ಒಂದು ವರ್ಷ ಕಾದರೆ, 3 ವರ್ಷ ಮಂತ್ರಿಗಿರಿ!
Team Udayavani, Jun 11, 2019, 3:08 AM IST
ಬೆಂಗಳೂರು: ಮೈತ್ರಿ ಸರ್ಕಾರ ರಕ್ಷಣೆಗೆ ಪಕ್ಷೇತರರಿಗೆ ಮಂತ್ರಿ ಸ್ಥಾನ ಕಲ್ಪಿಸುತ್ತಿರುವುದಕ್ಕೆ ಕಾಂಗ್ರೆಸ್ ಶಾಸಕರು ಬಂಡಾಯದ ಬಾವುಟ ಹಾರಿಸಿರುವುದನ್ನು ತಡೆಯಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಚಿವಾಕಾಂಕ್ಷಿಗಳಿಗೆ ಹೊಸ ಆಫರ್ ನೀಡಿದ್ದಾರೆ. ಒಂದು ವರ್ಷ ಸುಮ್ಮನಿದ್ದರೆ, ಮುಂದಿನ ಮೂರು ವರ್ಷ ಸಚಿವ ಸ್ಥಾನ ನೀಡಲಾಗುವುದು ಎಂಬ ಸಂದೇಶ ರವಾನಿಸಿದ್ದಾರೆ.
ಆದರೆ, ನಾಯಕರ ಈ ಆಫರ್ ಹಿರಿಯ ಶಾಸಕರಿಗೆ ನಂಬಿಕೆ ಮೂಡಿಸಿಲ್ಲ. ಇದು ಕಣ್ಣೊರೆಸುವ ತಂತ್ರ ಎಂಬ ಅಸಮಾಧಾನ ಹೊರ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಸಚಿವ ಸ್ಥಾನ ವಂಚಿತರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಇಂತದ್ದೊಂದು ಆಫರ್ ನೀಡಿದ್ದರು. ಆ ನಂತರ ಬಿಜೆಪಿಯ ಆಪರೇಷನ್ ಕಮಲದ ಯತ್ನ, ಕಾಂಗ್ರೆಸ್ ಶಾಸಕರಿಂದ ನಿರಂತರ ಬಂಡಾಯ ಮುಂದುವರಿದಿದೆ.
ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೀನಾಯವಾಗಿ ಸೋತ ನಂತರ ಬಿಜೆಪಿಯವರು ರಾಜ್ಯ ಸರ್ಕಾರವನ್ನು ಪತನಗೊಳಿಸಲು ಕಸರತ್ತು ಆರಂಭಿಸುವ ಆತಂಕದ ಹಿನ್ನೆಲೆಯಲ್ಲಿ ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಂಡು ಆಪರೇಷನ್ ಕಮಲಕ್ಕೆ ತಡೆಯೊಡ್ಡಲು ಮೈತ್ರಿ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.
ರಾಜ್ಯ ನಾಯಕರ ಈ ನಿರ್ಧಾರಕ್ಕೆ ಹಿರಿಯ ಶಾಸಕರಾದ ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಬಿ.ಸಿ. ಪಾಟೀಲ್ ಸೇರಿ ಅನೇಕ ಶಾಸಕರು ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದರು. ಈ ಬಂಡಾಯ ತಾರಕಕ್ಕೇರುವ ಸಾಧ್ಯತೆಯನ್ನು ಅರಿತ ಸಿದ್ದರಾಮಯ್ಯ, ಸಚಿವಾಕಾಂಕ್ಷಿಗಳನ್ನು ಸಮಾಧಾನ ಪಡಿಸಲು 3 ವರ್ಷದ ಮಂತ್ರಿ ಸ್ಥಾನದ ಆಫರ್ ನೀಡುತ್ತಿದ್ದಾರೆಂದು ತಿಳಿದು ಬಂದಿದೆ.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪಾಲಿಗೆ ಉಪ ಮುಖ್ಯಮಂತ್ರಿ ಸೇರಿ 22 ಸಚಿವ ಸ್ಥಾನ ಲಭ್ಯವಾಗಿದೆ. ಈಗಾಗಲೇ ಸಿ.ಎಸ್.ಶಿವಳ್ಳಿ ನಿಧನದಿಂದ ಖಾಲಿಯಾಗಿರುವ ಒಂದು ಸ್ಥಾನ ಭರ್ತಿ ಮಾಡಲು ಮುಂದಾಗಿದ್ದರಿಂದ, ಹತ್ತಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳು ಸಂಪುಟ ಪುನಾರಚನೆ ಮಾಡಿ ಅಸಮರ್ಥರನ್ನು ಕೈ ಬಿಟ್ಟು, ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಡ ಹೇರಿದ್ದರು.
ಅತೃಪ್ತ ಶಾಸಕರ ಒತ್ತಡಕ್ಕೆ ಸಂಪುಟ ಪುನಾರಚನೆಗೆ ಮುಂದಾಗಿದ್ದ ರಾಜ್ಯ ನಾಯಕರ ಪ್ರಯತ್ನಕ್ಕೆ ಹಾಲಿ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಒಂದು ವರ್ಷದಲ್ಲಿ ಇಲಾಖೆಯಲ್ಲಿ ಯಾವುದೇ ಕೆಲಸ ಮಾಡಲು ಆಗಿಲ್ಲ. ಅದರಲ್ಲೂ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರ ಇಲಾಖೆಗಳಿಗೆ ಪ್ರಾತಿನಿಧ್ಯ ದೊರೆಯದೇ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ.
ಈ ಮಧ್ಯೆಲೋಕಸಭೆ ಚುನಾವಣೆ ಬಂದಿದ್ದರಿಂದ ನಮ್ಮ ಇಲಾಖೆಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುವುದರ ಜತೆಗೆ ಸಚಿವರಾಗಿ ಕಾರ್ಯ ನಿರ್ವಹಿಸಲು ಇನ್ನಷ್ಟು ಸಮಯ ನೀಡುವಂತೆ ಕೇಳಿಕೊಂಡಿದ್ದರು.
ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಸಂಪುಟ ಪುನಾರಚನೆ ಕಸರತ್ತು ಕೈ ಬಿಟ್ಟು ಪಕ್ಷೇತರರನ್ನು ಉಳಿಸಿಕೊಂಡು ಸರ್ಕಾರ ರಕ್ಷಿಸಿಕೊಳ್ಳಲು ವಿಸ್ತರಣೆ ಮೊರೆ ಹೋಗಿದ್ದಾರೆ. ರಾಜ್ಯ ನಾಯಕರ ನಿರ್ಧಾರದಿಂದ ಅಸಮಾಧಾನ, ಆಕ್ರೋಶ ಹೊರ ಹಾಕುತ್ತಿರುವ ಶಾಸಕರಿಗೆ 3 ವರ್ಷದ ಮಂತ್ರಿ ಸ್ಥಾನದ ಭರವಸೆ ನೀಡುವ ಮೂಲಕ ಸಮಾಧಾನ ಪಡಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆಕಾಂಕ್ಷಿಗಳಿಗೆ ಆತಂಕ: ಮೈತ್ರಿ ಸರ್ಕಾರ ತಂತಿಯ ಮೇಲೆ ನಡೆಯುತ್ತಿರುವುದರಿಂದ ಯಾವಾಗ ಪತನವಾಗುತ್ತದೆಯೋ ಎಂಬ ಆತಂಕದಲ್ಲಿ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಕಾತರದಿಂದ ಕಾಯುತ್ತಿದ್ದು, ರಾಜ್ಯ ನಾಯಕರ ಸಮಾಧಾನದ ಮಾತುಗಳ ಮೇಲೆ ಸಚಿವಾಕಾಂಕ್ಷಿಗಳಿಗೆ ನಂಬಿಕೆಯಿಲ್ಲ. ಒಂದು ವರ್ಷದ ನಂತರ ರಾಜ್ಯದಲ್ಲಿ ರಾಜಕೀಯ ವಾತಾವರಣ ಇದೇ ರೀತಿ ಇರುತ್ತದೆ ಎನ್ನುವ ವಿಶ್ವಾಸವಿಲ್ಲ.
ಅಲ್ಲದೇ ಪಕ್ಷದ ಕೆಲವು ಬಂಡಾಯ ಶಾಸಕರೊಂದಿಗೆ ಬಿಜೆಪಿ ನಾಯಕರು ಈಗಲೂ ಸಂಪರ್ಕ ಇಟ್ಟುಕೊಂಡಿರುವುದರಿಂದ ಆಪರೇಷನ್ ಕಮಲ ಮಾಡಿದರೆ, ಸಚಿವರಾಗುವ ಕನಸಿಗೆ ಕಲ್ಲು ಬಿದ್ದಂತಾಗುತ್ತದೆಂಬ ಆತಂಕವನ್ನೂ ಕೆಲ ಶಾಸಕರು ತಮ್ಮ ಆಪ್ತರ ಬಳಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಎಲ್ಲರಿಗೂ ಅನ್ವಯದ ಅನುಮಾನ: ಮೊದಲ ಹಂತದಲ್ಲಿ ಸಚಿವರಾಗಿರುವವರನ್ನು ಎರಡು ವರ್ಷದ ಅವಧಿ ಮುಗಿದ ತಕ್ಷಣ ಬದಲಾಯಿಸಿ ಬೇರೆಯವರಿಗೆ ಅವಕಾಶ ನೀಡುವ ನಿಯಮ ಎಲ್ಲರಿಗೂ ಅನ್ವಯ ಆಗುತ್ತದೆಯಾ ಎಂಬ ಅನುಮಾನ ಕೆಲವು ಹಿರಿಯ ಶಾಸಕರಿಗಿದೆ. ಸಂಪುಟದ ಹಿರಿಯ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಅವರನ್ನು ಎರಡು ವರ್ಷ ಅವಧಿ ಮುಗಿದ ಮೇಲೆ ಸಂಪುಟದಿಂದ ಕೈ ಬಿಡಲು ಮುಂದಾದರೆ, ಅವರು ಧಾರಾಳತನದಿಂದ ಒಪ್ಪುತ್ತಾರಾ ಎನ್ನುವ ಅನುಮಾನ ಈ ಶಾಸಕರಿಗಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
ಜ.21 ರಂದು ಬೆಳಗಾವಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.