ಅನಧಿಕೃತ ಕಸದ ರಾಶಿ; ಘಟಕವಿಲ್ಲದೆ ಸಮಸ್ಯೆ
ಹೆದ್ದಾರಿ ಬದಿಯ ತ್ಯಾಜ್ಯ ತೆರವು ಕೂಡ ಗ್ರಾ.ಪಂ. ಮುಂದಿರುವ ಸವಾಲು
Team Udayavani, Aug 21, 2021, 6:10 AM IST
ಮಂಗಳೂರು-ಬೆಂಗಳೂರು ರಾ.ಹೆದ್ದಾರಿ ಹಾದುಹೋಗಿರುವ ಫರಂಗಿಪೇಟೆಯಲ್ಲಿ ತ್ಯಾಜ್ಯ ರಾಶಿಯದ್ದೇ ಸಮಸ್ಯೆ. ಹೆದ್ದಾರಿಯಲ್ಲಿ ಸಾಗುವವರು ಕಸ ಎಸೆಯುವುದು ಸಮಸ್ಯೆ ಸೃಷ್ಟಿಸಿದರೆ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೇ ಇರುವುದು ಆ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಇಲ್ಲಿನ ಚಿತ್ರಣ ಇಂದಿನ ಒಂದು ಊರು; ಹಲವು ದೂರು ಸರಣಿಯಲ್ಲಿ.
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಫರಂಗಿಪೇಟೆ ಪ್ರದೇಶದಲ್ಲಿ ಕಸದ ರಾಶಿಗಳೆ ಅಧಿಕವಿದೆ. ಹೆದ್ದಾರಿಯಲ್ಲಿ ಸಾಗುವವರು ಕಸವನ್ನು ತಂದು ಹಾಕುವುದು ಒಂದೆಡೆಯಾದರೆ, ಇಲ್ಲಿನ ಸ್ಥಳೀಯಾಡಳಿತ ಸಂಸ್ಥೆ ಪುದು ಗ್ರಾ.ಪಂ.ನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಇರುವುದು ಕೂಡ ಕಸ ವಿಲೇವಾರಿಗೆ ಸವಾಲಾಗಿದೆ.
ಫರಂಗಿಪೇಟೆ ಪ್ರದೇಶವು ಗ್ರಾಮೀಣ ಪ್ರದೇಶವಾದರೂ, ಯಾವುದೇ ಪಟ್ಟಣಕ್ಕೂ ಕಡಿಮೆ ಇಲ್ಲದ ರೀತಿಯಲ್ಲಿ ಬೆಳೆದಿದೆ. ಹೀಗಾಗಿ ಇಲ್ಲಿ ಸಂಗ್ರಹವಾಗುವ ಕಸದ ಪ್ರಮಾಣವೂ ಹೆಚ್ಚಿದೆ. ಸ್ಥಳೀಯಾಡಳಿದ ಮೂಲಕ ಕಸ ಸಂಗ್ರಹಣೆಯ ಕಾರ್ಯ ನಡೆದರೂ, ಅದರ ವಿಲೇವಾರಿಗೆ ಸ್ಥಳವಿಲ್ಲ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಕಸ ನೀಡಲಾಗುತ್ತಿದ್ದು, ಅಲ್ಲಿ ತೊಂದರೆಯಾದಾಗ ಕಸ ವಿಲೇವಾರಿಯೇ ಸ್ಥಗಿತಗೊಳ್ಳುತ್ತದೆ.
ಸ್ಥಳೀಯಾಡಳಿತ ಸಂಸ್ಥೆ ಹೇಳುವ ಪ್ರಕಾರ, ಗ್ರಾಮದ ಒಂದು ಭಾಗವು ಸಂಪೂರ್ಣ ನೇತ್ರಾವತಿ ನದಿಯನ್ನು ಆವರಿಸಿದ್ದು, ಆ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡುವಂತಿಲ್ಲ. ಇನ್ನೊಂದು ಭಾಗದಲ್ಲಿ ರೈಲು ಹಳಿ ಹಾದು ಹೋಗಿದ್ದು, ಅಲ್ಲಿ ಖಾಲಿ ಸ್ಥಳವಿದ್ದರೂ, ರೈಲ್ವೇ ಇಲಾಖೆಯ ಅನುಮತಿ ಸಿಗುವುದಿಲ್ಲ. ಹೀಗಾಗಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಸಿಗದೆ ಘಟಕ ನಿರ್ಮಾಣ ವಿಳಂಬವಾಗಿದೆ.
ಇದನ್ನೂ ಓದಿ:ದಕ್ಷಿಣದ ಕಚೇರಿಗಳು ಬರುವವೇ ಉತ್ತರದತ್ತ? ಅಭಿವೃದ್ಧಿ ಕನಸು ನನಸು ಮಾಡುವರೇ ಸಿಎಂ ಬೊಮ್ಮಾಯಿ?
ಪ್ರಸ್ತುತ ಗ್ರಾ.ಪಂ. ವ್ಯಾಪ್ತಿಯ ಒಂದು ಭಾಗದಲ್ಲಿ ಸುಮಾರು 40 ಸೆಂಟ್ಸ್ ಜಾಗವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿರಿಸಲಾಗಿದೆ. ಆದರೆ ಅದಕ್ಕೆ ಸ್ಥಳೀಯರ ವಿರೋಧ ಇದೆ. ಹೀಗಾಗಿ ಅವರನ್ನು ಮನವೊಲಿಸುವ ದೃಷ್ಟಿಯಿಂದ ಗ್ರಾ.ಪಂ. ನಿಯೋಗವು ಇತರ ಗ್ರಾ.ಪಂ.ಗಳ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕರೆದುಕೊಂಡು ಹೋಗಿ ಅದನ್ನು ಪರಿಶೀಲಿಸುವ ಕಾರ್ಯವನ್ನೂ ಮಾಡಿದೆ.
ಹೊರಗಿನವರು ಎಸೆಯುತ್ತಿದ್ದಾರೆ
ಗ್ರಾ.ಪಂ. ವ್ಯಾಪ್ತಿಯ ಗಡಿ ಭಾಗವಾದ ಅರ್ಕುಳದಿಂದ ಮಾರಿಪಳ್ಳದವರೆಗೂ ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಫರಂಗಿಪೇಟೆಗೆ ಸಂಬಂಧಪಡದವರು, ಹೆದ್ದಾರಿಯಲ್ಲಿ ಸಾಗುವವರು ಈ ರೀತಿ ಕಸವನ್ನು ಎಸೆಯುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಹೀಗಾಗಿ ಸ್ಥಳೀಯ ಕಸ ಸಂಗ್ರಹದ ಜತೆಗೆ ಈ ರೀತಿ ಹೆದ್ದಾರಿ ಬದಿಯ ಅನಧಿಕೃತ ಕಸವನ್ನೂ ವಿಲೇವಾರಿ ಮಾಡುವ ಸವಾಲು ಗ್ರಾ.ಪಂ. ಮುಂದಿದೆ.
ಡಿವೈಡರ್ ತೆರವು ವಿಚಾರ
ಫರಂಗಿಪೇಟೆಯಲ್ಲಿ ಜಂಕ್ಷನ್‌ನ ಮಧ್ಯೆಯೇ ಹೆದ್ದಾರಿ ಹಾದುಹೋಗಿದ್ದು, ಇದು ಸಾಕಷ್ಟು ಅಪಘಾತಗಳಿಗೂ ಕಾರಣವಾಗುತ್ತಿದೆ. ಇಲ್ಲಿನ ಜಂಕ್ಷನ್‌ನಲ್ಲೇ ಡಿವೈಡರ್ ತೆರೆದಿರುವುದರಿಂದ ಎರಡೂ ಬದಿಯಲ್ಲಿ ಸಾಗುವವರು ಕೂಡ ತಮ್ಮ ಪಥ ಬದಲಿಸಲು ಇದೇ ಸ್ಥಳವನ್ನು ಬಳಸುತ್ತಿದ್ದಾರೆ. ಈ ನಡುವೆ ಹೆದ್ದಾರಿಯಲ್ಲಿ ವಾಹನಗಳು ಸಾಗುವ ಸಂದರ್ಭ ಪಥ ಬದಲಿಸಿ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಅಪಘಾತವನ್ನು ತಪ್ಪಿಸುವ ದೃಷ್ಟಿಯಿಂದ ಇಲ್ಲಿ ಅಡ್ಡಾದಿಡ್ಡಿ ಬ್ಯಾರಿಕೇಡ್‌ಗಳನ್ನೂ ಹೆದ್ದಾರಿ ಮಧ್ಯಕ್ಕೆ ಇಡಲಾಗಿದೆ. ಜಂಕ್ಷನ್‌ನಲ್ಲಿ ಇರುವ ಡಿವೈಡರ್ ತೆರವನ್ನು ಮುಚ್ಚಿ ಪೇಟೆಯ ಎರಡೂ ಬದಿಗಳಲ್ಲಿ ಡಿವೈಡರ್ ತೆರವು ಮಾಡಬೇಕು ಎಂಬ ಬೇಡಿಕೆ ಹಲವು ಸಮಯಗಳಿಂದ ಇದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಕುರಿತು ಸ್ಥಳೀಯರು ಹೆದ್ದಾರಿ ಪ್ರಾಧಿಕಾರ ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನೂ ಭೇಟಿಯಾಗಿ ಒತ್ತಾಯಿಸಿದ್ದಾರೆ.
ಇತರ ಸಮಸ್ಯೆಗಳು
– ಗ್ರಾಮೀಣ ಭಾಗದ ವಸತಿ-ನಿವೇಶನ ಸಮಸ್ಯೆ
– ಒಳರಸ್ತೆಗಳು ದುರಸ್ತಿ ಸವಾಲು
– ಫರಂಗಿಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ಬೇಡಿಕೆ
– ಹೆದ್ದಾರಿ ಇಕ್ಕೆಡೆಗಳಲ್ಲಿ ಬಸ್ ನಿಲ್ದಾಣದ ಬೇಡಿಕೆ
ಅರ್ಧಕ್ಕೆ ಬಿಟ್ಟ ಚರಂಡಿ
ಗ್ರಾಮದ ಮೂಲಕ ಹಾದುಹೋಗಿರುವ ಹೆದ್ದಾರಿಯ ಇಕ್ಕೆಡೆಗಳಲ್ಲಿ ಪ್ರಾಧಿಕಾರದ ಮೂಲಕ ಚರಂಡಿ ನಿರ್ಮಿಸಲಾಗಿದೆ. ಆದರೆ ಹಲವು ಭಾಗಗಳಲ್ಲಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟಿರುವ ಪರಿಣಾಮ ತೊಂದರೆಯಾಗುತ್ತಿದೆ. ಹಲವು ಮಂದಿ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಚರಂಡಿ ಪೂರ್ತಿಗೊಳ್ಳದೆ ಅದು ಒಂದು ಸ್ಥಳದಲ್ಲಿ ಶೇಖರಣೆಗೊಳ್ಳುತ್ತಿರುವ ಸಮಸ್ಯೆಯೂ ಇದೆ ಎಂಬ ಆರೋಪಗಳಿವೆ. ಅರ್ಧಕ್ಕೆ ಬಿಟ್ಟಿರುವ ಚರಂಡಿಗಳನ್ನು ಪೂರ್ತಿ ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ಸ್ಥಳೀಯಾಡಳಿತದ ಮೂಲಕ ಹಲವು ಬಾರಿ ಮನವಿ ಮಾಡಲಾಗಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪಗಳಿವೆ.
-ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.