗದಲ್ಲಿ ಸ್ವರ್ಣಿಮ ಭಾರತದ ಪರಿಕಲ್ಪನೆ ಏನಾಗಿರುತ್ತದೆ. ವಿಶ್ವಕ್ಕೆ ಹೇಗೆ ಭಾರತ ಮಾರ್ಗದರ್ಶನವಾಗಬಲ್ಲದು ಎಂಬುದರ ಮಾಹಿತಿ ಮನಮುಟ್ಟುವಂತಿದೆ.
ವಿಶ್ವ ಚತುರ್ವಿಧ ಸೃಷ್ಟಿ ಹೊಂದಿದೆ. ಪಿಂಡಜ, ಅಂಡಜ, ಉದ್ಬೀಜ ಹಾಗೂ ಸ್ವೇರಜಗಳನ್ನು ಒಳಗೊಂಡಿದೆ. ಜಗದೊಳಗೆ ಜಾತಿ, ಧರ್ಮ, ವರ್ಣ, ಲಿಂಗ ತಾರತಮ್ಯ, ರಾಷ್ಟ್ರಭೇದವನ್ನು ಸೃಷ್ಟಿಸಿದವರು ಯಾರು, ಆತ್ಮಜ್ಞಾನಿ ಆದವನು ಈ ಎಲ್ಲವುಗಳನ್ನು ಮೀರಿ ನಿಂತಿರುತ್ತಾನೆ. ಅವನೇ ನಿರಾಕಾರಮೂರ್ತಿ ಪರಂಧಾಮ ಪರಮಾತ್ಮನಾಗಿದ್ದಾನೆ. ಇರುವ ಒಬ್ಬನೇ ದೇವರಿಗೆ ನಾವುಗಳು ಹಲವು ರೂಪ, ಆಕಾರ, ನೀಡಿ ಭಿನ್ನತೆ ಸೃಷ್ಟಿಸಿಕೊಂಡಿದ್ದೇವೆ ಎಂಬುದರ ಚಿತ್ರಣ ಅಲ್ಲಿದೆ.
ಬದುಕಿನ ಭ್ರಮಾಲೋಕಕ್ಕೆ ಸಿಲುಕುವ ಮನುಷ್ಯ ಹಲವು ಮೋಹಗಳಿಗೆ ಸಿಲುಕಿ ಬದುಕಿನ ನೆಮ್ಮದಿ-ಶಾಂತಿ ಕಳೆದುಕೊಂಡಿದ್ದಾನೆ. ಆತ್ಮನ ವಿಧರ್ಮವೆಂದರೆ ಅಹಂಕಾರ, ಮೋಹ, ಲೋಭ, ಚಿಂತೆ, ಅಪವಿತ್ರತೆ, ಕ್ರೋಧ, ಹಿಂಸೆ, ದುರಾಸೆಗಳಾಗಿವೆ. ಆತ್ಮನ ಸ್ವಧರ್ಮವೆಂದರೆ ಆನಂದ, ತೃಪ್ತಿ, ನಿರ್ಲಿಪ್ತ, ಆರೋಗ್ಯ, ಶಾಂತಿ ಆಗಿದೆ ಆಯ್ಕೆ ಯಾವುದಾಗಬೇಕು, ಆಧುನಿಕ ವಿಜ್ಞಾನ, ತಂತ್ರಜ್ಞಾನ ಹಲವು ಸೌಲಭ್ಯಗಳನ್ನು ತಂದಿಟ್ಟಿದ್ದರೂ ಅದರ ದುರ್ಬಳಕೆ, ಅತಿಯಾದ ಮೋಹದಿಂದ ಏನೆಲ್ಲಾ ಅವಘಡಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಚಿತ್ರಿಸಲಾಗಿದೆ. ಜ್ಯೋತಿರ್ಲಿಂಗಗಳ ದರ್ಶನವಿದೆ.
ಸತ್ಯಯುಗ ಆರಂಭದ ನಂತರದಲ್ಲಿ ಸ್ವರ್ಣಿಮ ಭಾರತದ ಪರಿಕಲ್ಪನೆ ಹೇಗಿರಲಿದೆ. ಇಲ್ಲಿನ ಪ್ರಕೃತಿ, ಕೃಷಿ-ತೋಟಗಾರಿಕೆ, ಶಿಕ್ಷಣ, ಕಲೆ, ಸಂಸ್ಕೃತಿ, ಸುವರ್ಣ ನಗರ, ವ್ಯಾಪಾರ, ವ್ಯವಹಾರ, ನೃತ್ಯ ಇತ್ಯಾದಿಗಳ ಮಾಹಿತಿ ನೀಡಲಾಗಿದ್ದು, 21 ವಂಶಾವಳಿಗಳನ್ನು ಹೆಸರಿಸಲಾಗಿದೆ. ಒಟ್ಟಾರೆ ಭವ್ಯ ಕಟ್ಟಡದಲ್ಲಿ ಒಟ್ಟು 83 ಭಾಗಗಳಾಗಿಸಿ ಬದುಕಿನ ಸಾಕ್ಷಾತ್ಕಾರದ ಚಿತ್ರಣ ಮೂಡಿಸಲಾಗಿದೆ. ಭವಿಷ್ಯದಲ್ಲಿ ಇದೊಂದು ಪ್ರಮುಖ ಆಕರ್ಷಣೀಯ ಹಾಗೂ ಧಾರ್ಮಿಕ ಪ್ರವಾಸಿ ತಾಣ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಭಗವದ್ಗೀತಾ ಜ್ಞಾನಲೋಕ ಬದುಕಿನ ಉತ್ತುಂಗ ಸ್ಥಿತಿಯ ಮಾಹಿತಿ ತಾಣವಾಗಿದೆ. ದೇವರೊಬ್ಬನೇ ಎಂಬ ಸಾರ ಹೊಂದಿದೆ. ವಿವಿಧ ವಿಶ್ವವಿದ್ಯಾಲಯಗಳು ವೃತ್ತಿಪರ ಇನ್ನಿತರೆ ಪದವಿಗಳನ್ನು ನೀಡುತ್ತವೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಭ್ರಮಾಲೋಕದಿಂದ ಹೊರತಂದು ಸಹಜ ರಾಜಯೋಗದ ಮೂಲಕ ಆತ್ಮಜ್ಞಾನ, ಶಾಂತಿ-ನೆಮ್ಮದಿ ಸ್ಥಿತಿ ಮೂಡಿಸುವ ಕಾರ್ಯ ಮಾಡುತ್ತದೆ ಎಂಬುದು ಬ್ರಹ್ಮಕುಮಾರ ಆನಂದ ಅವರ ಅನಿಸಿಕೆಯಾಗಿದೆ.
ವೀಕ್ಷಣೆಗೆ ಅವಕಾಶ ಯಾವಾಗ? ಭಗವದ್ಗೀತಾ ಜ್ಞಾನಲೋಕದ ವೀಕ್ಷಣೆ ಸಂಪೂರ್ಣ ಉಚಿತವಾಗಿದ್ದು, ಬೆಳಿಗ್ಗೆ 9ರಿಂದ ಮಧ್ಯಾಹ್ನ 1:30ರವರೆಗೆ ಹಾಗೂ ಸಾಯಂಕಾಲ 4ರಿಂದ 6ರವರೆಗೆ ಇದನ್ನು ವೀಕ್ಷಣೆ ಮಾಡಬಹುದಾಗಿದೆ. ಭವನದಲ್ಲಿರುವ ನಾಲ್ಕೈದು ಸೇವಕರು ಮಾಹಿತಿ ನೀಡುತ್ತಾರೆ. ಧ್ವನಿಮುದ್ರಿತ ವ್ಯವಸ್ಥೆಯಡಿಯಲ್ಲೂ ವೀಕ್ಷಣೆ ಮಾಡಬಹುದಾಗಿದೆ. ದೋಣಿಯಲ್ಲಿ ಕುಳಿತುಕೊಂಡು ಸ್ವರ್ಗಲೋಕದ ವೀಕ್ಷಣೆ ಮಾಡಬಹುದಾಗಿದೆ. ಭವನದಲ್ಲಿ ನಿರ್ಮಿಸಿದ ಕನ್ನಡಿಗಳನ್ನೊಳಗೊಂಡ ಮಾರ್ಗ ಬದುಕಿನ ಮಾರ್ಗ ಯಾವುದೆಂಬುದು ತಿಳಿಯದೆ ಗೊಂದಮಯ ಸ್ಥಿತಿಯ ಪ್ರತೀಕವಾಗಿದೆ.
15 ವರ್ಷಗಳ ಸಾರ್ಥಕ ಶ್ರಮದ ಪ್ರತೀಕ: ಹುಬ್ಬಳ್ಳಿಯಲ್ಲಿ ತಲೆ ಎತ್ತಿರುವ ಭಗವದ್ಗೀತೆ ಆಧಾರಿತ ಏಷ್ಯಾದ ಅತಿ ದೊಡ್ಡ ತಾಣ ಭಗವದ್ಗೀತಾ ಜ್ಞಾನಲೋಕ ಸುಮಾರು 15 ವರ್ಷಗಳ ಹಲವರ ಸಾರ್ಥಕ ಶ್ರಮ, ದಾನಿಗಳ ನೆರವಿನ ಪ್ರತೀಕವಾಗಿದೆ. ರಾಜಋಷಿ ಬ್ರಹ್ಮಕುಮಾರ ಬಸವರಾಜ ಅವರ ಮಾರ್ಗದರ್ಶನದಲ್ಲಿ ಅನೇಕ ಸೇವಾಕರ್ತರು, ದಾನಿಗಳು ಸೇರಿ ಭವ್ಯ ತಾಣ ನಿರ್ಮಿಸಲು ಸಾಧ್ಯವಾಗಿದೆ. ಸುಮಾರು 5.5 ಎಕರೆಯಷ್ಟು ಜಾಗದಲ್ಲಿ ಜ್ಞಾನಲೋಕ ಅರಳಿದೆ. ಮೂರಂತಸ್ತಿನ ಕಟ್ಟಡ ಇದಾಗಿದ್ದು, ಬದುಕಿನ ಸಾಕ್ಷಾತ್ಕಾರದ ಮ್ಯೂಸಿಯಂ, 80 ಕೋಣೆಗಳು, ಸುಮಾರು 1,500 ಜನರು ಆಸೀನರಾಗಬಹುದಾದ ಸಭಾಭವನ, 100 ಜನರು ಆಸೀನರಾಗಬಹುದಾದ ಪ್ರಸಾದ ನಿಲಯ, ಸ್ಟುಡಿಯೋ, ಹೋಮ್‌ಥೇಟರ್, ಪಾರ್ಕ್ ಇನ್ನಿತರೆ ವ್ಯವಸ್ಥೆ ಹೊಂದಿದೆ. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯ ಕಚೇರಿ ಮೌಂಟ್ ಅಬುದಲ್ಲಿದ್ದು, ಕರ್ನಾಟಕದಲ್ಲಿ ಏಳು ಪ್ರಾದೇಶಿಕ ಕಚೇರಿಗಳಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿಯಲ್ಲಿ ಕಚೇರಿ ಇದ್ದು, ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿ ರಾಜ್ಯದ 16 ಜಿಲ್ಲೆಗಳಲ್ಲದೆ, ಕೇರಳ ಹಾಗೂ ಆಂಧ್ರಪ್ರದೇಶದ ತಲಾ ಎರಡು ಜಿಲ್ಲೆಗಳು ಸೇರಿ ಒಟ್ಟು 20 ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿದೆ.
ಇದೊಂದು ಆಧ್ಯಾತ್ಮ, ನೈತಿಕ, ಜೀವನ, ಸಾಮಾಜಿಕ, ಆರೋಗ್ಯ ಮೌಲ್ಯಗಳ, ಯೋಗ-ಧ್ಯಾನದ ಸನಾತನ ಪರಂಪರೆಯ ಪ್ರತಿಬಿಂಬವಾಗಿದೆ. ಭಗವದ್ಗೀತೆ, ದಾಸ, ವಚನ ಸಾಹಿತ್ಯ ಸೇರಿದಂತೆ ಸರ್ವಧರ್ಮಗಳ ಸಾರ ಆಧಾರಿತವಾಗಿ ಇದು ಇದ್ದು, ರಾಷ್ಟ್ರದ ಹಿತದೃಷ್ಟಿ, ಜಾತ್ಯತೀತ, ಧರ್ಮಾತೀತವಾಗಿದ್ದು, ಇದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕೊಡುಗೆಯಾಗಿದೆ. ಆಸಕ್ತರಿಗೆ ತರಬೇತಿ ನೀಡಲಾಗುತ್ತದೆ. ಬರುವ ದಿನಗಳಲ್ಲಿ ಮನೆ, ಮನೆ ಮಕ್ಕಳಿಗೆ ಭಗವದ್ಗೀತೆ ಎಂಬ ಧಾರಾವಾಹಿ ತಯಾರಿಸಲು ಚಿಂತನೆ ಇದೆ. –ರಾಜಋಷಿ ಬ್ರಹ್ಮಕುಮಾರ ಬಸವರಾಜ, ಮುಖ್ಯಸ್ಥರು ಭಗವದ್ಗೀತಾ ಜ್ಞಾನಲೋಕ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.