ಕೋವಿಡ್-19 ವೈರಸ್‌ನಂತಹ ಜೀವಿಗಳ ಉದ್ದೇಶವೇನು?
Team Udayavani, May 10, 2020, 5:40 AM IST
ವೈರಸ್, ಬ್ಯಾಕ್ಟೀರಿಯಾ, ಸಸ್ಯ ಅಥವಾ ಪ್ರಾಣಿ -ಯಾವುದೇ ಸಜೀವಿಯಾಗಿರಲಿ ಒಂದು ಪ್ರಭೇದ (species) ಜೀವಿಯ ಮೂಲ “ಉದ್ದೇಶ’ ಸಾಧ್ಯವಾದಷ್ಟು ಹೆಚ್ಚು ಸಂತಾನೋತ್ಪತ್ತಿ ಮಾಡಿಕೊಳ್ಳುವುದು. ತನ್ನದೇ ಹೆಚ್ಚು ಹೆಚ್ಚು ಪ್ರತಿಗಳನ್ನು ಸೃಷ್ಟಿಸಿಕೊಂಡು ಭೂಮಿಯ ಮೇಲೆ ಹಬ್ಬಿದರೆ ಅಂತಹ ಜೀವಿಗಳನ್ನು ಯಶಸ್ವೀ ಪ್ರಭೇದ ಎಂದು ಪರಿಗಣಿಸಲಾಗುತ್ತದೆ.
ಈ ಹಿನ್ನೆಲೆಯನ್ನು ಇರಿಸಿಕೊಂಡು ಇದುವರೆಗೆ ಜಗತ್ತಿನಲ್ಲಿ ಹಾಹಾಕಾರ ಎಬ್ಬಿಸಿದ ಕೋವಿಡ್-19 ವೈರಸ್ ಮುಂದೇನಾಗಬಹುದು, ಅದರ ಹಾವಳಿ ಮುಂದೆಯೂ ಹೀಗೆಯೇ ಮುಂದುವರಿಯಬಹುದೇ ಎಂಬುದನ್ನು ಪರಿಶೀಲಿಸುವುದು ಈ ಹಂತದಲ್ಲಿ ಬಹಳ ಸೂಕ್ತ ಎನಿಸುತ್ತದೆ.
ಸದ್ಯ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಲಕ್ಷಣಗಳು ಮತ್ತು ಸಾವುಗಳಿಗೆ ಕಾರಣವಾಗಿರುವ ಕೋವಿಡ್-19 ವೈರಸ್ ಆ ಗುಂಪಿನ ಏಕಮಾತ್ರ ಸದಸ್ಯನಲ್ಲ. ಹಕ್ಕಿಗಳು ಮತ್ತು ಬಾವಲಿಗಳಲ್ಲಿ ಇದೇ ಗುಂಪಿನ ನೂರಾರು ವೈರಸ್‌ಗಳಿವೆ. ಆದರೆ ಇವುಗಳಲ್ಲಿ ಕೇವಲ ಆರು ಮಾತ್ರ ಮನುಷ್ಯನಲ್ಲಿ ರೋಗಲಕ್ಷಣಗಳನ್ನು ಉಂಟು ಮಾಡುವುದು ಇದುವರೆಗೆ ಗೊತ್ತಾಗಿದೆ. ನಾಲ್ಕು ಸಾಮಾನ್ಯ ಶೀತ, ಜ್ವರ ಲಕ್ಷಣಗಳನ್ನು ಉಂಟು ಮಾಡಿದರೆ ಕೆಲವು ವರ್ಷಗಳ ಹಿಂದೆ ತೀವ್ರ ತೊಂದರೆ ಉಂಟು ಮಾಡಿದ್ದ ಸಾರ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ 2002) ಮತ್ತು ಮರ್ಸ್ (ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್, 2012) ಇನ್ನುಳಿದ ಎರಡು. ಈಗ, ಬಹುಶಃ ಇದುವರೆಗೆ ಬಾವಲಿಗಳಲ್ಲಿ ಮಾತ್ರ ಇದ್ದಂತಹ ಒಂದು ಹೊಸ ಕೋವಿಡ್-19 ವೈರಸ್ ಅಕಸ್ಮಾತ್ತಾಗಿ ಮನುಷ್ಯನಿಗೆ ಅಂಟಿಕೊಂಡಿದೆ. ಇದು, ಇದುವರೆಗೆ ನಮಗೆ ತಿಳಿದಿರುವ ಹಾಗೆ ಅತ್ಯಂತ ತ್ವರಿತವಾಗಿ ಯಶಸ್ವಿಯಾಗುತ್ತಿರುವ ಸೂಕ್ಷ್ಮಾಣು. ಇದು ಈಗಾಗಲೇ ಭೂಮಿಯ ಮೇಲಿನ 210ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಲಕ್ಷಾಂತರ ಮಾನವರಿಗೆ ಹರಡಿದೆ ಮತ್ತು ಸ್ವತಃ ತನ್ನ ಅನಂತಾನಂತ ಪ್ರತಿಗಳನ್ನು ಉತ್ಪತ್ತಿ ಮಾಡಿಕೊಂಡಿದೆ. ಇಷ್ಟೆಲ್ಲವನ್ನೂ ಇದು ಕೇವಲ 4-5 ತಿಂಗಳ ಒಳಗೆ ಸಾಧಿಸಿದೆ. ಅದು ಹೇಗೆ ಇಷ್ಟು ಯಶಸ್ವಿಯಾಯಿತು? ಈ ವೈರಸನ್ನು ಮಾನವ ಸಮುದಾಯಗಳಲ್ಲಿ ಬದುಕುಳಿಯುವಂತೆ ಮಾಡಿ, ಯಶಸ್ವಿಯಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಇಡೀ ಪ್ರಪಂಚವನ್ನೇ ಆವರಿಸಲು ಸಾಧ್ಯ ಮಾಡಿಕೊಟ್ಟ ಕಾರಣಗಳೇನಿರಬಹುದು?
ಇಲ್ಲಿವೆ ಕೆಲವು ಮುಖ್ಯ ಕಾರಣಗಳು
1. ಅತೀ ಹೆಚ್ಚಿನ ಸಾಂಕ್ರಾಮಿಕತೆ – ಬಹಳ ಸುಲಭವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು.
2. ಶೇ.50ಕ್ಕಿಂತಲೂ ಹೆಚ್ಚಿನ ಜನರು ಸೋಂಕಿದ್ದರೂ ಕೂಡ ಯಾವುದೇ ರೋಗಲಕ್ಷಣರಹಿತರಾಗಿ (asymptomatic) ಕಂಡುಬರುವುದು.
3. ರೋಗಲಕ್ಷಣ ಇರುವವರಲ್ಲಿ ಕೂಡ ಸುಮಾರು ಶೇ.85ಕ್ಕೂ ಹೆಚ್ಚಿನವರಿಗೆ ಅತೀ ಸೌಮ್ಯವಾದ ಕಾಯಿಲೆಯ ಲಕ್ಷಣಗಳು.
ಮನುಷ್ಯರ ಗಂಟಲಿನಲ್ಲಿ ಮತ್ತು ಮೂಗಿನಲ್ಲಿ ಈ ವೈರಸ್ ಹೆಚ್ಚು ಕೇಂದ್ರೀಕರಣ ಆಗಿರುತ್ತದೆ. ಹೀಗಾಗಿ ಸೋಂಕು ಹೊಂದಿರುವವರು ಮಾತನಾಡಿದಾಗ, ಕೆಮ್ಮಿದಾಗ ಮತ್ತು ಸೀನಿದಾಗ ಈ ವೈರಸ್‌ಗಳು ತುಂತುರು ಹನಿಗಳ ಜತೆಗೆ ಗಾಳಿಗೆ ತೂರಿಕೊಂಡು ಸುತ್ತಲಿರುವ ವಸ್ತುಗಳ ಮೇಲ್ಮೆಯಲ್ಲಿ ಕುಳಿತು ಅದನ್ನು ಮುಟ್ಟಿದವರ ಕೈಗೆ ಅಂಟಿಕೊಳ್ಳುತ್ತವೆ. ಅನಂತರ ಅವರು ತಮ್ಮ ಬಾಯಿ, ಮೂಗು ಅಥವಾ ಕಣ್ಣನ್ನು ಮುಟ್ಟಿಕೊಂಡಾಗ ಅವರಿಗೆ ಹರಡುತ್ತದೆ. ಈ ರೀತಿಯಲ್ಲಿ ಹರಡುವ ಬೇರೆ ಹಲವಾರು ವೈರಸ್‌ಗಳಿವೆಯಾದರೂ ಈ ಹೊಸ ಕೋವಿಡ್-19 ವೈರಸ್ ಅವುಗಳಲ್ಲೆಲ್ಲ ಬಹಳ ಸಮರ್ಥವಾದಂಥದ್ದು.
ಸೋಂಕು ಹೊಂದಿರುವವರಲ್ಲಿ ಸಾಮಾನ್ಯವಾಗಿ ಕಾಣುವ ಲಕ್ಷಣಗಳೆಂದರೆ ಜ್ವರ, ಒಣ ಕೆಮ್ಮು, ಸುಸ್ತು, ನೆಗಡಿ, ಗಂಟಲು ಕೆರೆತ ಮತ್ತು ಕೆಲವರಲ್ಲಿ ಭೇದಿ. ರೋಗಲಕ್ಷಣರಹಿತರಲ್ಲಿ ಇದ್ಯಾವ ಲಕ್ಷಣಗಳೂ ಕಂಡುಬರುವುದಿಲ್ಲ. ಇಂಥವರು ತಮಗೆ ಸೋಂಕು ಇದ್ದರೂ ರೋಗ ಲಕ್ಷಣ ಇಲ್ಲದಿರುವುದರಿಂದ ತಮಗೆ ಗೊತ್ತಿಲ್ಲದೆಯೇ ಬೇರೆಯವರಿಗೂ ಈ ಸೋಂಕು ಹರಡಲು ಕಾರಣರಾಗುತ್ತಾರೆ.ತಾನು ಸೋಂಕನ್ನು ಉಂಟು ಮಾಡಿದ ಪ್ರಾಣಿ ಅಥವಾ ಮನುಷ್ಯರನ್ನು ಕೊಲ್ಲುವುದು ಈ ಕೋವಿಡ್-19 ವೈರಸ್ ಸಹಿತ ಯಾವುದೇ ಸೂಕ್ಷ್ಮಾಣು ಜೀವಿಯ ಉದ್ದೇಶವಾಗಿರದು. ಯಾಕೆಂದರೆ, ತಾನು ಆಶ್ರಯ ಪಡೆದಿರುವ ಜೀವಿ ಅಥವಾ ಮನುಷ್ಯ ಸತ್ತರೆ ಅದು ಅಕ್ಷರಶಃ ಆ ಸೂಕ್ಷ್ಮಾಣುಜೀವಿಯ ಅಂತ್ಯವೂ ಆಗಿರುತ್ತದೆ. ಏಕೆಂದರೆ, ಆಶ್ರಯದಾತ ಸತ್ತರೆ ಬಳಿಕ ಅವರಿಂದ ಇನ್ನೊಬ್ಬರಿಗೆ ವೈರಸ್ ಹರಡುವ ಸಾಧ್ಯತೆಯೇ ಇಲ್ಲವಾಗುತ್ತದೆ.
ಇಲ್ಲೊಂದು ಉದಾಹರಣೆಯಾಗಿ ರೇಬೀಸ್ ಅಥವಾ ಹುಚ್ಚುನಾಯಿ ರೋಗ ಉಂಟು ಮಾಡುವ ವೈರಸ್‌ನ್ನು ಗಮನಿಸಿ. ಹುಚ್ಚುನಾಯಿ ಕಚ್ಚಿದಾಗ ಬರಬಹುದಾದ ರೇಬೀಸ್ ವೈರಸ್ಸಿನ ಸೋಂಕು ತಗಲಿದ ಬಳಿಕ ಬದುಕಿದವರೇ ಇಲ್ಲ, ಅವರಿಂದ ಅದು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಕಡಿಮೆ. ಆದ್ದರಿಂದ ಅದು ಮನುಷ್ಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗವಲ್ಲ.
ಹೆಚ್ಚು ಜನರನ್ನು ಕೊಲ್ಲದೇ, ಅವರಿಗೆ ತೊಂದರೆಯನ್ನೂ ಕೊಡದೆ, ಅವರಿಗೆ ಅರಿವಿಲ್ಲದಂತೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ಈ ಹೊಸ ಕೋವಿಡ್-19 ವೈರಸಿನ ಯಶಸ್ಸಿನ ರಹಸ್ಯವೂ ಆಗಿದೆ.
ಆದಾಗ್ಯೂ, ಈ ವೈರಸ್ ಸೋಂಕು ತಗಲಿದ ಕೆಲವರು ಮರಣ ಹೊಂದುತ್ತಿದ್ದಾರೆ. ಅಂತಹವರ ಸಂಖ್ಯೆ ರೋಗಲಕ್ಷಣ ಹೊಂದಿರುವವರಲ್ಲಿ ಸುಮಾರು ಶೇ.5ರಷ್ಟು ಇರಬಹುದು. ರೋಗ ಲಕ್ಷಣ ಹೊಂದಿರುವವರು ಮತ್ತು ಹೊಂದಿಲ್ಲದವರು ಎಂಬ ಎರಡೂ ವರ್ಗದ ಸೋಂಕುಪೀಡಿತರನ್ನು ಪರಿಗಣಿಸಿದರೆ ಸುಮಾರು ಮರಣ ಪ್ರಮಾಣ ಶೇ.1-2ಕ್ಕಿಂತಲೂ ಕಡಿಮೆ ಇರಬಹುದು. ಸಮಯ ಕಳೆದಂತೆ, ಮುಂದಿನ ಕೆಲವು ತಿಂಗಳುಗಳು ಅಥವಾ ವರ್ಷಗಳಲ್ಲಿ ಮನುಷ್ಯರು ಕೂಡ ಈ ಸೋಂಕನ್ನು “ಸಹಿಸಿಕೊಳ್ಳುವುದನ್ನು’ ಕಲಿಯುವುದರಿಂದ, ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇನ್ನೂ ಕಡಿಮೆಯಾಗಬಹುದು. ಆಗ ಈ ಹೊಸ ಕೋವಿಡ್-19 ವೈರಸ್ ಇನ್ನೂ ಹೆಚ್ಚು ಯಶಸ್ವಿಯಾಗುವ ಸಾಧ್ಯತೆಯೇ ಹೆಚ್ಚು. ಅಂದರೆ ಭವಿಷ್ಯದಲ್ಲಿ ಈ ಹೊಸ ಕೋವಿಡ್-19 ವೈರಸ್ ಮಾನವರಿಗೆ ಹೆಚ್ಚು ಹಾನಿ ಮಾಡದೆ ಸಾಧ್ಯವಾದಷ್ಟು ತನ್ನ ಪ್ರತಿಗಳನ್ನು ಮಾಡಿಕೊಳ್ಳುತ್ತ ಸಾಗುವ ಮೂಲಕ ಯಶಸ್ವಿ ಎನಿಸಿಕೊಳ್ಳುವ ಸಂಭವವೇ ಜಾಸ್ತಿ.
ನಮ್ಮ ದೇಹಗಳಲ್ಲಿ ಕೋಟ್ಯಂತರ ಸೂಕ್ಷ್ಮಾಣುಜೀವಿಗಳು ಈಗಾಗಲೇ ಮನೆ ಮಾಡಿಕೊಂಡು ಸಹಜೀವನ ನಡೆಸುತ್ತಿವೆ. ಅವುಗಳ ಪಟ್ಟಿಗೆ ಈಗ ಈ ಹೊಸ ಕೋವಿಡ್-19 ವೈರಸ್ ಕೂಡ ಸೇರಲಿದೆ. ಇದು ಒಳ್ಳೆಯ ಸುದ್ದಿಯೋ ಅಥವಾ ಅಲ್ಲವೋ; ಯೋಚಿಸಿ ನೋಡಿ, ತೀರ್ಮಾನವನ್ನು ನಿಮಗೇ ಬಿಡುತ್ತೇನೆ.
-ಡಾ| ಶಶಿಕಿರಣ್ ಉಮಾಕಾಂತ್
ಪ್ರೊಫೆಸರ್ ಮತ್ತು ಮುಖ್ಯಸ್ಥರು, ಮೆಡಿಸಿನ್ ವಿಭಾಗ,
ಡಾ| ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.