Ayodhya: ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರು: ಸಂಪುಟ ಅಸ್ತು
ಅಯೋಧ್ಯೆ ಜತೆ ಜಗತ್ತಿನ ಸಂಪರ್ಕಕ್ಕೆ ಬದ್ಧ: ಮೋದಿ
Team Udayavani, Jan 6, 2024, 12:53 AM IST
ಹೊಸದಿಲ್ಲಿ: ಅಯೋಧ್ಯೆಯಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆಗೊಂಡ ವಿಮಾನ ನಿಲ್ದಾಣವನ್ನು “ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಅಯೋಧ್ಯಾಧಾಮ’ ಎಂದು ನಾಮಕರಣ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ರಾಮಾಯಣವನ್ನು ರಚಿಸಿದ ಋಷಿ ವಾಲ್ಮೀಕಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ನಾಮಕರಣ ಮಾಡಲು ಅನುಮೋದಿಸಲಾಗಿದೆ. ಅಲ್ಲದೇ ವಿಮಾನ ನಿಲ್ದಾಣಕ್ಕೆ “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಸ್ಥಾನಮಾನ ನೀಡುವುದಕ್ಕೂ ಸಂಪುಟದ ಸಮ್ಮತಿ ದೊರೆತಿದೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ, “ಶ್ರೀ ರಾಮನ ಪವಿತ್ರ ನಗರವನ್ನು ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುವಂತೆ ಮಾಡಲು ನಮ್ಮ ಸರಕಾರ ಬದ್ಧವಾಗಿದೆ’ ಎಂದಿದ್ದಾರೆ.
ಪೃಥ್ವಿ ಯೋಜನೆಗೆ ಒಪ್ಪಿಗೆ: ಭೂ ವಿಜ್ಞಾನಗಳಿಗೆ ಸಂಬಂಧಿಸಿದ ಅಧ್ಯಯನದ ಉದ್ದೇಶದಿಂದ ಜಾರಿಗೊಳಿಸಲಾಗಿರುವ “ಪೃಥ್ವಿ ವಿಜ್ಞಾನ್’ ಯೋಜನೆಗೆ ಸಂಪುಟದ ಒಪ್ಪಿಗೆ ದೊರೆತಿದೆ. 4,797 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಭೂ ವಿಜ್ಞಾನಗಳಿಗೆ ಸಂಬಂಧಿಸಿದ 5 ವಿವಿಧ ಉಪಯೋಜನೆಗಳಿಗೂ ಈ ಮೊತ್ತವನ್ನು ಬಳಸಲಾಗುತ್ತದೆ. ಅದರನ್ವಯ ಹವಾಮಾನ, ಸಮುದ್ರ ಸೇವೆಗಳು, ಧ್ರುವೀಯ ವಿಜ್ಞಾನ, ಭೂಕಂಪಶಾಸ್ತ್ರ ಸೇರಿದಂತೆ ಭೂವಿಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅಧ್ಯಯನ ನಡೆಸಲಾಗುತ್ತದೆ.
ಉಪಗ್ರಹ ಅಭಿವೃದ್ಧಿ: ಭಾರತ ಮತ್ತು ಮಾರಿಷಸ್ ಜಂಟಿಯಾಗಿ ಸಣ್ಣ ಉಪಗ್ರಹ ಅಭಿವೃದ್ಧಿಪಡಿಸುವ ಯೋಜನೆಗೂ ಒಪ್ಪಿಗೆ ದೊರೆತಿದೆ. 15 ತಿಂಗಳುಗಳಲ್ಲಿ ಉಪಗ್ರಹ ಸಿದ್ಧಗೊಂಡು, ಇಸ್ರೋ ಉಡಾವಣೆ ಮಾಡಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.