ರಾಷ್ಟ್ರಮಟ್ಟದಲ್ಲಿ ವಿದ್ಯಾಗಮ? ಮಾದರಿಯಾಗಲಿ ರಾಜ್ಯ
Team Udayavani, Sep 14, 2020, 10:41 AM IST
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ದೇಶಾದ್ಯಂತ ಬಹುತೇಕ ಕ್ಷೇತ್ರಗಳಿಗೆ ಭಾರೀ ಹಿನ್ನಡೆಯಾಗಿದ್ದು, ಶಿಕ್ಷಣ ಕ್ಷೇತ್ರಕ್ಕಂತೂ ಅತಂತ್ರ ಪರಿಸ್ಥಿತಿ ಕಾಡಲಾರಂಭಿಸಿದೆ. ದೇಶಾದ್ಯಂತ ಹಠಾತ್ತನೆ ಶಾಲಾ-ಕಾಲೇಜುಗಳು ನಿಂತಿದ್ದರಿಂದ, ಪರೀಕ್ಷೆಗಳು ಮುಂದೂಡಲ್ಪಟ್ಟ ಕಾರಣ ವಿದ್ಯಾರ್ಥಿಗಳ ಭವಿಷ್ಯ ಹೇಗೋ ಎಂಬ ಚಿಂತೆ ಪೋಷಕರಲ್ಲಿ, ಭವಿಷ್ಯದಲ್ಲಿ ಏನಾಗಲಿದೆಯೋ ಎಂಬ ಆತಂಕ ಶಿಕ್ಷಕರಲ್ಲಿ ಮೂಡಿದ್ದು ಸಹಜವೇ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂದರೆ ಆನ್‌ಲೈನ್ ಶಿಕ್ಷಣವೊಂದೇ ಪರಿಹಾರ ಎಂದೇ ವಿವಿಧ ರಾಜ್ಯಗಳು ಚರ್ಚಿಸುವ ನಡುವೆಯೇ, ಕರ್ನಾಟಕದ ಶಿಕ್ಷಣ ಇಲಾಖೆ ವಿದ್ಯಾಗಮದಂಥ ಅಭೂತಪೂರ್ವ ಶೈಕ್ಷಣಿಕ ಕಾರ್ಯಕ್ರಮವೊಂದನ್ನು ಜಾರಿಗೆ ತಂದಿತು. ಸರಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗಾಗಿ ಶಿಕ್ಷಣ ಇಲಾಖೆ ರೂಪಿಸಿರುವ ವಿದ್ಯಾಗಮ ಎಷ್ಟು ಮೆಚ್ಚುಗೆ ಗಳಿಸುತ್ತಿದೆಯೆಂದರೆ, ಈಗ ಅದಕ್ಕೆ ರಾಷ್ಟ್ರದ ಮಾನ್ಯತೆ ಸಿಗುವ ಸಾಧ್ಯತೆಯೂ ಎದುರಾಗಿದೆ. ಕೇಂದ್ರ ಶಿಕ್ಷಣ ಇಲಾಖೆ ರಾಜ್ಯದಿಂದ ಈ ಕುರಿತು ವರದಿ ಪಡೆದಿದ್ದು, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ದೇಶಾ ದ್ಯಂತ ಅನುಷ್ಠಾನ ಮಾಡ ಬಹುದಾದ ಸಾಧ್ಯತೆಯೂ ಇದೆ ಎನ್ನಲಾಗಿದೆ.
ರಾಜ್ಯದ ಮೂಲೆಮೂಲೆ ಯಲ್ಲೂ ಶಿಕ್ಷಕರು ಮಕ್ಕಳಿದ್ದಲ್ಲಿಗೇ ಹೋಗಿ ದೇಗುಲಗಳ ಆವರಣ, ಮೈದಾನಗಳು, ಮರಗಳಡಿಯಲ್ಲಿ ಪಾಠ ಮಾಡಿ, ಎಲ್ಲ ಸವಾಲುಗಳ ನಡುವೆಯೇ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಒಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಿನ ದಾರಿ ಹೇಗೋ ಎಂದು ಯೋಚಿಸುತ್ತಿದ್ದಾಗಲೇ, ಸರಕಾರಿ ಶಾಲೆಗಳು ಇಂಥ ವಿನೂತನ ದಾರಿಯನ್ನು ಹುಡುಕಿಕೊಂಡು ಸಕ್ರಿಯವಾಗಿರುವುದು. ವಿದ್ಯಾಗಮದಿಂದ ಪ್ರೇರಿತರಾಗಿ ಕೆಲವೆಡೆ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಿರುವ ಕುರಿತು ವರದಿಯಾಗುತ್ತಿವೆ.
ಇವೆಲ್ಲದರ ನಡುವೆಯೇ ಗಮನಿಸಬೇಕಾದ ಅಂಶವೆಂದರೆ, ಈಗ ರಾಜ್ಯವು ದೇಶದ ಪ್ರಮುಖ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದ್ದು, ಕೊರೊನಾದ ಆತಂಕ ಶಿಕ್ಷಕರಿಗೆ ಕಾಡುತ್ತಿದೆ. ಹೀಗಾಗಿ ಅವರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿ ಸುವುದರ ಜತೆಗೆ ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆ ಎದುರಾಗದಂತೆ ನೋಡಿಕೊಳ್ಳುವತ್ತ ಸರಕಾರ ಗಮನಹರಿಸಬೇಕು. ಜತೆಗೆ ವಿದ್ಯಾಗಮ ನಡೆಸಲು ನಗರ ಪ್ರದೇಶಗಳಲ್ಲಿ ಹಲವು ಅಡ್ಡಿಗಳು ಎದುರಾಗುತ್ತಿವೆ ಎನ್ನುವ ದೂರುಗಳೂ ಕೇಳಿಬರುತ್ತಿವೆ. ಗ್ರಾಮೀಣ ಭಾಗಗಳಲ್ಲಾದರೆ ದೇವಾಲಯದ ಆವರಣ, ಅಶ್ವತ್ಥಕಟ್ಟೆ ಮೊದಲಾದ ಸಾರ್ವಜನಿಕ ಪ್ರದೇಶಗಳಲ್ಲಿ ಸಾಕಷ್ಟು ಸ್ಥಳಾವಕಾಶವಿರುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿಯ ಸ್ಥಳಾವಕಾಶ ಕಡಿಮೆ. ಇದ್ದರೂ ವಾಹನಗಳ ಸದ್ದು ಮಕ್ಕಳಿಗೆ ಪಾಠದತ್ತ ಗಮನ ಕೇಂದ್ರೀಕರಿಸಲು ತೊಂದರೆಯುಂಟುಮಾಡುತ್ತಿದೆ. ಈ ಕಾರಣಕ್ಕಾಗಿಯೇ ವಿದ್ಯಾಗಮವನ್ನು ಶಾಲೆಗಳ ಆವರಣದಲ್ಲೇ ನಡೆಸಲು ಸರಕಾರ ಯೋಚಿಸಬೇಕು ಎನ್ನುವ ಸಲಹೆಗಳು ಶಿಕ್ಷಣ ತಜ್ಞರಿಂದ ಕೇಳಿಬರುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಂತೂ ತರಗತಿಗಳನ್ನು ಎಂದಿನಂತೆ ಆರಂಭಿಸುವ ಸಾಧ್ಯತೆ ಕಡಿಮೆಯೇ. ಸರಕಾರಿ ಶಾಲೆಗಳ ಆವರಣಗಳು ವಿಶಾಲವಾಗಿರುತ್ತಾವಾದ್ದರಿಂದ ಅಲ್ಲಿಯೇ ವಿದ್ಯಾಗಮ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಯೋಚಿಸಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.