ಜ್ಞಾನ-ಕರ್ಮಯೋಗಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ
Team Udayavani, Jul 20, 2021, 6:30 AM IST
ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ಗುರುಪೀಠಗಳಲ್ಲಿ ಒಂದಾದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಕೀರ್ತಿ ಶ್ರೀಗಳದ್ದು. ಶ್ರೀರಾಮ-ವಿಠuಲ ದೇವರನ್ನು ಅನನ್ಯ ಭಕ್ತಿಯಿಂದ ಪೂಜಿಸುತ್ತ ಶಿಷ್ಯ ವೃಂದವನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ, ಸಮಸ್ತ ಲೋಕಕಲ್ಯಾಣಕ್ಕಾಗಿ ನಿರಂತರ ಶ್ರಮಿಸಿದ ಜ್ಞಾನ-ಕರ್ಮಯೋಗಿಗಳು ಶ್ರೀವಿದ್ಯಾಧಿರಾಜ ತೀರ್ಥರು.
ಗೋಕರ್ಣ ಮಠದ ಪರಂಪರೆಯ 22ನೇ ಯತಿಪುಂಗವರಾದ ಶ್ರೀದ್ವಾರಕಾನಾಥ ತೀರ್ಥ ಶ್ರೀಪಾದರಿಂದ ಪರಾಭವ ನಾಮಸಂವತ್ಸರದ ಮಾಘಮಾಸದ ಕೃಷ್ಣ ಪಕ್ಷದ ಬಿದಿಗೆ (1967 ಫೆಬ್ರವರಿ 26)ಯಂದು ಮುಂಬಯಿ ನಗರದ ವಡಾಲಾ ಶ್ರೀ ರಾಮಮಂದಿರದಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದ ಶ್ರೀರಾಘವೇಂದ್ರಾಚಾರ್ಯರು ಶ್ರೀವಿದ್ಯಾಧಿರಾಜ ತೀರ್ಥ ರಾದರು. 1973ರಲ್ಲಿ ಶ್ರೀದ್ವಾರಕಾನಾಥ ತೀರ್ಥರು ಹರಿಪಾದ ಸೇರಿದ ಬಳಿಕ ಪ್ರಮಾಥಿ ನಾಮಸಂವತ್ಸರದ ಚೈತ್ರ ಶುದ್ಧ ಬಿದಿಗೆಯಂದು (1973 ಎಪ್ರಿಲ್ 5 ) ಶ್ರೀ ಗೋಕರ್ಣ ಮಠ ಮಹಾಸಂಸ್ಥಾನದ ವೇದಾಂತ ಸಾಮ್ರಾಜ್ಯದ ಅಧಿಕಾರವನ್ನು ಸ್ವೀಕರಿಸಿದರು.
ಪೀಠಾರೋಹಣ ಮಾಡಿ ಅಲ್ಪಾವಧಿ ಯಲ್ಲೇ ಜೀರ್ಣಾವಸ್ಥೆ ತಲುಪಿದ್ದ ಅನೇಕ ಶಾಖಾಮಠಗಳ ಜೀರ್ಣೋದ್ಧಾರ, ದೇಗುಲ ನಿರ್ಮಾಣ, ಮೂಲಮಠದ ಜೀರ್ಣೋ ದ್ಧಾರ, ನೇಪಾಳದ ಗಂಡಕೀ ಯಾತ್ರೆ ನಡೆಸಿ ದಾಮೋದರ ಕುಂಡ ಸಹಿತ ಅನೇಕ ದುರ್ಗಮ ಪ್ರದೇಶಗಳ ಸಂದರ್ಶನ ಮಾಡಿ ಅಪೂರ್ವ ಸಾಧನೆಗಳನ್ನು ಶ್ರಿಗಳು ಮಾಡಿದ್ದಾರೆ.
50ಕ್ಕೂ ಅಧಿಕ ಚಾತುರ್ಮಾಸ ವ್ರತಗಳನ್ನು ಆಚರಿಸಿದ್ದಾರೆ. ಬದರಿಯ ನಾರಾಯಣನ ಸನ್ನಿಧಾನದಲ್ಲಿ ಎರಡು ಚಾತುರ್ಮಾಸಗಳನ್ನು ಅದ್ವಿತೀಯವಾಗಿ ನಡೆಸಿ ಶ್ರೀ ರಾಮವಿಠuಲ ದೇವರಿಗೆ ಸಮರ್ಪಿಸಿದ ಧನ್ಯ ಯತಿಗಳು ಶ್ರೀ ವಿದ್ಯಾಧಿರಾಜ ತೀರ್ಥರು. ಇದು ಸಮಸ್ತ ಮಾಧ್ವ ಮಠಗಳ ಪರಂಪರೆಯಲ್ಲೇ ಅತಿ ವಿಶಿಷ್ಟವಾದ ಸಾಧನೆ.
ಸಂಸ್ಕೃತ ಭಾಷೆಯಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಶ್ರೀಗಳು ಭಾರತೀಯ ತಣ್ತೀಶಾಸ್ತ್ರದ ಬಹುತೇಕ ಎಲ್ಲ ಮಹತ್ವÌದ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಆಸೇತು ಹಿಮಾಲಯ ಭಾರತ ಭೂಮಿಯನ್ನು ಸಂಚರಿಸುತ್ತ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ತತ್ವವಾದ ಸಿದ್ಧಾಂತದ ಪ್ರಚಾರ ನಡೆಸಿ, ಕೋಟಿ ಶ್ರೀರಾಮನಾಮ ಯಜ್ಞ, ಮಹಾವಿಷ್ಣುಯಾಗ ಮೊದಲಾದ ಅತ್ಯಪೂರ್ವ ಯಾಗಗಳನ್ನು ನಿರ್ವಹಿಸಿ ಪುಣ್ಯರಾಶಿಯನ್ನು ಸಮಾಜಕ್ಕೆ ಧಾರೆ ಎರೆದುಕೊಟ್ಟ ನಿರ್ಲಿಪ್ತ ಚೇತನ ಶ್ರೀ ವಿದ್ಯಾಧಿರಾಜರು.
2017ರಲ್ಲಿ ಹೊನ್ನಾವರದ ಉದಯಶರ್ಮ ಎಂಬ ಬ್ರಹ್ಮಚಾರಿಗೆ ಶ್ರೀವಿದ್ಯಾಧೀಶತೀರ್ಥರೆಂಬ ಆಶ್ರಮನಾಮದೊಂದಿಗೆ ಸಂನ್ಯಾಸದೀಕ್ಷೆ ನೀಡಿ ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿ, ಸಮಸ್ತ ಶಾಸ್ತ್ರಗಳ ಅಧ್ಯಯನವನ್ನು ಚೆನ್ನಾಗಿ ಮಾಡಿಸಿ, ಮುಂದೆ ಮಠದ ಕಾರ್ಯಕಲಾಪಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಸಿದ್ಧಗೊಳಿಸಿದ್ದಾರೆ.
ತಮ್ಮ ಕಾಲದಲ್ಲಿ ಮಹಾಸಂಸ್ಥಾನದ ಘನತೆ-ಗೌರವಗಳನ್ನು ದಿಗಂತ ಪರ್ಯಂತ ಬೆಳೆಸುತ್ತ¤, ನಿರಂತರ ಮಧ್ವ ಶಾಸ್ತ್ರದ ಪಾಠ ಪ್ರವಚನಗಳನ್ನು ನಡೆಸುತ್ತ¤, ತಪ್ತಮುದ್ರಾಧಾರಣೆಯೇ ಮೊದಲಾದ ವೈಷ್ಣವ ಸಂಸ್ಕಾರಗಳನ್ನು ಶಿಷ್ಯರಿಗೆ ಅನುಗ್ರಹಿಸುತ್ತ, ಜೀವನದ ಸಫಲತೆಗಾಗಿ ಜ್ಞಾನೋಪದೇಶ ಮಾಡುತ್ತ, ಶಿಷ್ಯಕೋಟಿಯ ಹೃದಯಾಕಾಶದಲ್ಲಿ ಧ್ರುವ ನಕ್ಷತ್ರದಂತೆ ಚಿರಸ್ಥಾಯಿಯಾಗಿ ನೆಲೆನಿಂತ ಶ್ರೀಗಳು ಆಷಾಢ ಮಾಸದ ಶುದ್ಧ ದಶಮಿಯ ದಿನ ಪರಂಧಾಮ ಪ್ರವೇಶ ಮಾಡಿದರು.
– ಮಟ್ಟಿ ಆಶುತೋಷ ಪ್ರಭು
**
ಸಮಯ ಪಾಲನೆ
ಶ್ರೀಗಳ ಸಮಯ ಪಾಲನೆ ಕುತೂಹಲಕಾರಿ ಹಾಗೂ ಮಾದರಿಯಾಗಿಯೂ ಇತ್ತು. ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಶ್ರೀಗಳ ಕಾರು ಬಂದು ನಿಂತಾಗ ಸಮಯ ನೋಡಿದರೆ ಕರಾರು ವಾಕ್ಕಾಗಿರುತ್ತಿತ್ತು. ಸ್ವಲ್ಪ ಮೊದಲೇ ಹೊರಟ್ಟಿದ್ದರೆ ಮಧ್ಯದಲ್ಲಿ ಕಾರು ನಿಲ್ಲಿಸಿ, ಒಂದಿಷ್ಟು ದೂರ ನಡೆದು ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಯಾಕೆ ಸ್ವಾಮೀಜಿ ಹೀಗೆ ಎಂದರೆ, ಯಾರ ಸಮಯವನ್ನೂ ಯಾರೂ ಹಾಳುಮಾಡಬಾರದು. ಸಾವಿರ ಜನರು ಸಭೆಗೆ ಬರುವಾಗ ಒಂದು ತಾಸು ತಡವಾಗಿ ಬಂದರೆ ಸಾವಿರ ತಾಸು ಅಮೂಲ್ಯ ಸಮಯ ಹಾಳಾಗುತ್ತದೆ. ಇನ್ನೊಬ್ಬರ ಸಮಯ ಹಾಳು ಮಾಡುವ ಅ ಧಿಕಾರ ಯಾರಿಗೂ ಇಲ್ಲ. ಬೇಗ ಬಂದರೆ ಸಂಘಟಕರಿಗೆ ಅವಸರವಾಗುತ್ತದೆ. ಆದ್ದರಿಂದ ನಾವು ಸಮಯ ಪಾಲನೆ ಮಾಡುತ್ತೇವೆ. ತಮ್ಮ ಸನ್ಯಾಸ ಜೀವನದುದ್ದಕ್ಕೂ ಈ ಸಮಯ ಪಾಲನೆ ಮಾಡಿಕೊಂಡು ಬಂದಿದ್ದರಲ್ಲದೇ ತಮ್ಮ ಆಶೀರ್ವಚನಕ್ಕೂ ಸಮಯ ಮಿತಿ ವಿ ಧಿಸಿಕೊಳ್ಳುತ್ತಿದ್ದರು.
**
ಉಡುಪಿಯೊಂದಿಗೆ ನಿಕಟ ಬಾಂಧವ್ಯ
ಸೋಮವಾರ ಹರಿಪಾದ ಸೇರಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀವಿದ್ಯಾಧಿರಾಜತೀರ್ಥ ಸ್ವಾಮೀಜಿಯವರು ಉಡುಪಿ ಮತ್ತು ಜಿಲ್ಲೆಯ ವಿವಿಧ ದೇವಸ್ಥಾನಗಳ ಜತೆ ನಿಕಟ ಸಂಬಂಧ ಹೊಂದಿದ್ದರು.
ಇತ್ತೀಚಿನ ವರ್ಷಗಳಲ್ಲಿ 1992-94ರ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ, 2004-06ರ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಮತ್ತು 2014-16ರ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರ ಪರ್ಯಾಯ ಅವಧಿಯಲ್ಲಿ ಪರ್ತಗಾಳಿ ಸ್ವಾಮೀಜಿಯವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ಆಶೀರ್ವಚನ ನೀಡಿದ್ದರು. 2000 -01ರ ಪಲಿಮಾರು ಮಠದ ಪರ್ಯಾಯದಲ್ಲಿ ನಡೆದ ಅ.ಭಾ. ಮಾಧ್ವ ಮಹಾಮಂಡಲದ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಪರ್ತಗಾಳಿ ಸ್ವಾಮೀಜಿಯವರು 1994ರಲ್ಲಿ ಪಲಿಮಾರು ಮೂಲಮಠದಲ್ಲಿ ನಡೆದ ಮುಖ್ಯಪ್ರಾಣ ದೇವರ ಕುಂಭಾಭಿಷೇಕ ಸಂದರ್ಭದಲ್ಲಿ ಆಗಮಿಸಿ ಆಶೀರ್ವಚನ ನೀಡಿದ್ದರು. ಈ ಸಂದರ್ಭ ಅವರು ತಮ್ಮ ಗುರು ಪರಂಪರೆ ಮತ್ತು ಶ್ರೀಕೃಷ್ಣಮಠ- ಅಷ್ಟಮಠಗಳ ಗುರು ಪರಂಪರೆಯ ಇತಿಹಾಸವನ್ನು ಮತ್ತು ಹಿಂದಿನ ಸಮಕಾಲೀನ ಉಭಯ ಗುರುಗಳಲ್ಲಿದ್ದ ಆತ್ಮೀಯತೆಯನ್ನು ಸ್ಮರಿಸುವುದು ಅವರ ವೈಶಿಷ್ಟéವಾಗಿತ್ತು.
ಪಲಿಮಾರು- ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವೇಶತೀರ್ಥರೊಂದಿಗೂ ನಿಕಟ ಸಂಪರ್ಕವಿದ್ದರು. ವಿವಿಧ ಮಠಾಧೀಶರನ್ನು ತಮ್ಮ ಮಠಕ್ಕೂ ಕರೆಸಿ ಆದರವನ್ನು ತೋರಿಸಿದ್ದರು. ಉಡುಪಿಯ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನವೂ ಸೇರಿದಂತೆ ಜಿಲ್ಲೆಯ ವಿವಿಧ ಜಿಎಸ್‌ಬಿ ಸಮುದಾಯದ ದೇವಸ್ಥಾನಗಳಿಗೆ ಭೇಟಿ ನೀಡಿ ಭಕ್ತರಿಗೆ ಅನುಗ್ರಹ ಮಾಡಿದ್ದರು. ಉಡುಪಿ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತವನ್ನೂ ಕೈಗೊಂಡಿದ್ದರು.
ಸಂತಾಪ: ಶ್ರೀವಿದ್ಯಾಧಿರಾಜತೀರ್ಥ ಸ್ವಾಮೀಜಿಯವರ ಅಗಲುವಿಕೆಗೆ ಅದಮಾರು, ಪಲಿಮಾರು, ಪೇಜಾವರ, ಪುತ್ತಿಗೆ, ಕಾಣಿಯೂರು ಸಹಿತ ವಿವಿಧ ಮಠಾಧೀಶರು ತಮ್ಮೊಂದಿಗಿದ್ದ ಆತ್ಮೀಯತೆಯನ್ನು ಸ್ಮರಿಸಿ ಸಂತಾಪ ಸೂಚಿಸಿದ್ದಾರೆ.
**
ತವರುಭೂಮಿ ಗಂಗೊಳ್ಳಿ
ಪರ್ತಗಾಳಿ ಗೋಕರ್ಣ ಮಠಕ್ಕೂ, ಗಂಗೊಳ್ಳಿಯ ಮಲ್ಯರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಹರಿಪಾದ ಸೇರಿದ ಶ್ರೀ ಸಂಸ್ಥಾನ ವಿದ್ಯಾಧಿರಾಜತೀರ್ಥ ವಡೇರ ಶ್ರೀಪಾದ ಸ್ವಾಮೀಜಿ ಅವರು ಜನಿಸಿದ್ದು ಪಂಚ ನದಿಗಳ (ಪಂಚಗಂಗಾವಳಿ) ಸಂಗಮ ಸ್ಥಳದ ತಟದಲ್ಲಿರುವ ಗಂಗೊಳ್ಳಿಯಲ್ಲಿ.
ಇಲ್ಲಿನ ಮಲ್ಯರಮಠ ಹಾಗೂ ಬಸ್ರೂರಿನ ಗೋಕರ್ಣ ಮಠಗಳು ಪರ್ತಗಾಳಿ ಮಠದ ಶಾಖಾ ಮಠಗಳಾಗಿವೆ.
ಗಂಗೊಳ್ಳಿಯ ಮಲ್ಯರಮಠದಲ್ಲಿ ಶ್ರೀ ಸೇನಾಪುರ ಆಚಾರ್ಯ ಮನೆತನದ ಲಕ್ಷ್ಮೀ ನಾರಾಯಣಾರ್ಯ ಹಾಗೂ ಶ್ರೀಮತಿ ಆಚಾರ್ಯ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ರಾಘವೇಂದ್ರಾಚಾರ್ಯರು. ಈ ದಂಪತಿಗೆ ಐವರು ಪುತ್ರಿಯರು ಹಾಗೂ ಮೂವರು ಪುತ್ರ ರಿದ್ದು, ಈ ಪೈಕಿ ಶ್ರೀಗಳು ನಾಲ್ಕನೆಯವರಾಗಿ 1945ರ ಆ. 3ರಂದು ಜನಿಸಿದರು. ಇವರ ತಂದೆ ಲಕ್ಷ್ಮೀನಾರಾಯಣಾಚಾರ್ಯ ಅವರು ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟ ರಮಣ ದೇವಸ್ಥಾನದ ಅರ್ಚಕರಾಗಿದ್ದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಪೂರೈಸಿ, ಪಿಯುಸಿ ಶಿಕ್ಷಣವನ್ನು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮುಗಿಸಿದರು. ಆಗ ಸೇತುವೆ ಇಲ್ಲದ ಕಾರಣ ದೋಣಿ ಮೂಲಕ ಬಂದು ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಆ ಬಳಿಕ ಶ್ರೀ ದ್ವಾರಕನಾಥ ತೀರ್ಥ ಶ್ರೀಪಾದರಿಂದ 1967ರ ಫೆ. 26ರಂದು 23ನೇ ಯತಿಯಾಗಿ ಸನ್ಯಾಸ ದೀಕ್ಷೆ ಪಡೆದರು. ಇವರ ಗುರುಗಳು ಹಾಗೂ ಪರ್ತಗಾಳಿ ಗೋಕರ್ಣ ಮಠದ 22ನೇ ಯತಿ ಶ್ರೀ ದ್ವಾರಕನಾಥತೀರ್ಥ ಶ್ರೀಪಾದರು ಜನಿಸಿದ್ದು ಗಂಗೊಳ್ಳಿಯಲ್ಲಿ ಎನ್ನುವುದು ವಿಶೇಷ.
2 ಬಾರಿ ಚಾತುರ್ಮಾಸ ವ್ರತ
ಗಂಗೊಳ್ಳಿಯ ಮಲ್ಯರಮಠದಲ್ಲಿ 1984 ಹಾಗೂ 1993ರಲ್ಲಿ 2 ಬಾರಿ ಚಾತುರ್ಮಾಸ ವ್ರತ ಕೈಗೊಂಡಿದ್ದರು. 2019ರ ಮೇನಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಚನ ನೀಡಿದ್ದರು. 2020ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಮೊಕ್ಕಾಂ ಹೂಡಿದ್ದ ಶ್ರೀಗಳು ಮಾ. 6 ರಂದು ನಾಡ ಗುಡ್ಡೆಅಂಗಡಿಯ ಶ್ರೀ ರಾಮ ಮಂದಿರದ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. 1996 ರಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಮಲ್ಯರಮಠ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ಕೈಂಕರ್ಯ ನಡೆಯಿತು.
ಪಂಚಗಂಗಾವಳಿ ಬಗ್ಗೆ ಮೆಚ್ಚುಗೆ
ಕುಂದಾಪುರ ತಾಲೂಕಿನ ವಾರಾಹಿ, ಸೌಪರ್ಣಿಕಾ, ಕುಬ್ಜಾ, ಚಕ್ರ ಹಾಗೂ ಕೇಟ ಈ ಐದು ನದಿಗಳು ಸಂಗಮಿಸುವ ಪಂಚಗಂಗಾ
ವಳಿ ಬಗ್ಗೆ ಶ್ರೀಪಾದರು ನೆಚ್ಚಿಕೊಂಡಿದ್ದು, ಇಂತಹ ಪ್ರಾಕೃತಿಕ ಸೌಂದರ್ಯ ಬೇರೆಲ್ಲಿಯೂ ಇಲ್ಲವೆಂದು ಬಣ್ಣಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.