ನಿರಂತರ ಕಲಿಕೆ :ಪರ್ಯಾಯ ಇರಲಿ
Team Udayavani, Oct 12, 2020, 4:30 AM IST
ಕೊರೊನಾ ಸಂದಿಗ್ಧತೆಯಲ್ಲಿ ಸರಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಉತ್ಕೃಷ್ಟ ಯೋಜನೆಯಾಗಿತ್ತು ಮತ್ತು ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆಯ ವರದಿಯನ್ನು ಪಡೆದು, ಪರಿಸ್ಥಿತಿಗೆ ಅನುಗುಣವಾಗಿ ಬೇರೆ ರಾಜ್ಯಗಳಲ್ಲಿ ಅನುಷ್ಠಾನದ ಬಗ್ಗೆಯೂ ಚರ್ಚೆ ನಡೆಸಿದ್ದರು. ಮಕ್ಕಳು ಇರುವಲ್ಲಿಗೆ ಶಿಕ್ಷಕರು ಭೇಟಿ ನೀಡಿ, ಕಲಿಕೆಯನ್ನು ಮುಂದುವರಿಸಲು ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತಿದ್ದ ಬಹೂಪಯೋಗಿ ಕಾರ್ಯಕ್ರಮ ಇದಾಗಿತ್ತು. ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಕೊರೊನಾ ಸೋಂಕು ತಗಲುತ್ತಿದೆ ಎಂಬ ದೂರುಗಳು ಹಾಗೂ ವಿವಿಧ ವಲಯದಿಂದ ವಿದ್ಯಾಗಮಕ್ಕೆ ವಿರೋಧ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿದ್ಯಾಗಮವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಇದು ರಾಜ್ಯದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 45 ಲಕ್ಷಕ್ಕೂ ಅಧಿಕ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿದೆ.
ಸರಕಾರಿ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಗಗನಕುಸುಮವಿದ್ದಂತೆ. ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದರೂ, ಸರಕಾರಿ ಶಾಲಾ ಮಕ್ಕಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ನೀಡಲು ಸಾಧ್ಯವಿಲ್ಲ. ಹಾಗೆಯೇ ಬಹುತೇಕ ಮಕ್ಕಳ ಪಾಲಕ, ಪೋಷಕರು ಕಲಿಕೆಗಾಗಿ ಸ್ಮಾರ್ಟ್‌ಫೋನ್ ಖರೀದಿಸಿಕೊಡುವಷ್ಟು ಶಕ್ತರೂ ಆಗಿಲ್ಲ.
ಸರಕಾರಿ ಶಾಲಾ ಮಕ್ಕಳ ಕಲಿಕೆಯ ನಿರಂತರತೆಗೆ ವಿದ್ಯಾಗಮ ಉತ್ತಮ ಪ್ರಕಲ್ಪವಾಗಿತ್ತು. ಆದರೆ, ಸರಕಾರ ಹಾಗೂ ಶಿಕ್ಷಣ ಇಲಾಖೆಯು ಸಮರ್ಪಕ ಅನುಷ್ಠಾನದಲ್ಲಿ ಸ್ವಲ್ಪ ಎಡವಿದ ಪರಿಣಾಮದಿಂದ ಇಡೀ ಕಾರ್ಯಕ್ರಮವನ್ನೇ ವಿವಿಧ ಒತ್ತಡಗಳ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ. ವಿದ್ಯಾಗಮದ ಕುರಿತು “ಉದಯವಾಣಿ’ ಸಂಗ್ರಹಿಸಿದ ಶಿಕ್ಷಕರ “ಅಭಿಮತ’ದಲ್ಲೂ ಬಹುತೇಕರು ವಿದ್ಯಾಗಮ ಬೇಕು ಮತ್ತು ಅನುಷ್ಠಾನದಲ್ಲಿನ ಲೋಪ ಸರಿಪಡಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈಗ ಸರಕಾರ ವಿದ್ಯಾಗಮ ಸ್ಥಗಿತಗೊಳಿಸಿದೆ. ರಾಜ್ಯದಲ್ಲಿ ಕೊರೊನಾ ಅಬ್ಬರವೂ ಕಡಿಮೆಯಾಗಿಲ್ಲ. ಶಾಲೆಯನ್ನು ಆರಂಭ ಮಾಡಬಹುದಾದ ವಾತಾವರಣವೂ ಸೃಷ್ಟಿಯಾಗಿಲ್ಲ. ಹೀಗಾಗಿ ಮುಂದಿನ ಕೆಲವು ತಿಂಗಳು ಅಥವಾ ಶಾಲಾರಂಭದವರೆಗೂ ಸರಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗಾಗಿ ಸರಕಾರ ಪರ್ಯಾಯ ಕಾರ್ಯಕ್ರಮ ವನ್ನು ಅದಷ್ಟು ಬೇಗ ರೂಪಿಸಿ, ಅನುಷ್ಠಾನ ಮಾಡಬೇಕು. ಇಲ್ಲವೇ ವಿದ್ಯಾಗಮದ ಅನುಷ್ಠಾನದಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ, ಅನುಷ್ಠಾನಕ್ಕೆ ತರಬೇಕು.
ವಿದ್ಯಾಗಮದ ಪಾಠ ನಡೆಯುತ್ತಿರುವ ಸ್ಥಳಗಳನ್ನು ಆಗಿಂದಾಗೇ ಸ್ಥಳೀಯಾಡಳಿತ ಅಥವಾ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸ್ವತ್ಛಗೊಳಿಸುವ ಕಾರ್ಯ ನಡೆಯುತ್ತಿರಲಿಲ್ಲ. ಶಿಕ್ಷಕರು, ಪಾಲ್ಗೊಳ್ಳುವ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಜರ್ ಸೇರಿದಂತೆ ಕನಿಷ್ಠ ಸೌಲಭ್ಯವನ್ನು ಶಿಕ್ಷಣ ಇಲಾಖೆಯಿಂದ ನೀಡಿರಲಿಲ್ಲ. ಶಾಲಾವರಣದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸುಲಭವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬಲ್ಲರು ಮತ್ತು ಶಿಕ್ಷಕರಿಗೆ ಸಂಪೂರ್ಣ ಹಿಡಿತವೂ ಇರುತ್ತದೆ. ಆದರೆ ವಿದ್ಯಾಗಮ ನಡೆಯುವ ಸ್ಥಳದಲ್ಲಿ ಸಾಮಾಜಿಕ ಅಂತರ ನಿರೀಕ್ಷೆ ಮಾಡುವುದು ಕಷ್ಟವಾಗಿತ್ತು. ಅಲ್ಲದೆ ಹೆಚ್ಚು ಮಕ್ಕಳಿದ್ದ ಕಡೆಗಳಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗಿತ್ತು. ಶಿಕ್ಷಕರ ಕೊರತೆಯೂ ಇದಕ್ಕೆ ಹೊರತಾಗಿರಲಿಲ್ಲ ಮತ್ತು ವಿದ್ಯಾಗಮದ ಅನುಷ್ಠಾನಕ್ಕಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಅನುದಾನವನ್ನು ಮೀಸಲಿಟ್ಟಿರಲಿಲ್ಲ. ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಕೊಂಡು, ಸ್ಥಳೀಯಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಮುದಾಯವನ್ನು ಇನ್ನಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ವಿದ್ಯಾಗಮವನ್ನು ಪುನರ್ ಆರಂಭಿಸಬೇಕು ಅಥವಾ ಸರಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ಅತೀ ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿ ಅನುಷ್ಠಾನ ಮಾಡಬೇಕು. ಒಂದೊಮ್ಮೆ ಶೈಕ್ಷಣಿಕ ಅಂತರ ಸೃಷ್ಟಿಯಾದರೆ, ಮುಂದೆ ತುಂಬುವುದು ಬಹಳ ಕಷ್ಟ ಮತ್ತು ಅದರ ದುಷ್ಪರಿಣಾಮವನ್ನು ಮಕ್ಕಳು ಸದಾ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಶಿಕ್ಷಣ ಇಲಾಖೆ ಶೀಘ್ರ ಕಾರ್ಯೋನ್ಮುಖವಾಗಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.