ಗಾರ್ಮೆಂಟ್ಸ್ ಕಾರ್ಮಿಕರಿಗೆ ಮತ್ತೆ ವೇತನ ನಿರಾಸೆ
Team Udayavani, Sep 16, 2019, 3:07 AM IST
ಬೆಂಗಳೂರು: ಗಾರ್ಮೆಂಟ್ಸ್ ಕಾರ್ಮಿಕರಿಗೆ ಸದಾ ಸಮಸ್ಯೆ. ತಿಂಗಳಿಗೆ ಕನಿಷ್ಠ ಸರಾಸರಿ 11 ಸಾವಿರ ರೂ. ವೇತನ ಸಿಗುವ ಆಸೆ ಇಟ್ಟುಕೊಂಡಿದ್ದ ಸುಮಾರು 10 ಲಕ್ಷ ಕಾರ್ಮಿಕರು ಇದೀಗ ಸರಾಸರಿ ಮಾಸಿಕ 8,800 ರೂ.ಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರ ವೇತನವನ್ನು ಸರಾಸರಿ 11 ಸಾವಿರ ರೂ.ಗೆ ಪರಿಷ್ಕರಣೆ ಮಾಡಿ 2017 ಮತ್ತು 2018ರ ಫೆ.22ರಂದು ಅಧಿಸೂಚನೆ ಹೊರಡಿಸಲಾಗಿತ್ತು. ವೇತನ ಹೆಚ್ಚಳದ ಖುಷಿಯಲ್ಲಿದ್ದ ಗಾರ್ಮೆಂಟ್ಸ್ ನೌಕರರಿಗೆ ಒಂದೇ ತಿಂಗಳಲ್ಲಿ ನಿರಾಶೆ ಕಾದಿತ್ತು. ಏಕೆಂದರೆ 2018ರ ಮಾ.22ರಂದು ಸರ್ಕಾರ ಅಧಿಸೂಚನೆಯನ್ನು ವಾಪಸ್ ಪಡೆದುಕೊಂಡಿತ್ತು.
ಇದೀಗ 2014ರ ವೇತನ ಪರಿಷ್ಕರಣೆಯನ್ನು ಮೂಲವಾಗಿಟ್ಟುಕೊಂಡು ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವೇತನ ಪರಿಷ್ಕರಣೆ ನಡೆದಿದ್ದು, ಈ ಸಂಬಂಧ ಇದೇ ಸೆ.5ರಂದು ನಡೆದ ವೇತನ ದರಗಳ ನಿಗದಿಯ ತ್ರಿಪಕ್ಷೀಯ ಸಮಿತಿಯ ಸಭೆಯಲ್ಲಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿದೆ. ಅದರಂತೆ, ಗಾರ್ಮೆಂಟ್ಸ್ ಕಾರ್ಮಿಕರಿಗೆ ಮಾಸಿಕ ಸರಾಸರಿ 8,800 ರೂ. ಕನಿಷ್ಠ ವೇತನ ಸಿಗಲಿದೆ.
ಆದರೆ, ಇದಕ್ಕೆ ಕಾರ್ಮಿಕ ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾರ್ಮಿಕ ಸಂಘಟನೆಗಳ ಆಕ್ಷೇಪದ ಹೊರತಾಗಿಯೂ “ಬಹುಮತದ ತೀರ್ಮಾನ’ ಎಂದು 2014ರಲ್ಲಿ 8 ಸಾವಿರ ಇದ್ದದ್ದು, ಈಗ 8,800 ರೂ. ಮಾಡಲಾಗಿದೆ. 11 ಸಾವಿರ ರೂ. ವೇತನ ಪರಿಷ್ಕರಣೆ ಮಾಡಿದ್ದ 2017 ಮತ್ತು 2018ರ ಅಧಿಸೂಚನೆ ಕಡೆಗಣಿಸಿದ್ದು, ಅದರಿಂದ ಗಾರ್ಮೆಂಟ್ಸ್ ಕಾರ್ಮಿಕರ ಕನಿಷ್ಠ ವೇತನದಲ್ಲಿ ಅನ್ಯಾಯವಾಗಿದೆ ಅನ್ನುವುದು ಕಾರ್ಮಿಕರ ವಾದವಾಗಿದೆ.
ತ್ರಿಪಕ್ಷೀಯ ಸಮಿತಿಯ ತೀರ್ಮಾನದಂತೆ ಗಾರ್ಮೆಂಟ್ಸ್ ವಲಯದ “ಸ್ಪಿನ್ನಿಂಗ್ ಮಿಲ್ಸ್’, ಬಟ್ಟೆಗಳಿಗೆ ಡೈ ಮಾಡಿ ಪ್ರಿಂಟ್ ಹಾಕುವುದು’, “ದರ್ಜಿ’, “ಟೆಕ್ಸ್‌ಟೈಲ್ಸ್ (ಸಿಲ್ಕ್) ಈ ಉದ್ದಿಮೆಗಳಲ್ಲಿ ಕೆಲಸ ಮಾಡುವ ಅತಿಕುಶಲ ಕಾರ್ಮಿಕರಿಗೆ ಮಾಸಿಕ ಶೇ.9 (798 ರೂ), ಕುಶಲ ಕಾರ್ಮಿಕರಿಗೆ ಶೇ.8 (693 ರೂ), ಅರೆ ಕುಶಲ ಕಾರ್ಮಿಕರಿಗೆ ಶೇ.7 (601 ರೂ) ಮತ್ತು ಅಕುಶಲ ಕಾರ್ಮಿಕರಿಗೆ ಶೇ. 6 (501 ರೂ) ವೇತನ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸದ್ಯ ಈ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ.
ಆದರೆ, ಈ ಶಿಫಾರಸು ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಅವರ ಪರ ಹೋರಾಟ ಮಾಡುತ್ತಿರುವ ಕಾರ್ಮಿಕ ಸಂಘಟನೆಗಳು ಒಪ್ಪುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿರುವ 75ಕ್ಕೂ ಹೆಚ್ಚು ಅಧಿಸೂಚಿತ ಉದ್ದಿಮೆಗಳ ನೌಕರರಿಗೆ ಕನಿಷ್ಠ ವೇತನ ಸರಾಸರಿ 11ಸಾವಿರ ಇದ್ದರೆ, ಗಾರ್ಮೆಂಟ್ಸ್ ಕಾರ್ಮಿಕರಿಗೆ ಮಾತ್ರ ಈ ಅನ್ಯಾಯ ಮತ್ತು ತಾರತಮ್ಯ ಯಾಕೆ? 2014ರ ವೇತನ ಪರಿಷ್ಕರಣೆ ಮೂಲವಾಗಿ ಪರಿಗಣಿಸಿ, ಈಗ ವೇತನ ಪರಿಷ್ಕರಣೆ ಮಾಡಿ, ಕನಿಷ್ಠ ವೇತನ ಹೆಚ್ಚಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಕನಿಷ್ಠ ವೇತನ ಸರಾಸರಿ 11 ಸಾವಿರ ರೂ. ನಿಗದಿಪಡಿಸಿ 2018ರ ಫೆ.22ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಒಂದೇ ತಿಂಗಳಲ್ಲಿ ಹಿಂದಕ್ಕೆ ಪಡೆದಿರುವುದು ಏತಕ್ಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಉದ್ದಿಮೆಗಳ ವಲಸೆ ಬೆದರಿಕೆ?: ಜವಳಿ ಉದ್ದಿಮೆ ಸಾಕಷ್ಟು ಆರ್ಥಿಕ ಹಿನ್ನಡೆ ಎದುರಿಸುತ್ತಿದ್ದು, ಕಾರ್ಖಾನೆಗಳು ಮುಚ್ಚಿ ಹೋಗಿ, ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಬಹುದು. ತ್ರಿಪಕ್ಷೀಯ ಸಭೆಯಲ್ಲಿ ಪ್ರಸ್ತಾಪಿಸಲಾದ ವೇತನಕ್ಕಿಂತ ಹೆಚ್ಚಿನ ವೇತನ ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಮಾಲೀಕರು ಸೆ.5ರ ಸಭೆಯಲ್ಲಿ ಹೇಳಿದ್ದಾರೆ. ಒಂದೊಮ್ಮೆ ವೇತನ ಹೆಚ್ಚಿಸಿದರೆ ಕರ್ನಾಟಕದಲ್ಲಿ ಉದ್ದಿಮೆ ನಡೆಸಲು ನಮ್ಮಿಂದ ಕಷ್ಟಸಾಧ್ಯ. ಹಾಗಾಗಿ, ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೆ “ವಲಸೆ’ ಹೋಗುವುದಾಗಿ ಕಾರ್ಖಾನೆ ಮಾಲೀಕರು ಹೆದರಿಸುತ್ತಿದ್ದಾರೆ. ಹಾಗಾಗಿ, ಗಾರ್ಮೆಂಟ್ಸ್ ನೌಕರರ ವೇತನ ಹೆಚ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.
ಕೋರ್ಟ್‌ನಲ್ಲೂ ವ್ಯಾಜ್ಯ ಇದೆ: ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆಯನ್ನು ಹಿಂದಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ವಿಚಾರಣೆ ನಡೆಸಿ “ಅಧಿಸೂಚನೆ ವಾಪಸ್ ಪಡೆಯುವ ಅಧಿಕಾರ ಸರ್ಕಾರಕ್ಕಿದೆ. ಆದರೆ, ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಗೆ ಪೂರ್ವಾನ್ವಯವಾಗುವಂತೆ ಕೋರ್ಟ್ ಆದೇಶ ಹೊರಡಿಸಿದ ದಿನದಿಂದ ಆರು ತಿಂಗಳಲ್ಲಿ ಅಂದರೆ, 2019ರ ಸೆ.29ರೊಳಗೆ ಹೊಸ ಅಧಿಸೂಚನೆ ಹೊರಡಿಸುವಂತೆ 2019ರ ಮಾ.29ರಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತೀರ್ಪು ಕೊಟ್ಟಿತ್ತು. ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಅದು ಇನ್ನೂ ವಿಚಾರಣಾ ಹಂತದಲ್ಲಿದೆ. ಅದನ್ನು ಪರಿಗಣಿಸದೆ, ಕೋರ್ಟ್ ತೀರ್ಪು ಉಲ್ಲಂಘನೆಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ಕಾರ್ಮಿಕ ಇಲಾಖೆ ಸರ್ಕಾರಕ್ಕೆ ಶಿಫಾರಸು ಕಳಿಸಿದೆ ಎಂದು ವೇತನ ದರಗಳ ಪರಿಷ್ಕರಣೆಯ ತ್ರಿಪಕ್ಷೀಯ ಸಮಿತಿಯಲ್ಲಿ ಎಐಟಿಯುಸಿ ಪ್ರತಿನಿಧಿಯಾಗಿರುವ ಸತ್ಯಾನಂದ ಹೇಳುತ್ತಾರೆ.
ಗಾರ್ಮೆಂಟ್ಸ್ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಬಗ್ಗೆ ಸದ್ಯದಲ್ಲೇ ತ್ರಿಪಕ್ಷೀಯ ಸಭೆ ಕರೆದು ಚರ್ಚಿಸಲಾಗುವುದು.
-ಕೆ.ಜಿ. ಶಾಂತರಾಮ್, ಕಾರ್ಮಿಕ ಇಲಾಖೆ ಆಯುಕ್ತ
* ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.