ವಿಲ್ ಪವರ್
ಭವಿಷ್ಯದ ಬುನಾದಿಗೆ ಉಯಿಲು
Team Udayavani, Jun 29, 2020, 5:35 AM IST
ಭವಿಷ್ಯದ ಕುರಿತಾಗಿ ಪ್ಲ್ಯಾನಿಂಗ್ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವ ಈ ದಿನಗಳಲ್ಲಿ, ವಿಲ್/ ಉಯಿಲಿನ ಕುರಿತು ಗಮನ ಹರಿಸಬೇಕಾದ ಜರೂರತ್ತೂ ಒದಗಿಬಂದಿದೆ.
ವಿಲ್/ ಉಯಿಲು ಎಂದರ ಅದಕ್ಕೆ ವಿಶೇಷವಾದ ಮೌಲ್ಯವಿದೆ. ತನ್ನ ಮರಣಾನಂತರ, ತನ್ನ ಸಂಪತ್ತು ಮತ್ತಿತರ ವಸ್ತುಗಳ ಮಾಲಿಕತ್ವ ಯಾರಿಗೆ ಸೇರಬೇಕು ಎಂಬುದನ್ನು, ಬದುಕಿದ್ದಾಗಲೇ ಬರೆಸುವ ಪ್ರಕ್ರಿಯೆ ಇದು. ಅತ್ಯಂತ ಎಚ್ಚರಿಕೆಯಿಂದ ಮಾಡ ಬೇಕಾದ ಈ ಕೆಲಸಕ್ಕೆ ವಿಶೇಷ ಸಿದ್ಧತೆ ಬೇಕಾಗುತ್ತದೆ. ಅದರಲ್ಲೂ ಕೋವಿಡ್ 19 ಸಮಯದಲ್ಲಿ ವಿಲ್ ಬರೆಸುವ ಪ್ರಕ್ರಿಯೆಗೆ ವಿಶೇಷ ಪ್ರಾಮುಖ್ಯತೆ ಲಭಿಸಿದೆ. ಮುಂದೆ ಯಾವತ್ತಾದರೂ ಬರೆಸಿದರೆ ಆಯಿತು ಎಂದು ಮುಂದೂಡಿದ್ದವರೆಲ್ಲರೂ ಈ ಸಮಯದಲ್ಲಿ ಎಚ್ಚೆತ್ತು ಕೊಳ್ಳುತ್ತಿ ದ್ದಾರೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಈ ಸಮಯದಲ್ಲಿ, ಭವಿಷ್ಯದ ಪ್ಲ್ಯಾನಿಂಗ್ ಮಾಡ ಬೇಕಾದ ಜರೂರತ್ತು ಬಂದೊದಗಿದೆ. ಆ ವಿಭಾಗಕ್ಕೆ ಉಯಿಲು ಕೂಡಾ ಸೇರಿಕೊಳ್ಳುತ್ತದೆ.
ವಿಲ್ ಏಕೆ ಮುಖ್ಯ?: ಉಯಿಲು ಇಲ್ಲದೇ ಇದ್ದ ಸಂದರ್ಭದಲ್ಲಿ ಕುಟುಂಬಸ್ಥರ ಮಧ್ಯೆ ಗೊಂದಲ ಮೂಡುತ್ತದೆ. ವಿಲ್ ಬರೆಯದೇ ಹೋದರೆ, ಕಾನೂನಿನ ನಿಯಮಾವಳಿಗಳ ಪ್ರಕಾರ ಆಸ್ತಿ ಹಂಚಿಕೆ ಮಾಡಬೇಕಾಗುತ್ತದೆ. ಇದು ಹಲವರ ನಡುವೆ ಮನಸ್ತಾಪಕ್ಕೂ ಕಾರಣ ಆಗ ಬಹುದು. ಮುಂದೆ ದೀರ್ಘಕಾಲ ಕಾನೂನು ಹೋರಾ ಟಕ್ಕೂ ದಾರಿ ಮಾಡಿಕೊಡಬಹುದು. ಇವೆಲ್ಲವಕ್ಕೂ ವಿಲ್ ಮಾಡಿಸುವುದೇ ರಾಮಬಾಣ. ಉಯಿಲು ಮಾಡಿಸಲು ವಯಸ್ಸಿನ ಮಿತಿ ಇರುವುದಿಲ್ಲ. ಮಕ್ಕಳ ಹೆಸರಿನಲ್ಲಿಯೂ ವಿಲ್ ಬರೆಸಬಹುದಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಅವರ ಆಸ್ತಿ ಅಥವಾ ಮತ್ಯಾವುದೇ ವಸ್ತುಗಳು ಬೇರೆ ವ್ಯಕ್ತಿಗಳಿಂದ ನೀಡಲ್ಪಟ್ಟಿದ್ದರೆ, ಆ ಸಂದರ್ಭದಲ್ಲಿ ಮಕ್ಕಳಿಗೂ ವಿಲ್ ಬರೆಸಬಹುದಾಗಿದೆ.
ಕೈಬರಹ ವರ್ಸಸ್ ಟೈಪ್: ಇವೆರಡರಲ್ಲಿ ಯಾವುದು ಒಳ್ಳೆಯದು ಎಂದು ನಿರ್ದಿಷ್ಟವಾಗಿ ಕಾನೂನಿನಲ್ಲಿ ಹೇಳಲಾಗಿಲ್ಲ. ಹೀಗಾಗಿ ಕೈಬರಹ ಮತ್ತು ಟೈಪ್ ಇವೆರಡೂ ಮಾದರಿ ಗಳೂ ಸ್ವೀಕೃತವಾಗುತ್ತವೆ. ಉಯಿಲು ಬರೆಸಲು ವಕೀಲರ ಅಗತ್ಯ ಇಲ್ಲ. ಆದರೆ, ಅವರ ಸಹಕಾರ ತೆಗೆದುಕೊಳ್ಳು ವುದರಲ್ಲಿ ತಪ್ಪಿಲ್ಲ. ಇದರಿಂದ ಮುಂದೆ ಎದುರಾಗುವ ಕಾನೂನು ಸವಾಲುಗಳನ್ನು ಪರಿಹರಿಸಿಕೊಳ್ಳಲು ಅನುಕೂಲ ಆಗುತ್ತದೆ.
ನೋಂದಣಿ ಮಾಡಿಸಬೇಕಾ?: ಉಯಿಲನ್ನು ನೋಂದಾಯಿಸುವುದರಿಂದ ಅದಕ್ಕೆ ಅಧಿಕೃತತೆ ದೊರೆಯುತ್ತದೆ. ಆದರೆ ನೋಂದಣಿ ಕಡ್ಡಾಯವೇನಿಲ್ಲ. ನೋಂದಣಿ ಮಾಡಿಸುವುದರಿಂದ ತಿದ್ದುವಿಕೆ ಮತ್ತಿತರೆ ವಂಚನೆಗಳಿಂದ ರಕ್ಷಣೆ ಸಿಗುತ್ತದೆ. ಹೀಗಾಗಿ, ನೋಂದಣಿ ಮಾಡಿಸುವುದು ಒಳಿತು. ರಿಜಿಸ್ಟ್ರಾರ್ ಅಥವಾ ಸಬ್ ರಿಜಿಸ್ಟ್ರಾರ್ ಬಳಿ ನಿಗದಿತ ಶುಲ್ಕ ತೆತ್ತು, ನೋಂದಣಿ ಮಾಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಜೊತೆಯಲ್ಲಿ ಇಬ್ಬರು ಸಾಕ್ಷಿಗಳೂ ಹಾಜರಿರಬೇಕಾಗುತ್ತದೆ. ನೆನಪಿಡಬೇಕಾದ ಸಂಗತಿ ಯೆಂದರೆ, ಆ ಇಬ್ಬರು ಸಾಕ್ಷಿಗಳು ಉಯಿಲಿನ ಫಲಾನುಭವಿಗಳಾಗಿರಬಾರದು.
ಮರೆವು ಒಳ್ಳೆಯದಲ್ಲ: ಉಯಿಲು ಬರೆಸುವಾಗ ಹಣಕಾಸು ವಿಚಾರವಾಗಿ ಪ್ರಮುಖ ಮಾಹಿತಿಗಳ ಕುರಿತು ವಿಶೇಷ ಗಮನ ಹರಿಸ ಬೇಕಾಗುತ್ತದೆ. ಉಯಿಲಿನ ವಿಚಾರ ದಲ್ಲಿ ಮರೆವು ಒಳ್ಳೆಯದಲ್ಲ. ಸ್ಥಿರಾಸ್ತಿ, ಚರಾಸ್ತಿ, ಹೂಡಿಕೆಯನ್ನೆಲ್ಲಾ ವಿಲ್‌ನಲ್ಲಿ ನಮೂ ದಿಸಬೇಕಾಗುತ್ತದೆ. ವಿಲ್ ಬರೆಸುವ ವ್ಯಕ್ತಿ ತಾನು ಜೀವ ಮಾನದಲ್ಲಿ ಗಳಿಸಿದ ಸಂಪತ್ತೆ ಲ್ಲವನ್ನೂ ಉಯಿಲಿನಲ್ಲಿ ನಮೂದಿಸಬೇಕಾ ಗುತ್ತದೆ. ಪ್ರಾಪರ್ಟಿ, ಕಾರು, ಭೂಮಿ, ಆಭರಣ, ಹಣ ಸೇರಿದಂತೆ ಎಲ್ಲದರ ಮಾಹಿ ತಿ ಅದರಲ್ಲಿ ಸೇರಿರಬೇಕು. ಇದು ತುಂಬಾ ಜಾಗ್ರತೆಯಿಂದ ಮಾಡ ಬೇಕಾದ ಕೆಲಸ. ಯಾವ ವಸ್ತುವೂ ಈ ಪಟ್ಟಿ ಯಿಂದ ಕೈ ಬಿಟ್ಟು ಹೋಗಬಾರದು. ಏಕೆಂ ದರೆ, ಚಿಕ್ಕ ವಸ್ತುವಿನ ಹೆಸರು ಬಿಟ್ಟುಹೋದರೂ ಮುಂದೆ ಅದು ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ.
ತಿದ್ದಿ ತೀಡು: ಉಯಿಲಿನ ಒಂದು ಪ್ರಯೋಜನವೆಂದರೆ, ಅದನ್ನು ಬರೆಸಿದ ವ್ಯಕ್ತಿ ಅದನ್ನು ಎಷ್ಟು ಬಾರಿ ಬೇಕಾ ದರೂ ತಿದ್ದಬಹುದು. ತನಗೆ ಸಮಾಧಾನ ಆಗುವ ತನಕ ತಿದ್ದಬಹುದು. ಅಲ್ಲದೆ ಆಸ್ತಿಗೆ ಹಕ್ಕು ದಾರರನ್ನಾಗಿ, ತನಗೆ ಬೇಕೆನಿಸಿದ ವ್ಯಕ್ತಿಗಳ ಹೆಸರು ಗಳನ್ನು ಸೇರಿಸ ಬಹುದು. ಅಂತೆಯೇ, ಬೇಡವೆನಿಸಿದ ವ್ಯಕ್ತಿಗಳ ಹೆಸರು ಗಳನ್ನು ತೆಗೆಯಲೂಬಹುದು. ಚಿಕ್ಕಪುಟ್ಟ ತಿದ್ದುವಿಕೆ ಯಾದರೆ ನೋಂದಾಯಿಸಲ್ಪಟ್ಟ ಉಯಿಲಿನಲ್ಲೇ ಹೇಳಿಕೆಯ ಜೊತೆಗೆ ಮಾಡಬಹುದು.
ದೊಡ್ಡ ಬದಲಾವಣೆ ಮಾಡಬೇಕೆಂದರೆ, ಹೊಸ ಉಯಿಲನ್ನು ಬರೆಸಬೇಕಾಗುತ್ತದೆ. ನೋಂದಾಯಿ ಸಲ್ಪಟ್ಟ ವಿಲ್‌ನಲ್ಲಿ ಮಾಡಲಿಕ್ಕಾಗುವುದಿಲ್ಲ. ಈ ರೀತಿಯಾಗಿ ಹೊಸ ವಿಲ್ ಅನ್ನು ಬರೆಸಿದಾಗ ಹಳೆಯ ವಿಲ್‌ನ ಮಾನ್ಯತೆ ರದ್ದಾಗುತ್ತದೆ. ಹೀಗಾಗಿ, ವಿಲ್‌ನಲ್ಲಿ ಬರೆಯಲ್ಪಡುವ ದಿನಾಂಕ ಪ್ರಮುಖ ಪಾತ್ರ ವಹಿಸುತ್ತದೆ. ವಿಲ್ ಬರೆಸಿದ ನಂತರ, ಕುಟುಂಬಸ್ಥರಿಗೆ ಅದರ ಕುರಿತಾಗಿ ತಿಳಿಸುವುದು ಒಳ್ಳೆಯ ನಡೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.