ಸಂಪುಟ ವಿಸ್ತರಣೆ, ಪುನಾರಚನೆ ತೀರ್ಮಾನವಾಗಿಲ್ಲ
Team Udayavani, May 31, 2019, 3:10 AM IST
ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಸಮಯ ಬಂದಾಗ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಸಚಿವರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ರಾಜ್ಯದ ಮೈತ್ರಿ ಸರ್ಕಾರ ಸುಭದ್ರ ಆಡಳಿತ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ರಮೇಶ್ ಜಾರಕಿಹೊಳಿ ಸೇರಿ ಕಾಂಗ್ರೆಸ್‌ನ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ.
ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದ ರೋಷನ್ ಬೇಗ್ ಅವರಿಗೆ ಈಗಾಗಲೇ ಪಕ್ಷ ನೋಟಿಸ್ ನೀಡಿದೆ. ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ನೋಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದಾಗ ಬಹುಮತ ಸಾಬೀತು ಮಾಡಲಾಗದೇ ರಾಜೀನಾಮೆ ನೀಡಿ ದ್ದರು. ಈಗ ಸಂವಿಧಾನಬದ್ಧವಾಗಿ ರಚನೆಯಾಗಿ ರುವ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಅವರ ಪ್ರಯತ್ನ ಯಾವುದೇ ಕಾರಣಕ್ಕೂ ಫಲ ನೀಡು ವುದಿಲ್ಲ. ಜೂನ್ 1ಕ್ಕೆ ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಒಂದು ವೇಳೆ ಸರ್ಕಾರ ಪತನಗೊಳ್ಳದಿದ್ದರೆ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕು ಎಂದರು.
ಲೋಕಸಭೆ ಚುನಾವಣೆಯಲ್ಲಿ ಜನರು ಕೇಂದ್ರ ಸರ್ಕಾರಕ್ಕೆ ತೀರ್ಪು ನೀಡಿದ್ದು, ರಾಜ್ಯದ ಮೈತ್ರಿ ಸರ್ಕಾರ ಜನರ ಆಶೀರ್ವಾದದಿಂದ ನಡೆಯುತ್ತಿದೆ. ಈ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಕೇಳುವ ಹಕ್ಕು ಬಿಜೆಪಿಯವರಿಗಿಲ್ಲ.
ಯಾವುದೋ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದರೆ, ಸರ್ಕಾರ ರಾಜೀನಾಮೆ ನೀಡಬೇಕೆಂದು ಸಂವಿಧಾನದಲ್ಲಿ ಹೇಳಿಲ್ಲ. ಕಳೆದ ವರ್ಷ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಯಾಕೆ ರಾಜೀನಾಮೆ ನೀಡಿರಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
1984 ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಸೋಲು ಕಂಡಿತ್ತು. ಅವರು ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿದ್ದರು. ಆಗ ನಮ್ಮ ಸರ್ಕಾರವೇ ಸ್ಪಷ್ಟ ಬಹುಮತ ಪಡೆದಿತ್ತು. ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಬಡವರಿಗೆ ಏಳು ಕೆಜಿ ಉಚಿತ ಅಕ್ಕಿ, ಪ್ರತಿ ಲೀಟರ್ ಹಾಲಿಗೆ ಆರು ರೂಪಾಯಿ ಪ್ರೋತ್ಸಾಹಧನ, ಶಾಲಾ ಮಕ್ಕಳಿಗೆ ಉಚಿತ ಹಾಲು, ರೈತರ ಸಾಲ ಮನ್ನಾ ಮಾಡಿದ್ದೇವೆ. ಬಿಜೆಪಿಯ ಯಾವ ರಾಜ್ಯ ಸರ್ಕಾರ ಈ ರೀತಿ ಕೊಡುತ್ತಿದೆ ? ರಾಜ್ಯ ಸರ್ಕಾರ ಇನ್ನೂ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಲಿದ್ದು, ಜನರಿಗೆ ನೀಡಿದ ಭರವಸೆಗಳನ್ನು ಈಡೇರುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.