ಪ್ಲಾಸ್ಟಿಕ್ ಕದ್ದು ಮುಚ್ಚಿ ಬಳಕೆ; ಬಳಕೆ ತಡೆ ದೊಡ್ಡ ಸವಾಲು
ಪ್ಲಾಸ್ಟಿಕ್ ಇಲ್ಲದೇ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಿಡಿತ
Team Udayavani, Jul 24, 2022, 2:30 PM IST
ಹುಬ್ಬಳ್ಳಿ: ರಾಜ್ಯ ಸರಕಾರ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಆಡಳಿತಗಳ ಕ್ರಮದ ನಡುವೆಯೂ ಮಹಾನಗರ, ನಗರ-ಪಟ್ಟಣ ಪ್ರದೇಶದಲ್ಲಿ ಕದ್ದುಮುಚ್ಚಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಆಗುತ್ತಿದೆ. ಅನೇಕ ಗ್ರಾಮೀಣ ಪ್ರದೇಶದಲ್ಲಿ ರಾಜಾರೋಷವಾಗಿ ಹರಿದಾಡುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಜಾಗೃತಿ ಜತೆಗೆ ಪರ್ಯಾಯ ಉತ್ಪನ್ನಗಳು ಕೈಗೆಟಕುವ ದರದಲ್ಲಿ ದೊರೆಯುವ ವ್ಯವಸ್ಥೆಗೂ ಸರಕಾರ ಹೆಚ್ಚು ಒತ್ತು ನೀಡಬೇಕಿದೆ.
ಸರಕಾರ-ಸ್ಥಳೀಯ ಆಡಳಿತಗಳಿಗೆ ಘನತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಬಳಕೆ ತಡೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಏಕಬಳಕೆ ಪ್ಲಾಸ್ಟಿಕ್ ಭೂಮಿ, ಜಾನುವಾರು, ನೀರು, ಜಲಚರ ಪ್ರಾಣಿಗಳ ಆರೋಗ್ಯಕ್ಕೂ ಕಂಟಕವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಬಿಟ್ಟು ಬದುಕೇ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ತನ್ನ ಹಿಡಿತ ಸಾಧಿಸಿದೆ.
ಶೇ.85 ಪುನರ್ ಬಳಕೆ ಆಗುತ್ತಿಲ್ಲ: 1907ರಲ್ಲಿ ಪ್ಲಾಸ್ಟಿಕ್ ಅನ್ವೇಷಿಸಲಾಗಿದ್ದು, 1950ರವರೆಗೂ ಅಷ್ಟಾಗಿ ಬಳಕೆಯಲ್ಲಿರಲಿಲ್ಲ. 1950ರಲ್ಲಿ ವಿಶ್ವಾದ್ಯಂತ ಸುಮಾರು 2 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆ ಆಗುತ್ತಿತ್ತು. ಇದೀಗ ಅದರ ಪ್ರಮಾಣ 500 ಮಿಲಿಯನ್ ಟನ್ ಗೆ ಹೆಚ್ಚಿದೆ. ಪ್ರಸ್ತುತ ವಿಶ್ವಾದ್ಯಂತ 8.3 ಬಿಲಿಯನ್ ಟನ್ ಪ್ಲಾಸ್ಟಿಕ್ ಇದ್ದು, ಅದರಲ್ಲಿ ಸುಮಾರು 6.3 ಬಿಲಿಯನ್ ಟನ್ ತ್ಯಾಜ್ಯದ ರೂಪದಲ್ಲಿದೆ. ಬೆಂಗಳೂರಿನಲ್ಲಿ ಪ್ರತಿವರ್ಷ 253 ಮಿಲಿಯನ್ ಸ್ಟ್ರಾಗಳು ಬಳಕೆಯಾಗುತ್ತಿವೆಯಂತೆ!
ದೇಶದಲ್ಲಿಯೇ ಮೊದಲು ಎನ್ನುವಂತೆ 2016ರಲ್ಲಿಯೇ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಗೊಳಿಸಿದ್ದರೂ, ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗೆ ತಡೆ ಇರಲಿಲ್ಲವಾಗಿತ್ತು. ಮಹಾನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ಅಧಿಕಾರಿಗಳು ದಾಳಿ ನಡೆಸಿ ಒಂದಿಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು ಬಿಟ್ಟರೆ ಬೇರಾವ ಕ್ರಮಗಳು ಆಗಿರಲಿಲ್ಲ. ಪ್ಲಾಸ್ಟಿಕ್ ಸಾಮ್ರಾಜ್ಯಕ್ಕೆ ಕಿಂಚಿತ್ತು ಧಕ್ಕೆಯಾಗಿರಲಿಲ್ಲ.
ಪ್ಲಾಸ್ಟಿಕ್ ನಿಷೇಧ ಕುರಿತಾಗಿ ಎರಡು ದಶಕಗಳಿ ಗಿಂತಲೂ ಹೆಚ್ಚಿನ ಕಾಲದಿಂದ ಸರಕಾರಗಳ ಆದೇಶ- ಕಾಯ್ದೆಗಳು ಇವೆಯಾದರೂ, ಸಮರ್ಪಕ ನಿಯಂತ್ರಣ ಇಂದಿಗೂ ಸಾಧ್ಯವಾಗಿಲ್ಲ. 1999ರಲ್ಲಿ ಮೊದಲ ಬಾರಿಗೆ ಪುನರ್ ಬಳಕೆ ಪ್ಲಾಸ್ಟಿಕ್ ಉತ್ಪಾದನೆ-ಬಳಕೆ ನಿಯಮಗಳ ಕಾಯ್ದೆ ಜಾರಿಗೊಳಿಸಲಾಗಿತ್ತು.
1999ರಲ್ಲಿ 20 ಮೈಕ್ರಾನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಬ್ಯಾಗ್ ಬಳಸುವಂತಿಲ್ಲ ಎಂದು ಸೂಚಿಸಲಾಗಿತ್ತು. 2011ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಾಯ್ದೆಯನ್ವಯ 40 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ನಿಷೇಧಿಸಲಾಗಿತ್ತು. ಜತೆಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ಮೇಲೆ ಕಂಪೆನಿಯ ವಿವರ ನಮೂದಿಸಲು ಸೂಚಿಸಲಾಗಿತ್ತಾದರೂ ಅದರ ಪಾಲನೆ ಮಾತ್ರ ಅತ್ಯಲ್ಪ ಎನ್ನಬಹುದು. 2016ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕಾಯ್ದೆ ಜಾರಿಗೊಳಿಸಿ ಏಕ ಬಳಕೆ ಪ್ಲಾಸ್ಟಿಕ್ ಬ್ಯಾಗ್ 50 ಮೈಕ್ರಾನ್‌ಗಿಂತ ಕಡಿಮೆ ಇರಬಾರದೆಂದು ತಿಳಿಸಿದ್ದರೂ, ಈ ನಿಯಮ ಕೇವಲ ದಾಖಲೆಗಳಿಗೆ ಸಿಮೀತಗೊಂಡು ಮಾರುಕಟ್ಟೆ, ಅಂಗಡಿ, ಹೊಟೇಲ್‌ಗಳಲ್ಲಿ ಅರ್ಥ ಕಳೆದುಕೊಂಡಂತೆ ಭಾಸವಾಗುತ್ತಿತ್ತು. 2021ರಲ್ಲಿ ಕಾಯ್ದೆಗೆ ಪ್ರಮುಖ ತಿದ್ದುಪಡಿ ತಂದು ಪ್ಲಾಸ್ಟಿಕ್ ಬ್ಯಾಗ್ ಗಾತ್ರ 75 ಮೈಕ್ರಾನ್‌ಗಿಂತ ಕಡಿಮೆ ಇರಬಾರದೆಂದು ಸೂಚಿಸಲಾಗಿತ್ತು. ಕೆಲ ಮೂಲಗಳ ಪ್ರಕಾರ ಕೇಂದ್ರ ಸರಕಾರ 2023ರಲ್ಲಿ 125 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ ಎಂಬುದನ್ನು ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಇದೀಗ ಕೇಂದ್ರ ಸರಕಾರ ಜುಲೈ 1, 2022ರಿಂದ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸಿದ್ದು, ಇದರ ಕಟ್ಟುನಿಟಿನ ಅನುಷ್ಠಾನಕ್ಕೆ ಸೂಚಿಸಿದೆ. ರಾಜ್ಯದಲ್ಲಿ 2016ರಿಂದಲೇ ಪ್ಲಾಸ್ಟಿಕ್ ಬಳಕೆ ನಿಷೇಧ ಇದ್ದರೂ ಅದರ ಅನುಷ್ಠಾನ ಸಮರ್ಪಕವಾಗಿಲಿಲ್ಲ. ಇದೀಗ ಕಡ್ಡಾಯ ನಿಷೇಧಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಸರಕಾರ, ಸ್ಥಳೀಯ ಆಡಳಿತಗಳು ಮುಂದಾಗಿವೆ.
ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ: ಕಿರಾಣಿ, ತರಕಾರಿ-ಹಣ್ಣು, ಬೇಕರಿ, ಸ್ವೀಟ್‌ಸ್ಟಾಲ್, ಹೊಟೇಲ್, ಪಾನ್‌ಶಾಪ್, ಡಬ್ಟಾ ಅಂಗಡಿ, ಮಾಂಸದಂಗಡಿ, ಮದ್ಯದಂಗಡಿ, ಔಷಧ ಅಂಗಡಿ ಇನ್ನಿತರೆ ಕಡೆಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿದೆ.
ಹೊಟೇಲ್‌ಗಳಲ್ಲಿ ಈ ಹಿಂದೆ ಇಡ್ಲಿ ತಯಾರಿಸಲು ಇಡ್ಲಿ ಪಾತ್ರೆಯಲ್ಲಿ ಬಟ್ಟೆಗಳನ್ನಿಟ್ಟು ಇಡ್ಲಿ ಹಿಟ್ಟು ಹಾಕಿ ಬೇಯಿಸಲು ಇರಿಸುತ್ತಿದ್ದರು ಇದೀಗ ಅನೇಕ ಹೊಟೇಲ್ ಗಳಲ್ಲಿ ವಿಶೇಷವಾಗಿ ಬೀದಿಬದಿ ಹಾಗೂ ಸಣ್ಣ ಪುಟ್ಟ ಹೊಟೇಲ್‌ಗಳಲ್ಲಿ ಬಟ್ಟೆ ಬದಲು ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸಲಾಗುತ್ತಿದೆ. ಇನ್ನು ಸಣ್ಣ-ದೊಡ್ಡ ಹೊಟೇಲ್ ಎನ್ನದೆ ಅನೇಕ ಕಡೆಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಪ್ಲಾಸ್ಟಿಕ್ ಅನ್ನೇ ಬಳಸಲಾಗುತ್ತಿದೆ. ಡಬ್ಟಾ ಅಂಗಡಿ, ಸಣ್ಣಪುಟ್ಟ ಹೊಟೇಲ್ ಗಳಲ್ಲಿ ಎಗ್‌ರೈಸ್, ಇಡ್ಲಿ-ವಡಾ, ಉಪ್ಪಿಟ್ಟು ಇನ್ನಿತರೆ ಪದಾರ್ಥಗಳಿಗೆ ಪ್ಲೇಟ್‌ನಲ್ಲಿ ತೆಳುವಾದ ಪ್ಲಾಸ್ಟಿಕ್ ಪೇಪರ್ ಹಾಕಿ ನೀಡಲಾಗುತ್ತಿದ್ದು, ಇದರಿಂದ ಹೊಟೇಲ್‌ನವರಿಗೆ ಪ್ಲೇಟ್ ತೊಳೆಯುವ ಸಮಸ್ಯೆ ತಗ್ಗಲಿದೆಯಂತೆ.
ಬಿಸಿ ಚಹಾ, ಸಾಂಬಾರ್ ಇನ್ನಿತರೆ ಪದಾರ್ಥಗಳ ಪಾರ್ಸೆಲ್‌ಗಳಿಗೂ ಇದೇ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿತ್ತು. ಸರಕಾರ-ಸ್ಥಳೀಯ ಆಡಳಿತಗಳ ಸೂಚನೆಯೊಂದಿಗೆ ಅನೇಕ ಹೊಟೇಲ್‌ಗಳು ಪ್ಲಾಸ್ಟಿಕ್‌ನಲ್ಲಿ ಪಾರ್ಸೆಲ್ ನಿಲ್ಲಿಸಿವೆಯಾದರೂ, ಇನ್ನಷ್ಟು ಹೊಟೇಲ್ ಗಳಲ್ಲಿ ಇದು ಮುಂದುವರಿದಿದೆ. ಮುಖ್ಯವಾಗಿ ಬೀದಿಬದಿ ವ್ಯಾಪಾರದಲ್ಲಿ ಇದರ ಯಥೇತ್ಛ ಬಳಕೆ ಆಗುತ್ತಿದೆ. ಸರಕಾರ-ಸ್ಥಳೀಯ ಆಡಳಿತಗಳು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಅನುಷ್ಠಾನ, ಜಾಗೃತಿ ಜತೆಗೆ ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನಗಳಿಗೆ ಉತ್ತೇಜನ, ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಹೆಚ್ಚಿನ ಮುತುವರ್ಜಿ ವಹಿಸಿದಷ್ಟು ಪ್ಲಾಸ್ಟಿಕ್ ರಾಕ್ಷಸನ ಮಟ್ಟ ಹಾಕಲು ಸಹಕಾರಿ ಆಗಲಿದೆ ಎಂಬುದು ಅನೇಕರ ಅನಿಸಿಕೆಯಾಗಿದೆ.
ನಗರ-ಹಳ್ಳಿಗಳಲ್ಲಿ ರಾಜಾರೋಷ
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತಾಗಿ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಮಹಾನಗರ ಸೇರಿದಂತೆ ಹಲವು ನಗರಗಳಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಕದ್ದುಮುಚ್ಚಿ ಬಳಕೆ ಆಗುತ್ತಿದೆ. ಕಿರಾಣಿ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರ ಮಳಿಗೆ, ತರಕಾರಿ-ಹಣ್ಣುಗಳ ಮಾರಾಟ, ಹೊಟೇಲ್, ಬೇಕರಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಇಲ್ಲ ಎಂದು ಹೇಳುತ್ತಲೇ ಒತ್ತಾಯ ಮಾಡಿದವರಿಗೆ, ಪರಿಚಯಸ್ಥರಿಗೆ ದಂಡ ಹಾಕುತ್ತಾರೆಂದು ಹೇಳುತ್ತಲೇ ಏಕ ಬಳಕೆ ಪ್ಲಾಸ್ಟಿಕ್ ಬ್ಯಾಗ್ ನೀಡಲಾಗುತ್ತಿರುವುದು ಕಂಡು ಬರುತ್ತಿದೆ. ಇನ್ನು ಸಂತೆ, ಮಾರುಕಟ್ಟೆಗಳಲ್ಲೂ ಇದೇ ಸ್ಥಿತಿ ಇದೆ. ಇನ್ನು ಪಟ್ಟಣ-ಅರೆಪಟ್ಟಣ ಪ್ರದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿ ಅಷ್ಟೊಂದು ಪರಿಣಾಮ ಬೀರಿಲ್ಲ ಎಂದೆನಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ರಾಜಾರೋಷವಾಗಿ ಹರಿದಾಡುತ್ತಿದೆ. ಗ್ರಾಮದ ಕೆಲ ಹೊಟೇಲ್‌ನವರು ಕಾಗದ ಕಪ್‌ಗ್ಳನ್ನು ಚಹಾ ನೀಡಲು ಬಳಸಿದರೆ, ಇನ್ನು ಕೆಲವರು ತೆಳುವಾದ ಪ್ಲಾಸ್ಟಿಕ್ ಕಪ್‌ಗಳಲ್ಲಿಯೇ ನೀಡುತ್ತಿದ್ದಾರೆ. ಜಾತ್ರೆ, ಸಭೆ-ಸಮಾರಂಭಗಳು ನಡೆದಾಗಲಂತೂ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಹರಿದಾಡುತ್ತಿರುತ್ತದೆ. ಪ್ಲಾಸ್ಟಿಕ್ ನಿಷೇಧ ಜಾಗೃತಿ, ತಡೆ ನಿಟ್ಟಿನಲ್ಲಿ ಅನೇಕ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ಭವಿಷ್ಯದ ದಿನಗಳಲ್ಲಿ ಭೂಮಿ ಆರೋಗ್ಯ, ಪರಿಸರ ದೃಷ್ಟಿಯಿಂದ ಏಕ ಬಳಕೆ ಪ್ಲಾಸ್ಟಿಕ್ ಸೃಷ್ಟಿಸುತ್ತಿರುವ ಅಪಾಯಗಳು ಭಯ ಮೂಡಿಸುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ನಿಟ್ಟಿನಲ್ಲಿ ಸರಕಾರಗಳು ಎಷ್ಟೇ ಕಟ್ಟುನಿಟ್ಟಿನ ಕಾಯ್ದೆ ಜಾರಿಗೊಳಿಸಿ ಅನುಷ್ಠಾನಕ್ಕೆ ಮುಂದಾದರೂ ಸಾರ್ವಜನಿಕರ ಸಹಕಾರ, ಪಾಲುದಾರಿಕೆ ಇಲ್ಲವಾದರೆ ಯಶಸ್ಸು ಸಾಧ್ಯವಾಗದು. ಕಾಡು, ಕಾಡು ಪ್ರಾಣಿಗಳ ಬಳಕೆ ತಡೆಗಟ್ಟಲೆಂದು 1907ರಲ್ಲಿ ಅನ್ವೇಷಣೆಗೊಂಡ ಪ್ಲಾಸ್ಟಿಕ್ಕೆ ಇಂದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಭೂಮಿಯ ಮರು ಸೃಷ್ಟಿ ಸಾಧ್ಯವಿಲ್ಲ. ಇರುವ ಒಂದು ಭೂಮಿ ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕಿದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಸರಕಾರದ ಸೂಚನೆಯಂತೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲವೇ ಇಲ್ಲ. –ಡಾ| ಶಾಂತ್ ಎ ತಿಮ್ಮಯ್ಯ,ಅಧ್ಯಕ್ಷರು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.