ಮತ್ತೆ ಮೊಳಗಿದ “ವಾಲ್ಮೀಕಿ ಸಮುದಾಯದ ಮೀಸಲಾತಿ ‘ ಧ್ವನಿ
Team Udayavani, Sep 7, 2020, 12:26 PM IST
ಹರಿಹರ: ವಾಲ್ಮೀಕಿ ಸಮುದಾಯದ ಮೀಸಲಾತಿ ಬೇಡಿಕೆ ಕೂಗು ಮತ್ತೆ ಪ್ರತಿಧ್ವನಿಸುತ್ತಿದೆ. ಈ ಹಿಂದೆ ಪಾದಯಾತ್ರೆ ನಡೆಸಿದ್ದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ರವಿವಾರ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸಭೆ ನಡೆಸಲಾಗಿದೆ. ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮುಖಂಡರು ಪಾಲ್ಗೊಂಡು ಶೇ. 7.5ರಷ್ಟು ಮೀಸಲಾತಿಗಾಗಿ ಸರಕಾರವನ್ನು ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಗಿದೆ.
ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಮುಂಬರುವ ಅಧಿವೇಶನದಲ್ಲಿ ಸರಕಾರ ವಾಲ್ಮೀಕಿ ಸಮಾಜದ ಮೀಸಲಾತಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಹಲವು ದಶಕಗಳಿಂದ ಹೋರಾಡುತ್ತಿದ್ದರೂ ಸರಕಾರ ಸಮಾಜದ ನ್ಯಾಯಯುತ ಬೇಡಿಕೆ ಈಡೇರಿಸದಿರುವುದು ದುರದೃಷ್ಟಕರ. ಸಿಎಂ ಯಡಿಯೂರಪ್ಪ ಕೂಡಲೇ ಮೀಸಲಾತಿ ಬಗ್ಗೆ ಸರಕಾರದ ನಿಲುವು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಬಿಎಸ್‌ವೈ ಮಾತು ತಪ್ಪಲ್ಲ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಸಿಎಂ ಬಿಎಸ್‌ವೈ ಅವರು ಯಾವುದೇ ಕಾರಣಕ್ಕೂ ಕೊಟ್ಟ ಮಾತು ತಪ್ಪುವವರಲ್ಲ.
ನ್ಯಾ| ನಾಗಮೋಹನ್‌ದಾಸ್ ವರದಿ ತಿಂಗಳ ಹಿಂದೆಯಷ್ಟೇ ಸರಕಾರದ ಮುಂದೆ ಬಂದಿದ್ದು, ಕೋವಿಡ್ ಕಾರಣದಿಂದ ಮುಂದಿನ ಪ್ರಕ್ರಿಯೆ ನಡೆದಿಲ್ಲ ಎಂದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಸುರಪುರ ಶಾಸಕ ರಾಜುಗೌಡ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಶಾಸಕರಾದ ಎಸ್.ವಿ. ರಾಮಚಂದ್ರ, ಟಿ. ರಘುಮೂರ್ತಿ, ಈ. ತುಕಾರಾಂ, ಅನಿಲ್ ಚಿಕ್ಕಮಾದು, ಕಂಪ್ಲಿ ಗಣೇಶ್, ವೆಂಕಟಪ್ಪ ನಾಯ್ಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮತ್ತಿತರರು ಮಾತನಾಡಿದರು.
ಸೆ.21ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಶಾಸಕರ ಭವನದಲ್ಲಿ ವಾಲ್ಮೀಕಿ ಶ್ರೀಗಳ ನೇತೃತ್ವ ದಲ್ಲಿ ಸಮಾಜದ ಶಾಸಕರು ಮತ್ತು ಸಂಸದರ ಸಭೆ ನಡೆಸಿ, ಬಳಿಕ ಸಿಎಂ ಬಳಿ ನಿಯೋಗ ತೆರಳಲಾಗುವುದು.
– ಬಿ. ಶ್ರೀರಾಮುಲು, ಆರೋಗ್ಯ ಸಚಿವ
ರಾಮನ ಹೆಸರಿನಲ್ಲಿ ಅ ಧಿಕಾರಕ್ಕೆ ಬಂದಿರುವ ಬಿಜೆಪಿ, ರಾಮನನ್ನು ವಿಶ್ವಕ್ಕೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಯ ಸಮಾಜದವರಿಗೆ ನ್ಯಾಯಯುತ ಮೀಸಲಾತಿ ನೀಡಲು ಜಾಣ ಕಿವುಡುತನ ತೋರಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ.
– ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.