![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 31, 2024, 12:36 AM IST
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಕೈಗೆತ್ತಿಕೊಂಡಿರುವ 2ನೇ ಹಂತದ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ನಾಗಪುರದ ಡಿ.ಪಿ.ಜೈನ್ ಕಂಪೆನಿ ವಿರುದ್ಧದ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದ್ದು, ಮಂಗಳೂರು ವ್ಯಾಪ್ತಿಯ 45 ಮಂದಿಗೆ ಒಟ್ಟು 11.50 ಕೋ.ರೂ. ಸಂದಾಯ ಮಾಡಲಾಗಿದೆ.
ಪುಂಜಾಲಕಟ್ಟೆ ಯಿಂದ ಚಾರ್ಮಾಡಿ ವರೆಗೆ 385 ಕೋ. ರೂ. ವೆಚ್ಚದಲ್ಲಿ 35 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಮಾಡಲಾಗಿತ್ತು. ಈ ಟೆಂಡರನ್ನು ಮಹಾರಾಷ್ಟ್ರದ ನಾಗಪುರದ ಡಿ.ಪಿ. ಜೈನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು.
ಕಾಮಗಾರಿ ವೇಳೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಿಂದ ಡೀಸೆಲ್, ಪೆಟ್ರೋಲ್, ಕ್ರಷರ್‌ಗಳಿಂದ ಜಲ್ಲಿ, ದಿನಸು ಅಂಗಡಿಗಳಿಂದ ಆಹಾರ ಸಾಮಗ್ರಿ, ಸ್ಟೇಶನರಿ ಸಾಮಗ್ರಿ, ಪೀಠೊಪಕರಣ ಮುಂತಾದ ಹಲ ವಾರು ಸಾಮಗ್ರಿಗಳನ್ನು ಈ ಕಂಪೆನಿ ಸಾಲದ ರೂಪದಲ್ಲಿ ಪಡೆದಿತ್ತು. 8 ಸಾವಿರ ಕೋಟಿ ರೂ. ಒಡೆಯನ ದೊಡ್ಡ ಕಂಪೆನಿ ಎಂದು ಭಾವಿಸಿ ಎಲ್ಲರೂ ಸಾಮಗ್ರಿಗಳನ್ನು ನೀಡಿದ್ದರು.
ನಾಗಪುರದಲ್ಲಿ ಪ್ರತಿಭಟನೆ
ಬಿಲ್ ಬಾಕಿ ಇರುವ ಬಗ್ಗೆ ದ.ಕ. ಜಿಲ್ಲೆಯಿಂದ ಒಟ್ಟು 45 ಮಂದಿ ಸೇರಿ ರಾಜ್ಯ ಕ್ರಷರ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಡಾ| ರವೀಂದ್ರ ಶೆಟ್ಟಿ ಮುಂದಾಳತ್ವದಲ್ಲಿ ಸಮಸ್ಯೆ ಪರಿಹಾರ ಮಾಡುವಂತೆ ನಾಗಪುರ ಡಿ.ಪಿ.ಜೈನ್ ಕಂಪೆನಿ ಬಳಿಗೆ ತೆರಳಿ, ಆ.26ರಿಂದ ಧರಣಿ ಕುಳಿತುಕೊಂಡಿದ್ದರು. ಆದರೆ ಕಂಪೆನಿ ಮೊದಲಿಗೆ ಯಾವುದೇ ಮಾತುಕತೆಗೆ ಸ್ಪಂದಿಸಿರಲಿಲ್ಲ. ಧರಣಿ ನಿರಂತರವಾಗುತ್ತಲೇ ನಾಗಪುರದ ಶಾಸಕರಾದ ಮೋಹನ್ ಸ್ಥಳಕ್ಕೆ ಆಗಮಿಸಿ ಡಾ| ರವೀಂದ್ರ ಶೆಟ್ಟಿ ಯವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಜಗ್ಗದಿದ್ದಾಗ ಕೊನೆಗೆ ಡಿ.ಪಿ.ಜೈನ್ ಕಂಪೆನಿಯು ಮಂಗಳೂರು ವಿಭಾಗದ 11.50 ಕೋ.ರೂ. ಬಾಕಿ ಮೊತ್ತ ನೀಡಲು ಒಪ್ಪಿಕೊಂಡಿತು.
ಶೇ.50 ನಗದು, ಶೇ.50 ಚೆಕ್
ಬಾಕಿ ಮೊತ್ತದಲ್ಲಿ ಆ.27ರಿಂದ ಶೇ.50 ಮೊತ್ತ ಖಾತೆಗೆ ನೇರ ವರ್ಗಾ ವಣೆ ಹಾಗೂ ಶೇ.50 ಚೆಕ್ ನೀಡುವ ಮೂಲಕ ಕ್ಲಿಯರ್ ಮಾಡಲಾಗಿದೆ.
ಬೆಳ್ತಂಗಡಿಯ 150 ಸಿಬಂದಿಗೆ 3 ತಿಂಗಳ ವೇತನ
ಬೆಳ್ತಂಗಡಿ ತಾಲೂಕಿನ ಓಡಿಲಾ°ಳ ದಲ್ಲಿರುವ ಗುತ್ತಿಗೆ ಕಂಪೆನಿಗೆ ಸಂಬಂಧಿಸಿದ ಘಟಕದಲ್ಲಿದ್ದ 150 ಮಂದಿ ಸಿಬಂದಿಗೆ 4 ತಿಂಗಳ ವೇತನ ನೀಡದೆ ಸತಾಯಿಸಿದ್ದರು. ಈಗ ಗುತ್ತಿಗೆ ಬದಲಾಗಿದ್ದು, ಡಿ.ಪಿ.ಜೈನ್ ಒಟ್ಟು 150 ಮಂದಿ ಕೆಲಸಗಾರರಿಗೆ 3 ತಿಂಗಳ ವೇತನ ನೀಡಿದೆ.
You seem to have an Ad Blocker on.
To continue reading, please turn it off or whitelist Udayavani.