ಸಮುದಾಯದಲ್ಲಿ ಪಲ್ಸ್ ಆಕ್ಸಿಮೀಟರ್ ಉಪಕರಣದ ಉಪಯೋಗಗಳು
Team Udayavani, Jul 5, 2020, 5:40 AM IST
ಮನುಷ್ಯನ ದೇಹದ ಪ್ರತೀ ಅಂಗಾಂಗಗಳಿಗೆ, ಜೀವಕೋಶಗಳಿಗೆ ನಿರಂತರವಾಗಿ ರಕ್ತದ ಮೂಲಕ ಆಕ್ಸಿಜನ್ ಮತ್ತು ಇತರ ಪೋಷಕಾಂಶಗಳ ಸರಬರಾಜು ನಡೆಯುತ್ತಿರಬೇಕು. ಯಾವುದೇ ಕಾರಣದಿಂದ ಜೀವಕೋಶಗಳಿಗೆ ಪೋಷಕಾಂಶಗಳ ಸರಬರಾಜು, ಮುಖ್ಯವಾಗಿ ಗ್ಲೂಕೋಸ್ ನಿಂತಲ್ಲಿ /ಕಡಿಮೆಯಾದಲ್ಲಿ ಹೈಪೊಗ್ಲಿಸಿಮಿಯಾ ಎಂಬ ಸ್ಥಿತಿ ಉಂಟಾಗಿ ಆ ವ್ಯಕ್ತಿಯು ಪ್ರಜ್ಞೆ ತಪ್ಪುವ ಸಂದರ್ಭ ಬಂದರೆ, ಆಕ್ಸಿಜನ್ (ಆಮ್ಲಜನಕ) ಸರಬರಾಜು ಕಡಿಮೆಯಾದಲ್ಲಿ ಹೈಪಾಕ್ಸಿಯ ಉಂಟಾಗಿ ವ್ಯಕ್ತಿಯ ಚರ್ಮ ನೀಲಿ ಬಣ್ಣಕ್ಕೆ (ಸೈನೋಸಿಸ್) ತಿರುಗಬಹುದು. ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಸರಬರಾಜು ಕೆಲವೇ ಕೆಲವು ನಿಮಿಷಗಳಷ್ಟು ಕಡಿಮೆಯಾದರೂ ಕೂಡ ಜೀವಕ್ಕೆ ಅಪಾಯ ಉಂಟಾಗಬಹುದು.
ಸಾಧಾರಣ ದೇಹ ಹೊಂದಿರುವ ವ್ಯಕ್ತಿಯ ಹೃದಯವು ಪ್ರತೀ ನಿಮಿಷಕ್ಕೆ ಸುಮಾರು 5,000 ಮಿ.ಲೀ. ರಕ್ತವನ್ನು ದೇಹದ ಅಂಗಾಂಗಗಳಿಗೆ ಸರಬರಾಜು ಮಾಡುತ್ತದೆ. ಅಂದರೆ, ಪ್ರತೀ ನಿಮಿಷಕ್ಕೆ ರಕ್ತದಲ್ಲಿರುವ ಹಿಮೋಗ್ಲೋಬಿನ್ 1,000 ಮಿ.ಲೀ. ಆಕ್ಸಿಜನ್ ಅನ್ನು ಜೀವಕೋಶಗಳಿಗೆ ಸರಬರಾಜು ಮಾಡುತ್ತಿರುತ್ತದೆ. ರಕ್ತದಲ್ಲಿರುವ ಕೆಂಪು ರಕ್ತ ಕಣಗಳಲ್ಲಿ ಈ ಹಿಮೋಗ್ಲೋಬಿನ್ ಇರುತ್ತದೆ. ಒಂದು ಹಿಮೋಗ್ಲೋಬಿನ್ (ಮಾಲೆಕ್ಯೂಲ್) ನಾಲ್ಕು ಆಕ್ಸಿಜನ್ ಕಣಗಳನ್ನು ಸಾಗಿಸಬಲ್ಲವು. ರಕ್ತಕಣದಲ್ಲಿರುವ ಎಲ್ಲ ಹಿಮೋಗ್ಲೋಬಿನ್ ಆಕ್ಸಿಜನ್‌ನನ್ನು ಶ್ವಾಸಕೋಶದಿಂದ ಉಸಿರಾಡುವ ಪ್ರಕ್ರಿಯೆಯಲ್ಲಿ ಪಡೆದುಕೊಳ್ಳುತ್ತವೆ. ಸಾಮಾನ್ಯವಾಗಿ ಆರೋಗ್ಯವಾಗಿರುವ ಮನುಷ್ಯನ ಆಕ್ಸಿಜನ್ ಸ್ಯಾಚುರೇಶನ್ ಶೇ. 95ರಿಂದ 100ರಷ್ಟು ಇರುತ್ತದೆ. ದೇಹದ ಹೊರಭಾಗದಲ್ಲಿರುವ ರಕ್ತನಾಳಗಳಲ್ಲಿ ಈ ಆಕ್ಸಿಜನ್ ಸ್ಯಾಚುರೇಶನ್ ಶೇ. 95ಕ್ಕಿಂತ ಕಡಿಮೆ ಇದ್ದಲ್ಲಿ ಅವರಿಗೆ ಚಿಕಿತ್ಸೆ ಅಗತ್ಯ ಇರುತ್ತದೆ.
ಅಪಧಮನಿಯಲ್ಲಿರುವ ರಕ್ತವು ಶ್ವಾಸಕೋಶ, ಹೃದಯ ಮಾರ್ಗದಿಂದ ಬರುವುದರಿಂದ ಆ ರಕ್ತದಲ್ಲಿರುವ ಹಿಮೋಗ್ಲೋಬಿನ್ ಹೆಚ್ಚು ಸ್ಯಾಚುರೇಶನ್‌ಗೊಂಡಿರುವುದರಿಂದ ಹೆಚ್ಚು ಕೆಂಪಾಗಿ (ಗಾಢ ಕೆಂಪು) ಕಾಣಿಸುವುದು. ಅಭಿದಮನಿಗಳಿಂದ ಶ್ವಾಸಕೋಶ, ಹೃದಯಕ್ಕೆ ಹಿಂದಿರುಗುತ್ತಿರುವ ರಕ್ತದಲ್ಲಿರುವ ಹಿಮೋಗ್ಲೋಬಿನ್ ಅದಾಗಲೇ ಆಕ್ಸಿಜನ್‌ನನ್ನು ಜೀವಕೋಶಗಳಿಗೆ ನೀಡಿರುವುದರಿಂದ ಆಕ್ಸಿಜನ್ ಸ್ಯಾಚುರೇಶನ್ ಕಡಿಮೆಯಾಗಿ ಸ್ವಲ್ಪ ಕಡು ಕೆಂಪು ಬಣ್ಣದಲ್ಲಿರುತ್ತದೆ. ಒಟ್ಟಾರೆ ದೇಹದಲ್ಲಿ ಸ್ಯಾಚುರೇಟೆಡ್ ರಕ್ತ ಹರಿಯುತ್ತಿರುವಾಗ ಆ ವ್ಯಕ್ತಿಯ ತುಟಿಗಳು, ನಾಲಿಗೆ ಗುಲಾಬಿ ಬಣ್ಣದಲ್ಲಿ ಇರುತ್ತವೆ. ಯಾವಾಗ ಯಾವುದೇ ವ್ಯಕ್ತಿಯ ರಕ್ತವು ಯಾವುದೇ ಕಾರಣದಿಂದ ಸಾಕಷ್ಟು (SPO2 ಶೇ. 90) ಆಕ್ಸಿಜನ್ ಸ್ಯಾಚುರೇಟೆಡ್ ಆಗಿರುವುದಿಲ್ಲವೋ ಆಗ ವ್ಯಕ್ತಿಯ ನಾಲಿಗೆ, ಚರ್ಮ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದನ್ನೇ ಸೈನೋಸಿಸ್ (ನೀಲಿ ಕಟ್ಟುವುದು) ಎಂದು ಕರೆಯುವುದು. ಕಪ್ಪು ಚರ್ಮದ ವ್ಯಕ್ತಿಗಳಲ್ಲಿ ಹೀಗೆ ನೀಲಿ ಕಟ್ಟುವುದನ್ನು ಆಕ್ಸಿಜನ್ ಸ್ಯಾಚುರೇಶನ್ ಶೇ.90ಕ್ಕಿಂತ ಕಡಿಮೆ ಬರುವವರೆಗೆ ವೈದ್ಯರಿಗೆ ಬರೀ ದೇಹ ಪರೀಕ್ಷೆ ಮಾಡುವುದರಿಂದ ಪತ್ತೆ ಮಾಡುವುದು ಕಷ್ಟ.
ಪಲ್ಸ್ ಆಕ್ಸಿ ಮೀಟರ್ ಅಂದರೇನು?
ಪಲ್ಸ್ ಆಕ್ಸಿಮೀಟರ್ ಒಂದು ಸಣ್ಣ ಬ್ಯಾಟರಿ ಆಧಾರಿತ ಸಾಧನ. ಇದು ದೇಹದ ಮೇಲ್ಮೆ„ಯಲ್ಲಿ ಇರುವ ರಕ್ತನಾಳ(ಬೆರಳು, ಕಿವಿಯ ಮೃದು ಭಾಗ)ಗಳಲ್ಲಿ ಆಕ್ಸಿಜನ್ ಸ್ಯಾಚುರೇಶನ್ ಬಗ್ಗೆ ಮುನ್ನೆಚ್ಚರಿಕೆ ನೀಡುವ ಎಲೆಕ್ಟ್ರಾನಿಕ್ ಉಪಕರಣ. ಈ ಯಂತ್ರವನ್ನು ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಬೆರಳ ತುದಿಗೆ, ಕಿವಿಗೆ ಕ್ಲಿಪ್ ಮಾಡಿದರೆ ಆ ವ್ಯಕ್ತಿಯ ದೇಹದಲ್ಲಿರುವ ರಕ್ತದ ಆಕ್ಸಿಜನ್ ಸ್ಯಾಚುರೇಶನ್ (SPO2) ಹಾಗೂ ನಾಡಿ ಬಡಿತವನ್ನು ಯಂತ್ರದ ಮೇಲಿರುವ ಬೋರ್ಡ್‌ನಲ್ಲಿ ತತ್‌ಕ್ಷಣ ನೋಡಬಹುದು. ಇದು ದೇಹಕ್ಕೆ ಯಾವುದೇ ನೋವು ಅಥವಾ ಘಾತ ಮಾಡದ ಯಂತ್ರವಾಗಿದೆ. ಈ ಯಂತ್ರವು ಚರ್ಮದ ಮೂಲಕ ಪ್ರಕಾಶಮಾನ ಬೆಳಕು ಚೆಲ್ಲಿ ತನ್ಮೂಲಕ ರಕ್ತದ ಚಲನೆ ಮತ್ತು ಅದರ ಬಣ್ಣವನ್ನು ತುಲನೆ ಮಾಡುವುದು. ಆ ಮೂಲಕ ರಕ್ತದಲ್ಲಿರುವ ಆಕ್ಸಿಜನ್ ಸ್ಯಾಚುರೇಶನ್ ಪ್ರಮಾಣವನ್ನು ಶೇಕಡವಾರು ದರದಲ್ಲಿ ಪತ್ತೆ ಮಾಡುತ್ತದೆ. ಈ ಉಪಕರಣವು ರಕ್ತದ ಆಕ್ಸಿಜನ್ ಸಾಚ್ಯುರೇಶನ್ (SPO2) ಶೇ.95 ಪ್ರಮಾಣ ಸೂಚಿಸಿದರೆ ಆ ರಕ್ತದಲ್ಲಿ ಶೇ.5ರಷ್ಟು ರಕ್ತಕಣಗಳಲ್ಲಿ ಕಡಿಮೆ ಪ್ರಮಾಣದ ಆಕ್ಸಿಜನ್ ಇದೆ ಎಂದರ್ಥ.
ರಕ್ತದ ಆಕ್ಸಿಜನ್ ಸ್ಯಾಚುರೇಶನ್ ಪ್ರಮಾಣ (SPO2) ಶೇ. 90ಕ್ಕಿಂತ ಕಡಿಮೆ ಇದ್ದರೆ ವ್ಯಕ್ತಿಯು ತೀವ್ರ ಕಾಯಿಲೆಯಿಂದ ಬಳಲುತ್ತಿರುವುದೆಂದು (Clinical Emergency) ಪರಿಗಣಿಸಿ ಅಂಥವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಚಿಕಿತ್ಸೆ ಮತ್ತು ನಿಗಾ ಇಡುವ ಅಗತ್ಯವಿದೆ. ಕೆಲವು ಶ್ವಾಸಕೋಶದ, ಹೃದಯ ರೋಗಗಳಿಂದ ಬಳಲುತ್ತಿರುವವರು (ಉದಾ: ಸಿಒಪಿಡಿ, ಅಸ್ತಮಾ, ನ್ಯುಮೋನಿಯಾ, ರಕ್ತಹೀನತೆ, ಹೃದಯ ವೈಫಲ್ಯ, ಹೃದಯಾಘಾತ) ನಿಯಮಿತವಾಗಿ ರಕ್ತದ ಆಕ್ಸಿಜನ್ ಪ್ರಮಾಣವನ್ನು ಮನೆಯಲ್ಲಿಯೇ ನೋಡಿಕೊಳ್ಳಬಹುದು. ಅಂತಹ ರೋಗಿಗಳಿಗೆ ಥರ್ಮೋಮೀಟರ್‌ನಂತೆ ಈ ಉಪಕರಣವೂ ಮನೆಯಲ್ಲಿ ಬೇಕಾಗಬಹುದಾದ ಒಂದು ಸಾಮಾನ್ಯ ವೈದ್ಯಕೀಯ ಸಲಕರಣೆಯಾಗಿರುತ್ತದೆ.
ಕೋವಿಡ್ ಕಾಲದಲ್ಲಿ ಪಲ್ಸ್ ಆಕ್ಸಿ ಮೀಟರ್ ಅಗತ್ಯ
ಕೋವಿಡ್ -19 ಕಾಯಿಲೆ ಇರುವ ಈ ಸಮಯದಲ್ಲಿ ಸೋಂಕುಪೀಡಿತರು, ಶಂಕಿತರು ಮತ್ತು ಸೋಂಕಿನ ಹೆಚ್ಚಿನ ಅಪಾಯದಲ್ಲಿ ಇರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್/ಐಸೊಲೇಶನ್ ಮಾಡಿರುವ ಸಂದರ್ಭದಲ್ಲಿ ಅವರಲ್ಲಿ ಯಾರಿಗಾದರೂ ಶ್ವಾಸಕೋಶದ, ಉಸಿರಾಟ ತೊಂದರೆಯಂತಹ ಲಕ್ಷಣಗಳಿದ್ದರೆ ಅವರ ರಕ್ತದ ಆಕ್ಸಿಜನ್ ಸಾಚ್ಯುರೇಶನ್ ಪ್ರಮಾಣವನ್ನು ಪತ್ತೆ ಮಾಡಲು ಮತ್ತು ಅಗತ್ಯಬಿದ್ದಲ್ಲಿ ಅವರನ್ನು ಶೀಘ್ರವಾಗಿ ಸಮೀಪದ ಆಸ್ಪತ್ರೆಗೆ ಶಿಫಾರಸು ಮಾಡಲು ರೋಗಿಯೇ/ವ್ಯಕ್ತಿಯೇ ಅಥವಾ ಮನೆಯಲ್ಲಿರುವವರು ಅಥವಾ ಸಮುದಾಯ ಕಾರ್ಯಕರ್ತರು ಈ ಉಪಕರಣವನ್ನು ಸುಲಭವಾಗಿ ಬಳಸಬಹುದಾಗಿದೆ. ಕೋವಿಡ್-19 ಸೋಂಕುರೋಗದಲ್ಲಿ ಹೆಚ್ಚಿನ ರೋಗಿಗಳು ಯಾವುದೇ ಲಕ್ಷಣಗಳಿಲ್ಲದೆ ಇರಬಲ್ಲರು ಅಥವಾ ಸಣ್ಣ ಪ್ರಮಾಣದ ಜ್ವರ, ಒಣಕೆಮ್ಮು, ನೆಗಡಿ, ಗಂಟಲು ಕೆರೆತ ಲಕ್ಷಣಗಳಿಂದ ಬಳಲುತ್ತಾರೆ. ಆದರೆ ಕೆಲವೇ ಮಂದಿಗೆ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಹಾಗೂ ಅದು ಶೀಘ್ರವಾಗಿ ಉಲ್ಬಣಗೊಳ್ಳಬಹುದು. ಅಂಥವರು ಮನೆಯಲ್ಲಿದ್ದರೆ ಅವರ ರಕ್ತದ ಆಕ್ಸಿಜನ್ ಸಾಚ್ಯುರೇಶನ್ ಪ್ರಮಾಣವನ್ನು (SPO2) ಪಲ್ಸ್ ಆಕ್ಸಿ ಮೀಟರ್ ಯಂತ್ರದ ಸಹಾಯದಿಂದ ತತ್‌ಕ್ಷಣ ಮತ್ತು ಪದೇ ಪದೆ (ಪ್ರತೀ ಸಲ ಸುಮಾರು ಒಂದು ನಿಮಿಷದಷ್ಟು ಸಮಯ) ಪರೀಕ್ಷಿಸಿ, ತುಲನೆ ಮಾಡಿ ಅಗತ್ಯಬಿದ್ದಲ್ಲಿ ಆಸ್ಪತ್ರೆಗೆ ದಾಖಲಿಸಿ ಆ ರೋಗಿಯ ಜೀವ ಅಪಾಯವನ್ನು ತಪ್ಪಿಸಬಹುದು.
ಈ ಉಪಕರಣವು ಮಾರುಕಟ್ಟೆಯಲ್ಲಿ ಎಲ್ಲೆಡೆ ಲಭ್ಯವಿದ್ದು, ಅವುಗಳ ಮೇಕಿಂಗ್ ಮತ್ತು ಗುಣಮಟ್ಟದ ಆಧಾರದ ಮೇಲೆ ಎರಡು ಸಾವಿರದಿಂದ ಹಲವು ಸಾವಿರ ರೂಪಾಯಿಗಳ ಬೆಲೆ ಇದೆ. ಅವುಗಳಲ್ಲಿ ಬೆರಳಿಗೆ ಸಿಕ್ಕಿಸುವ ಅತೀ ಸಣ್ಣ ವಯರ್‌ಲೆಸ್ ಯಂತ್ರ, ಗಡಿಯಾರದಂತೆ ಮೊಣಕೈಗೆ ಕಟ್ಟುವ ಯಂತ್ರ, ಕೈಯಲ್ಲಿ ಹಿಡಿಯುವ ಸ್ವಲ್ಪ ದೊಡ್ಡ ಯಂತ್ರ ಹಾಗೂ ಮೇಜಿನ ಮೇಲೆ ಇಟ್ಟು ಮಾನಿಟರ್ ಮಾಡುವ ತರಹದ ವಿವಿಧ ವಿಧಗಳಿವೆ. ಈ ಉಪಕರಣಗಳು ಸರಿಸುಮಾರು ಎರಡು ವರ್ಷ ಬಾಳಿಕೆ ಬರುವಂಥವುಗಳು. ಖರೀದಿ ಮಾಡುವ ಸಂದರ್ಭದಲ್ಲಿ ಯಂತ್ರದ ಗುಣಮಟ್ಟದ ಬಗ್ಗೆ ಖಾತ್ರಿಗಾಗಿ ಸಮೀಪದ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ. ಅಲ್ಲದೆ ನಾಡಿ ಬಡಿತವನ್ನು ವ್ಯಕ್ತಿಯ ನಾಡಿ ಹಿಡಿದೇ ಒಂದು ನಿಮಿಷದವರೆಗೆ ಪರೀಕ್ಷಿಸುವುದು ಉತ್ತಮ.
ಯಂತ್ರದಿಂದ ತಪ್ಪು ಫಲಿತಾಂಶ
ಬರಬಹುದಾದ ಕೆಲವು ಸಂದರ್ಭಗಳು
1. ಪ್ರಕಾಶಮಾನವಾದ ಬೆಳಕು (ನೇರವಾದ ಸೂರ್ಯನ ಬೆಳಕು) ಇರುವ ಪ್ರದೇಶದಲ್ಲಿ ಪರೀಕ್ಷೆ ಮಾಡುವುದು.
2. ಕೈ ಬೆರಳು ಅತೀ ತಣ್ಣಗೆ (ಎಸಿ ರೂಂ) ಇದ್ದಾಗ ಪರೀಕ್ಷೆ ಮಾಡುವುದು.
3. ಪರೀಕ್ಷೆ ಮಾಡುವಾಗ ಕೈ ಬೆರಳು ನಡುಗುತ್ತಿರುವುದು.
4. ವ್ಯಕ್ತಿಯ ನಾಡಿಬಡಿತ ಒತ್ತಡ ಕಡಿಮೆ ಇದ್ದಾಗ (Pulse volume).
5. ಕೈಬೆರಳುಗಳಿಗೆ ಹಚ್ಚಿರುವ ಬಣ್ಣಗಳು (Nail polish)
6. ಕೆಲವು ಸಮಯ ಯಂತ್ರದಲ್ಲಿರಬಹುದಾದ ತಾಂತ್ರಿಕ ತೊಂದರೆಗಳು. – ಇಂತಹ ಸಂದರ್ಭದಲ್ಲಿ ಆ ಯಂತ್ರದಲ್ಲಿ ಪದೇ ಪದೇ ಪರೀಕ್ಷೆ ಮಾಡಿದ ಎಲ್ಲರ ವರದಿ ವ್ಯತಿರಿಕ್ತವಾಗಿರಬಹುದು.
ಸಾಮಾನ್ಯವಾಗಿ ಈ ಯಂತ್ರಗಳ ಫಲಿತಾಂಶದ ವ್ಯತ್ಯಯ ಪ್ರಮಾಣ ಅವುಗಳ ಗುಣಮಟ್ಟಕ್ಕೆ ಅನುಸಾರವಾಗಿ ಹೆಚ್ಚು ಕಡಿಮೆ ಶೇ. 2ರಷ್ಟು ಇರಬಹುದು. ಅಂದರೆ ಯಾವುದೇ ವ್ಯಕ್ತಿಯ ಪಲ್ಸ್ ಅಕ್ಸಿ ಮೀಟರ್ ಫಲಿತಾಂಶ (SPO2) ಶೇ. 95 ಬಂದರೆ ಅದು ನೈಜವಾಗಿ ಶೇ. 93ರಿಂದ ಶೇ. 97ರ ವರೆಗೆ ಇರುವ ಸಾಧ್ಯತೆಗಳಿರುತ್ತದೆ. ಆದರೆ ಉತ್ತಮ ಗುಣಮಟ್ಟದ ಯಂತ್ರಗಳಲ್ಲಿ ಈ ವ್ಯತ್ಯಯ ಪ್ರಮಾಣ ಕಡಿಮೆ ಇರುತ್ತದೆ.
ಈ ಉಪಕರಣ ಬಳಕೆಗೆ ಮೊದಲು ಮತ್ತು ಅನಂತರ ಉಪಕರಣ ಮತ್ತು ಕೈಬೆರಳುಗಳನ್ನು ಅಲ್ಕೊಹಾಲ್ ದ್ರಾವಣ (ಶೇ.70-75)ದಿಂದ ಸ್ವತ್ಛಗೊಳಿಸುವುದು ಅಗತ್ಯ.
ಡಾ| ಅಶ್ವಿನ್ ಕುಮಾರ ಗೋಪಾಡಿ
ಕಮ್ಯುನಿಟಿ ಮೆಡಿಸಿನ್, ಕೆಎಂಸಿ ಮಣಿಪಾಲ
ಡಾ| ರಾಹುಲ್ ಮ್ಯಾಗಝಿನ್
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು, ರೆಸ್ಪಿರೇಟರಿ ಮೆಡಿಸಿನ್ ವಿಭಾಗ,
ಕೆಎಂಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.