ದೀಪಾವಳಿ ಯಾವಾಗ ಆರಂಭವಾಯ್ತು, ಐದು ದಿನಗಳ ಹಬ್ಬದ ವಿಶೇಷತೆ ಏನು?
Team Udayavani, Oct 28, 2019, 6:00 AM IST
ದೀಪಾವಳಿ ಯಾವಾಗ ಆರಂಭವಾಯ್ತು, ಐದು ದಿನಗಳ ಹಬ್ಬದ ವಿಶೇಷತೆ ಏನು?
“ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ…” “ದೀಪದಿಂದ ದೀಪವಾ ಹಚ್ಚಬೇಕು ಮಾನವಾ, ಪ್ರೀತಿಯಿಂದ ಪ್ರೀತಿ ಹಂಚುವಾ..” ಸಾಲು ಸಾಲು ಹಬ್ಬಗಳ ಆಶ್ವೀನ ಮಾಸದಲ್ಲಿ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ, ಅದರ ವಿಜೃಂಭಣೆ ಮುಗಿಯುತ್ತಿದ್ದ ಹೊಸ್ತಿಲಲ್ಲೆ ದೀಪಾವಳಿಯ ವಾತಾವರಣ ಮನೆಮಾಡಿದೆ..ಯಾವುದೋ ಮೂಲೆಯಲ್ಲಿ ಗಂಟುಸೇರಿದ್ದ ಹಣತೆಗಳು ಹೊರಬರಲಾರಂಭಿಸಿವೆ, ಮನೆಮುಂದೆ ಆಕಾಶದೀಪಗಳು ಮಿನುಗಲಾರಂಭಿಸಿವೆ..ದೇಶದಲ್ಲೆಡೆ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಬೆಳಕಿನ ಹಬ್ಬ ದೀಪಾವಳಿ ಭಾರತದ ಅತಿದೊಡ್ಡ ಹಬ್ಬವಾಗಿದ್ದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ, ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಹೆಸರೇ ಹೇಳುವಂತೆ ದೀಪಗಳ ಸಮೂಹ, ದೀಪಗಳ ಸಾಲು ಎಂಬರ್ಥವನ್ನು ನೀಡುತ್ತದೆ.
ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ…ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ.
ಒಟ್ಟಿನಲ್ಲಿ ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿತ್ತು..
ದೀಪಾವಳಿಯ ಪ್ರತಿದಿನದ ವಿಶೇಷತೆ:
ಎಣ್ಣೆ ಸ್ನಾನ :
ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.
ನರಕ ಚತುರ್ದಶಿ.. :
ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ.
ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಈ ದಿನ ಕಾಣಬಹುದಾಗಿದೆ.
ಅಮಾವಾಸ್ಯೆಯ ಲಕ್ಷ್ಮಿ ಪೂಜೆ :
ನರಕ ಚತುರ್ದಶಿಯ ಮಾರನೆಯ ದಿನ ಅಂದರೆ ದೀಪಾವಳಿಯ ಎರಡನೇ ದಿನ, ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.
ಬಲಿಪಾಡ್ಯಮಿ :
ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಆವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ.
ಗೋವರ್ಧನಗಿರಿ ಎತ್ತಿದ ದಿನ :
ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.
ಇನ್ನು ಪುರಾಣಾವಲೋಕನ..
ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷ ವನವಾಸಕ್ಕೆ ತೆರಳಿದ್ದ ಶ್ರೀರಾಮಚಂದ್ರ ವಿಜಯದಶಮಿಯಂದು ರಾವಣನನ್ನು ಕೊಂದು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಸಾಲುದೀಪಗಳನ್ನು ಹಚ್ಚಿ ಸ್ವಾಗತಿಸಿ ದೀಪಾವಳಿಯನ್ನು ಆಚರಿಸಿದರಂತೆ. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು ಎನ್ನಲಾಗುತ್ತದೆ.
ಜೈನ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದು ದೀಪಾವಳಿಯ ದಿನದಂದೇ ಎನ್ನಲಾಗುತ್ತದೆ, ಇನ್ನು. ಸಿಖ್ ಸಂಪ್ರದಾಯದಂತೆ ಗುರುಹರಗೋವಿಂದ್ ಜೀ ಮತ್ತು ಇತರ 25 ಹಿಂದೂ ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದ ದಿನ ಕೂಡ ದೀಪಾವಳಿಯಂತೆ..
ಕೊನೆಯದಾಗಿ ಒಂದು ಕೋರಿಕೆ..
ಹನಿ ಹನಿ ಸೇರಿದರೆ ಹಳ್ಳ,ತೆನೆ ತೆನೆ ಸೇರಿದರೆ ರಾಶಿ.
ಎಂಬಂತೆ ಪ್ರತಿಯೊಂದು ಮನೆಯಲ್ಲೂ ಈ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಹಚ್ಚುವ ಪ್ರಮಾಣವನ್ನು ಕಡಿಮೆಮಾಡಿ ಅಥವಾ ಪೂರ್ತಿ ಕಡಿತಗೊಳಿಸಿ ಆ ಚಿಕ್ಕ ಪರಿಮಿತಿಯ ಹಣವನ್ನು ಆಶ್ರಯವನ್ನೇ ಕಳೆದುಕೊಂಡ, ತುತ್ತು ಅನ್ನಕ್ಕೂ ಪರದಾಡುತ್ತಿರುವ ನೆರೆನಿರಾಶ್ರಿತರಿಗಾಗಿ ಸಂತ್ರಸ್ತರ ಸಹಾಯ ನಿಧಿಗೆ ನೀಡಿದರೆ ಅದು ಅವರ ಒಂದು ಹೊತ್ತಿನ ಹೊಟ್ಟೆಯನ್ನು ತುಂಬಿ,ಅವರ ಕಣ್ಣೀರೊರೆಸಿದ ಪುಣ್ಯ ನಿಮಗೆ ತಿಳಿಯದೆ ನಿಮ್ಮ ಮಡಿಲು ಸೇರಿ ಮನಸ್ಸಿನಲೊಂದು ಸಾರ್ಥಕ ಭಾವ ಮೂಡುತ್ತದೆ..ಪ್ರತಿಯೊಬ್ಬರೂ ಸಹಕರಿಸಿ..
ನವ್ಯಾ ಎಂ.ಎಸ್, ಯಲ್ಲಾಪುರ ಜೆಎಸ್ ಎಸ್ ಕಾಲೇಜ್, ಧಾರವಾಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.