ಪಂಜಾಬ್ ಪ್ರವಾಸಿಗರ ಸ್ವರ್ಗ
Team Udayavani, Jul 24, 2020, 8:30 AM IST
ಭಾರತ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ. ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಆಚಾರ-ವಿಚಾರ, ಸಂಸ್ಕೃತಿ, ಜನರ ಭಾಷೆ, ಆಹಾರ ಇತ್ಯಾದಿ ವಿಷಯಗಳನ್ನು ಪರಿಗಣಿಸಿದರೆ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಕನಿಷ್ಠ ಪಕ್ಷವಾದರೂ ಸಾಮ್ಯತೆ ಕಾಣಬಹುದು.
ದೇಶ ಸುತ್ತಿದರೆ ಆಗುವ ಅನುಭವಗಳು ಜೀವನಕ್ಕೆ ಉತ್ಸಾಹದ ರಸಾನುಭಾವವನ್ನು ತುಂಬಿಕೊಂಡಂತೆ. ದೂರದ ಪ್ರೇಕ್ಷಣೀಯ ಸ್ಥಳವನ್ನು ನೋಡಬೇಕೆಂಬ ಹಂಬಲವಾಗಿದ್ದೇ ತಡ ಗೆಳೆಯರೊಬ್ಬರ ಮದುವೆಗೆ ಮೂರು ಕುಟುಂಬಗಳು ಪಂಜಾಬ್ ಕಡೆ ಪ್ರಯಾಣ ಬೆಳೆಸಿದೆವು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಂಡೀಗಢ ವಿಮಾನ ನಿಲ್ದಾಣಕ್ಕೆ ನೇರ ವಿಮಾನದ ಮೂಲಕ ತೆರಳಿದೆವು. ಇದು ಸುಮಾರು ಮೂರು ಗಂಟೆಗಳ ಕಾಲದ ವಿಮಾನ ಯಾನ. ಚಂಡೀಗಢ ವ್ಯವಸ್ಥಿತವಾಗಿ ನಿರ್ಮಾಣವಾದ ಊರುಗಳೊಂದು. ರಸ್ತೆಯ ಇಕ್ಕೆಲಗಳಲ್ಲಿ ಹಸುರು, ದೊಡ್ಡ ದೊಡ್ಡ ಮನೆಗಳನ್ನು ಕಾಣಬಹುದು.
ಫೆಬ್ರವರಿಯಲ್ಲಿ ಭೇಟಿ ನೀಡಿದ್ದ ಕಾರಣ ಸ್ವಲ್ಪ ಪ್ರಮಾಣದಲ್ಲಿ ಚಳಿಯಿತ್ತು. ಶೀತ ಗಾಳಿ ಬಿಸಿಲಿಗೆ ಮುದ ನೀಡುತ್ತಿತ್ತು. ಸಿಕ್ಖರು ಮಹಾನ್ ದೇಶಪ್ರೇಮಿಗಳು. ವೀರರ ನಾಡನ್ನು ಕುತೂಹಲ ಮನಸ್ಸಿನಿಂದ ನೋಡಹೊರಟೆವು.
ಕಣ್ಸೆಳೆಯುವ ರಾಕ್ ಗಾರ್ಡನ್
ಚಂಡೀಗಢದ ಸುಖ° ನದಿಯ ಪಕ್ಕದಲ್ಲಿರುವ ರಾಕ್ ಗಾರ್ಡನ್ ಮಾನವ ನಿರ್ಮಿತ. ಪುಟ್ಟದಾದ ಕೃತಕ ವಾಟರ್‌ಫಾಲ್ ಒಳಗೊಂಡಿದ್ದು, ಉಳಿದ ಭಾಗಗಳಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಸೆರಾಮಿಕ್ ಟೈಲ್ಸ…, ಗಾಜಿನ ವಸ್ತುಗಳು ಹೀಗೆ ಕಸದಿಂದ ರಸ ಅನ್ನುವಂತೆ ಇವುಗಳನ್ನು ಅಂದವಾಗಿ ಜೋಡಿಸಲಾಗಿದೆ. ಅಂತೆಯೇ ವಿವಿಧ ಆಕೃತಿಯ, ವಿವಿಧ ಬಣ್ಣದ ಟೈಲ್ಸ್‌ಗಳಿಂದ ಮಾಡಿದ ಗೊಂಬೆಗಳು ಕಣ್ಣಿಗೆ ಆಕರ್ಷಕವೆನಿಸುತ್ತವೆ.
ಜಲಿಯನ್ ವಾಲಾಬಾಗ್
ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದ ಉದ್ಯಾನವಿದು. ಅಂದು ಸಾವಿರಗಟ್ಟಲೆ ಜನ ಸೇರಿದಾಗ ನಡೆದ ಏಕಾಏಕಿ ಗುಂಡಿನ ದಾಳಿಯಿಂದ ಗೋಡೆಗಳ ಮೇಲೆ ಉಂಟಾದ ಕಲೆಗಳನ್ನು ಇನ್ನೂ ಜೋಪಾನವಾಗಿ ಉಳಿಸಿಕೊಂಡಿದ್ದಾರೆ. ಹಾಗೆಯೇ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಬಾವಿಗೆ ಹಾರಿದ್ದನ್ನು ಮಾರ್ಟಿಯರ್ಸ್ ವೆಲ್ ಎಂದು ಹೆಸರಿಸಲಾಗಿದೆ. ಇವುಗಳನ್ನು ನೋಡುವಾಗ ಭಾವುಕರಾಗುವುದು ಖಂಡಿತ. ಈ ಪ್ರವೇಶ ತೀರಾ ಚಿಕ್ಕದಾಗಿದ್ದು ಅಲ್ಲಿ ನಡೆದಂತಹ ಭೀಕರ ಘಟನೆಯನ್ನು ನಾವೀಗ ಊಹಿಸಲ ಸಾಧ್ಯ. ದೇಶಕ್ಕಾಗಿ ಹೋರಾಡಿ ಮಡಿದವರ ವಿವರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಬಿಂಬಿಸಿದ್ದಾರೆ.
ವಾಘಾ ಬಾರ್ಡರ್
ಅಮೃತಸರ,ಲಾಹೋರ್ ಪ್ರದೇಶಗಳ ನಡುವಿನ ಗಡಿ ಈ ವಾಘಾ ಬಾರ್ಡರ್. ಸಂಜೆಯ ವೇಳೆ ಇಲ್ಲಿ ಜರಗುವ ಸೈನಿಕರ ಕವಾಯತು ಹಾಗೂ ಬಾವುಟಗಳ ಪ್ರದರ್ಶನ ನೆರೆದಿದ್ದವರನ್ನು ಮೈನವಿರೇಳಿಸುತ್ತದೆ. ಪಂಜಾಬ್‌ನಲ್ಲಿ ಪರೋಟ ಜನಪ್ರಿಯ ಆಹಾರ. ಎಲ್ಲ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಪರೋಟವೇ ಆಹಾರ ಪಟ್ಟಿಯಲ್ಲಿ ಮೊದಲ ಸ್ಥಾನ. ಸ್ಟಫ್ಡ್ ಪರೋಟ ಅದರ ಮೇಲೊಂದಿಷ್ಟು ದಪ್ಪನೆಯ ಬೆಣ್ಣೆ, ಬಾಯಲ್ಲಿಟ್ಟರೆ ವಾಹ್! ಎನ್ನುವ ಉದ್ಘಾರ ಬರದೇ ಇರದು. ಇನ್ನು ಮದುವೆ ಮತ್ತಿತ್ತರ ಸಮಾರಂಭಗಳಲ್ಲಿ ಬಂದ ನೆಂಟರಿಷ್ಟರು, ಸ್ನೇಹಿತರು ನೃತ್ಯ ಮಾಡುವುದು ಕಡ್ಡಾಯವೆಂಬಂತೆ, ವಯಸ್ಸಿನ ಭೇದವಿಲ್ಲದೆ, ಪರಿಚಯವಿಲ್ಲದಿದ್ದರೂ ನಮ್ಮನ್ನೂ ಒಂದೆರಡು ಹೆಜ್ಜೆ ಹಾಕಿಸದೆ ಬಿಡೋದಿಲ್ಲ. ಓಯ್ ಭಲೇ ಎಂದು ಕೈ ಕಾಲು ಅಲ್ಲಾಡಿಸಲೇಬೇಕು ನೀವೂ. ಅಂತೂ ವಾರದ ಮಟ್ಟಿನ ಈ ಪ್ರವಾಸವನ್ನು ಆನಂದಿಸಿದೆವು.
ಪವಿತ್ರ ಗೋಲ್ಡನ್ ಟೆಂಪಲ್
ಸಿಕ್ಖ್ರ ಪವಿತ್ರವಾದ ಗುರುದ್ವಾರವೇ ಈ ಗೋಲ್ಡನ್ ಟೆಂಪಲ…. ಇದಕ್ಕೆ ನಾಲ್ಕು ದಿಕ್ಕುಗಳಿಂದ ಪ್ರವೇಶದ್ವಾರವಿದ್ದು, ಒಳಗೊಂದು ಕೊಳವಿದೆ. ಅದರ ಮಧ್ಯದಲ್ಲಿ ಮುಖ್ಯ ಗುರುದ್ವಾರ. ಇದನ್ನು ಚಿನ್ನದಿಂದ ನಿರ್ಮಿಸಿದ್ದಾರೆ. ಗುರುದ್ವಾರದ ಒಳಹೋಗುವ ಮುನ್ನ ತಲೆಯನ್ನು ವಸ್ತ್ರದಿಂದ ಮುಚ್ಚಬೇಕು. ತಮ್ಮ ಬಳಿಯಿರುವ ಶಾಲು, ಕರವಸ್ತ್ರ ಅಥವಾ ಇನ್ನಿತರ ಬಟ್ಟೆಯಿಂದ ಮುಚ್ಚಬಹುದು ಅಥವಾ ಗುರುದ್ವಾರದ ಪ್ರವೇಶದ್ವಾರದಲ್ಲಿ ಹಳದಿ ಬಣ್ಣದ ಕರವಸ್ತ್ರ ಅಳತೆಯ ಬಟ್ಟೆಗಳನ್ನು ನೀಡುತ್ತಾರೆ. ನಾವು ಅದನ್ನು ಪಾಲಿಸಿ ಒಳಹೊಕ್ಕಾಗ ಪ್ರಶಾಂತ ಅನುಭವ. ಜನಸಂದಣಿ ಜಾಸ್ತಿಯಿದ್ದುದರಿಂದ, ಮುಖ್ಯ ಗುರುದ್ವಾರವನ್ನು ತಲುಪಲು ಗಂಟೆಗಳೇ ಕಾದೆವು. ಅಲ್ಲಿ ಲಂಗರ್ ಎಂಬ ಭೋಜನ ಕೋಣೆಯಿದ್ದು, ಬರುವ ಭಕ್ತರಿಗೆ ಉಚಿತ ಊಟದ ವ್ಯವಸ್ಥೆಯಿದೆ.
-ಸುಪ್ರೀತಾ ವೆಂಕಟ್ ಸಾಫ್ಟ್‌ವೇರ್ ಎಂಜಿನಿಯರ್, ಬೆಂಗಳೂರು
(ಅತಿಥಿ ಅಂಗಳ: ಅಂಕಣ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.