ಮಾನವ ನಾಗರಿಕತೆ ಪದೇ ಪದೇ ಗಂಡಾಂತರಗಳತ್ತ ಮುಖ ಮಾಡುವುದೇಕೆ?
Team Udayavani, Jun 14, 2020, 6:10 AM IST
ಮಹಾಭಾರತದ ಯುದ್ಧ ಮತ್ತು ಯುದ್ಧೋತ್ತರದ ಕಥೆ, ಮಾನವ ನಾಗರಿಕತೆಯ ಪತನದ ಕಥಾನಕ. ಮಾನವ ವ್ಯಕ್ತಿತ್ವದ ಆಳದಲ್ಲಿ ಹುದು ಗಿರುವ ಚಿತ್ರ ವಿಚಿತ್ರ ಅಂಶಗಳು ಯಾವುದೋ ಒಂದು ಸಂದರ್ಭದಲ್ಲಿ, ಒಂದು ವಿಚಿತ್ರ ರಸಾಯನದಲ್ಲಿ ಸೇರಿಆತನ ಕೈಗಳನ್ನೇ ಮೀರಿದ ಶಕ್ತಿಗಳು ಸೃಷ್ಟಿಯಾಗುತ್ತ ಇಡೀ ನಾಗರಿಕತೆಯ ಅಧಃಪತನಕ್ಕೆ ಕಾರಣವಾಗುವುದನ್ನು ನಿರೂಪಿಸುವ ಮಹಾನ್ ಕಥೆ ಅದು.
ಗಮನಿಸಬೇಕು- ಮಹಾಭಾರತದ ದುರಂತ ಸೃಷ್ಟಿಯಾಗುವುದು ಕೇವಲ ಒಂದು ಕಾರಣಕ್ಕಾಗಿ ಅಲ್ಲ. ಹಲವು ಕಾರಣಗಳು, ಮಾನಸಿಕ ಅಂಶಗಳು, ಕೈಗಳು ಅಲ್ಲಿ ಕೂಡಿಕೊಂಡಿವೆ. ಯಾರದೋ ಅಸಹಾಯಕತೆ, ಯಾರದೋ ಛಲ, ಯಾರದೋ ಕುತಂತ್ರ ಇತ್ಯಾದಿ. ಹಲವು ವರ್ಷಗಳ ವರೆಗೆ ನಡೆದ ಘಟನೆಗಳು, ಮನಸ್ಸು ಗಳ ವರ್ತನೆಗಳು ಎಲ್ಲವೂ ಸೇರಿ ಅಲ್ಲಿ ಒಂದು ಮಹಾಯುದ್ಧವನ್ನು ಸೃಷ್ಟಿಸುತ್ತವೆ. ಬಿಡಿಬಿಡಿಯಾಗಿ ನೋಡಿದರೆ ನಮಗೆ ಅವೆಲ್ಲ ದೊಡ್ಡ ಗಂಡಾಂತರವೊಂದನ್ನು ಮುಂದೆ ಸೃಷ್ಟಿಸಿ ಬಿಡಬಹುದು ಎಂದು ಅನಿಸುವುದೇ ಇಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಅವೆಲ್ಲ ವಿಧಿಲಿಖೀತ ಘಟನಾವಳಿಗಳಂತೆಯೂ ತೋರುತ್ತವೆ. ಅದರೆ ನಿಜಕ್ಕೂ ಅವೆಲ್ಲ ಆಳದಲ್ಲಿ ಅಡಗಿರುವ ಮನುಷ್ಯ ಸ್ವಭಾವ ದಿಂದಾಗಿ ಹೊರ ಹೊಮ್ಮಿದವು. ಅವೆಲ್ಲ ಸೇರಿದಾಗ ಒಂದು ಬೃಹದಾ ಕಾರದ ಶಕ್ತಿಯನ್ನು ಸೃಷ್ಟಿಸುತ್ತವೆ. ಅದರ ಮುಂದೆ ಮಾನವ ಬುದ್ಧಿವಂತಿಕೆ, ವಿವೇಕ, ಶೌರ್ಯ, ಸಾಮರ್ಥ್ಯ ವಿದ್ವತ್ತು ಎಲ್ಲವೂ ಗೌಣವಾಗು ತ್ತವೆ. ಆ ಅಸಾಧಾರಣ ಶಕ್ತಿಗೆ ಇಡೀ ನಾಗರಿಕತೆಯನ್ನೇ ಧ್ವಂಸ ಮಾಡುವ ಸಾಮರ್ಥ್ಯವಿರುತ್ತದೆ. ಎಲ್ಲರನ್ನೂ, ಎಲ್ಲವನ್ನೂ…
ಅಂತಹ ಶಕ್ತಿಯ ಮುಂದೆ ಹನ್ನೊಂದು ಅಕ್ಷೊಹಿಣಿ ಸೈನ್ಯವೇ 18 ದಿನಗಳಲ್ಲಿ ನಾಶವಾಗಿ ಹೋಗುತ್ತದೆ. ಮಹಾನ್ ವ್ಯಕ್ತಿ ಭೀಷ್ಮ ಬಾಣಗಳ ಪೆಟ್ಟು ತಿಂದು ಶರಶಯೆ ಮೇಲೆ ಮಲಗುತ್ತಾನೆ. ದ್ರೋಣ, ಕೃಪ, ವಿರಾಟ, ಶಲ್ಯ, ಕರ್ಣ, ಅಭಿಮನ್ಯು ಇತ್ಯಾದಿ ಮಹಾಮಹಿಮರು ವಿವಿಧ ರೀತಿಗಳಲ್ಲಿ, ದಾರುಣವಾಗಿ, ಅವರಿಗೆ ಸಲ್ಲಬಾರದ ರೀತಿಯಲ್ಲಿ ಇಲ್ಲವಾಗುತ್ತಾರೆ. ಅಸಮ ಸಾಹಸಿ, ಛಲದಂಕಮಲ್ಲ, ಚಕ್ರವರ್ತಿ ದುರ್ಯೋಧನ ಸರೋವರದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ನಂತರ ತೊಡೆ ಮುರಿಸಿಕೊಂಡು ಸಾವಿಗೀಡಾ ಗುತ್ತಾನೆ. ಗೆದ್ದ ಪಾಂಡವರಲ್ಲಿಯೂ ಸಂತೋಷವೇನೂ ಉಳಿದಿರುವುದಿಲ್ಲ. ಹೀಗೆ ಶೂರರು, ವೀರರು, ಸಂತರು, ಕರುಣಾಳುಗಳು, ಜ್ಞಾನಿಗಳು ಪ್ರಚಂಡ ಪಂಡಿತರು, ಎಲ್ಲರೂ ಆ ಸಂದರ್ಭದಲ್ಲಿ ನಾಶವಾಗುತ್ತಾರೆ. ಒಂದು ನಾಗರಿಕತೆಯೇ ನಾಶವಾಗುತ್ತದೆ. ಇದು ಮಹಾಭಾರತದ ಕಥೆ.
ಅಲ್ಲಿ ಆ ಘಟನೆ ಎಲ್ಲವೂ ನಡೆದುಹೋಗುವುದು ಈಗ ಕೋವಿಡ್-19 ಸಂದರ್ಭದಲ್ಲಿನ ಜಗತ್ತಿನಲ್ಲಿ ನಡೆಯುತ್ತಿರುವ ಹಾಗೆಯೇ! ಕಲ್ಪನಾತೀತವಾಗಿ. ವಿಚಿತ್ರವಾಗಿ. ಜಗತ್ತಿನ ಎಲ್ಲ ರಾಷ್ಟ್ರಗಳೂ ಕೋವಿಡ್-19 ಯುದ್ಧದಲ್ಲಿ ಕೆಲವೇ ದಿನಗಳಲ್ಲಿ ಸೋತು ಹೋಗಿವೆ. ಜಗತ್ತಿನಲ್ಲಿ ಹತ್ತಿರ ಹತ್ತಿರ ಕೋಟಿ ಮಂದಿ ವೈರಸ್‌ನಿಂದ ಸೋಂಕಿತರಾಗುತ್ತಿದ್ದಾರೆ. ಲಕ್ಷಗಟ್ಟಲೇ ಮಂದಿ ಅಸುನೀಗಿದ್ದಾರೆ. ಆರ್ಥಿಕವಾಗಿ ದೇಶಗಳು ಹೇಳಲಾಗದಷ್ಟು ಪೆಟ್ಟು ತಿಂದು ಮಲಗಿವೆ. ಕುರುಕ್ಷೇತ್ರದಂಥ ದ್ದೇ ರೀತಿಯಲ್ಲಿ ಎಲ್ಲೆಲ್ಲೂ ಹೆಣಗಳ ರಾಶಿ. ದುರ್ಯೋಧನ ಆಯಾಸ ತಣಿಸಿಕೊಳ್ಳಲು, ವೈರಿಯಿಂದ ತಪ್ಪಿಸಿಕೊಳ್ಳಲು ಸರೋವರದಲ್ಲಿ ಮುಳುಗಿ ಕುಳಿತಂತೆ ನಾವು ಮನೆಗಳಲ್ಲಿ ಮುಸುಕು ಹಾಕಿ ಕುಳಿತಿದ್ದೇವೆ. ನಮ್ಮ ಸಾಧನೆಗ ಳೆಲ್ಲವೂ- ಅಣು ಬಾಂಬುಗಳು, ಜಲಾಂತರ್ಗಾಮಿಗಳು ಎಲ್ಲವೂ ಅರ್ಥಹೀನವಾಗುತ್ತಿವೆ. ನಮ್ಮ ವಿಜ್ಞಾನಿಗಳು, ಸಂತರು, ಶ್ರೇಷ್ಠ ವ್ಯಕ್ತಿಗಳು ಎಲ್ಲರೂ ಅಸಹಾಯಕರು. ಸಮಕಾಲೀನ ನಾಗರಿಕತೆ ಅದೇ ಸವಾಲನ್ನು ಈಗ ಮತ್ತೆ ಎದುರಿಸುತ್ತಿದೆ. ಅಲ್ಲಿನಂತ ಹುದೇ ಸವಾಲು.
ಬಹುಶಃ ಒಂದೇ ಮಾದರಿಯಲ್ಲಿರುವ ಮೇಲಿನ ಘಟನೆಗಳು ಹೇಳು ವುದೆಂದರೆ ಇಂತಹ ದುರಂತಗಳು ಮಾನವ ಇತಿಹಾಸದಲ್ಲಿ ಯಾವಾಗಲೂ ಸಂಭವನೀಯವೇ. ಏಕೆಂದರೆ ಇವೆಲ್ಲವುಗಳ ಉಗಮ ಇರುವುದು ಮಾನವ ಮನಸ್ಸಿನ ಆಳದಲ್ಲಿ. ದೀರ್ಘಕಾಲ ಒಳಗೇ ಕುದಿಯುವ ಈ ಘಟನೆಗಳು ಯಾವುದೋ ಘಳಿಗೆಯಲ್ಲಿ ಬಹಿರಂ ಗದಲ್ಲಿ ವಿಸ್ಫೋ ಟಿಸುತ್ತವೆ. ಕಾಲಾಂತರದಲ್ಲಿ ಒಂದು ಮಹಾ ಪತನವನ್ನು ಸೃಷ್ಟಿಸಿಬಿಡು ತ್ತವೆ. ಹಾಗಾಗಿ ನಿಜವಾಗಿಯೂ ಒಂದು ನಾಗರಿಕತೆಯನ್ನು ಕಟ್ಟುವುದು, ಅದರ ಸ್ವರೂಪವನ್ನು ನಿರ್ಧರಿಸುವುದು, ನಂತರ ಅದನ್ನು ನಾಶ ಮಾಡುವುದು ಎಲ್ಲವೂ ಆಳದಲ್ಲಡಗಿರುವ ಮಾನವನ ಗುಣಗಳೇ.
ಅವು ಮಾನವ ಮನಸ್ಸಿನ ಯಾವ ರೀತಿಯ ಅಂಶಗಳು ಎನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡು ಹಿಡಿದುಕೊಳ್ಳಲು ನಾವು ಮನಸ್ಸಿನ ಆಳವನ್ನು ಶೋಧಿಸಬೇಕು. ಹಲವು ಮನಃಶಾಸ್ತ್ರಜ್ಞರು, ಚಿಂತಕರು ಈ ಕುರಿತು ಬೆಳಕು ಚೆಲ್ಲಿದ್ದಾರೆ. ಮನುಕುಲವನ್ನು ಎಚ್ಚರಿಸಿದ್ದಾರೆ. ಈ ಕುರಿತು ಆಳವಾಗಿ ಅಧ್ಯಯನ ನಡೆಸಿದ ಮಹಾನ್ ಮೇಧಾವಿ, ಚಿಂತಕರಲೊಬ್ಬ ಬ್ರಿಟಿಷ್ ತತ್ವಜಾನಿ ಬಟ್ರಂಡ್ ರಸೆಲ್. ಮನುಷ್ಯನ ಆಳವಾದ ಗುಣಗಳ ಕುರಿತು ರಸೆಲ್ ತನ್ನ ನೊಬೆಲ್ ಬಹುಮಾನ ಸ್ವೀಕೃತಿ ಸಮಾರಂಭದ ಭಾಷಣದಲ್ಲಿ ವಿವರವಾಗಿ ಹೇಳುತ್ತಾನೆ. ತುಂಬಾ ಒಳನೋಟಗಳಿಂದ ಕೂಡಿರುವ ಆತನ ಮಾತುಗಳು ನಮಗೆ ಮನುಷ್ಯನನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಅವನ ವಿಚಾರಗಳನ್ನು ಅರ್ಥ ಮಾಡಿ ಕೊಂಡರೆ ಜಗತ್ತು ಪದೇ ಪದೇ ವಿನಾಶದತ್ತ ಮುಖಮಾಡಿ ನಿಲ್ಲುವುದೇಕೆಂದು ಹೊಳೆಯುತ್ತದೆ.
ರಸೆಲ್ ಹೇಳುವುದೆಂದರೆ ಮನುಷ್ಯನ ಮನಸ್ಸಿನ ಮೂಲವಿರುವುದು ಆಸೆಯಲ್ಲಿ. “ಪ್ರಾಣಿಗಳಿಗೆ ಮತ್ತು ಮನುಷ್ಯನಿಗಿರುವ ಮಹತ್ವದ, ಮೂಲಭೂತ ವ್ಯತ್ಯಾಸವೇ ಮನುಷ್ಯನಲ್ಲಿ ಅಡಗಿ ಕುಳಿತಿರುವ ಪ್ರಚಂಡ ಆಸೆ. ತಣಿಯದ, ಎಂದೆಂದೂ ಮುಗಿಯದ ಆಸೆ. ಎಂತಹ ಆಸೆಯೆಂದರೆ ಅದು ಮನುಷ್ಯನನ್ನು ಸ್ವರ್ಗದಲ್ಲಿ ಕೂಡ ಮಾನಸಿಕವಾಗಿ ಅಸ್ವಸ್ಥನನ್ನಾಗಿಯೇ ಇಡಬಲ್ಲದು. ರೆಸ್ಟ್ ಲೆಸ್ ಆಗಿಸಬಲ್ಲದು.” ರಸೆಲ್ ಹೇಳುತ್ತಾನೆ, ಹೊಟ್ಟೆ ತುಂಬಿದ ಸ್ಥಿತಿಯಲ್ಲಿ ಇರುವ ಪ್ರಾಣಿ ಬೇಟೆಯಾ ಡುವುದಿಲ್ಲ. ಅದರ ಮನಸ್ಸನ್ನು ತೃಪ್ತಿ ತುಂಬಿರುತ್ತದೆ. ಆದರೆ ಮನುಷ್ಯರು ಹೀಗೆ ಇಲ್ಲ. ಆಸೆಗಳ ತೃಪ್ತಿ ಮನುಷ್ಯನಿಗೆ ಕೇವಲ ಕನಸು ಮಾತ್ರ. ಆಸೆ ಮನುಷ್ಯ ಮನಸ್ಸಿನ ಮೂಲ ಆಧಾರಶಿಲೆ. ರಸೆಲ್ ಹೇಳುವಂತೆ ಮನುಷ್ಯನ ಮನಸ್ಸಿನೊಳಗೆ ಹುದುಗಿರುವ ಇಂತಹ ಆಸೆಗೆ ಪ್ರಮುಖ ನಾಲ್ಕು ಆಯಾಮಗಳಿವೆ. ಒಂದನೆಯದು ಕೂಡಿಡುವ ಆಸೆ. ಆತ ಹೇಳುವಂತೆ ಈ ಆಸೆ ಭಯದ ಭಾವನೆಯ ಭಾಗ. ಊಟ ಉಣಿಸಿಗೆ ಸಾಕಷ್ಟು ಹೊಂದಿದ್ದರೂ ಕೂಡ ಕಳವು ಮಾಡುತ್ತಿದ್ದ ಎಸ್ಟೋನಿಯಾದ ಕೆಲವು ಹುಡುಗಿಯರನ್ನು ಉದಾಹರಣೆಯಾಗಿ ರಸೆಲ್ ನೀಡುತ್ತಾನೆ. ರಾಕ್‌ಫೆಲರ್ ಚಿಕ್ಕವರಿರುವಾಗ ಬಡವರಾಗಿದ್ದುದೇ ಅವರ ಕೂಡಿಡುವ ಆಸೆಗೆ ಕಾರಣವಾಗಿತ್ತು ಎಂದೂ ವಾದಿಸುತ್ತಾನೆ. ಈ ಆಸೆ ಕ್ರಮೇಣ ಬೇರೆಯವರಿಗೆ ಸೇರಿದ, ಸೇರಬೇಕಾದ ವಸ್ತುಗಳನ್ನು ಕೂಡ ಪಡೆದು ಕೂಡಿಡಲು ಯೋಚಿಸುತ್ತದೆ. ಹಾಗೆಯೇ ಕೂಡಿಡುವ ಆಸೆ ಘರ್ಷಣೆ ಗಳನ್ನು ಸೃಷ್ಟಿಸುತ್ತದೆ. ಮನುಷ್ಯನ ಎರಡನೆಯ ಆಸೆ ವಿರೋಧಿಗಳನ್ನು ಬಗ್ಗು ಬಡಿಯುವುದು. ಇದೇ ಆಸೆಯೇ ವಿರೋಧಿಗಳನ್ನು ಸೃಷ್ಟಿಸುತ್ತದೆ. ಏಕೆಂದರೆ ವಿರೋಧಿಗಳು ಇಲ್ಲವಾದಾಗ ಇದ್ದವರೇ ವಿರೋಧಿಗಳಾಗು ತ್ತಾರೆ. ಅಷ್ಟೇ ಅಲ್ಲ. ಈ ಆಸೆ ವಿರೋಧಿಗಳನ್ನು ನಾಶಗೊಳಿಸುವ ಭಾಗ ವಾಗಿ ಸ್ವತಃ ತಾನೇ ನಾಶವಾಗಲೂ ಮನಸ್ಸನ್ನು ಸಿದ್ಧ ಗೊಳಿಸುತ್ತದೆ. ರಸೆಲ್ ಹೇಳುತ್ತಾನೆ-ಈ ಆಸೆ ಮನುಷ್ಯನ ಆತ್ಮರತಿಯ ಭಾಗ ಕೂಡ. ಅಂದರೆ, ತಾನೇ ಸರ್ವಶ್ರೇಷ್ಠ ಆಗಿರಬೇಕೆಂಬ ಬಯಕೆ. ಇದೇ ಭಾವನೆಯೇ ಮನುಷ್ಯರ ಮನಸ್ಸಿನಲ್ಲಿ ಸುಳ್ಳು ಗರ್ವವನ್ನು ಸೃಷ್ಟಿಸುತ್ತದೆ. ಹಾಗೆಯೇ ತನ್ನ ಹೆಸರು ಆಚಂದ್ರಾರ್ಕವಾಗಿರಬೇಕು ಎನ್ನುವ ಹುಚ್ಚನ್ನೂ ಸಹ. ಈ ಹುಚ್ಚು ಮನುಷ್ಯನನ್ನು ಚಿತ್ರ ವಿಚಿತ್ರ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ.
ಇದರ ಬೆನ್ನ ಹಿಂದೆಯೇ ಬರುವುದು ಮನುಷ್ಯನ ಅಧಿಕಾರ ದಾಹ. ಅಧಿಕಾರದ ರುಚಿ ತಿಳಿಯುತ್ತಾ ಹೋದಂತೆ ದಾಹ ಕೂಡ ಹೆಚ್ಚಾಗುತ್ತಲೇ ಹೋಗುತ್ತದೆ. ಈ ದಾಹ ಜಗತ್ತಿಗೆ ಸಂತೋಷಕ್ಕಿಂತಲೂ ಹೆಚ್ಚಾಗಿ ದುಃಖವನ್ನೇ ತಂದಿಟ್ಟಿದೆ. ರಸೆಲ್ ಅಭಿಪ್ರಾಯದಲ್ಲಿ ಮೋಜು ಮಾಡುವ ಆಸೆ ಕೂಡ ತುಂಬಾ ಮಹತ್ವದ್ದು. ಕುತೂಹಲದ ವಿಷಯವೆಂದರೆ ಮನುಷ್ಯನಿಗೆ ಬೇಸರ ಬರುತ್ತದೆ. ಮುಂದುವರಿದು ಇನ್ನೂ ಕೆಲವು ಮಾತುಗಳನ್ನು ಹೇಳುತ್ತಾನೆ-“”ಮೋಜಿನ ಅವಶ್ಯಕತೆ ಹೆಚ್ಚು ಹೆಚ್ಚಾಗಿ ಇರುವುದು ದೈಹಿಕ ಶಕ್ತಿ ಖಾಲಿಯಾಗದ ಮನುಷ್ಯನಿಗೆ. ದಿನಾಲೂ ಶಾರೀರಿಕ ಕೆಲಸ ಮಾಡಿ ದಣಿಯುವ ವ್ಯಕ್ತಿಗೆ ಬೋರ್‌ಡಮ್ ಇರುವುದಿಲ್ಲ. ಮನುಷ್ಯನಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಾ ಹೋದಂತೆ ಮೋಜಿನ ಅವಶ್ಯಕತೆ ಹೆಚ್ಚುತ್ತಾ ಹೋಗುತ್ತದೆ. ಅಂತಹ ಮನುಷ್ಯ ಮೋಜಿಗಾಗಿ ಏನು ಬೇಕಾದರೂ ಮಾಡಬಲ್ಲ. ಇದೇ ಕಾರಣದಿಂದಲೇ ಆಧುನಿಕ ವ್ಯಕ್ತಿಗೆ ಮೋಜಿನ ಅವಶ್ಯಕತೆ ಹೆಚ್ಚು ಹೆಚ್ಚಾಗಿ ಇರುವುದು. ಕ್ರೌರ್ಯ ಕೂಡ ಮೋಜಾಗಿ ಹೋಗುವುದು”.
ರಸೆಲ್‌ನ ಇತರ ಕೆಲವು ಮಾತುಗಳೂ ತುಂಬ ಮಹತ್ವದವು. ಏನೆಂದರೆ ಮನುಷ್ಯನ ಮನಸ್ಸಿನಲ್ಲಿ ಆಳವಾದ ನೈತಿಕತೆ ಅಥವಾ ಕರ್ತವ್ಯಪ್ರಜ್ಞೆ ಇತ್ಯಾದಿಗಳು ನಿಜಕ್ಕೂ ಇಲ್ಲ. ಅವೆಲ್ಲವೂ ಕಪೋಲ ಕಲ್ಪಿತ ಮಾತ್ರ. ಹಾಗಾಗಿ ಆಸೆಗಳು ಇವುಗಳಿಂದ ಮಾಡರೇಟ್ ಆಗುತ್ತವೆ ಎನ್ನುವ ಮಾತಿಗೆ ಬಲವಿಲ್ಲ.
ರಸೆಲ್‌ನ ಮಾತುಗಳು ಸಮಕಾಲೀನ ಸಂದರ್ಭದಲ್ಲಿ ಏಕೆ ಮಹತ್ವವಾದವುಗಳು ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಕೋವಿಡ್-19ಕ್ಕೆ ವ್ಯಾಕ್ಸಿನ್ ಜತೆಯೇ ನಾವು ಅರಿಯಬೇಕಾದದ್ದು ಮನುಷ್ಯನ ಮನಸ್ಸನ್ನು. ಏಕೆಂದರೆ ಅರಿವು ನಮ್ಮನ್ನು ಎಚ್ಚರಿಸುವ ಸಾಧ್ಯತೆ ಇರುತ್ತದೆ.
-ಡಾ|ಅರ್.ಜಿ.ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.