UV Fusion: ಬಾಲ್ಯದಾಟ ತಂದ ಪೀಕಲಾಟ
ದನ ಕಾಯುವ ಕರ್ತವ್ಯ ಲೋಪಕ್ಕಾಗಿ ಮನೆಯವರಿಂದ ನಾಮಾರ್ಚನೆ ಕಡಬು ಬಿದ್ದಿತ್ತು.
Team Udayavani, Aug 6, 2023, 4:59 PM IST
ಆ ದಿನ ನಾವು ಮಕ್ಕಳೆಲ್ಲ ಒಗ್ಗೂಡಿ ಯಕ್ಷಗಾನ ಬಯಲಾಟ ಆಡಲು ನಿರ್ಧರಿಸಿದೆವು. ಟಿಸಿಲು ಟಿಸಿಲೊಡೆದು ಬಿರು ಬಿಸಿಲಿಗಡ್ಡಿಯನೊಡ್ಡಿದ ತಣ್ಣೆಲ ತಂಪಿನ ವಿಶಾಲ ಆಲದ ತರುವಿನ ಹಂದರವೇ ರಂಗಸ್ಥಳ, ಮರದ ಹಿಂಬದಿಗೆ ಚೌಕಿ.
ನೋಡ ನೋಡುತ್ತಾ ಭಜನೆ ತಾಳ ಭಾಗವತರ ಕೈ ಸೇರಿತು, ಒಡಕು ಡಬ್ಬದ ಚೆಂಡೆ ಬಡಗುಟ್ಟಿತು. ಕೆಮ್ಮಣ್ಣಿನ ಹುಡಿ, ಸೇಡಿ ಮಣ್ಣಿನ ಪುಡಿ, ಇದ್ದಿಲನ ಮಸಿ, ಒಲೆಯ ಬೂದಿಗಳೇ ಪ್ರಸಾದನ. ಪಾಣಿ ಪಂಚೆಯೆ ವಸ್ತ್ರಾಭರಣ. ಅಡಿಕೆ ಹಾಳೆಯ ಕಿರೀಟ, ಕೇದಗೆ ದಿಂಡಿನ ಗದೆ, ಬಿದಿರಿನ ಬಾಣ ಬಿಲ್ಲು ಬೂರಗದ ಹತ್ತಿಯ ಗಡ್ಡ ಮೀಸೆ, ಚಕ ಚಕನೆ ಸಿದ್ಧಗೊಂಡವು. “ಕೃಷ್ಣ ಲೀಲೆ ಕಂಸ ವಧೆ’- ಯಕ್ಷ ಕಥಾನಕವನ್ನು ಪ್ರಸ್ತುತ ಪಡಿಸಲು ಅಣಿಯಾದೆವು.
ಭಾಗವತರು “ಗಜಮುಖದವಗೆ ಗಣಪಗೆ……….’ ಗಣಪತಿ ಶ್ರುತಿಯೊಡನೆ ಕಥಾನಕಕ್ಕೆ ನಾಂದಿ ಹಾಡಿದರು. ಕಥಾಭಾಗಕ್ಕೆ ನಮ್ಮನ್ನು ತೆರೆದುಕೊಂಡು ರಂಗೇರಿಸುತ್ತ ಇಹವನ್ನು ಮರೆತು ಯಕ್ಷಲೋಕಲೀನವಾದೆವು. ಈತನ್ಮದ್ಧೆ ಅನಿರೀಕ್ಷಿತವಾಗಿ ಬೆನ್ನಿನ ಮೇಲೆ ಬಿರುಸಾದ ಹೊಡೆತ ಬೀಳ ತೊಡಗಿತು. ಹೊಡೆತದ ನೋವು ನಮ್ಮನ್ನು ಯಕ್ಷಲೋಕದಿಂದ ಇಹಕ್ಕೆ ಮರಳಿಸಿತು. ಆಗ ಅಲ್ಲಿ ನೋಡುವುದೇನು ಅನಪೇಕ್ಷಿತ ಅನಾಮಿಕ ಅಸುರನೊಬ್ಬ ಬಕಾಸುರನಂತೆ ಅರಚುತ್ತ , ವಾಚಾಮಗೋಚರವಾಗಿ ಮೂದಲಿಸುತ್ತ ಭಯಾನಕ ಆಯುಧದ ಬದಲು ಕರದೊಳ್ಪಿಡಿದ ಹುಣಸೆ ಬರಲಿನಿಂದ ಸಿಕ್ಕ ಸಿಕ್ಕವರಿಗೆಲ್ಲ ಯಥಾನುಶಕ್ತಿ ತದಕುತ್ತ ರೌದ್ರ ರಸ ಸನ್ನಿವೇಶ ಸ್ರಷ್ಟಿಸಿದ. ಆಗ ತಾನೇ ಕೆಲವಾರು ದಾನವರನ್ನು ವಧಿಸಿ ಬೀಗುತ್ತಿರುವ ಕಥಾನಾಯಕ ಕೃಷ್ಣನಿಗೆ ಬಿರುಸಾಗಿ ಬಿಗಿದಿದ್ದ. ಹೊಡೆತದ ನೋವಿನಿಂದ ಕಥಾನಾಯಕ ವ್ಯಥೆ ನಾಯಕನಾದ.
ದಾನವಾಂತಕನೇ ದಾನವನಿಂದ ಹೊಡೆತ ತಿಂದ. ಪೆಟ್ಟಿನಿಂದ ಖಳನಾಯಕ ಕಂಸನ ಚರ್ಮ ದ್ವಂಸಗೊಂಡಿತು ; ರಕ್ತ ಚಿನುಗಿ, ಖಳನಾಯಕ ಅಳುನಾಯಕನಾದ. ಹೊಡೆತದ ನೋವು ತಾಳಲಾರದೆ ಭಾಗವತ ರೋದಿಸುತ್ತ ಕರುಣಾರಸ ಹರಿಸಿದ. ದಾನವ ಅಟ್ಟಿ ಅಟ್ಟಿ ಕುಟ್ಟುತಿದ್ದ. ಅವನಿಂದ ತಪ್ಪಿಸಿಕೊಳ್ಳಲು ರಂಗಸ್ಥಳ ತೊರೆದು, ಬಯಲು ದಾಟಿ, ತೋಟಕ್ಕೆ ನುಗ್ಗಿದೆವು. ಧಡೂತಿ ಕಾಯದವನಾದ ರಕ್ಕಸ ನಮ್ಮ ಸರಿ ಸಮ ಓಡಲಾಗದೆ ಹಿಂದೆ ಬಿದ್ದ.
ಆದರೆ ಅಸುರನಿಂದ ಬಚಾವಾದ ನೆಮ್ಮದಿ ಅಲ್ಪ ಕಾಲದಾಗಿತ್ತು. ತೋಟದಲ್ಲಿ ತಾಟಕಿಯಂತೆ ಕಿರುಚುತ್ತಿರುವ ದಾನವಿ ಒಬ್ಬಳು ಎದುರುಗೊಂಡು ಕಸಬರಿಕೆ ಎಂಬ ಅಸ್ತ್ರದಿಂದ ಪ್ರಹಾರ ಮಾಡತೊಡಗಿದಳು. ಅಲ್ಲಿ ಅಸುರ ಇಲ್ಲಿ ಅಸುರೆ. ಅಲ್ಲಿ ಹುಣಸೆ ಬರಲಿನ ಹೊಡೆತ, ಇಲ್ಲಿ ಕಸಬರಿಕೆಯ ಬಡಿತ. ಹೊಡೆತದ ಮೇಲೆ ಬಡಿತ, ಬೆನ್ನು ಬೇರಿಯಾಗಿತ್ತು. ಗಾಯದ ಮೇಲೆ ಬರೆ. ಬಾಣಲೆಯಿಂದ ಬೆಂಕಿಗೆ ಬಿದ್ದೇವು. ಅತ್ತ ದರಿ ಇತ್ತ ಪುಲಿ. ದಾನವಿಯಿಂದ ತಪ್ಪಿಸಿಕೊಂಡು ಓಟದ ವೇಗವನ್ನು ಇಮ್ಮಡಿಸಿ ಓಣಿಗೆ ನುಗ್ಗಿ ನಿರಾಳರಾಗಿ ಉಸಿರು ಬಿಡಬೇಕೆನ್ನುವಷ್ಟರಲ್ಲಿ ಮಗದೊಂದು ಆಪತ್ತು ಕಾದಿತ್ತು. ಅಲ್ಲಿ ಆಗ ತಾನೇ ವಿಹಾರಕ್ಕೆ ಹೊರಟಿದ್ದ ನಾಲ್ಕೈದು ಶ್ವಾನಗಳ ಹಿಂಡು ಎದುರಾದವು. ಚಿತ್ರ, ವಿಚಿತ್ರ ವೇಷ ತೊಟ್ಟು ಪರಾರಿಯಾಗುತ್ತಿರುವ ನಮ್ಮನ್ನು ಕಂಡು ಏನೋ ಅನಾಹುತಗೈದು ತಪ್ಪಿಸಿಕೊಂಡು ಓಡುತ್ತಿರುವ ಖದೀಮರೆಂದು ಬಗೆದು ಬೌಗುಡುತ್ತ ಅಟ್ಟಿಸಿಕೊಂಡು ಬಂದವು.
ಅಸುರ, ಅಸುರೆ, ದರಿ, ಪುಲಿ, ಬಾಣಲೆ, ಬೆಂಕಿಯಿಂದ ತಪ್ಪಿಸಿಕೊಂಡು ಬಂದ ನಾವು ಶುನಕ ದಾಳಿಗೆ ಸಿಲುಕಿದೆವು. ಕಾಲಿಗೆ ಬುದ್ಧಿ ಹೇಳುವ ಕೆಲಸವನ್ನು ಮುಂದುವರಿಸಿ ಹೇಗೋ ಗಮ್ಯ ತಲುಪಿದೆವು.
ನಮ್ಮ ಸಂಕಷ್ಟ ಇಷ್ಟಕ್ಕೆ ಮುಗಿಯಲಿಲ್ಲ. ಪ್ರತೀ ಮನೆ ಮನೆಗಳಲ್ಲೂ ಇನ್ನೊಂದು ಬೆತ್ತದ ಪೂಜೆಯ ತಯಾರಿ ನಡೆದಿತ್ತು. ಕೈ ಕಾಲು ಮುಖ ತೊಳೆದು ಸುದಾರಿಸಿಕೊಳ್ಳಬೇಕಾದರೆ, ಮನೆಯ ಹಿರಿಯರು ಸಹಸ್ರ ನಾಮಾರ್ಚನೆ ಮಾಡುತ್ತ ಯಥಾಶಕ್ತಿ ಕಡಬು ಹೇರಿದರು. ಹೊಡೆತ, ಬಡಿತ, ಕಡಬು ತಿಂದು ಬೆನ್ನು ನೋವಿನಿಂದ ಉರಿಯುತ್ತಿತ್ತು. ಸಾಲದಕ್ಕೆ ನಾಯಿಗಳ ದಾಳಿ ಬೇರೆ. ಮಂಗಳದಲ್ಲಿ ತೆರೆ ಬೀಳಬೇಕಾದ ಪ್ರಸಂಗ, ಬೆನ್ನಿನ ಮೇಲೆ ಬರೆ ಬೀಳಿಸಿ ಅಮಂಗಳದಲ್ಲಿ ಸಮಾಪ್ತವಾಯಿತು.
ಯಕ್ಷ ಕಥಾನಕದ ಪೂರ್ವರಂಗದ ಹಿನ್ನೆಲೆ ಹೀಗಿದೆ. ಅಂದು ಯಕ್ಷ ಲೋಕ ತಲ್ಲೀನರಾಗಿ ನಾವು ಮೇಯಿಸಲು ಅಟ್ಟಿಕೊಂಡು ಹೋದ ಕರುಗಳೆಡೆ ನಿಗಾ ಇಡದ ಸಂದರ್ಭದ ಪಡೆದ ರಾಸುಗಳು ಹುಲುಸಾಗಿ ಬೆಳೆದ ಹೊಲಕ್ಕೆ ನುಗ್ಗಿ ಹಾಳುಗೆಡುವುದನ್ನು ಕಂಡು ಕುಪಿತಗೊಂಡ ಹೊಲದೊಡೆಯ ರೌದ್ರ ರೂಪ ತಾಳಿ ಯಕ್ಷರಂಗಕ್ಕೆ ದುಮುಕಿ ರೌದ್ರ ರಸ ಸನ್ನಿವೇಶ ಸ್ರಷ್ಟಿಸಿದ್ದ. ತೋಟದಲ್ಲಿ ನಮ್ಮನ್ನು ತದಕಿದ್ದು ಹೊಲದೊಡೆಯನ ಪತ್ನಿ ನಮ್ಮ ಅರ್ಧ ಅಂಗವನ್ನು ಹುಡಿ ಮಾಡಿದ್ದಳು ಇನ್ನರ್ಧವನ್ನು ಹೊಲದೊಡೆಯ ಹನನಗೊಳಿಸಿದ್ದ. ಆದರೆ ಶ್ವಾನ ದಾಳಿ ಮಾತ್ರ ಆಕಸ್ಮಿಕ. ದನ ಕಾಯುವ ಕರ್ತವ್ಯ ಲೋಪಕ್ಕಾಗಿ ಮನೆಯವರಿಂದ ನಾಮಾರ್ಚನೆ ಕಡಬು ಬಿದ್ದಿತ್ತು.
ಇಷ್ಟು ಸಂಕಷ್ಟಗಳ ಸರಮಾಲೆ ಅನುಭಸಿದರೂ ಕೂಡ ಮಾರನೇ ದಿನ ಮತ್ತೆ ಯಥಾಸ್ಥಾನದಲ್ಲಿ ನಮ್ಮ ಯಕ್ಷಲೋಕ ತೆರೆದುಕೊಳ್ಳುತ್ತದೆ. ನಮ್ಮ ಯಕ್ಷ ವ್ಯಸನದ ಮುಂದೆ ಹೊಡೆತ, ಬಡಿತ, ಬೈಯ್ಗುಳ ನಗಣ್ಯ.
ಇದು ಕೆಲವೇ ಕೆಲವು ದಶಕಗಳ ಹಿಂದಿನ ನಮ್ಮ ಬಾಲ್ಯಕಾಲದ ರಸಗಳಿಗೆ. ಶಾಲೆ, ಟ್ಯೂಷನ್, ಹೋಂ ವರ್ಕ್, ಮೊಬೈಲ್ ಟಿವಿಗಳಲ್ಲಿ ಕಳೆದು ಹೋಗುವ ಇಂದಿನ ಮಕ್ಕಳು ಅಂದಿನ ಸುಮದುರ ರಸಮಯ ಬಾಲ್ಯ ವಂಚಿತರೆಂದೇ ನನ್ನ ಭಾವನೆ.
*ದಿನೇಶ್ ಕೆ. ನಾಯ್ಕ, ಮುಂಬಯಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.