ಕಲ್ಲು ಒಡೆಯುತ್ತಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ: ಎಚ್ಡಿಕೆ ಪ್ರಶ್ನೆ
ಎಚ್‌ಡಿಕೆಗೆ ಡಿ.ಕೆ. ಶಿವಕುಮಾರ್ ತಿರುಗೇಟು
Team Udayavani, Feb 3, 2024, 12:04 AM IST
ರಾಮನಗರ: ಇಲ್ಲಿ ಕಲ್ಲು ಒಡೆಯುತ್ತಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ನೀಡಿರುವ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂತವರನ್ನು ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದರೆ ಕಟ್ಟುತ್ತಾರೆಯೇ? ಅವರ ಸಾಮ್ರಾಜ್ಯ ಕಟ್ಟುಕೊಳ್ಳುತ್ತಾರೆ ಅಷ್ಟೆ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕುಮಾರಸ್ವಾಮಿಯವರು ಪ್ರಶ್ನಿಸಿದರು.
ಅಂದು ಜೋಡೋ, ಇಂದು ತೋಡೋ
ಭಾರತ ಒಂದಾಗಿರಬೇಕು ಎಂದು ಭಾರತ್ ಜೋಡೋ ಯಾತ್ರೆ ಮಾಡಿದವರೇ ಇವತ್ತು ಭಾರತ್ ತೋಡೋ ಎನ್ನುತ್ತಾರೆ. ದೇಶ ಇಬ್ಭಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೋ ಯಾತ್ರೆ ಮಾಡಿದರು. ಈಗ ವಿಭಜನೆಯ ಮಾತನ್ನು ಆಡುತ್ತಿದ್ದಾರೆ. ಒಂದು ವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ? ಇವರು ನ್ಯಾಯ ದೊರಕಿಸಿ ಕೊಡುತ್ತಾರೆಯೇ? ಎಂದವರು ಪ್ರಶ್ನಿಸಿದರು.
ಕಲ್ಲು ಒಡೆಯುತ್ತಿದ್ದವರ ಪಟ್ಟಿ ಕೊಡಬೇಕೇ?- ಡಿ.ಕೆ. ಶಿವಕುಮಾರ್
ಬೆಂಗಳೂರು, ಫೆ. 2: ಕುಮಾರಸ್ವಾಮಿ ಹಾಗೂ ಅವರ ಮನೆಯವರು ಕಲ್ಲು ಒಡೆಯುತ್ತಿದ್ದರ ಬಗ್ಗೆ ನಾನು ಪಟ್ಟಿ ಕೊಡಬೇಕೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಕನಕಪುರದಲ್ಲಿ ಕಲ್ಲು ಒಡೆಯುವವರನ್ನು ಶಾಸಕರು, ಸಂಸದರನ್ನಾಗಿ ಮಾಡಿದರೆ ದೇಶ ಒಡೆಯುತ್ತಾರೆ ಎಂದು ಕುಮಾರಸ್ವಾಮಿ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಅವರು, ನೀವು ಈ ಪ್ರಶ್ನೆಯನ್ನು ಕನಕಪುರದ ಜನರನ್ನು ಕೇಳಿ. ಕುಮಾರಸ್ವಾಮಿ ಹಾಗೂ ಅವರ ಮನೆಯವರು ಕಲ್ಲು ಒಡೆಯುತ್ತಿದ್ದರಲ್ಲ, ಅದರ ಪಟ್ಟಿ ನೀಡಲಾ ಎಂದು ಪ್ರಶ್ನಿಸಿದರು. ಆದರೆ ನೀವು ಯಾವ ದಾಖಲೆಯನ್ನೂ ಬಿಟ್ಟಿಲ್ಲ. ಬರೀ ದಾಖಲೆ ಬಿಡುತ್ತೇನೆ ಎಂದಷ್ಟೇ ಹೇಳುತ್ತಿದ್ದೀರಿ ಎಂದು ಸುದ್ದಿಗಾರರ ಪ್ರಶ್ನೆಗೆ, ಎಲ್ಲ ಪಟ್ಟಿ ನೀಡಲು ಕಳೆದ ಅಧಿವೇಶನದಲ್ಲಿ ಕಾದು ಕುಳಿತಿ¨ªೆ. ಆದರೆ ಕುಮಾರಸ್ವಾಮಿ ಬರಲಿಲ್ಲ ಎಂದರು.
ದೇವೇಗೌಡರ ಸ್ಥಿತಿ-ಭಯವಾಗುತ್ತದೆ
ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಳ್ಳಬಾರದಿತ್ತು. ಅವರು ಪಕ್ಷದ ಶಾಲು ಹಾಕಿಕೊಳ್ಳಬೇಕಿತ್ತು. ನಾನು ಕೇಸರಿ ಶಾಲು ಹಾಕುವುದಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಬಿಜೆಪಿ ವಕ್ತಾರರಾಗಿದ್ದಾರೆ. ದೇವೇಗೌಡರಿಗೆ ಇಷ್ಟು ನೋವು ತರುತ್ತಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ದೇವೇಗೌಡರ ಸಿದ್ಧಾಂತವನ್ನು ನಾನು ಕಂಡಿದ್ದೇನೆ. ಮಕ್ಕಳಿಗಾಗಿ ಅವರು ಏನೆಲ್ಲಾ ಮಾಡಬೇಕು. ನನಗೆ ವಯಸ್ಸಾದ ಮೇಲೆ ನಮ್ಮ ಮನೆಗಳಲ್ಲಿ ಯಾವೆಲ್ಲಾ ಸಮಸ್ಯೆಗಳು ಬರುತ್ತವೆಯೋ ಗೊತ್ತಿಲ್ಲ. ಇದನೆಲ್ಲಾ ನೋಡಿದರೆ ನನಗೂ ಭಯವಾಗುತ್ತದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.