Udayavani Interview: ಬಿಜೆಪಿಯೊಳಗೆ ಗೊಂದಲ?- ರಾಜ್ಯಾಧ್ಯಕ್ಷರು ಹೇಳಿದ್ದೇನು?
ಅಶೋಕ್-ವಿಜಯೇಂದ್ರ ನಡುವೆ ಏನಾಗುತ್ತಿದೆ?
Team Udayavani, Dec 13, 2023, 1:24 AM IST
ಬೆಂಗಳೂರು: “ನಮ್ಮಲ್ಲಿ ಯಾವುದೇ ಹೊಂದಾಣಿಕೆ ಕೊರತೆ ಎಂಬುದು ಇಲ್ಲ. ಸದನ ಪ್ರಾರಂಭವಾದ ದಿನದಿಂದಲೂ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹಿರಿಯ ನಾಯಕರ ಜತೆಗೆ ಚರ್ಚೆ ನಡೆಸಿಯೇ ನಾವು ಕಲಾಪದಲ್ಲಿ ಭಾಗವಹಿಸಿದ್ದೇವೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಪಕ್ಷದಲ್ಲಿ ಎರಡು ಬಣ ಸೃಷ್ಟಿಯಾಗಿದೆಯೇ ಎಂಬ ಅನುಮಾನಕ್ಕೆ ಸಂಬಂಧಿಸಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಗೊಂದಲವೂ ಇಲ್ಲ, ಬಣವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಲೋಕಸಭಾ ಚುನಾವಣೆಯಲ್ಲಿ ಹಂಡ್ರೆಡ್ ಪರ್ಸೆಂಟ್ ಸ್ಟ್ರೈಕ್ ರೇಟ್ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ…
ಜಮೀರ್ ವಿರುದ್ಧ ಹೋರಾಟ ವ್ಯರ್ಥವಾಯಿತು ಎನಿಸುತ್ತಿಲ್ಲವೇ? ನಿಯಮಾವಳಿ ವ್ಯಾಪ್ತಿಯಲ್ಲಿಯೇ ಇನ್ನೂ ಚಾಣಾಕ್ಷ ರೀತಿಯಲ್ಲಿ ಸರಕಾರವನ್ನು ಕಟ್ಟಿಹಾಕಲು ಸಾಧ್ಯವಿತ್ತಲ್ಲವೇ?
ಇಲ್ಲ. ಹೋರಾಟ ವ್ಯರ್ಥವಾಗಿಲ್ಲ. ಜಮೀರ್ ಹೇಳಿಕೆ ಅತ್ಯಂತ ಅಕ್ಷಮ್ಯ. ಬಿಜೆಪಿಯವರು ಸಲಾಂ ಹೊಡೆಯುವಂತೆ ಮಾಡಿದ್ದೇವೆ ಎಂದು ಹೇಳಿದರೆ ಏನರ್ಥ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಮಾತು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಸ್ಪೀಕರ್ ಪೀಠಕ್ಕೆ ಮಾಡಿದ ಘೋರ ಅಪಚಾರವಿದು. ಹೀಗಾಗಿ ಸೋಮ ವಾರ ಈ ಬಗ್ಗೆ ಹೋರಾಟ ನಡೆಸಬೇಕೆಂದು ಕಲಾಪ ಪ್ರಾರಂಭ ವಾಗುವುದಕ್ಕೆ ಮುನ್ನವೇ ನಮ್ಮೆಲ್ಲ ಹಿರಿಯ ಶಾಸಕರ ಜತೆಗೆ ಚರ್ಚಿಸಿ ನಿರ್ಧರಿಸಿದ್ದೆವು. ಅದರಂತೆ ನಮ್ಮ ಪ್ರತಿ ರೋಧ ವನ್ನು ಒಕ್ಕೊರಲಿನಿಂದ ದಾಖಲಿಸಿದ್ದೇವೆ. ಇದರಲ್ಲಿ ವೈಫಲ್ಯದ ಪ್ರಶ್ನೆಯೇ ಇಲ್ಲ. ಯಾವುದೇ ಹೊಂದಾಣಿಕೆಯ ಕೊರತೆಯಾಗಿಲ್ಲ.
ಒಂದು ಇಡೀ ದಿನ ಬಿಜೆಪಿ ಸದನದ ಬಾವಿಯಲ್ಲಿ ಸಮಯವನ್ನು ವ್ಯರ್ಥ ಮಾಡಿತು. ನಿಯಮಾನುಸಾರ ನೋಟಿಸ್ ನೀಡಿದ್ದರೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿತ್ತಲ್ಲವೇ?
ನಿಯಮಾನುಸಾರ ನಾವು ನೋಟಿಸ್ ನೀಡಿದ್ದರೂ ಸರಕಾರ ಜಮೀರ್ ರಕ್ಷಣೆಗೆ ಯಾವೆಲ್ಲ ತಂತ್ರಗಾರಿಕೆಗಳು ಬೇಕೋ ಅದೆಲ್ಲವನ್ನೂ ಮಾಡುತ್ತಿತ್ತು. ಎಷ್ಟೇ ತಪ್ಪು ಮಾಡಿದರೂ ಸಿದ್ದರಾಮಯ್ಯನವರು ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುತ್ತಾರೆಂದು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವೇ? ನಿಯಮ 69ರ ಅನ್ವಯ ನೋಟಿಸ್ ಕೊಟ್ಟಿದ್ದರೂ ಸ್ಪೀಕರ್ ಚರ್ಚೆಗೆ ಅವಕಾಶ ನೀಡುತ್ತಿರಲಿಲ್ಲ. ಹೀಗಾಗಿ ಜಮೀರ್ ಅವರ ಉತ್ತರವನ್ನು ಬಹಿಷ್ಕರಿಸುವ ಮೂಲಕ ನಮ್ಮ ಹೋರಾಟವನ್ನು ದಾಖಲಿಸಿದ್ದೇವೆ. ಸದನದ ಹೊರಗೂ ಈ ಹೋರಾಟ ಮುಂದುವರಿಯುತ್ತದೆ.
ಪಕ್ಷಾತೀತವಾಗಿ ಕಲಾಪದ ಗುಣಮಟ್ಟ ಕುಸಿಯುತ್ತಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಯಲ್ಲಿ ಸಂಸದೀಯ ನಡಾವಳಿ ಹಾಗೂ ಅಧ್ಯಯನದ ಕೊರತೆ ಕಾಡುತ್ತಿಲ್ಲವೇ?
ಗುಣಮಟ್ಟದ ಚರ್ಚೆ ಕುಸಿಯುತ್ತಿದೆ ಎಂದು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಆಸಕ್ತಿ ಹೊಂದಿರುವವರೆಲ್ಲರೂ ಹೇಳುತ್ತಾರೆ. ನಮ್ಮಲ್ಲಿ ಮೊದಲ ಬಾರಿಗೆ ಗೆದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಪ್ರತಿಯೊಬ್ಬರಿಗೂ ಉತ್ತಮ ಶಾಸಕನಾಗಬೇಕೆಂಬ ಹಸಿವಿದೆ. ಹೀಗಾಗಿ ಪರಿಶ್ರಮ ಪಡುತ್ತಿದ್ದಾರೆ, ಅಧ್ಯಯನ ಮಾಡುತ್ತಿದ್ದಾರೆ. ವಿಷಯ ಮಂಡನೆಯಲ್ಲಿ ಪರಿಣತಿ ಸಾಧಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿಯಾಗುತ್ತದೆ.
ಕಲಾಪ ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿ ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತದೆಯೇ?
ರೈತರಿಗೆ ಈ ಸರಕಾರ ಮಾಡುತ್ತಿರುವಷ್ಟು ಅನ್ಯಾಯ ಇತಿಹಾಸದಲ್ಲಿ ಹಿಂದೆಂದೂ ಆಗಿಲ್ಲ. ಎಲ್ಲ ಆರೋಪಗಳನ್ನು ಕೇಂದ್ರ ಸರಕಾರದ ಮೇಲೆ ತಿರುಗಿಸಿ ತಾವು ಸುರಕ್ಷಿತರಾಗಿರಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಬರ ಪರಿಹಾರಕ್ಕೆ ಸಂಪೂರ್ಣವಾಗಿ ಕೇಂದ್ರ ಸರಕಾರವನ್ನು ಆಶ್ರಯಿಸಿದ ಯಾವುದಾದರೂ ಸರಕಾರ ಇದೆಯೇ? ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ನಯಾ ಪೈಸೆ ಖರ್ಚು ಮಾಡುತ್ತಿಲ್ಲ. ಅನ್ನದಾತರು ಕಣ್ಣೀರಿನಲ್ಲಿ ಕೈ ತೊಳೆಯುವ ವ್ಯವಸ್ಥೆ ನಿರ್ಮಿಸಿದ್ದಾರೆ. ಮುಂದಾಲೋಚನೆ ಇಲ್ಲದ ಯೋಜನೆಗಳಿಗೆ ಹಣ ಸುರಿಯುತ್ತಿದ್ದಾರೆ. ಇದೆಲ್ಲವನ್ನೂ ಖಂಡಿಸಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದೇವೆ. 25ರಿಂದ 30 ಸಾವಿರ ಜನರು ಸ್ವಯಂಪ್ರೇರಣೆಯಿಂದ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತಿದೆ. ಇದೆಲ್ಲವನ್ನು ಸಹಿಸಿಕೊಂಡು ಸುಮ್ಮನೆ ಇರುವುದಕ್ಕೆ ಸಾಧ್ಯವೇ? ಹೀಗಾಗಿ ಸರಕಾರದ ವಿರುದ್ಧ ಚಾಟಿ ಬೀಸಲು ನಮಗೆ ಹೋರಾಟ ಅನಿವಾರ್ಯವಾಗಿದೆ.
ಲೋಕಸಭಾ ಚುನಾವಣೆಗೆ ಸಿದ್ಧತೆ ಹೇಗೆ ಸಾಗಿದೆ? ನಿಮ್ಮ ಗುರಿ ಏನು?
ಲೋಕಸಭಾ ಚುನಾವಣೆಗೆ ಸಿದ್ಧತೆ ಈಗಾಗಲೇ ಪ್ರಾರಂಭಿಸಿದ್ದೇವೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಎಲ್ಲವೂ ನಾವು ಅಂದುಕೊಂಡಂತೆ ನಡೆದರೆ 100 ಪರ್ಸೆಂಟ್ ಸ್ಟ್ರೈಕ್ ರೇಟ್ ಗ್ಯಾರಂಟಿ! ನಾನು 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಸುಮ್ಮನೆ ಮಾತಿಗೆ ಹೇಳಿದ್ದಲ್ಲ. ಅಧಿಕಾರಕ್ಕೆ ಬಂದ ಆರೇ ತಿಂಗಳುಗಳಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಜೆಡಿಎಸ್ ಜತೆಗಿನ ಮೈತ್ರಿಯಿಂದಲೂ ಅನುಕೂಲವಾಗಿದೆ. ಬಿಜೆಪಿ ಏಳೆಂಟು ಸೀಟು ಗೆದ್ದರೆ ಹೆಚ್ಚು ಎನ್ನುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಭಯ ಉಂಟಾಗಿದೆ.
ಮಾಹಿತಿ ವಿನಿಮಯದಲ್ಲಿ ಲೋಪ
ಜಮೀರ್ ವಿಚಾರ ಸಹಿತ ಕಲಾಪದಲ್ಲಿ ಬಿಜೆಪಿ ನಡೆಸಿದ ಹೋರಾಟದಲ್ಲಿ ಹೊಂದಾಣಿಕೆ ಕೊರತೆ ಕಂಡುಬಂದಿದೆ ಎಂದು ಚರ್ಚೆಯಾಗುತ್ತಿದೆ. ಇದರಲ್ಲಿ ಸಾಂ ಕ ವೈಫಲ್ಯವಿದೆ ಎಂಬ ಟೀಕೆ ವ್ಯಕ್ತವಾಗುತ್ತಿದೆಯಲ್ಲ?
ವೈಫಲ್ಯದ ಪ್ರಶ್ನೆಯೇ ಇಲ್ಲ. ಒಂದು ವಿಪಕ್ಷವಾಗಿ ನಾವು ನಡೆಸಬೇಕಾದ ಹೋರಾಟವನ್ನು ಅತ್ಯಂತ ಪ್ರಾಮಾಣಿಕವಾಗಿ ನಡೆಸಿದ್ದೇವೆ. ಆದರೆ ಈ ಸರಕಾರಕ್ಕೆ 135 ಸ್ಥಾನಗಳಲ್ಲಿ ಪ್ರಬಲ ಬಹುಮತದಿಂದ ಗೆದ್ದ ಅಹಮಿಕೆ ಇದೆ. ಹೀಗಾಗಿ ವಿಪಕ್ಷಗಳ ಯಾವುದೇ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸದನ ಪ್ರಾರಂಭವಾದ ದಿನದಿಂದಲೂ ವಿಪಕ್ಷ ನಾಯಕ ಅಶೋಕ್ ಹಾಗೂ ಹಿರಿಯ ನಾಯಕರ ಜತೆಗೆ ಚರ್ಚೆ ನಡೆಸಿಯೇ ನಾವು ಕಲಾಪದಲ್ಲಿ ಭಾಗವಹಿಸಿದ್ದೇವೆ. ಹೊಂದಾಣಿಕೆ ಕೊರತೆ ಎಂಬುದು ನಮ್ಮಲ್ಲಿಲ್ಲ. ಆ ಕ್ಷಣಕ್ಕೆ ಮಾಹಿತಿ ವಿನಿಮಯದಲ್ಲಿ ಲೋಪವಾದ್ದರಿಂದ ಗೊಂದಲವಾಗಿರಬಹುದೇ ವಿನಾ ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ.
ವಿಪಕ್ಷ ನಾಯಕರಾಗಿ ಅಶೋಕ್, ರಾಜ್ಯಾಧ್ಯಕ್ಷರಾಗಿ ನಿಮ್ಮೆ ಆಯ್ಕೆಯ ಬಳಿಕ ಪಕ್ಷದಲ್ಲಿ ಬಣ ಸೃಷ್ಟಿಯಾಗಿದೆ ಎಂಬ ಮಾತಿದೆಯಲ್ಲ?
ಪಕ್ಷದಲ್ಲಿ ಯಾವುದೇ ಗೊಂದಲ, ಬಣ ಇಲ್ಲ. ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ ನಮ್ಮದು. ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಅವಕಾಶವಿದೆ. ನಮ್ಮಿಬ್ಬರ ನೇಮಕವಾದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಲ್ಲಿ ಉತ್ಸಾಹ ಮೂಡಿದೆ. ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ನಾವು ಕಾಂಗ್ರೆಸ್‌ಗಿಂತ ಅತಿ ಹೆಚ್ಚು ಸೀಟು ಗೆಲ್ಲುವುದು ನಿಶ್ಚಿತ.
ರಾಘವೇಂದ್ರ ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.